ETV Bharat / state

ಕಾಂಗ್ರೆಸ್ ತಟ್ಟೆಯಲ್ಲಿ ಕತ್ತೆ ಬಿದ್ದಿದೆ, ಮೊದಲು ಅದನ್ನು ನೋಡಿಕೊಳ್ಳಲಿ: ’ಕೈ‘ ಪ್ರತಿಭಟನೆಗೆ ಸಿಎಂ ತಿರುಗೇಟು

author img

By

Published : Jan 23, 2023, 1:01 PM IST

bommai
ಬಸವರಾಜ ಬೊಮ್ಮಾಯಿ

ಭ್ರಷ್ಟಾಚಾರದ ಗಂಗೋತ್ರಿಯೇ ಕಾಂಗ್ರೆಸ್. ಬಿಬಿಎಂಪಿಯನ್ನು ಭ್ರಷ್ಟಾಚಾರ ಮಾಡಿದವರು ಕಾಂಗ್ರೆಸ್​ನವರು. ತಾವು ಭ್ರಷ್ಟಾಚಾರ ಮಾಡಿ, ಅದನ್ನು ಮುಚ್ಚಿಕೊಳ್ಳುವ ಸಲುವಾಗಿ ಪ್ರತಿಭಟನೆ ಮಾಡುತ್ತಿದಾರೆ. ನಮ್ಮ ವಿರುದ್ಧದ ಆರೋಪಕ್ಕೆ ದಾಖಲೆಗಳು ಇದ್ದರೆ ಕಾಂಗ್ರೆಸ್‌ನವರು ಕೊಡಲಿ, ಲೋಕಾಯುಕ್ತದಿಂದ ತನಿಖೆ ಆಗಲಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸವಾಲೆ ಹಾಕಿದ್ದಾರೆ.

ಕಾಂಗ್ರೆಸ್ ತಟ್ಟೆಯಲ್ಲಿ ಕತ್ತೆ ಬಿದ್ದಿದೆ, ಮೊದಲು ಅದನ್ನು ನೋಡಿಕೊಳ್ಳಲಿ

ಬೆಂಗಳೂರು: ಕಾಂಗ್ರೆಸ್‌ನವರಿಗೆ ಪ್ರತಿಭಟನೆ ಮಾಡುವ ನೈತಿಕ ಹಕ್ಕಿಲ್ಲ. ಭ್ರಷ್ಟಾಚಾರ ಕಾಂಗ್ರೆಸ್ ಆಡಳಿತದ ಒಂದು ಭಾಗವಾಗಿತ್ತು. ಅವರ ಪಾಪ ಮುಚ್ಚಿಕೊಳ್ಳಲು ಪ್ರತಿಭಟನೆ ಮಾಡುತ್ತಿದ್ದಾರೆ. ಜನ ಇದ್ಯಾವುದನ್ನೂ ಒಪ್ಪಿಕೊಳ್ಳಲ್ಲ, ಕಾಂಗ್ರೆಸ್‌ನವರು ಭ್ರಷ್ಟಾಚಾರದ ಬಗ್ಗೆ ಮಾತಾಡೋದು ಹಾಸ್ಯಾಸ್ಪದ. ತಮ್ಮ ಕೈಗೆ ಮಸಿ ಅಂಟಿದೆ ಅದನ್ನು ಅವರು ನೋಡಿಕೊಳ್ಳಲಿ. ಕಾಂಗ್ರೆಸ್​ನವರ ತಟ್ಟೆಯಲ್ಲಿ ಕತ್ತೆ ಬಿದ್ದಿದೆ ಅದನ್ನು ಮೊದಲು ನೋಡಿಕೊಳ್ಳಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ನೇತಾಜಿ ಸುಭಾಷ್‍ಚಂದ್ರ ಬೋಸ್ ಜನ್ಮ ದಿನಾಚರಣೆ ನಿಮಿತ್ತ ವಿಧಾನಸೌಧದ ಬಳಿಯಿರುವ ನೇತಾಜಿ ಪ್ರತಿಮೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಲಾರ್ಪಣೆ ಮಾಡಿ, ಪುಷ್ಪನಮನ ಸಲ್ಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ಲೋಕಾಯುಕ್ತ ಮುಚ್ಚಿದ್ದ ಪುಣ್ಯಾತ್ಮರು. ಲೋಕಾಯುಕ್ತ ಮುಚ್ಚಿ ಇಂದು ನಮಗೆ ಪಾಠ ಹೇಳುತ್ತಿದ್ದಾರ.

ಸಿದ್ದರಾಮಯ್ಯ ಸೇರಿ ಇವರೆಲ್ಲರ ವಿರುದ್ಧ 59 ಕೇಸ್​ಗಳು‌ ಲೋಕಾಯುಕ್ತದಲ್ಲಿ ದಾಖಲಾಗಿದ್ದವು. ಹಾಗಾಗಿ, ಲೋಕಾಯುಕ್ತವನ್ನು ಮುಚ್ಚಿ ಎಸಿಬಿ ಮಾಡಿದ್ದರು. ಎಸಿಬಿಯಲ್ಲಿ ಇವರ ವಿರುದ್ಧದ ಎಲ್ಲ ಕೇಸ್ ಮುಚ್ಚಿ ಹಾಕಲು ಬಿ ರಿಪೋರ್ಟ್ ಹಾಕಿದ್ದರು. ಯಾವುದೇ ಕ್ರಮ ಕೈಗೊಳ್ಳದೇ ಕೇಸ್ ಮುಚ್ಚಿ ಹಾಕಿದ್ದರು. ಎಸಿಬಿಯಲ್ಲಿ ಅವರು ಬಿ- ರಿಪೋರ್ಟ್​ಗೆ ಹಾಕಿದ್ದ ಕೇಸ್​ಗಳನ್ನು ನಾವು ಲೋಕಾಯುಕ್ತಕ್ಕೆ ಕೊಡುತ್ತಿದ್ದೇವೆ. ಲೋಕಾಯುಕ್ತ ಮುಚ್ಚಿ, ಭ್ರಷ್ಟಾಚಾರದ ಜತೆ ಸೇರಿ ಸರ್ಕಾರ ನಡೆಸಿದವರು ಇವರೇ ಎಂದು ಸಿಎಂ ಬಸವರಾಜ್​ ಬೊಮ್ಮಾಯಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಯಾರ ಭ್ರಷ್ಟಾಚಾರ ನಿಲ್ಲಿಸಿ ಅಂತ ಇವರು ಪ್ರತಿಭಟನೆ ಮಾಡುತ್ತಿದ್ದಾರೆ?: ಭ್ರಷ್ಟಾಚಾರದ ಗಂಗೋತ್ರಿಯೇ ಕಾಂಗ್ರೆಸ್, ಬಿಬಿಎಂಪಿಯಲ್ಲಿ ಭ್ರಷ್ಟಾಚಾರ ಮಾಡಿದವರು ಕಾಂಗ್ರೆಸ್​ನವರು, ಶೇ 40 ರಿಂದ ಶೇ 60ರಷ್ಟು ಪ್ರೀಮಿಯಂ ಕೊಟ್ಟಿರುವ ದಾಖಲೆ ಸಿದ್ದರಾಮಯ್ಯ ಅವರ ಸರ್ಕಾರದ್ದು. ಬೆಂಗಳೂರಿನ 800 ಕೋಟಿಯ ಶೇ 40 - 60ರಷ್ಟು ಪ್ರೀಮಿಯಂ ಕೊಟ್ಟ ಶೂರರು ಕಾಂಗ್ರೆಸ್‌ನವರು. ಇಷ್ಟು ಓಪನ್ ಆಗಿ ಪ್ರೀಮಿಯಂ ಕೊಟ್ಟು ಇವತ್ತು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಕಾಂಗ್ರೆಸ್​ನವರ ಸೋಗಲಾಡಿತನ. ತಾವು ಭ್ರಷ್ಟಾಚಾರ ಮಾಡಿ, ಅದನ್ನು ಮುಚ್ಚಿಕೊಳ್ಳುವ ಸಲುವಾಗಿ ಪ್ರತಿಭಟನೆ ಮಾಡುತ್ತಿದಾರೆ. ನಮ್ಮ ವಿರುದ್ಧದ ಆರೋಪಕ್ಕೆ ದಾಖಲೆಗಳಿದ್ದರೆ ಕಾಂಗ್ರೆಸ್‌ನವರು ಕೊಡಲಿ, ಲೋಕಾಯುಕ್ತಕ್ಕೆ ದಾಖಲೆ ಕೊಡಲಿ, ತನಿಖೆ ಆಗಲಿ ಎಂದು ಸವಾಲೆಸೆದರು.

ಅವರ ಟೀಕೆಗಳನ್ನು ಸ್ವಾಗತ ಮಾಡುತ್ತೇನೆ: ಮೋದಿ ಅವರನ್ನು ಸಿದ್ದರಾಮಯ್ಯ ಹಿಟ್ಲರ್​ಗೆ ಹೋಲಿಸಿದ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ನಾನು ಅವರ ಟೀಕೆಗಳನ್ನು ಸ್ವಾಗತ ಮಾಡುತ್ತೇನೆ. ಟೀಕೆಗಳನ್ನು ನಾನು ಮೆಟ್ಟಿಲುಗಳಾಗಿ ಮಾಡಿ ಯಶಸ್ಸು ಕಾಣುತ್ತೇವೆ. ಮೋದಿ ಅವರು ಈಗ ವಿಶ್ವವ್ಯಾಪಿಯ ನಾಯಕ, ಜನಮನ್ನಣೆ ಗಳಿಸಿದ ನಾಯಕ. ಅವರ ಬಗ್ಗೆ ಇರುವ ಸದಾಭಿಪ್ರಾಯ, ಇತ್ತೀಚಿನ ದಿನಗಳಲ್ಲಿ ಯಾವುದೇ ಬೇರೆ ಪ್ರಧಾನಿಗಳ ಬಗ್ಗೆ ಇಲ್ಲ. ಅಂತವರ ಬಗ್ಗೆ ಬೈದರೆ ಜನ ನಂಬುತ್ತಾರಾ?. ಮೋದಿ ಅವರನ್ನು ಬೈದರೆ ಆಕಾಶಕ್ಕೆ ಉಗುಳಿದ ಹಾಗಾಗುತ್ತದೆ.‌ ಈ ಹಿಂದೆ ಸೋನಿಯಾ ಗಾಂಧಿ ಅವರು ಮೋದಿ ಅವರನ್ನು ಮೌತ್ ಕಾ ಸೌದಾಗರ್‌ ಅಂದರು. ಆವತ್ತು ಮೋದಿಯವರಿಗೆ ಓಟು ಜಾಸ್ತಿ ಬಿತ್ತು, ಜನ ಮನ್ನಣೆ ಹೆಚ್ಚಾಯಿತು. ಕಾಂಗ್ರೆಸ್‌ನವರು ಏನೇ ಹೇಳಿದರೂ ಜನ ನಮ್ಮ ಪರ ಇದ್ದಾರೆ ಎಂದರು.

ಇದನ್ನೂ ಓದಿ: ಬೆಂಗಳೂರಿನ 300ಕ್ಕೂ ಹೆಚ್ಚು ಜಾಗಗಳಲ್ಲಿ ನಾಳೆ ಕಾಂಗ್ರೆಸ್​ನಿಂದ ಪ್ರತಿಭಟನೆ : ಶಾಸಕ ಎನ್ ಎ ಹ್ಯಾರಿಸ್

ಕಾನೂನು ತನ್ನ ಕೆಲಸ ಮಾಡುತ್ತದೆ: ಕಾಂಗ್ರೆಸ್ ಪ್ರತಿಭಟನೆಗೆ ಪೊಲೀಸ್ ಅನುಮತಿ ಸಿಗದ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ, ಪೊಲೀಸರು ಕಾನೂನು ಪ್ರಕಾರ ಏನಿದೆಯೋ ಅದನ್ನ ಮಾಡುತ್ತಾರೆ. ಟ್ರಾಫಿಕ್ ಇತರ ವಿಚಾರ ನೋಡಿಕೊಂಡು ನಿರ್ಧಾರ ಮಾಡುತ್ತಾರೆ. ಇದರಲ್ಲಿ ನಮ್ಮ ಪಾತ್ರ ಏನಿಲ್ಲ ಎಂದರು.

ರಿಪಬ್ಲಿಕ್ ಡೇ ದಿನ ಕರ್ನಾಟಕದ ಟ್ಯಾಬ್ಲೋ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆರೋಪಕ್ಕೆ ಟಕ್ಕರ್ ನೀಡಿದ ಸಿಎಂ, ಕೆಪಿಸಿಸಿ ಅಧ್ಯಕ್ಷರದ್ದು ಆಹಾ ಏನು ಆರ್ಭಟ, 2009 ರಲ್ಲಿ ಯುಪಿಎ ಸರ್ಕಾರ ಇದ್ದಾಗ ನಾವು ಟ್ಯಾಬ್ಲೋ‌ ಕಳುಹಿಸಿದ್ದೆವು. ಆಗ ನಿರಾಕರಣೆ ಮಾಡಿದ್ದರು. ಆಗ ನಮ್ಮ ರಾಜ್ಯದ ಯಾವ ಕಾಂಗ್ರೆಸ್ ನಾಯಕರೂ ಯುಪಿಎ ಮೇಲೆ ಒತ್ತಡ ಹಾಕಲಿಲ್ಲ. ಆ ವರ್ಷ ನಮ್ಮ ರಾಜ್ಯದ ಟ್ಯಾಬ್ಲೋ ಬರಲೇ ಇಲ್ಲ, ಆ ನಂತರ ಸತತ 14 ವರ್ಷ ಟ್ಯಾಬ್ಲೋ ಪ್ರದರ್ಶನವಾಯ್ತು.

ನಾನು ನಮ್ಮ ರಕ್ಷಣಾ ಸಚಿವರ ಜತೆ ಮಾತನಾಡಿದೆ, ಜೋಶಿಯವರೂ ಮಾತಾಡಿದರು. ಈಗ ನಮ್ಮ ರಾಜ್ಯದ ಸ್ತಬ್ಧಚಿತ್ರಕ್ಕೆ ಅನುಮತಿ ಸಿಕ್ಕಿದೆ. ನಾರಿಶಕ್ತಿ ಪರಿಕಲ್ಪನೆಯ ಸ್ತಬ್ಧಚಿತ್ರ ಪ್ರದರ್ಶನ ಆಗುತ್ತಿದೆ. ಕೇವಲ ಎಂಟ್ಹತ್ತು ದಿನಗಳಲ್ಲಿ ಅದ್ಭುತವಾಗಿ ಸ್ತಬ್ಧ ಚಿತ್ರ ತಯಾರಿಸಲಾಗಿದೆ. ಕರ್ನಾಟಕದ ವಿಚಾರ ಬಂದಾಗ ಎಲ್ಲರೂ ಒಂದಾಗಬೇಕು, ಸಣ್ಣ ಸಣ್ಣ ಭಾವನೆ ಬಿಟ್ಟು ಒಂದಾಗಬೇಕು. ಈಗಲಾದರೂ ಕಾಂಗ್ರೆಸ್‌ನವರು ಪಾಠ ಕಲಿಯಲಿ ಎಂದರು.

ಇದನ್ನೂ ಓದಿ: ಗಣರಾಜ್ಯೋತ್ಸವ ಪರೇಡ್​ಗೆ ಕರ್ನಾಟಕದ ಸ್ತಬ್ಧಚಿತ್ರ ಆಯ್ಕೆ

ಬೋಸ್ ಪತ್ರಿಮೆ ಮೊದಲಿನ ಜಾಗಕ್ಕೆ ಸ್ಥಳಾಂತರ: ವಿಧಾನಸೌಧದಲ್ಲಿರುವ ಸುಭಾಷ್ ಚಂದ್ರ ಬೋಸ್ ಪ್ರತಿಮೆ ಮೊದಲಿದ್ದ ಸ್ಥಳಕ್ಕೆ ಸ್ಥಳಾಂತರ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ‌. ಮೆಟ್ರೋ ಕಾಮಗಾರಿಯಿಂದ ವಿಧಾನಸೌಧದ ಮುಂಭಾಗವಿದ್ದ ಬೋಸ್ ಪ್ರತಿಮೆಯನ್ನ ವಿಧಾನಸೌಧದ ಪಶ್ಚಿಮ ಭಾಗಗಕ್ಕೆ ಸ್ಥಳಾಂತರ ಮಾಡಲಾಗಿತ್ತು. ಇದೀಗ ಮತ್ತೆ ಮೊದಲಿದ್ದ ಸ್ಥಳಕ್ಕೆ ಅಂದರೆ ವಿಧಾನಸೌಧದ ಮುಂಭಾಗಕ್ಕೆ ಸ್ಥಳಾಂತರ ಮಾಡೋದಾಗಿ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.