ETV Bharat / state

13 ಸಂಸದರ ಕೈತಪ್ಪಲಿದೆಯಾ ಟಿಕೆಟ್?: ಹೊಸ ಮುಖಗಳಿಗೆ ಮಣೆಹಾಕಲು ಮುಂದಾದರಾ ವರಿಷ್ಠರು..!?

author img

By ETV Bharat Karnataka Team

Published : Nov 11, 2023, 6:04 PM IST

Updated : Nov 11, 2023, 7:41 PM IST

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಲೋಕಸಭಾ ಚುನಾವಣೆ ಹಿನ್ನೆಲೆ 13 ಕ್ಷೇತ್ರಗಳಲ್ಲಿ ಹಾಲಿಗಳಿಗೆ ಟಿಕೆಟ್ ತಪ್ಪಲಿದ್ದು, ಬಹುತೇಕ ಹೊಸಬರಿಗೆ ಮಣೆಹಾಕಲು ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. ವಿಧಾನಸಭಾ ಚುನಾವಣೆಯಲ್ಲಿ ಮಾಡಿದಂತೆ ಈ ಬಾರಿಯೂ ಪ್ರಯೋಗ ನಡೆಯಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಸಾಕಷ್ಟು ಹಾಲಿ ಶಾಸಕರಿಗೆ ಕೋಕ್ ನೀಡಿ ಹೊಸಬರಿಗೆ ಮಣೆಹಾಕಿ ನಡೆಸಿದ್ದ ಪ್ರಯೋಗವನ್ನು ಲೋಕಸಭಾ ಚುನಾವಣೆಯಲ್ಲಿಯೂ ನಡೆಸಲು ಬಿಜೆಪಿ ಹೈಕಮಾಂಡ್ ಚಿಂತನೆಯಲ್ಲಿದೆ. 13 ಕ್ಷೇತ್ರಗಳಲ್ಲಿ ಹಾಲಿ ಸಂಸದರ ಬದಲು ಹೊಸ ಮುಖಗಳಿಗೆ ಮಣೆ ಹಾಕುವ ಚಿಂತನೆಯಲ್ಲಿದೆ. ಅಲಿಖಿತ ನಿಯಮದ ಅನ್ವಯ 75 ವರ್ಷ ದಾಟಿದ ನಾಯಕರಿಗೆ ಚುನಾವಣಾ ರಾಜಕೀಯದಿಂದ ಹೊರಗಿಡಲು ಬಿಜೆಪಿ ಹೈಕಮಾಂಡ್​ ಮುಂದಾಗಿದೆ.

ಡಿವಿ ಸದಾನಂದಗೌಡ (70), ಬಿಎನ್​ ಬಚ್ಚೇಗೌಡ (81), ಶ್ರೀನಿವಾಸ ಪ್ರಸಾದ್ (76) ಚುನಾವಣಾ ರಾಜಕೀಯಕ್ಕೆ ಗುಡ್ ಬೈ ಹೇಳಿದ್ದಾರೆ. ಶಿವಕುಮಾರ್ ಉದಾಸಿ(56) ವೈಯಕ್ತಿಕ ಕಾರಣದಿಂದ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ. ಮತ್ತಷ್ಟು ಸಂಸದರ ವಯಸ್ಸು 70 ದಾಟಿದ್ದು ಅವರಿಗೆ ಟಿಕೆಟ್ ನೀಡದಿರುವ ಚಿಂತನೆ ನಡೆದಿದೆ ಎಂಬ ಮಾತುಗಳು ಪಕ್ಷದ ವಲಯದಿಂದ ಕೇಳಿ ಬಂದಿದೆ. ಇದರ ಜೊತೆಗೆ ಅನಾರೋಗ್ಯ, ಸ್ಪರ್ಧೆಯಿಂದ ಹಿಂದೇಟು, ಸೂಕ್ತವಲ್ಲ ಎನ್ನುವ ಕಾರಣಕ್ಕಾಗಿ ಮೂವರಿಗೆ ಟಿಕೆಟ್ ಕೈತಪ್ಪಲಿದೆ ಎಂಬ ಮಾತು ಕೂಡ ಇದೆ. ಒಟ್ಟು 13 ಕ್ಷೇತ್ರಗಳಲ್ಲಿ ಬದಲಾವಣೆ ತರಲಾಗುತ್ತದೆ ಎಂಬ ಮಾತುಗಳಿವೆ. ಇದು ಟಿಕೆಟ್​ ಹಂಚಿಕೆಯಾದಾಗಲೇ ಗೊತ್ತಾಗಬೇಕಿದೆ. ಆದರೆ ಹೀಗೊಂದು ಚರ್ಚೆ ಪಕ್ಷದ ಆಂತರಿಕ ವಲಯದಿಂದ ಕೇಳಿ ಬರುತ್ತಿದೆ.

ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ ಸಿಟಿ ರವಿ ಅವರಿಗೆ ಟಿಕೆಟ್ ನೀಡಿ, ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡುವ ಪ್ರಸ್ತಾಪವಿದೆ. ವರ್ಷದಿಂದಲೇ ಈ ಮಾತು ಕೇಳಿ ಬರುತ್ತಿದೆ. ಇದೀಗ ಸದಾನಂದಗೌಡರು ಕಣದಲ್ಲಿ ಇಲ್ಲದ ಕಾರಣ ಶೋಭಾ ಕರಂದ್ಲಾಜೆ ಹೆಸರಿಗೆ ಇದ್ದ ಅಡ್ಡಿ ನಿವಾರಣೆಯಾಗಿದೆ. ಇನ್ನು ಒಂದು ವೇಳೆ ಮಂಡ್ಯ ಟಿಕೆಟ್ ಜೆಡಿಎಸ್ ಪಾಲಾದಲ್ಲಿ ಹಾಲಿ ಸಂಸದೆ ಸುಮಲತಾ ಅವರಿಗೆ ಬೆಂಗಳೂರು ಉತ್ತರದಿಂದ ಟಿಕೆಟ್ ನೀಡುವ ಪ್ರಸ್ತಾಪವೂ ಇದೆ. ಒಂದು ವೇಳೆ ಇಲ್ಲಿ ಹೊಸ ಮುಖಕ್ಕೆ ಮಣೆಹಾಕಬೇಕು ಎಂದರೆ ತುಳಸಿಮುನಿರಾಜು ಅಥವಾ ಮಹಿಳಾ ಅಭ್ಯರ್ಥಿ ಬೇಕು ಎಂದರೆ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದ ಹೆಸರು ಚಾಲ್ತಿಯಲ್ಲಿದೆ.

ಚುನಾವಣೆಗೆ ಸ್ಪರ್ಧಿಸಲ್ಲ ಎಂದ ಶ್ರೀನಿವಾಸ್ ಪ್ರಸಾದ್​: ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಿಂದ ವಿ.ಶ್ರೀನಿವಾಸ್ ಪ್ರಸಾದ್​ಗೆ ಟಿಕೆಟ್ ಕೈತಪ್ಪುವುದು ಬಹುತೇಕ ಖಚಿತ. ಯಾಕೆಂದರೆ ಅವರು ಈಗಾಗಲೇ ತಾವು ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ಘೋಷಿಸಿದ್ದಾರೆ. ಚಿತ್ರನಟ ಆರ್.ಅರ್ಜುನ್ ರಮೇಶ್ ಆಕಾಂಕ್ಷಿಯಾಗಿದ್ದಾರೆ. ತಿ.ನರಸೀಪುರ ಪುರಸಭಾ ಸದಸ್ಯರಾಗಿರುವ ಅವರು ಕಿರುತೆರೆ - ಹಿರಿತೆರೆಯಲ್ಲಿ ಗುರುತಿಸಿಕೊಂಡಿದ್ದು ಲೋಕಸಭಾ ಕಣಕ್ಕಿಳಿಯುವ ಉತ್ಸುಕತೆ ತೋರಿದ್ದಾರೆ. ಹರ್ಷವರ್ಧನ್ ಕೂಡ ಟಿಕೆಟ್​​ ಗಾಗಿ ಎದುರುನೋಡುತ್ತಿದ್ದಾರೆ. ಆದರೆ, ಶ್ರೀನಿವಾಸ ಪ್ರಸಾದ್ ಒಪ್ಪಿಗೆ ಇಲ್ಲಿ ಮಹತ್ವದ್ದಾಗಿರಲಿದೆ. ಆದರೂ, ಈ ಕ್ಷೇತ್ರದಲ್ಲಿ ಈ ಬಾರಿ ಹೊಸ ಮುಖಕ್ಕೆ ಟಿಕೆಟ್ ಸಾಧ್ಯತೆ ಇದೆ.

ಕೆಲವು ಕ್ಷೇತ್ರಗಳಲ್ಲಿ ಹೆಚ್ಚಿದ ಆಕಾಂಕ್ಷಿತರ ಸಂಖ್ಯೆ; ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಮಾಜಿ ಸಚಿವ ಡಾ.ಸುಧಾಕರ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಟಿಕೆಟ್ ಪಡೆಯುವ ಕೂಡ ಪ್ರಯತ್ನ ನಡೆಸಿದ್ದಾರೆ. ಇದರ ಜೊತೆಯಲ್ಲಿಯೇ ಯಡಿಯೂರಪ್ಪ ಜೊತೆ ಉತ್ತಮ ಒಡನಾಟ ಇರಿಸಿಕೊಂಡಿರುವ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಪುತ್ರ ಅಲೋಕ್ ವಿಶ್ವನಾಥ್​ನನ್ನು ರಾಜಕೀಯಕ್ಕೆ ತರಲು ಮುಂದಾಗಿದ್ದು ಟಿಕೆಟ್ ಲಾಬಿ ನಡೆಸುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಎ.ವಿ.ನಾರಾಯಣಸ್ವಾಮಿ ಹೆಸರೂ ಚಾಲ್ತಿಯಲ್ಲಿದೆ.

ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ವೈದ್ಯಕೀಯ ಪ್ರಕೋಷ್ಠದ ಸಂಚಾಲಕ ಡಾ.ಬಾಬುರಾಜೇಂದ್ರ ನಾಯಕ್ ಟಿಕೆಟ್ ಅಪೇಕ್ಷೆ ವ್ಯಕ್ತಪಡಿಸಿ ಜಿಲ್ಲಾ ಪ್ರವಾಸ ಆರಂಭಿಸಿದ್ದಾರೆ. ಮಾಜಿ ಪೊಲೀಸ್ ಅಧಿಕಾರಿ ಮಹೇಂದ್ರಕುಮಾರ್ ನಾಯಕ್, ಉಮೇಶ್ ಕಾರಜೋಳ, ಮಂಜುನಾಥ್ ಮೀಸಿ ಹೆಸರು ಚಾಲ್ತಿಯಲ್ಲಿವೆ.

ಲೋಕಸಭೆಗೆ ಸ್ಪರ್ಧಿಸಲು ಸೋಮಣ್ಣ ಪ್ರಯತ್ನ: ಕೋಲಾರ ಕ್ಷೇತ್ರದಿಂದ ಹಾಲಿ ಸಂಸದ ಮುನಿಸ್ವಾಮಿ ಜೊತೆ ಛಲವಾದಿ ನಾರಾಯಣಸ್ವಾಮಿ, ಅಧಿಕಾರಿ ಎನ್.ಮಂಜುನಾಥ ಪ್ರಸಾದ್ ಹೆಸರು ಕೇಳಿ ಬಂದಿವೆ. ತುಮಕೂರು ಕ್ಷೇತ್ರದಿಂದ ಮಾಜಿ ಸಚಿವ ವಿ.ಸೋಮಣ್ಣ ಟಿಕೆಟ್ ಪ್ರಯತ್ನದಲ್ಲಿದ್ದಾರೆ. ಹೈಕಮಾಂಡ್ ನಿರ್ದೇಶನದಂತೆ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರ ತ್ಯಾಗ ಮಾಡಿ ಬೇರೆ ಎರಡು ಕಡೆ ಸ್ಪರ್ಧೆ ಮಾಡಿ ಸೋತಿರುವ ಸೋಮಣ್ಣ, ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಅದರ ಜೊತೆ ತುಮಕೂರು ಲೋಕಸಭಾ ಕ್ಷೇತ್ರದ ಮೇಲೂ ಕಣ್ಣಿಟ್ಟಿದ್ದಾರೆ. ಇವರ ಜೊತೆ ಮಾಜಿ ಸಂಸದ ಮುದ್ದಹನುಮೇಗೌಡ, ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ, ಸಿದ್ದಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್ ಪರಮೇಶ್ ಆಕಾಂಕ್ಷಿಗಳಾಗಿದ್ದಾರೆ.

ಕೊಪ್ಪಳ ಕ್ಷೇತ್ರದಿಂದ ಮಾಜಿ ಸಚಿವ ಆನಂದ ಸಿಂಗ್, ವೈದ್ಯ ಡಾ.ಬಸವರಾಜ ಕೆವಟರ್ ಪ್ರಯತ್ನಿಸಿದ್ದಾರೆ. ಆದರೆ, ಜೆಡಿಎಸ್ ಮೈತ್ರಿಯಿಂದಾಗಿ ಯಾರಿಗೆ ಕ್ಷೇತ್ರ ಹಂಚಿಕೆಯಾಗಲಿದೆ ಎನ್ನುವುದರ ಮೇಲೆ ಟಿಕೆಟ್ ಆಕಾಂಕ್ಷಿಗಳ ಲಾಭಿ ನಡೆಯಲಿದೆ. ದಾವಣಗೆರೆ ಕ್ಷೇತ್ರದಿಂದ ಹಾಲಿ ಸಂಸದ ಜಿಎಂ ಸಿದ್ದೇಶ್ ಪುತ್ರ ಜಿಎಸ್ ಅನಿತ್ ಪರ ಲಾಬಿ ಮಾಡುತ್ತಿದ್ದಾರೆ. ಮಾಜಿ ಸಚಿವ ಎಂಪಿ ರೇಣುಕಾಚಾರ್ಯ, ನಿವೃತ್ತ ಸರ್ಕಾರಿ ಅಧಿಕಾರಿ ಕೊಟ್ರೋಶ್, ಜಗಳೂರು ಮಾಜಿ ಶಾಸಕ ಗುರುಸಿದ್ದನಗೌಡರ ಪುತ್ರ ಡಾ.ರವಿ ಆಕಾಂಕ್ಷಿಗಳಾಗಿದ್ದಾರೆ. ಉತ್ತರ ಕನ್ನಡ ಕ್ಷೇತ್ರದಲ್ಲಿ ಯಾರು ಆಕಾಂಕ್ಷಿಗಳು ಎನ್ನುವುದು ಇನ್ನು ಬಹಿರಂಗವಾಗಿಲ್ಲ.

ಹಾವೇರಿಯಿಂದ ಪುತ್ರನ ಕಣಕ್ಕಿಳಿಸಲು ಈಶ್ವರಪ್ಪ ಚಿಂತನೆ: ಹಾವೇರಿ ಕ್ಷೇತ್ರದಿಂದ ಹಾಲಿ ಸಂಸದ ಶಿವಕುಮಾರ ಉದಾಸಿ ಸ್ಪರ್ಧೆ ಮಾಡಲ್ಲ ಎಂದು ಪ್ರಕಟಿಸಿದ್ದು, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಪುತ್ರ ಕೆ.ಇ ಕಾಂತೇಶ್ ಪರ ಲಾಬಿ ಆರಂಭಿಸಿದ್ದಾರೆ. ಬಹಿರಂಗವಾಗಿಯೇ ಪುತ್ರನಿಗೆ ಟಿಕೆಟ್ ಕೇಳುತ್ತಿದ್ದಾರೆ. ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡದಂತೆ ಹೈಕಮಾಂಡ್ ನೀಡಿದ್ದ ಸೂಚನೆ ಪಾಲನೆ ಮಾಡಿರುವ ಹಿನ್ನೆಲೆ ಪುತ್ರನಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ. ಇದರ ಜೊತೆಗೆ ಮಾಜಿ ಸಚಿವ ಬಿ.ಸಿ. ಪಾಟೀಲ್ ಟಿಕೆಟ್ ಬಯಕೆ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದರಾಜ ಕಲಕೋಟೆ, ಪಾಲಾಕ್ಷ ಗೌಡ ಹೆಸರು ಕೇಳಿಬಂದಿವೆ.

ಬೆಳಗಾವಿ ಕ್ಷೇತ್ರದಿಂದ ಬಹುತೇಕ ಜಾರಕಿಹೊಳಿ ಕುಟುಂಬದ ಅಭಿಪ್ರಾಯದಂತೆ ಅಭ್ಯರ್ಥಿಗಳ ಆಯ್ಕೆ ನಡೆಯಬಹುದು ಎನ್ನಲಾಗಿದೆ. ಬಳ್ಳಾರಿ ಕ್ಷೇತ್ರದಿಂದ ಮಾಜಿ ಸಚಿವ ಬಿ.ಶ್ರೀರಾಮುಲು ಟಿಕೆಟ್ ನಿರೀಕ್ಷೆಯಲ್ಲಿದ್ದು ಟಿಕೆಟ್ ನೀಡುವ ಸಾಧ್ಯತೆ ಇದೆ. ಹೊಸಬರಿಗೂ ಮಣೆ ಹಾಕಬಹುದು. ಬಾಗಲಕೋಟೆ ಕ್ಷೇತ್ರದಿಂದ ಮಾಜಿ ಸಚಿವ ಮುರುಗೇಶ್ ನಿರಾಣಿ, ಸ್ಥಳೀಯ ನಾಯಕ ರಾಜಶೇಖರ ಶೀಲವಂತ ಆಕಾಂಕ್ಷಿಯಾಗಿದ್ದಾರೆ.

ಈ ಬಾರಿ ಹೊಸಬರಿಗೆ ಮಣೆ ಹಾಕುವ ಬಗ್ಗೆ ಗಂಭೀರ ಚರ್ಚೆ?: ಒಟ್ಟಿನಲ್ಲಿ 13 ಕ್ಷೇತ್ರಗಳಲ್ಲಿ ಹಾಲಿಗಳಿಗೆ ಟಿಕೆಟ್ ತಪ್ಪಲಿದ್ದು, ಬಹುತೇಕ ಹೊಸಬರಿಗೆ ಮಣೆಹಾಕಲು ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಮಾಡಿದಂತೆ ಈ ಬಾರಿಯೂ ಪ್ರಯೋಗ ನಡೆಯಲಿದೆ. ಆದರೆ, ಮೊದಲೇ ಮಾಹಿತಿ ನೀಡಿ ಬಂಡಾಯ ಏಳದಂತೆ ನೋಡಿಕೊಂಡು ವ್ಯವಸ್ಥಿತವಾಗಿ ಟಿಕೆಟ್ ಪ್ರಕಟಿಸಲಿದೆ ಎನ್ನಲಾಗಿದೆ.

ಆದರೂ ಮಾಜಿ ಸಚಿವರಾದ ವಿ.ಸೋಮಣ್ಣ, ಬಿ.ಶ್ರೀರಾಮುಲು, ಡಾ.ಸುಧಾಕರ್, ಬಿ.ಸಿ. ಪಾಟೀಲ್, ಎಂ.ಪಿ. ರೇಣುಕಾಚಾರ್ಯ, ಆನಂದ್ ಸಿಂಗ್, ಸಿ.ಟಿ. ರವಿ ರೇಸ್​ನಲ್ಲಿರುವುದರಿಂದ ಎಷ್ಟು ಹೊಸ ಮುಖಗಳಿಗೆ ಅವಕಾಶ ಸಿಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಮಾರ್ಚ್ 17ಕ್ಕೆ ರಾಜಕೀಯ ನಿವೃತ್ತಿ ಘೋಷಿಸುವೆ: ಸಂಸದ ಶ್ರೀನಿವಾಸ್ ಪ್ರಸಾದ್

ಇದನ್ನೂ ಓದಿ: ಹಾವೇರಿ ಲೋಕಸಭಾ ಕ್ಷೇತ್ರ: ಸ್ಪರ್ಧೆಯ ಇಂಗಿತ ವ್ಯಕ್ತಪಡಿಸಿದ ಬಿಜೆಪಿ ಮುಖಂಡ ಮುರಿಗೆಪ್ಪ ಶೆಟ್ಟರ್

ಇದನ್ನೂ ಓದಿ : ನಾನು ಚುನಾವಣೆಗೆ ನಿಲ್ಲುವುದಿಲ್ಲ, ಮಗ ಶರತ್ ಬಚ್ಚೇಗೌಡರನ್ನು ಗೆಲ್ಲಿಸಿ: ಬಚ್ಚೇಗೌಡ

ಇದನ್ನೂ ಓದಿ: ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಮಾಜಿ ಸಿಎಂ ಡಿವಿ ಸದಾನಂದಗೌಡ

Last Updated :Nov 11, 2023, 7:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.