ETV Bharat / city

ಯೋಗ ವೇದಿಕೆ ವಿವಾದ ವಿಚಾರ: ಸ್ಪಷ್ಟನೆ ನೀಡಿದ ಸಂಸದ ಪ್ರತಾಪ್ ಸಿಂಹ

author img

By

Published : Jun 15, 2022, 1:21 PM IST

pratap simha
ಸಂಸದ ಪ್ರತಾಪ್ ಸಿಂಹ

ಈಗ ನಾನು ಹೇಳಿರುವುದು ಕೇವಲ ಜನಪ್ರತಿನಿಧಿಗಳ ಪಟ್ಟಿ ಮಾತ್ರ. ಗಣ್ಯರ ಪಟ್ಟಿ ಇನ್ನೂ ಸಿದ್ಧವಾಗುತ್ತಿದೆ, ಅದಕ್ಕೆ ಮೊದಲು ಸುಳ್ಳುಸುದ್ದಿ ಹಬ್ಬಿಸಬೇಡಿ ಎಂದು ಸಂಸದ ಪ್ರತಾಪ್​​ ಸಿಂಹ ಹೇಳಿದ್ದಾರೆ.

ಮೈಸೂರು: ಯೋಗ ವೇದಿಕೆಯಲ್ಲಿ ಮೈಸೂರು ಮಹಾರಾಜರಿಗೆ ಅವಕಾಶ ಇಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸಬೇಡಿ. ನಾನು ಹೇಳಿರುವುದು ಕೇವಲ ಜನಪ್ರತಿನಿಧಿಗಳ ಪಟ್ಟಿಯಷ್ಟೇ. ಗಣ್ಯರ ಪಟ್ಟಿ ಇನ್ನೂ ಸಿದ್ಧವಾಗುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಸ್ಪಷ್ಟನೆ ನೀಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನ ರಾಜವಂಶಸ್ಥರ ಬಗ್ಗೆ ಎಲ್ಲರಿಗಿಂತ ಅತಿಯಾದ ಗೌರವ ನಮಗೆ ಇದೆ. ಮಾಜಿ ಸಿಎಂ ಸಿದ್ದರಾಮಯ್ಯ ಮೈಸೂರು ಮಹಾರಾಜರ ಬಗ್ಗೆ ಹಗುರವಾಗಿ ಮಾತನಾಡಿದಾಗ ಅದರ ವಿರುದ್ಧ ಮೊದಲು ಧ್ವನಿಯೆತ್ತಿದ್ದು ನಾನು ಎಂದರು.

ಯೋಗ ವೇದಿಕೆ ವಿವಾದ ವಿಚಾರ: ಸಂಸದ ಪ್ರತಾಪ್ ಸಿಂಹ ಸ್ಪಷ್ಟನೆ ನೀಡಿರುವುದು..

ಸಿದ್ದರಾಮಯ್ಯರ ಮಾತನ್ನ ವಿರೋಧಿಸಲು ಬಹುತೇಕರಿಗೆ ಹೆದರಿಕೆ ಇದೆ. ಆದರೆ, ನಾನು ಅವರಿಗೆ ಉತ್ತರ ಕೊಟ್ಟಿದ್ದೇನೆ. ಈ ಹಿಂದೆ ಸಿದ್ದರಾಮಯ್ಯ ಮಹಾರಾಜರ ಕುಟುಂಬಕ್ಕೆ ಹಲವು ಅನ್ಯಾಯಗಳನ್ನು ಮಾಡಿದ್ದರು. ಆಗ ಮೈಸೂರಿನಲ್ಲಿದ್ದ ಯಾವ ಜನಪ್ರತಿನಿಧಿ ಅದರ ಬಗ್ಗೆ ಧ್ವನಿಯೆತ್ತಲಿಲ್ಲ. ಆದರೆ, ಬಿಜೆಪಿ ಮಾತ್ರ ಮಹಾರಾಜರ ಪರವಾಗಿ ನಿಂತಿತ್ತು. ನಾವು ಎಲ್ಲಾ ಸಂದರ್ಭದಲ್ಲಿಯೂ ರಾಜವಂಶಸ್ಥರ ಪರವಾಗಿ ಧ್ವನಿ ಎತ್ತುತ್ತೇವೆ ಎಂದರು.

ಮೈಸೂರಿನ ರೈಲ್ವೆ ನಿಲ್ದಾಣಕ್ಕೆ ಚಾಮರಾಜ ಒಡೆಯರ್ ಹೆಸರನ್ನ ಇಡುತ್ತಿದ್ದೇವೆ. ಹಾಗೆಯೇ ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ಇಡುತ್ತಿದ್ದೇವೆ. ಇದು ನಾವು ಮಹಾರಾಜರಿಗೆ ಕೊಡುವ ಗೌರವ. ಯಾವುದೋ ಒಂದು ಪೋಸ್ಟರ್ ಹಾಕಿ ನಮಗೆ ಮಹಾರಾಜರ ಬಗ್ಗೆ ತಿಳಿ ಹೇಳಬೇಡಿ ಎಂದು ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ಅವರಿಗೆ ಬಾಯಿ ಬಿದ್ದೋಗಿದಿಯಾ?: ಪ್ರತಾಪ್ ಸಿಂಹ ಜೊತೆ ಚರ್ಚೆಗೆ ನಾನು ಬರೋದಿಲ್ಲ. ನಮ್ಮ ವಕ್ತಾರ ಲಕ್ಷ್ಮಣ ಕಳಿಸುತ್ತೇನೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಏಕೆ ಸಿದ್ದರಾಮಯ್ಯ ಅವರಿಗೆ ಬಾಯಿ ಬಿದ್ದೋಗಿದೆಯಾ?, 48 ಗಂಟೆಗಳ ಮುಂಚೆ ಹೇಳಿ ಎಲ್ಲಿ ಬೇಕಾದರೂ ನಾನು ಚರ್ಚೆಗೆ ಸಿದ್ದ. ನಾನು ಏಕಾಂಗಿಯಾಗಿ ಚರ್ಚೆಗೆ ಬರುತ್ತೇನೆ. ನೀವು ಬೇಕಾದರೆ ದಂಡು ದಾಳಿ ಸಮೇತ ಬನ್ನಿ. ವೀರರು ಶೂರರು ಆನೆ,ಕುದುರೆ ಏರಿ ಯುದ್ಧಕ್ಕೆ ಬರುತ್ತಾರೆ. ನೀವೇನು ಹಂದಿ ಕತ್ತೆ ಏರಿ ಯುದ್ಧಕ್ಕೆ ಬರುತ್ತೀನಿ ಎನ್ನುತ್ತಿದ್ದೀರಾ?, ನೀವೇ ಬನ್ನಿ ಯುದ್ಧ ಮಾಡೋಣ. ಚರ್ಚೆ ಮಾಡೋಣ. ನನಗೆ ಅರ್ಧ ಗಂಟೆ ಸಾಕು ಪಾಯಿಂಟ್-ಟು ಪಾಯಿಂಟ್ ಕ್ಲಿಯರ್ ಮಾಡುತ್ತೇನೆ.

ವೇದಿಕೆಗಳಲ್ಲಿ ಗಂಟಾನುಗಟ್ಟಲೇ ಭಾಷಣ ಮಾಡುತ್ತೀರಾ?, ಮೈಸೂರಿಗೆ ಬಾಡೂಟಕ್ಕೆ, ಬೀಗರ ಊಟಕ್ಕೆ ವಾರಕ್ಕೆ ಹಲವಾರು ಬಾರಿ ಬರುತ್ತೀರಾ?, ಅದರಲ್ಲಿ ಅರ್ಧ ಗಂಟೆ ಬಿಡುವು ಮಾಡಿಕೊಂಡು ಚರ್ಚೆಗೆ ಬನ್ನಿ. ನೀವು ಮಾಡಿರುವ ಅಭಿವೃದ್ಧಿ ಕಾರ್ಯವನ್ನು ಹೇಳಿಕೊಳ್ಳೋಕೆ ಭಯ ಏಕೆ? ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಸಂಸದ ಪ್ರತಾಪ್ ಸಿಂಹ ಪಂಥಾಹ್ವಾನ ಕೊಟ್ಟಿದ್ದಾರೆ.

ಬಜೆಟ್ ಮಂಡಿಸಿ ಜಂಬದ ಕೋಳಿ ತರ ಓಡಾಡುತ್ತಿದ್ದರು: ಸಿದ್ದರಾಮಯ್ಯಗೆ ಆರ್ಥಿಕತೆಯ ಸಂಪೂರ್ಣ ಜ್ಞಾನ ಇಲ್ಲ ಎಂದು ಹೇಳಿದ್ದೇನೆ. ಬಜೆಟ್ ಮಂಡಿಸಿದ ಸಿಎಂಗಳೆಲ್ಲ ನಾನು ಆರ್ಥಿಕ ತಜ್ಞರೆಂದು ಹೇಳಿಕೊಂಡಿರಲಿಲ್ಲ. ಕಳೆದ ಹತ್ತು ವರ್ಷಗಳಿಂದ ಬಜೆಟ್ ಸಿದ್ದ ಮಾಡುತ್ತಿರುವವರು ಹಿರಿಯ ಐಎಎಸ್ ಅಧಿಕಾರಿ ಎ.ಎನ್. ಎಸ್ ಪ್ರಸಾದ್. ಅವರು ಬರೆದು ಕೊಟ್ಟಿದ್ದನ್ನು ಮುಖ್ಯಮಂತ್ರಿಗಳು ಓದುತ್ತಾರೆ ಅಷ್ಟೇ. ಇದನ್ನೇ ಸಿದ್ದರಾಮಯ್ಯ ಅವರು ನಾನು ಆರ್ಥಿಕ ತಜ್ಞ ಎಂಬ ರೀತಿಯಲ್ಲಿ ಹೇಳಿಕೊಂಡು ಜಂಬದ ಕೋಳಿ ತರಹ ಓಡಾಡುತ್ತಿದ್ದರು. ಇದನ್ನೇ ನಾನು ಪ್ರಶ್ನೆ ಮಾಡಿದ್ದೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್​​ನವರು ಚಡ್ಡಿ ಸುಟ್ಟಾಯ್ತು. ಈಗ ನನ್ನ ಪೋಸ್ಟ್ಸ್ ಸುಡುತ್ತಿದ್ದಾರೆ. ಸುಡಲಿ ಬಿಡಿ. ನನ್ನನ್ನ ರಾಜಕೀಯವಾಗಿ ಎದುರಿಸಲಾಗದೇ ಈ ರೀತಿ ವಿವಾದ ಮಾಡುತ್ತಿದ್ದಾರೆ. ಮಾಡಲಿ ಬಿಡಿ ಎಂದು ಎದಿರೇಟು ಕೊಟ್ಟರು.

ಸಿದ್ದರಾಮಯ್ಯ ಅವರನ್ನು ವೈಯಕ್ತಿಕವಾಗಿ ಟೀಕಿಸಿದ್ದೆ ಅಷ್ಟೇ: ವಕೀಲರಿಗೆ ಪ್ರತಾಪ್ ಸಿಂಹ ಅವಮಾನ ಮಾಡಿದ್ದಾರೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಸಿದ್ದರಾಮಯ್ಯ ಅವರನ್ನು ವೈಯಕ್ತಿಕವಾಗಿ ಟೀಕಿಸಿದ್ದೆ ಅಷ್ಟೇ. ನೀವು ಆರ್ಥಿಕ ತಜ್ಞರಲ್ಲ. ಬರಿ ಎಲ್​ಎಲ್​​ಬಿ ಲಾ ಪ್ರಾಕ್ಟೀಸ್ ಮಾಡಿರುವ ವ್ಯಕ್ತಿ ಎಂದು ಹೇಳಿದ್ದೆ. ಇದರಲ್ಲಿ ವಕೀಲರ ಸಮೂಹಕ್ಕೆ ಅವಮಾನ ಮಾಡುವ ಪ್ರಶ್ನೆ ಎಲ್ಲಿಂದ ಬರುತ್ತದೆ. ನನ್ನನ್ನ ನೀನು ಆರ್ಥಿಕ ತಜ್ಞ ಅಲ್ಲ, ಬರಿ ಅಂಕಣಕಾರ ಎಂದರೆ ಅದು ಪತ್ರಕರ್ತರಿಗೆ ಮಾಡಿದ ಅವಮಾನನಾ? ಎಂದು ಪ್ರಶ್ನಿಸಿದರು.

ಹೆಚ್.ಸಿ ಮಹದೇವಪ್ಪ ಅವರಿಗೆ ಮಾತು ಬರಲ್ವಾ?: ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ ಅವರಿಗೆ ಮಾತು ಬರಲ್ವಾ?, ಖಾಲಿ ಕುಳಿತಿರುವ ಅವರು ಫೇಸ್​​ಬುಕ್​​​ನಲ್ಲಿ ಉದ್ದುದ್ದ ಪೋಸ್ಟ್ ಹಾಕುತ್ತಾರೆ. ಅವರು ನನ್ನ ಜೊತೆ ಚರ್ಚೆಗೆ ಬರಲು ಏನು ಕಷ್ಟ?, ಜಯ ವಿಜಯರ ತರ ನೀವು ಮೈಸೂರು ಭಾಗದಲ್ಲಿ ಇದ್ದೀರಾ. ನನ್ನ ಜೊತೆ ಚರ್ಚೆ ಮಾಡಲು ನಿಮಗೆ ಆಗುತ್ತಿದೆಯಾ?, ನನ್ನ ಜೊತೆ ಚರ್ಚೆಮಾಡಲು ಅಹಂ ಅಡ್ಡ ಬರುತ್ತಿದೆಯಾ? ಅಥವಾ ನನ್ನೊಟ್ಟಿಗೆ ಚರ್ಚೆಗೆ ಬರಲು ಭಯನಾ? ಎಂದು ವಾಗ್ದಾಳಿ ನಡೆಸಿದರು.

ಈ ದೇಶದ ಕಾನೂನು ಎಲ್ಲರಿಗೂ ಒಂದೇ: ರಾಹುಲ್ ಗಾಂಧಿ ಇಡಿ ವಿಚಾರಣೆಯ ಬಗ್ಗೆ ಪ್ರತಿಕ್ರಿಯಿಸುತ್ತಾ, ಈ ದೇಶದ ಕಾನೂನು ಎಲ್ಲರಿಗೂ ಒಂದೇ. ಇಡಿ ತನಿಖೆಗೆ ಕರೆದಿದೆ. ತನಿಖೆಯನ್ನು ಕಾಂಗ್ರೆಸ್ ನಾಯಕರು ಎದುರಿಸಲಿ. ಈ ಹಿಂದೆ ಮೋದಿ ಸಿಎಂ ಆಗಿದ್ದಾಗ ವಿಚಾರಣೆ ಎದುರಿಸಿದ್ದರು. ಅಮಿತ್ ಶಾ ಅವರನ್ನು ಕೂಡ ಒಂದು ಪ್ರಕರಣದಲ್ಲಿ ಕಾಂಗ್ರೆಸ್ ಫಿಟ್ ಮಾಡಿ ಜೈಲಿಗೆ ಕಳುಹಿಸಿತ್ತು. ಅದನ್ನೆಲ್ಲ ಎದುರಿಸಿ ನ್ಯಾಯಾಲಯದಲ್ಲಿ ಗೆದ್ದು ಬಂದರು. ಇವರು ತಪ್ಪು ಮಾಡಿಲ್ಲ ಎನ್ನುವುದಾದರೆ ತನಿಖೆ ಎದುರಿಸಲು ಭಯ ಏಕೆ?. ಈ ನೆಲದ ಕಾನೂನಿಗೆ ಯಾರು ದೊಡ್ಡವರಲ್ಲ ಚಿಕ್ಕವರಲ್ಲ ಎಂದರು.

ಇದನ್ನೂ ಓದಿ: ಯೋಗ ದಿನಾಚರಣೆ ವೇದಿಕೆಯಲ್ಲಿ ಮೈಸೂರು ರಾಜವಂಶಸ್ಥರಿಗಿಲ್ಲ ಅವಕಾಶ : ನೆಟ್ಟಿಗರ ಆಕ್ರೋಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.