ETV Bharat / state

ಚಿಂತಾಮಣಿ ನಗರಸಭೆ ಸದಸ್ಯನ ಕೊಲೆ ಯತ್ನ ಪ್ರಕರಣ: ಆರೋಪಿಗೆ ಜಾಮೀನು - Bail To Accused

author img

By ETV Bharat Karnataka Team

Published : May 22, 2024, 8:07 AM IST

ನಗರಸಭೆ ಸದಸ್ಯನ ಕೊಲೆ ಯತ್ನ ಪ್ರಕರಣದ ಆರೋಪಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

high court
ಹೈಕೋರ್ಟ್ (ETV Bharat)

ಬೆಂಗಳೂರು: ಚಿಂತಾಮಣಿ ನಗರಸಭೆ ಸದಸ್ಯ ಅಗ್ರಹಾರ ಮುರಳಿ ಅವರ ಕೊಲೆ ಯತ್ನ ಪ್ರಕರಣದ ಮೊದಲ ಆರೋಪಿ ಡಿ.ನರೇನ್ ಕುಮಾರ್‌ಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ. ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿದ್ದ ಡಿ.ನರೇನ್ ಕುಮಾರ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಟಿ.ವೆಂಕಟೇಶ್ ನಾಯ್ಕ್ ಅವರಿದ್ದ ಪೀಠ ಈ ಆದೇಶ ಮಾಡಿತು.

ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ತನಿಖಾಧಿಕಾರಿಗಳು ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡಿದ್ದ ಗಾಯಾಳು ಚೇತರಿಸಿಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟ ಪೀಠ, ಅರ್ಜಿದಾರನಿಗೆ ಜಾಮೀನು ನೀಡಿದೆ.

ಅರ್ಜಿದಾರ 2 ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್ ನೀಡಬೇಕು. ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ ಒದಗಿಸಬೇಕು. ಸಾಕ್ಷ್ಯಾಧಾರ ತಿರುಚಲು ಪ್ರಯತ್ನಿಸಬಾರದು. ಅಧೀನ ನ್ಯಾಯಾಲಯದ ವಿಚಾರಣೆಗೆ ಹಾಜರಾಗಬೇಕು. ಇದೇ ಮಾದರಿಯ ಅಪರಾಧದಲ್ಲಿ ಭಾಗಿಯಾಗಬಾರದು ಎಂದು ನ್ಯಾಯಪೀಠ ಜಾಮೀನು ಮಂಜೂರಾತಿಗೆ ಷರತ್ತು ವಿಧಿಸಿದೆ.

ಪ್ರಕರಣದ ಹಿನ್ನೆಲೆ: ಕಳೆದ 2023ರ ಅಕ್ಟೋಬರ್​ 13ರಂದು ಸಂಜೆ 6.15ರ ಸುಮಾರಿಗೆ ಚಿಕ್ಕಾಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಗಜಾನನ ಸರ್ಕಲ್ ಬಳಿ ಅಪರಿಚಿತರ ಗುಂಪೊಂದು ನಗರಸಭೆ ಸದಸ್ಯ ಅಗ್ರಹಾರ ಮುರಳಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿ ಪರಾರಿಯಾಗಿತ್ತು. ಸ್ಥಳೀಯರು ಅಗ್ರಹಾರ ಮುರಳಿ ಅವರನ್ನು ಚಿಕಿತ್ಸೆಗೆ ದಾಖಲಿಸಿದ್ದರು.

ಚಿಂತಾಮಣಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿತ್ತು. ಪ್ರಕರಣದ ನಾಲ್ಕನೇ ಆರೋಪಿ ಮತ್ತು ಅಗ್ರಹಾರ ಮುರಳಿ ಮಧ್ಯೆ ವೈಯಕ್ತಿಕ ದ್ವೇಷವಿತ್ತು. ಆತನ ಪ್ರಚೋದನೆ ಮೇರೆಗೆ ಅಗ್ರಹಾರ ಮುರಳಿ ಕೊಲೆಗೆ ಅರ್ಜಿದಾರ ಯತ್ನಿಸಿದ್ದ ಎಂಬುದು ತನಿಖೆಯಿಂದ ತಿಳಿದು ಬಂದಿತ್ತು. ಇದರಿಂದ ಪೊಲೀಸರು ಅರ್ಜಿದಾರನನ್ನು ಬಂಧಿಸಿದ್ದರು. ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ನರೇನ್ ಕುಮಾರ್ ಜಾಮೀನು ಕೋರಿ ಹೈಕೋರ್ಟ್ ಮೇಟ್ಟಿಲೇರಿದ್ದ.

ಇದನ್ನೂ ಓದಿ: ದಂಪತಿ ಅನ್ಯೋನ್ಯತೆಯನ್ನು ಒಂದು ಛಾಯಾಚಿತ್ರದಿಂದ ನಿರ್ಧರಿಸಲಾಗದು: ಹೈಕೋರ್ಟ್ - High Court

ETV Bharat Logo

Copyright © 2024 Ushodaya Enterprises Pvt. Ltd., All Rights Reserved.