ETV Bharat / state

ಪಂಚ ಗ್ಯಾರಂಟಿಗಳ ಅನುಷ್ಠಾನ ಸಮಿತಿಗಳ ರಚನೆ: ಸಿಎಂ ಸಿದ್ದರಾಮಯ್ಯ

author img

By ETV Bharat Karnataka Team

Published : Jan 10, 2024, 4:14 PM IST

Updated : Jan 11, 2024, 12:27 PM IST

ಕಾಂಗ್ರೆಸ್​ ಸರ್ಕಾರದ ಐದು ಗ್ಯಾರಂಟಿಗಳ ಬಗ್ಗೆ ಅಪಪ್ರಚಾರ ಮಾಡುತ್ತಿರುವುದಕ್ಕೆ ಉತ್ತರ ಕೊಡಲು ಸಮಿತಿಗಳನ್ನು ರಚಿಸಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಪಂಚ ಗ್ಯಾರಂಟಿಗಳ ಅನುಷ್ಠಾನ ಸಮಿತಿಗಳ ರಚನೆ

ಬೆಂಗಳೂರು : ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳನ್ನು ರಚಿಸಲಾಗುವುದು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದರು.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲಿ ಮಾತನಾಡಿದರು. ಈ ವೇಳೆ ವಿಧಾನಸಭೆಯಲ್ಲಿಯೂ ಒಂದು ಸಮಿತಿ ಇರಲಿದ್ದು, ರಾಜ್ಯಮಟ್ಟದಲ್ಲಿ ಅಧ್ಯಕ್ಷರು, ಐದು ಜನ ಉಪಾಧ್ಯಕ್ಷರು ಇರಲಿದ್ದಾರೆ. ಅಧ್ಯಕ್ಷರಾದವರಿಗೆ ಸಂಪುಟ ದರ್ಜೆ ಸ್ಥಾನಮಾನ ಇರಲಿದೆ. ಉಪಾಧ್ಯಕ್ಷರಿಗೆ ರಾಜ್ಯ ಸಚಿವ ಸ್ಥಾನಮಾನ ನೀಡಲಾಗುವುದು. ಸುಮಾರು 31 ಜನ ಸದಸ್ಯರು ಇರಲಿದ್ದು, ಇವರೆಲ್ಲರೂ ಕಾರ್ಯಕರ್ತರಾಗಿರುತ್ತಾರೆ.

31 ಜಿಲ್ಲೆಗಳಲ್ಲಿ ಒಬ್ಬ ಅಧ್ಯಕ್ಷರು ಹಾಗೂ ಉಪಾಧ್ಯಕ್ಷ ರು ಹಾಗೂ ಸದಸ್ಯರು ಇರಲಿದ್ದಾರೆ. ಅವರಿಗೆ ಕಚೇರಿ ವ್ಯವಸ್ಥೆ ಹಾಗೂ ಗೌರವ ಧನ ನೀಡುವ ವ್ಯವಸ್ಥೆ ಆಗಲಿದೆ ಹಾಗೂ 50 ಸಾವಿರ ರೂ.ಗಳನ್ನು ಪ್ರತಿ ತಿಂಗಳು ನೀಡಲಾಗುವುದು. 21 ಸದಸ್ಯರು ಇರಲಿದ್ದು, 224 ಕ್ಷೇತ್ರಗಳಲ್ಲಿ ಅಧ್ಯಕ್ಷರು ಹಾಗೂ 11 ಸದಸ್ಯರು ಇರಲಿದ್ದಾರೆ. ಕ್ಷೇತ್ರ ಮಟ್ಟದ ಅಧ್ಯಕ್ಷರಿಗೂ ಸುಮಾರು 25,000 ರೂ. ಗೌರವ ಧನ ನೀಡುವ ಚಿಂತನೆ ಇದೆ. ಸದಸ್ಯರುಗಳಿಗೆ ಸಿಟ್ಟಿಂಗ್ ಫೀಸ್ ಸಹ ಒದಗಿಸಲಾಗುವುದು. ಈ ಮೊತ್ತವನ್ನು ರಾಜ್ಯ ಖಜಾನೆಯಿಂದ ಭರಿಸಲಾಗುವುದು. ಒಂದು ವಾರದಲ್ಲಿ ಸಮಿತಿ ರಚನೆ ಮಾಡಲಾಗುವುದು. ರಚನೆಯಾದ ಕೂಡಲೇ ಈ ಸಮಿತಿಗಳು ಕಾರ್ಯಾರಂಭಿಸಲಿವೆ ಎಂದು ತಿಳಿಸಿದರು.

ಪಂಚ ಗ್ಯಾರಂಟಿಗಳ ಅನುಷ್ಠಾನ ಸಮಿತಿಗಳ ರಚನೆ

ಈ ವರ್ಷದಲ್ಲಿ ಪಂಚ ಗ್ಯಾರಂಟಿಗಳಿಗೆ 38000 ಕೋಟಿ ರೂ. ಖರ್ಚಾಗಿದೆ. ಮುಂದಿನ ವರ್ಷ ಸಮಾರು 58000 ಕೋಟಿ ರೂ. ಪಂಚ ಗ್ಯಾರಂಟಿಗಳಿಗೆ ಖರ್ಚಾಗಲಿದೆ. ಇದರಿಂದ ಸುಮಾರು 1.20 ಕೋಟಿ ಫಲಾನುಭವಿಗಳು ಲಾಭ ಪಡೆಯುತ್ತಿದ್ದಾರೆ. ಸರ್ಕಾರಕ್ಕೆ ಇದು ದೊಡ್ಡ ಹೊರೆಯೇನಲ್ಲ. ಪರಿಣಾಮಕಾರಿಯಾಗಿ ಗ್ಯಾರಂಟಿ ಗಳ ಅನುಷ್ಠಾನವಾಗಬೇಕು ಎಂಬ ಕಾರಣಕ್ಕೆ 16 ಕೋಟಿ ರೂ.ಗಳನ್ನು ಭರಿಸುತ್ತೇವೆ. ಅಪಪ್ರಚಾರಕ್ಕೆ ಉತ್ತರ ಕೊಡಲು ಈ ಸಮಿತಿಗಳನ್ನು ರಚಿಸಲಾಗುತ್ತಿದೆ.

ಕಾರ್ಯಕರ್ತರಿಗೆ, ಶಾಸಕರಲ್ಲದವರಿಗೆ, ಸಂಸದರಲ್ಲದವರಿಗೆ, ಸಮಿತಿ ಸದಸ್ಯತ್ವ ದೊರೆಯಲಿದೆ. ವಿವಿಧ ಇಲಾಖೆಗಳ ಸಮಿತಿಗಳನ್ನು ಕೂಡಲೇ ರಚಿಸಲು ಆಯಾ ಇಲಾಖೆಗಳ ಸಚಿವರ ವಿವೇಚನೆಗೆ ಬಿಡಲಾಗಿದೆ. ಹೆಸರುಗಳನ್ನು ಪಡೆಯುವಾಗ, ನಮ್ಮ ಶಾಸಕರು, ಸಂಸದರ ಸಲಹೆ ಪಡೆಯುವಂತೆ ಸೂಚಿಸಿದರು. ಕೆಲವು ಶಾಸಕರಿಗೆ, ವಿಧಾನಸಭೆ ಟಿಕೆಟ್ ದೊರೆಯದವರಿಗೆ ಅವಕಾಶ ಕಲ್ಪಿಸಲಾಗುವುದು. ಎರಡು ವರ್ಷಗಳ ಅವಧಿ ಇರಲಿದೆ . ಕಾರ್ಯಕರ್ತರ ಶ್ರಮದಿಂದ ಪಕ್ಷ ಗಟ್ಟಿಯಾಗಿದೆ ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.

ಸಕಾರಾತ್ಮಕವಾಗಿರಿ; ಸಿಎಂ ಕಿವಿಮಾತು : ಚುನಾವಣೆಯನ್ನು ನಾವು ಗೆಲ್ಲಲೇ ಬೇಕು. ಇಷ್ಟೆಲ್ಲಾ ಮಾಡಿಯೂ ನಾವು ಗೆಲ್ಲದೇ ಹೋದರೆ ಅದು ನಮಗೆ ಹಿನ್ನಡೆಯಾಗಲಿದೆ. 28 ಕ್ಕೆ 28 ಸೀಟನ್ನು ಗೆಲ್ಲಬೇಕು. ಕನಿಷ್ಠ 26 ಸೀಟು ಗೆಲ್ಲಬೇಕು. ಜನರ ನಾಡಿ ಮಿಡಿತ ನಮ್ಮ ಪರವಾಗಿರುವುದರಿಂದ ಅಪಪ್ರಚಾರದಿಂದ ನಾವು ಯಾರೂ ಹತಾಶರಾಗಬಾರದು. ಸಕಾರಾತ್ಮಕವಾಗಿರಬೇಕು ಎಂದು ಪಕ್ಷದ ನಾಯಕರಿಗೆ ಸಿಎಂ ಕಿವಿಮಾತು ಹೇಳಿದರು.

ಇದನ್ನೂ ಓದಿ : ಗಣರಾಜ್ಯೋತ್ಸದಲ್ಲಿ ರಾಜ್ಯದ ಸ್ತಬ್ಧಚಿತ್ರಕ್ಕೆ ಅವಕಾಶ ಕೋರಿ ಕೇಂದ್ರಕ್ಕೆ ಪತ್ರ: ಸಿಎಂ ಸಿದ್ದರಾಮಯ್ಯ

Last Updated : Jan 11, 2024, 12:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.