ETV Bharat / state

ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾಡಿದ ಟೀಕೆಗೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ

author img

By

Published : Aug 2, 2023, 5:15 PM IST

cm-siddaramaih-slams-pm-narendra-modi-on-guarantee-schemens
ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾಡಿದ ಟೀಕೆಗೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ

ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕಾಪ್ರಹಾರ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಬೆಂಗಳೂರು : ಸ್ವಾರ್ಥಕ್ಕಾಗಿ ಘೋಷಿಸಿದ ಗ್ಯಾರಂಟಿ ಯೋಜನೆ ಜಾರಿಯಿಂದ ಕರ್ನಾಟಕ ಸರ್ಕಾರದ ಬಳಿ ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಟೀಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಕರ್ನಾಟಕದ ಗ್ಯಾರಂಟಿ (ಉಚಿತ) ಯೋಜನೆಗಳಿಂದಾಗಿ ರಾಜ್ಯದ ಖಜಾನೆ ಬರಿದಾಗಲಿದೆ ಮತ್ತು ಅಭಿವೃದ್ಧಿಗೆ ಹಣ ಇಲ್ಲದಂತಾಗಲಿದೆ ಎಂದು ಕಾಳಜಿ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ನರೇಂದ್ರ ಮೋದಿಯವರೇ, ಇದು ನಿಮ್ಮ ವೈಯಕ್ತಿಕ ಅಭಿಪ್ರಾಯವೇ, ಪ್ರಧಾನಿಯವರ ಅಭಿಪ್ರಾಯವೇ? ಇಲ್ಲವೇ ಪಕ್ಷದ ಅಭಿಪ್ರಾಯವೇ? ಎನ್ನುವುದನ್ನು ದಯವಿಟ್ಟು ಸ್ಪಷ್ಟಪಡಿಸಬೇಕೆಂದು ವಿನಂತಿ ಮಾಡುತ್ತಿದ್ದೇನೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುವುದಾದರೆ ನಿಮ್ಮ ಮತ್ತು ನಿಮ್ಮ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿ. ಕರ್ನಾಟಕದ ಬಿಜೆಪಿ ನಾಯಕರಿಗೂ ನಮ್ಮ ಗ್ಯಾರಂಟಿ ಯೋಜನೆಗಳನ್ನು ಸಾರ್ವಜನಿಕವಾಗಿ ವಿರೋಧಿಸಲು ನಿರ್ದೇಶನ ನೀಡಿ. ಮುಂದಿನ ಲೋಕಸಭಾ ಚುನಾವಣೆಯನ್ನು ಗ್ಯಾರಂಟಿ ಯೋಜನೆಗಳ ವಿಷಯವನ್ನೇ ಮುಂದಿಟ್ಟುಕೊಂಡು ಎದುರಿಸಲು ನಾವು ಸಿದ್ಧರಿದ್ದೇವೆ. ನೀವು ಸಿದ್ಧರಿದ್ದರೆ ಹಾಗೆಂದು ಘೋಷಿಸಿಬಿಡಿ. ಇಲ್ಲಿ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ತಕ್ಷಣ ಜಾರಿಗೊಳಿಸಬೇಕೆಂದು ಕರ್ನಾಟಕದ ಬಿಜೆಪಿ ನಾಯಕರು ಒಂದೇ ಸಮನೆ ನಮ್ಮ ಬೆನ್ನು ಹತ್ತಿದ್ದಾರೆ. ಬಡವರಿಗೆ ನೀಡುವ ಹೆಚ್ಚುವರಿ ಅಕ್ಕಿಯಲ್ಲಿ ಒಂದು ಕಾಳು ಕಡಿಮೆ ಮಾಡಿದರೂ ಹೋರಾಟ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಗುಡುಗುತ್ತಲೇ ಇದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಎಂದು ಪ್ರಶ್ನಿಸಿದ್ದಾರೆ.

ಮೋದಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ : ಯುಗಾದಿ, ಗಣೇಶ ಚತುರ್ಥಿ ಮತ್ತು ದೀಪಾವಳಿ ಹಬ್ಬಗಳ ಸಮಯದಲ್ಲಿ ವರ್ಷಕ್ಕೆ ಮೂರು ಗ್ಯಾಸ್ ಸಿಲಿಂಡರ್ ಮತ್ತು ಬಿಪಿಎಲ್ ಕುಟುಂಬಗಳಿಗೆ ಅರ್ಧ ಲೀಟರ್ ನಂದಿನ ಹಾಲು ಉಚಿತವಾಗಿ ನೀಡುತ್ತೇವೆ ಎಂದು ಇತ್ತೀಚಿನ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಬಿಡುಗಡೆಗೊಳಿಸಿದ್ದ ಪ್ರಣಾಳಿಕೆಯಲ್ಲಿ ಕರ್ನಾಟಕದ ಬಿಜೆಪಿ ಭರವಸೆ ನೀಡಿತ್ತು. ಇದು ಫ್ರೀಬಿ, ರೇವ್ಡಿ ಯೋಜನೆಗಳಲ್ಲವೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ವಿಧಾನಸಭಾ ಚುನಾವಣೆ ಎದುರಿಸಲಿರುವ ಮಧ್ಯಪ್ರದೇಶದ ಮುಖ್ಯಮಂತ್ರಿಗಳು ಹೆಣ್ಣುಮಕ್ಕಳ ಖಾತೆಗೆ ಮಾಸಿಕ 1000 ರೂಪಾಯಿ ಜಮೆ ಮಾಡುವ ಲಾಡ್ಲಿ-ಬೆಹನಾ ಯೋಜನೆಯ ಘೋಷಣೆ ಮಾಡಿದ್ದಾರೆ. ಇದನ್ನು 3000 ರೂಪಾಯಿಗೆ ಹೆಚ್ಚಿಸುವ ಭರವಸೆ ನೀಡಿದ್ದಾರೆ. ಇದು ಉಚಿತ ಯೋಜನೆ ಅಲ್ಲವೇ?. ಕೇಂದ್ರ ಸರ್ಕಾರದ್ದೇ ಯೋಜನೆಯಾಗಿರುವ ರೈತರ ಖಾತೆಗೆ ವಾರ್ಷಿಕ ಆರು ಸಾವಿರ ರೂಪಾಯಿಗಳನ್ನು ಜಮೆ ಮಾಡುವ ಕಿಸಾನ್ ಸಮ್ಮಾನ್ ಯೋಜನೆಯನ್ನು ನೀವು ಹೇಗೆ ವ್ಯಾಖ್ಯಾನಿಸುತ್ತೀರಿ? ಎಂದು ಸಿಎಂ ಕೇಳಿದ್ದಾರೆ.

ನಾನು ಐದು ಕಿಲೋ ಅಕ್ಕಿಯನ್ನು ಹೆಚ್ಚುವರಿಯಾಗಿ ನೀಡಿದರೆ ಅದರಿಂದ ರಾಜ್ಯದ ಖಜಾನೆ ಬರಿದಾಗಲಿದೆ ಎನ್ನುವುದು ನಿಮ್ಮ ಅಭಿಪ್ರಾಯವಾಗಿದ್ದರೆ, ಐದು ಕಿಲೋ ಅಕ್ಕಿಯನ್ನು ಉಚಿತವಾಗಿ ನೀಡುವ ಪಿಎಂ ಗರೀಬ್ ಅನ್ನ ಕಲ್ಯಾಣ ಯೋಜನೆಯನ್ನು ಯಾವ ಗುಂಪಿಗೆ ಸೇರಿಸುತ್ತೀರಿ? ಎಂದು ವಾಗ್ದಾಳಿ ನಡೆಸಿದ್ದಾರೆ.

ಉಚಿತ ಸ್ವರೂಪದ ಎಂಟು ಯೋಜನೆಗಳನ್ನು ಕೇಂದ್ರ ಸರ್ಕಾರ ಅಂದಾಜು 1.25 ಲಕ್ಷ ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸುತ್ತಿದೆ. ಉಚಿತ ಯೋಜನೆಗಳನ್ನು ವಿರೋಧಿಸುತ್ತಿರುವ ನೀವು ಈ ಯೋಜನೆಗಳನ್ನು ಹೇಗೆ ಸಮರ್ಥಿಸುತ್ತೀರಿ?. ಡಬಲ್ ಎಂಜಿನ್ ಸರ್ಕಾರದ ಜನವಿರೋಧಿ ಆಡಳಿತದಿಂದ ಬೇಸತ್ತು ಹೋಗಿರುವ ಕರ್ನಾಟಕದ ಜನತೆ ನಮ್ಮ ಗ್ಯಾರಂಟಿ ಯೋಜನೆಗಳಿಗೆ ಜನಾದೇಶವನ್ನು ನೀಡಿ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ.

ನುಡಿದಂತೆ ನಡೆಯುವ ಬದ್ಧತೆ ಹೊಂದಿರುವ ನಾವು ಕೊಟ್ಟ ಭಾಷೆಯನ್ನು ಉಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಬೆಲೆ ಏರಿಕೆ ಮತ್ತು ನಿರುದ್ಯೋಗಗದಿಂದಾಗಿ ವಿಪರೀತ ಆರ್ಥಿಕ ಒತ್ತಡಕ್ಕೆ ಸಿಕ್ಕಿ ಕೈಖಾಲಿ ಮಾಡಿಕೊಂಡಿರುವ ಜನಸಾಮಾನ್ಯರನ್ನು ಅರ್ಥಿಕ ಹೊರೆಯಿಂದ ಪಾರು ಮಾಡಲು, ಸಾಲದ ಶೂಲದಿಂದ ಕೆಳಗಿಳಿಸಲು ಮತ್ತು ಸಾಮಾಜಿಕ ಭದ್ರತೆಯನ್ನು ಒದಗಿಸಲು ಇಡೀ ದೇಶಕ್ಕೆ ಕರ್ನಾಟಕ ಮಾದರಿಯ ಆಡಳಿತದ ಅವಶ್ಯಕತೆ ಇದೆ ಎಂದಿದ್ದಾರೆ.

ನಾಳೆ ಪ್ರಧಾನಿ ಮೋದಿ ಭೇಟಿಯಾಗಲಿರುವ ಸಿಎಂ ಸಿದ್ದರಾಮಯ್ಯ : ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದು, ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡುವುದೂ ಸೇರಿದಂತೆ ಹಲವಾರು ಯೋಜನೆಗಳ ಕುರಿತು ಬೇಡಿಕೆ ಮಂಡಿಸಲಿದ್ದಾರೆ. ನಾಳೆ ಬೆಳಗ್ಗೆ 11.30ಕ್ಕೆ ಪ್ರಧಾನಿಯವರ ಭೇಟಿಗೆ ಸಮಯ ನಿಗದಿಯಾಗಿದೆ. ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಪಕ್ಷದ ಸಭೆಯಲ್ಲಿ ಭಾಗವಹಿಸಿದ್ದಾರೆ. ಗುರುವಾರ ಕೇಂದ್ರದ ಹಲವು ಸಚಿವರನ್ನು ಭೇಟಿ ಮಾಡುವ ಸಾಧ್ಯತೆಯಿದೆ.

ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಿದ್ದರಾಮಯ್ಯ ಮುಖಾಮುಖಿ ಭೇಟಿ ಮಾಡುತ್ತಿದ್ದಾರೆ.
ಕಳೆದ ಬಾರಿ ದೆಹಲಿಗೆ ಭೇಟಿ ನೀಡಿದಾಗ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸಿದ್ದರಾಮಯ್ಯ ಭೇಟಿ ಮಾಡಿದ್ದರು. ಆ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಅಮೆರಿಕ ಪ್ರವಾಸದಲ್ಲಿದ್ದರು. ಇದೀಗ ಪ್ರಧಾನಿಗಳ ಭೇಟಿಗೆ ಅವಕಾಶ ಕೇಳಿದ್ದು, ಪ್ರಧಾನಿ ಕಚೇರಿಯಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವು ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಅದರಲ್ಲಿ ಮೇಕೆದಾಟು, ಕಳಸಾಬಂಡೂರಿ ಯೋಜನೆಗಳು ಪ್ರಮುಖವಾಗಿವೆ. ಭದ್ರಾ ಮೇಲ್ದಂಡೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸುವುದು, ಹಲವು ನೀರಾವರಿ ಯೋಜನೆಗಳಿಗೆ ಅರಣ್ಯ ಇಲಾಖೆಯ ಅನುಮತಿ ಪಡೆಯುವುದು, ಜಿಎಸ್​​ಟಿ ತೆರಿಗೆ ನಷ್ಟ ಪರಿಹಾರ ಯೋಜನೆಯನ್ನು ಮುಂದುವರೆಸುವುದು, ರಾಜ್ಯಕ್ಕೆ ತೆರಿಗೆ ಪಾಲನ್ನು ಹೆಚ್ಚಿಸುವುದು, ಅನ್ನಭಾಗ್ಯ ಯೋಜನೆಯಲ್ಲಿ ಕೇಂದ್ರ ಆಹಾರ ನಿಗಮದಿಂದ ಅಕ್ಕಿ ವಿತರಿಸುವುದು ಸೇರಿದಂತೆ ಹಲವು ವಿಚಾರಗಳ ಕುರಿತು ಪ್ರಧಾನಿ ಅವರ ಬಳಿ ಸಿದ್ದರಾಮಯ್ಯ ಅವರು ಪ್ರಸ್ತಾಪಿಸುವ ಸಾಧ್ಯತೆ ಇದೆ.

ಇದನ್ನೂ ಓದಿ : ವರ್ಗಾವಣೆ ದಂಧೆಯಲ್ಲಿ ಎಐಸಿಸಿಗೆ ಪಾಲು ನಿಗದಿಪಡಿಸಲು ದೆಹಲಿಯಲ್ಲಿ ಕಾಂಗ್ರೆಸ್ ಸಭೆ: ಛಲವಾದಿ ನಾರಾಯಣಸ್ವಾಮಿ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.