ETV Bharat / state

ಶುಕ್ರವಾರ ಶಾಸಕಾಂಗ ಪಕ್ಷದ ಸಭೆ ಕರೆದ ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ

author img

By ETV Bharat Karnataka Team

Published : Nov 15, 2023, 10:06 PM IST

ಬಿ ವೈ ವಿಜಯೇಂದ್ರ ಅವರು ಶುಕ್ರವಾರ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ.

ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ
ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ

ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷರಾಗಿ ಪದಗ್ರಹಣ ಮಾಡುತ್ತಿದ್ದಂತೆ ಸಂಘಟನಾತ್ಮಕ ಚಟುವಟಿಕೆಯನ್ನು ಅಧಿಕೃತವಾಗಿ ಆರಂಭಿಸಿರುವ ಬಿ ವೈ ವಿಜಯೇಂದ್ರ, ಮೊದಲನೆ ಸಭೆಯನ್ನಾಗಿ ಶುಕ್ರವಾರ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ಪಕ್ಷದ ಎಲ್ಲಾ ಶಾಸಕರು ಮತ್ತು ಪರಿಷತ್ ಸದಸ್ಯರಿಗೆ ಆಹ್ವಾನ ನೀಡಿದ್ದಾರೆ.

ಇಂದು ಬೆಳಗ್ಗೆಯಷ್ಟೇ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ಬಿ. ವೈ ವಿಜಯೇಂದ್ರ ಅವರು ಪ್ರತಿಪಕ್ಷ ನಾಯಕರ ಆಯ್ಕೆ ಪ್ರಕ್ರಿಯೆ ನಡೆಸಲು ಹಾಗೂ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ನವೆಂಬರ್ 17ರ ಶುಕ್ರವಾರ ಸಂಜೆ 6 ಗಂಟೆಗೆ ನಗರದ ಐಟಿಸಿ ಗಾರ್ಡೇನಿಯಾ ಹೋಟೆಲ್​ನಲ್ಲಿ ಶಾಸಕಾಂಗ ಪಕ್ಷದ ಸಭೆ ನಿಗದಿಪಡಿಸಿದ್ದು, ಪಕ್ಷದ ಎಲ್ಲ ಶಾಸಕರು ಮತ್ತು ಪರಿಷತ್ ಸದಸ್ಯರು ತಪ್ಪದೇ ಭಾಗವಹಿಸಬೇಕೆಂದು ಸೂಚಿಸಿದ್ದಾರೆ.

ಡಿಸೆಂಬರ್ 4 ರಂದು ಚಳಿಗಾಲದ ಅಧಿವೇಶನ ಆರಂಭಗೊಳ್ಳಲಿದ್ದು, ಅದಕ್ಕೂ ಮೊದಲೇ ಉಭಯ ಸದನಗಳಲ್ಲಿ ಪ್ರತಿಪಕ್ಷ ನಾಯಕರ ಆಯ್ಕೆ ಮಾಡಬೇಕಿದೆ. ಅದಕ್ಕಾಗಿ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ನೂತನ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಚೊಚ್ಚಲ ಶಾಸಕಾಂಗ ಪಕ್ಷದ ಸಭೆಯಲ್ಲಿ ನೂತನ ಪ್ರತಿಪಕ್ಷ ನಾಯಕರ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ.

ಇನ್ನು ಶುಕ್ರವಾರ ಸಂಜೆ ದೆಹಲಿಯಿಂದ ಹೈಕಮಾಂಡ್ ಪ್ರತಿನಿಧಿಗಳಾಗಿ ಇಬ್ಬರು ನಾಯಕರು ವೀಕ್ಷಕರಾಗಿ ಆಗಮಿಸಲಿದ್ದಾರೆ. ಯಾವ ನಾಯಕರನ್ನು ಕಳುಹಿಸಲಿದ್ದಾರೆ ಎನ್ನುವ ಮಾಹಿತಿ ಇನ್ನು ರಾಜ್ಯ ಘಟಕಕ್ಕೆ ಬಂದಿಲ್ಲ. ಬಹುತೇಕ ರಾಜ್ಯ ರಾಜಕಾರಣದ ಬಗ್ಗೆ ಹೆಚ್ಚಿನ ಮಾಹಿತಿ ಇರುವ ನಾಯಕರನ್ನೇ ಕಳುಹಿಸಿಕೊಡುವ ಸಾಧ್ಯತೆ ಇದೆ ಎಂಬುದಾಗಿ ತಿಳಿದು ಬಂದಿದೆ.

ಹೈಕಮಾಂಡ್ ಸಂದೇಶ ಹೊತ್ತು ಬರುವ ವೀಕ್ಷಕರು ಶಾಸಕಾಂಗ ಪಕ್ಷದ ಸಭೆಯಲ್ಲಿ ಹೈಕಮಾಂಡ್ ಸೂಚನೆ ತಿಳಿಸಿ ಪ್ರತಿಪಕ್ಷ ನಾಯಕರ ಆಯ್ಕೆ ಪ್ರಕ್ರಿಯೆ ಮುಗಿಸಲಿದ್ದಾರೆ. ಸದನದಲ್ಲಿ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರನ್ನು ಸಮರ್ಥವಾಗಿ ಎದುರಿಸಬಲ್ಲ ವ್ಯಕ್ತಿಯನ್ನು ಆಯ್ಕೆ ಮಾಡಲಾಗುತ್ತದೆ. ಅದೇ ರೀತಿ ಪರಿಷತ್​ನಲ್ಲೂ ಆಡಳಿತ ಪಕ್ಷವನ್ನು ಎದುರಿಸಬಲ್ಲ ವ್ಯಕ್ತಿಗೆ ಅವಕಾಶ ನೀಡಲಾಗುತ್ತದೆ.

ಇನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ನೂತನ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಶಾಸಕರನ್ನು ಉದ್ದೇಶಿಸಿ ಮೊದಲ ಭಾಷಣ ಮಾಡಲಿದ್ದಾರೆ. ಶಾಸಕರ ಸಹಕಾರ ಕೋರಲಿದ್ದಾರೆ.‌ ಲೋಕಸಭಾ ಚುನಾವಣೆಗೆ ತಯಾರಿ ಆರಂಭಿಸುವ ಪೂರ್ವದಲ್ಲಿ ಶಾಸಕರನ್ನು ವಿಶ್ವಾಸಕ್ಕೆ ಪಡೆದು ಮುಂದಿನ ಹೆಜ್ಜೆ ಇರಿಸಲು ಶಾಸಕರ ಜೊತೆ ಮಾತುಕತೆ ನಡೆಸಿ, ಅವರ ಅಭಿಪ್ರಾಯ ಆಲಿಸಲಿದ್ದಾರೆ. ನಂತರ ರಾಜ್ಯ ಪ್ರವಾಸ, ಕಾರ್ಯಕಾರಿ ಸಮಿತಿಯಲ್ಲಿ ಮಾರ್ಪಾಡು ಮಾಡುವ ಕುರಿತು ಚರ್ಚಿಸಿ ತೀರ್ಮಾನಿಸಲಾಗುತ್ತದೆ ಎಂಬುದಾಗಿ ತಿಳಿದು ಬಂದಿದೆ.

ಶಾಸಕಾಂಗ ಪಕ್ಷದ ಸಭೆಯಲ್ಲಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ ಎಸ್ ಯಡಿಯೂರಪ್ಪ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್, ನಿಕಟಪೂರ್ವ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.

ಇದನ್ನೂ ಓದಿ: ವಿಜಯೇಂದ್ರ ಪದಗ್ರಹಣ: ಬಿಜೆಪಿ ಕಚೇರಿಯಲ್ಲಿ ಹೋಮ, ಹವನ; ಜಾನಪದ ಕಲಾತಂಡಗಳ ಪ್ರದರ್ಶನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.