ETV Bharat / state

ಮತ್ತೆ ಮುನ್ನೆಲೆಗೆ ಬಂದ ಸಂಪುಟ ವಿಸ್ತರಣೆ: ಮೋದಿ, ನಡ್ಡಾ ರಾಜ್ಯ ಭೇಟಿ ವೇಳೆ ಮಹತ್ವದ ಸಭೆ?

author img

By

Published : Jun 15, 2022, 1:59 PM IST

meeting-with-pm-modi-nadda-on-karnataka-cabinet-expansion
ಮತ್ತೆ ಮುನ್ನೆಲೆಗೆ ಬಂದ ಸಂಪುಟ ವಿಸ್ತರಣೆ: ಮೋದಿ, ನಡ್ಡಾ ರಾಜ್ಯ ಭೇಟಿ ವೇಳೆ ಮಹತ್ವದ ಸಭೆ?

ನವದೆಹಲಿಗೆ ನಾಲ್ಕೈದು ಬಾರಿ ಸಚಿವಾಕಾಂಕ್ಷಿಗಳ ಪಟ್ಟಿ ಹಿಡಿದು ಅಲೆದಾಡಿದರೂ ಬರಿಗೈಯಲ್ಲೇ ವಾಪಸ್​​ ಬರುತ್ತಿದ್ದ ಬಸವರಾಜ ಬೊಮ್ಮಾಯಿ ಇದೀಗ ಮತ್ತೊಮ್ಮೆ ಸಂಪುಟ ವಿಸ್ತರಣೆ ಕುರಿತು ಹೈಕಮಾಂಡ್ ಜೊತೆ ಮಾತುಕತೆಗೆ ಮುಂದಾಗಿದ್ದಾರೆ. ಅದಕ್ಕಾಗಿ ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಜೊತೆ ಮಾತುಕತೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಬೆಂಗಳೂರು: ಪದೇ ಪದೆ ಮುಂದೂಡಿಕೆ ಆಗುತ್ತಲೇ ಬಂದಿರುವ ಸಚಿವ ಸಂಪುಟ ವಿಸ್ತರಣೆ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಪರಿಷತ್‌ ಚುನಾವಣೆ ಬೆನ್ನಲ್ಲೇ ಸಂಪುಟ ವಿಸ್ತರಣೆ ಕಸರತ್ತುಗಳು ಆರಂಭಗೊಂಡಿದೆ. ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಆಗಮಿಸುತ್ತಿದ್ದು, ಈ ಸಂದರ್ಭದಲ್ಲಿ ಸಚಿವ ಸಂಪುಟ ವಿಸ್ತರಣೆ ಕುರಿತು ಮಹತ್ವದ ಮಾತುಕತೆ ನಡೆಯಲಿದೆ ಎಂದು ತಿಳಿದುಬಂದಿದೆ.

ನವದೆಹಲಿಗೆ ನಾಲ್ಕೈದು ಬಾರಿ ಸಚಿವಾಕಾಂಕ್ಷಿಗಳ ಪಟ್ಟಿ ಹಿಡಿದು ಅಲೆದಾಡಿದರೂ ಬರಿಗೈಯಲ್ಲೇ ವಾಪಸ್​​ ಬರುತ್ತಿದ್ದ ಬಸವರಾಜ ಬೊಮ್ಮಾಯಿ ಇದೀಗ ಮತ್ತೊಮ್ಮೆ ಸಂಪುಟ ವಿಸ್ತರಣೆ ಕುರಿತು ಹೈಕಮಾಂಡ್ ಜೊತೆ ಮಾತುಕತೆಗೆ ಮುಂದಾಗಿದ್ದಾರೆ. ಅದಕ್ಕಾಗಿ ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಜೊತೆ ಮಾತುಕತ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಮಾತುಕತೆ ನಡೆಸಿರುವ ಸಿಎಂ ಬಸವರಾಜ ಬೊಮ್ಮಾಯಿ ಇದೀಗ ಇದರ ಮುಂದುವರೆದ ಮಾತುಕತೆಗೆ ನಿರ್ಧರಿಸಿದ್ದಾರೆ.

ನಡ್ಡಾ ರಾಜ್ಯ ಭೇಟಿ: ನಾಳೆಯಿಂದ ಮೂರು ದಿನಗಳ ಕಾಲ ಯಲಹಂಕದ ಖಾಸಗಿ ಹೋಟೆಲ್​​ನಲ್ಲಿ ಬಿಜೆಪಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಪ್ರಶಿಕ್ಷಣ ವರ್ಗ ಶಿಬಿರ ನಡೆಯಲಿದೆ. ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಲು ಜೂನ್ 18ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಕೇವಲ ಒಂದು ದಿನದ ಭೇಟಿಗಾಗಿ ನಡ್ಡಾ ರಾಜ್ಯಕ್ಕೆ ಆಗಮಿಸುತ್ತಿದ್ದು, ಈ ವೇಳೆ ನಡ್ಡಾ ಜೊತೆ ಸಚಿವ ಸಂಪುಟ ವಿಸ್ತರಣೆ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಪ್ರಧಾನಿ ನರೇಂದ್ರ ಮೋದಿ ಪೂರ್ವನಿಗದಿತ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಎರಡು ದಿನಗಳ ರಾಜ್ಯ ಪ್ರವಾಸಕ್ಕೆ ಆಗಮಿಸುತ್ತಿದ್ದಾರೆ. ಜೂನ್ 20ರಂದು ಬೆಂಗಳೂರಿನಲ್ಲಿ ಸಬ್ ಅರ್ಬನ್ ರೈಲ್ವೆ ಯೋಜನೆಗೆ ಭೂಮಿ ಪೂಜೆ ಸೇರಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿರುವ ಪ್ರಧಾನಿ, 21ರಂದು ಮೈಸೂರಿನಲ್ಲಿ ನಡೆಯಲಿರುವ ಯೋಗ ದಿನಾಚರಣೆಯಲ್ಲಿ ಭಾಗವಹಿಸಲಿದ್ದಾರೆ. ಈ ಎರಡು ದಿನಗಳಲ್ಲಿ ಪ್ರಧಾನಿ ಮೋದಿ ಜೊತೆ ಮಾತುಕತೆ ನಡೆಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರ್ಧರಿಸಿದ್ದಾರೆ.

ಈಗಾಗಲೇ ಸಂಪುಟ ವಿಸ್ತರಣೆಗೆ ಸಾಕಷ್ಟು ತಡವಾಗಿದ್ದು, ಸಚಿವಾಕಾಂಕ್ಷಿಗಳಿಂದ ಒತ್ತಡ ಹೆಚ್ಚುತ್ತಿದೆ. ಅಲ್ಲದೇ ಇನ್ನಷ್ಟು ವಿಳಂಬ ಮಾಡಿದರೆ ನೂತನವಾಗಿ ಸಚಿವರಾದವರಿಗೆ ಅಭಿವೃದ್ಧಿ ಕೆಲಸ ಮಾಡಿ ಇಲಾಖೆಯಲ್ಲಿ ಗುರುತಿಸಿಕೊಳ್ಳಲು ಸಮಯ ಸಿಗದಂತಾಗಲಿದೆ. ಹಾಗಾಗಿ ಈಗಲೇ ಸಚಿವ ಸಂಪುಟ ವಿಸ್ತರಣೆ ಮಾಡುವ ಕುರಿತು ಪ್ರಧಾನಿ ಜೊತೆ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.

ಸಮಯ ನಿಗದಿಗೆ ಮನವಿ: ಅದಕ್ಕಾಗಿ ಪ್ರಧಾನಿ ಕಚೇರಿ ಸಂಪರ್ಕ ಮಾಡಿರುವ ಮುಖ್ಯಮಂತ್ರಿಗಳ ಕಚೇರಿ ಕಾರ್ಯಕ್ರಮ ವೇಳಾಪಟ್ಟಿ ಕುರಿತು ಸಮಾಲೋಚನೆ ನಡೆಸಿದ್ದು, ಮುಖ್ಯಮಂತ್ರಿಗಳು ಪ್ರಧಾನಿಗಳ ಜೊತೆ ಮಾತುಕತೆ ನಡೆಸಲು ಸಮಯಾವಕಾಶ ನಿಗದಿಪಡಿಸಲು ಮನವಿ ಸಲ್ಲಿಸಿದೆ ಎಂದು ಸಿಎಂ ಆಪ್ತ ಮೂಲಗಳಿಂದ ತಿಳಿದು ಬಂದಿದೆ. ಮೂಲಗಳ ಪ್ರಕಾರ ಜೂನ್ 20ರಂದು ಬೆಂಗಳೂರಿನ ಕಾರ್ಯಕ್ರಮಗಳನ್ನು ಮುಗಿಸಿದ ನಂತರ ಪ್ರಧಾನಿ ಮೋದಿ ಜೊತೆ ಸಿಎಂ ಬೊಮ್ಮಾಯಿ ಸಚಿವ ಸಂಪುಟ ವಿಸ್ತರಣೆ ಕುರಿತು ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ್ದ ಅಮಿತ್‌ ಶಾ ಸಚಿವ ಸಂಪುಟ ವಿಸ್ತರಣೆ ಕುರಿತು ಮಾತುಕತೆ ನಡೆಸಿ ದೆಹಲಿಗೆ ತೆರಳಿ ಮಾಹಿತಿ ನೀಡುವುದಾಗಿ ತಿಳಿಸಿದ್ದರು. ಆದರೆ, ನಂತರ ಪರಿಷತ್‌ ಚುನಾವಣೆ, ರಾಜ್ಯಸಭೆ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಹೈಕಮಾಂಡ್ ನಾಯಕರು, ಅದರಲ್ಲಿ ತೊಡಗಿಕೊಂಡ ಕಾರಣ ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಷಯ ನೆನಗುದಿಗೆ ಬಿದ್ದಿತ್ತು. ಇದೀಗ ರಾಜ್ಯಸಭೆ ಚುನಾವಣೆ ಪರಿಷತ್ ಚುನಾವಣೆಗಳು ಮುಗಿದಿದ್ದು, ಮತ್ತು ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಷಯ ಮುನ್ನೆಲೆಗೆ ಬರುವಂತಾಗಿದೆ.

ಈಗಾಗಲೇ ನಡ್ಡಾ ಮತ್ತು ಪ್ರಧಾನಿ ಮೋದಿ ರಾಜ್ಯ ಪ್ರವಾಸಕ್ಕೆ ಬರುವುದು ಖಚಿತವಾಗಿರುವ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ಕುರಿತು ಮಾಜಿ ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ ಕಟೀಲ್ ಜೊತೆ ಸಿಎಂ ಬಸವರಾಜ ಬೊಮ್ಮಾಯಿ ಸಮಾಲೋಚನೆ ನಡೆಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಜೊತೆಗೂ ಮಾತುಕತೆ ನಡೆಸಿದ್ದಾರೆ. ಅಂತಿಮವಾಗಿ ಹೈಕಮಾಂಡ್ ನಾಯಕರು ರಾಜ್ಯಕ್ಕೆ ಆಗಮಿಸಿದ ವೇಳೆ ಸಂಪುಟ ಸರ್ಕಸ್​​ಗೆ ತೆರೆ ಬೀಳಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಯೋಗ ವೇದಿಕೆ ವಿವಾದ ವಿಚಾರ: ಸ್ಪಷ್ಟನೆ ನೀಡಿದ ಸಂಸದ ಪ್ರತಾಪ್ ಸಿಂಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.