ETV Bharat / state

ಟೀ ಮಾರುವವ ಗೋವಾದ ಕ್ಯಾಸಿನೋದಲ್ಲಿ 25 ಲಕ್ಷ ಗೆದ್ದ: ಬೆಂಗಳೂರಿಗೆ ಬರುತ್ತಿದ್ದಂತೆ ಹಣಕ್ಕಾಗಿ ಪರಿಚಯಸ್ಥರಿಂದಲೇ ಕಿಡ್ನಾಪ್!

author img

By

Published : Aug 11, 2023, 7:25 AM IST

Updated : Aug 11, 2023, 9:16 AM IST

Bengaluru Kidnap Case: ಕ್ಯಾಸಿನೋದಲ್ಲಿ ಗೆದ್ದ 25 ಲಕ್ಷ ಹಣವನ್ನ ಸುಲಿಗೆ ಮಾಡಲು ಟೀ ಮಾರುವವನನ್ನು ಪರಿಚಯಸ್ಥರೇ ಕಿಡ್ನಾಪ್​ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

crime-a-tea-seller-kidnapped-by-acquaintance-to-extort-money-in-benglauru
ಟೀ ಮಾರುವವ ಗೋವಾದ ಕ್ಯಾಸಿನೋದಲ್ಲಿ 25 ಲಕ್ಷ ಗೆದ್ದ : ಬೆಂಗಳೂರಿಗೆ ಬರುತ್ತಿದ್ದಂತೆ ಹಣಕ್ಕಾಗಿ ಪರಿಚಯಸ್ಥರಿಂದಲೇ ಕಿಡ್ನಾಪ್!

ಬೆಂಗಳೂರು: ಗೋವಾದ ಕ್ಯಾಸಿನೋದಲ್ಲಿ 25 ಲಕ್ಷ ರೂ. ಗೆದ್ದು ನಗರಕ್ಕೆ ಬಂದಿದ್ದ ರಸ್ತೆ ಬದಿ ಟೀ ಮಾರುವ ವ್ಯಕ್ತಿಯನ್ನು ಪರಿಚಯಸ್ಥರೇ ಅಪಹರಿಸಿ ಹಲ್ಲೆ ಮಾಡಿ, 15 ಲಕ್ಷ ರೂಪಾಯಿ ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡು ಜೀವ ಬೆದರಿಕೆ ಹಾಕಿರುವ ಘಟನೆ ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ.

ಶ್ರೀನಗರದ ನಿವಾಸಿಯಾಗಿರುವ 32 ವರ್ಷದ ತಿಲಕ್ ಮಣಿಕಂಠ ಅಪಹರಣಕ್ಕೊಳಗಾಗಿದ್ದ ವ್ಯಕ್ತಿ. ಈತ ನೀಡಿದ ದೂರಿನ ಮೇರೆಗೆ ಐವರು ಅಪಹರಣಕಾರರ ವಿರುದ್ಧ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಲವು ವರ್ಷಗಳಿಂದ ನಗರದಲ್ಲಿ ಟೀ ಮಾರಾಟ ಮಾಡುತ್ತಿದ್ದ ತಿಲಕ್, ಗೋವಾಕ್ಕೆ ತೆರಳಿ ಕ್ಯಾಸಿನೋ ಆಡಬೇಕು ಎಂಬ ಮಹದಾಸೆ ಹೊಂದಿದ್ದ. ಕ್ಯಾಸಿನೋ ಜೂಜಿನ ಬಗ್ಗೆ ಹೆಚ್ಚು ತಿಳಿದುಕೊಂಡಿದ್ದ. ಅದರಂತೆ 4 ಲಕ್ಷ ರೂ. ಹಣ ಹೊಂದಿಸಿಕೊಂಡು ಸ್ನೇಹಿತರೊಂದಿಗೆ ಕಳೆದ ಜುಲೈ 30ರಂದು ಬೆಂಗಳೂರಿನಿಂದ ಪಣಜಿಗೆ ವಿಮಾನದ ಮೂಲಕ ಹೋಗಿದ್ದರು. ಮೂರು - ನಾಲ್ಕು ದಿನಗಳ ಕಾಲ ಅಲ್ಲೇ ಉಳಿದು ಕ್ಯಾಸಿನೋ ಜೂಜು ಆಡಿ 25 ಲಕ್ಷ ರೂ. ಗೆದ್ದಿದ್ದ. ಬಳಿಕ ಆಗಸ್ಟ್​ 4ರಂದು ಗೋವಾದಿಂದ ಬೆಂಗಳೂರಿಗೆ ಬಂದಿದ್ದ. ಜೂಜಿನಲ್ಲಿ 25 ಲಕ್ಷ ಗೆದ್ದ ವಿಚಾರ ಮನೆಯವರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಂಡು ಸಂಭ್ರಮಿಸಿದ್ದ.

ಹಣಕ್ಕಾಗಿ ಬೆದರಿಸಿ ಹಲ್ಲೆ: ತದನಂತರ ಎಂದಿನಂತೆ ತನ್ನ ಕಾಯಕದಲ್ಲಿ ತೊಡಗಿದ್ದಾಗ ಆಗಸ್ಟ್ 5ರಂದು ಕಾರಿನಲ್ಲಿ ಬಂದಿದ್ದ ಪರಿಚಯಸ್ಥ ಅಪಹರಣಕಾರರು ತಿಲಕ್​ನನ್ನು ಕಾರಿನಲ್ಲಿ ಬಲವಂತವಾಗಿ ಕೂರಿಸಿಕೊಂಡು ಅಪಹರಿಸಿದ್ದಾರೆ. ಜ್ಞಾನಭಾರತಿ ವಿವಿ ಬಳಿ ನಿರ್ಜನ ಪ್ರದೇಶದಲ್ಲಿ ಕರೆದೊಯ್ದು ಇಸ್ಪೀಟ್ ಆಟದ ಬಗ್ಗೆ ಕ್ಯಾತೆ ತೆಗೆದಿದ್ದಾರೆ. ನಂತರ ಗೋವಾದ ಕ್ಯಾಸಿನೋದಲ್ಲಿ 25 ಲಕ್ಷ ಗೆದ್ದಿರುವ ವಿಚಾರ ನಮಗೆ ಗೊತ್ತಿದೆ ಎಂದು ಹೇಳಿ ಹಣ ಕೊಡುವಂತೆ ಬೆದರಿಸಿ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ವಿಡಿಯೋ ರೆಕಾರ್ಡ್​ ಮಾಡಿದ ಆರೋಪಿಗಳು: ಅಪಹರಣಕಾರರು ಮೊಬೈಲ್ ಕಸಿದುಕೊಂಡು ಬ್ಯಾಂಕ್ ಖಾತೆ ಪರಿಶೀಲಿಸಿದಾಗ 25 ಲಕ್ಷ ಇರುವುದನ್ನು ಅರಿತು ಕೊಂಡಿದ್ದಾರೆ. ಸುಮಾರು 15 ಲಕ್ಷ ರೂ.ವರೆಗೂ ತಮ್ಮ ತಮ್ಮ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಿಕೊಂಡಿದ್ದಾರೆ. ಬಳಿಕ ನೆಲಮಂಗಲ ಗೊಲ್ಲಹಳ್ಳಿ ಬಳಿಯಿರುವ ರೆಸಾರ್ಟ್​ಗೆ ಕರೆದೊಯ್ದು ಕೊಠಡಿಯೊಂದರಲ್ಲಿ ಕೂಡಿ ಹಾಕಿದ್ದಾರೆ. ಮಾರನೇ ದಿನ ಅಪಹರಣಕಾರರು ತನ್ನಿಂದ ಇಸ್ಪೀಟ್ ಮೋಸದಾಟದಲ್ಲಿ ಗೆದ್ದಿರುವ ದುಡ್ಡು. ಹೀಗಾಗಿ ಹಣ ವರ್ಗಾವಣೆ ಮಾಡಿಸಿಕೊಂಡಿದ್ದೇವೆ ಎಂದು ಹೇಳಿಸಿ ಮೊಬೈಲ್​ನಲ್ಲಿ ವಿಡಿಯೋ ಮಾಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪೊಲೀಸರಿಗೆ ಏನಾದರೂ ತಮ್ಮ ವಿರುದ್ಧ ದೂರು ನೀಡಿದರೆ ಕೊಲೆ ಮಾಡುವ ಬೆದರಿಕೆ ಹಾಕಿ, ಬೆಂಗಳೂರು ಸಮೀಪ ತಿಲಕ್​ನನ್ನು ಬಿಟ್ಟು ಪರಾರಿಯಾಗಿದ್ದಾರೆ ಎಂದು ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಹನುಮಂತನಗರ ಪೊಲೀಸರು, ವಿಶೇಷ ತಂಡ ರಚಿಸಿ ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.

ಇದನ್ನೂ ಓದಿ: ನಡು ರಸ್ತೆಯಲ್ಲೇ ಗುಂಡಿನ ದಾಳಿ - ಯುವಕ ಸಾವು: ಸಿಸಿಟಿವಿಯಲ್ಲಿ ದೃಶ್ಯ ಸೆರೆ

Last Updated :Aug 11, 2023, 9:16 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.