ETV Bharat / state

ಪಕ್ಷ ತೊರೆದವರಿಗೆ ಬಿಜೆಪಿ ಬಾಗಿಲು ಶಾಶ್ವತವಾಗಿ ಮುಚ್ಚಲಿದೆ, ನಾಲ್ಕು ಜನ ಹೋದರೆ ಪಕ್ಷಕ್ಕೇನು ನಷ್ಟವಿಲ್ಲ: ಅರುಣ್ ಸಿಂಗ್

author img

By

Published : Apr 14, 2023, 2:02 PM IST

ಅರುಣ್ ಸಿಂಗ್ ಎಚ್ಚರಿಕೆ
ಅರುಣ್ ಸಿಂಗ್ ಎಚ್ಚರಿಕೆ

ಬಿಜೆಪಿ ತೊರೆದು ಬೇರೊಂದು ಪಕ್ಷಕ್ಕೆ ಸೇರ್ಪಡೆಗೊಂಡವರಿಗೆ ಪಕ್ಷದ ಬಾಗಿಲು ಶಾಶ್ವತವಾಗಿ ಮುಚ್ಚಲಿದೆ ಎಂದು ಅರುಣ್ ಸಿಂಗ್ ಖಡಕ್​ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು: ಯಾರೋ ನಾಲ್ಕು ಜನ ಪಕ್ಷ ಬಿಟ್ಟು ಹೋದರೆ ಪಕ್ಷಕ್ಕೆ ಏನೂ ನಷ್ಟವಿಲ್ಲ. ಆದರೆ, ನಮ್ಮ ಪಕ್ಷದಿಂದ ಹೊರ ಹೋದವರಿಗೆ ಪಕ್ಷದ ಬಾಗಿಲು ಶಾಶ್ವತವಾಗಿ ಮುಚ್ಚಲಿದೆ ಎನ್ನುವ ಮೂಲಕ ಕಾಂಗ್ರೆಸ್ ಕದ ತಟ್ಟಿರುವ ಮಾಜಿ ಡಿಸಿಎಂ ಲಕ್ಷ್ಮಣ ಸವದಿಗೆ ಬಿಜೆಪಿ ಬಾಗಿಲು ಮುಚ್ಚಲಾಗಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.

ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿ ಜಗನ್ನಾಥ ಭನವದಲ್ಲಿ ಮಾತನಾಡಿದ ಅವರು, ಕಳೆದ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅಥಣಿ ಕ್ಷೇತ್ರದಲ್ಲಿ ಸೋತಿದ್ದರೂ ಪಕ್ಷ ಅವರನ್ನು ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡಿ ಉಪ ಮುಖ್ಯಮಂತ್ರಿಯನ್ನಾಗಿ ಮಾಡಿತ್ತು. ಆದರೂ ಟಿಕೆಟ್ ಸಿಕ್ಕಿಲ್ಲ ಎನ್ನುವ ಒಂದೇ ಕಾರಣಕ್ಕೆ ಲಕ್ಷ್ಮಣ ಸವದಿ ಪಕ್ಷ ತೊರೆಯುತ್ತಿದ್ದಾರೆ. ಇದರಿಂದ ನಮ್ಮ ಕಾರ್ಯಕರ್ತರಿಗೆ ನೋವಾಗುತ್ತದೆ. ಈಗ ಅವರು ಜಗಳಗಂಟ ಪಕ್ಷಕ್ಕೆ ಹೋಗುತ್ತಿದ್ದಾರೆ. ಆದರೆ, ಕಾಂಗ್ರೆಸ್​ನಲ್ಲಿ ಅವರಿಗೆ ಭವಿಷ್ಯ ಇಲ್ಲ ಎಂದು ನುಡಿದರು.

ಪಕ್ಷ ತೊರದವರಿಗೆ ಬಾಗಿಲು ಶಾಶ್ವತವಾಗಿ ಮುಚ್ಚಲಿದೆ: ಇಷ್ಟು ವರ್ಷ ಅವರು ಬಿಜೆಪಿಯಲ್ಲಿ ಇದ್ದವರು ಕಾಂಗ್ರೆಸ್​ಗೆ ಸೇರುವ ನಿರ್ಧಾರ ಮಾಡಬಾರದಿತ್ತು. ಬಿಜೆಪಿ ಬಿಟ್ಟು ಲಕ್ಷ್ಮಣ ಸವದಿ ಬಹಳ ದೊಡ್ಡ ತಪ್ಪು‌ ಮಾಡಿದ್ದಾರೆ. ಅವರು ಕಾಂಗ್ರೆಸ್​ಗೆ ಹೋದ ಮೇಲೆ ಪಶ್ಚಾತ್ತಾಪ ಪಡುತ್ತಾರೆ ಎಂದು ಅರುಣ್ ಸಿಂಗ್ ಸವದಿ ನಡೆ ಟೀಕಿಸಿದರು. ಯಾರೋ ನಾಲ್ಕು ಜನ ಪಕ್ಷ ಬಿಟ್ಟು ಹೋದರೆ ಪಕ್ಷಕ್ಕೆ ಏನೂ ನಷ್ಟ ಆಗಲ್ಲ. ಆದರೆ, ಹೋಗುವವರು ದುಡುಕಿನ ನಿರ್ಧಾರ ತಗೊಂಡು ಹೋಗಿದ್ದಾರೆ. ಅಂಥವರಿಗೆ ನಮ್ಮ ಪಕ್ಷದ ಬಾಗಿಲು ಶಾಶ್ವತವಾಗಿ ಮುಚ್ಚಲಿದೆ. ಪಕ್ಷ ಬಿಟ್ಟು ಹೋದವರನ್ನು ಮತ್ತೆ ಸೇರಿಸಿಕೊಳ್ಳಲು 15-20 ವರ್ಷವಾಗಬಹುದು ಎಂದು ಸವದಿ ಸೇರಿದಂತೆ ಪಕ್ಷ ತೊರೆಯುತ್ತಿರುವ ಬಿಜೆಪಿ ನಾಯಕರಿಗೆ ಅರುಣ್ ಸಿಂಗ್ ಎಚ್ಚರಿಕೆ ನೀಡಿದರು.

ಲಕ್ಷ್ಮ ಸವದಿ ಕಾಂಗ್ರೆಸ್​ಗೆ ಹೋಗಿದ್ದಾರೆ. ಆದರೆ, ಇನ್ನು ಹತ್ತು ವರ್ಷ ಆದರೂ ಅವರು ರಾಹುಲ್ ಗಾಂಧಿಯವರ ಮುಖ ನೋಡುತ್ತಾರೋ ಇಲ್ಲವೋ ಗೊತ್ತಿಲ್ಲ, ರಾಹುಲ್ ಗಾಂಧಿ ಭೇಟಿ ಆಗ್ತಾರೋ ಇಲ್ಲವೋ..? ಸವದಿ ಅವರ ನಿರ್ಧಾರ ಸ್ವಾರ್ಥದಿಂದ ಕೂಡಿದೆ ಎಂದು ಕಟುವಾಗಿ ಟೀಕಿಸಿದರು. ಈ ಬಾರಿ ರಾಜ್ಯ ವಿಧಾನಸಭಾ ಚುನಾವಣೆಗೆ ಹೊಸ ಜನರೇಷನ್​ಗೆ ಅವಕಾಶ ನೀಡಿದ್ದೇವೆ. ಬಿಜೆಪಿಯನ್ನು ಹೊಸ ತಲೆಮಾರಿನ ಪಾರ್ಟಿಯನ್ನಾಗಿ ಮಾಡ್ತಾ ಇದ್ದೇವೆ. ಹೀಗಾಗಿ ಹೊಸ ಮುಖಗಳಿಗೆ ಅವಕಾಶ ನೀಡಿದ್ದೇವೆ ಎಂದು ಹೊಸ ಪ್ರಯೋಗ ನಡೆಸಿ ಕೆಲವರಿಗೆ ಕೋಕ್ ನೀಡಿದ ಹೈಕಮಾಂಡ್ ನಿರ್ಧಾರವನ್ನು ಅರುಣ್ ಸಿಂಗ್ ಸಮರ್ಥಿಸಿಕೊಂಡರು.

ಸವದಿ ಪಕ್ಷತೊರೆಯತ್ತಿರುವುದು ದುಃಖ ತರಿಸಿದೆ ಸಿಎಂ ಬೊಮ್ಮಾಯಿ: ​ಲಕ್ಷ್ಮಣ ಸವದಿ ಕಾಂಗ್ರೆಸ್​ ಸೇರ್ಪಡೆ ಕುರಿತು ಸಿಎಂ ಬೊಮ್ಮಾಯಿ ಕೂಡ ಪ್ರತಿಕ್ರಿಯಿಸಿದ್ದು, ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಪಕ್ಷ ತೊರೆಯುತ್ತಿರುವುದು ದುಃಖ ತರಿಸಿದೆ, ಅವರಿಗೆ ಕಾಂಗ್ರೆಸ್​ನಲ್ಲಿ ಭವಿಷ್ಯ ಕಂಡು ಅಲ್ಲಿಗೆ ಹೋಗುತ್ತಿದ್ದಾರೆ. ಆದರೆ, ಕಾರ್ಯಕರ್ತರು ನಮ್ಮ ಪಕ್ಷಕ್ಕೆ ಬದ್ದರಾಗಿದ್ದಾರೆ ಎಂದು ಬೊಮ್ಮಾಯಿ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸವದಿ ಕಾಂಗ್ರೆಸ್​ಗೆ ಹೋಗ್ತಿರೋದು ದುಃಖ ತರಿಸಿದೆ ಅವರು ನಿನ್ನೆಯೇ ಇದನ್ನು ಘೋಷಣೆ ಮಾಡಿದ್ದರು. ಆದರೆ, ಕಾಂಗ್ರೆಸ್​ಗರ 60 ಸೀಟಿಗೆ ನಿಲ್ಲೋ ಗತಿ ಇಲ್ಲ, ಅದಕ್ಕಾಗಿ ಕೆಲವರನ್ನು ತಗೊಂಡಿದ್ದಾರೆ ಸಹಜವಾಗಿ ಆಡಳಿತ ಪಕ್ಷದಲ್ಲಿ ಆಕಾಂಕ್ಷಿಗಳು ಜಾಸ್ತಿ ಇರುತ್ತಾರೆ. ಕಾರ್ಯಕರ್ತರು ನಮ್ಮ ಪರವಾಗಿದ್ದಾರೆ ಬಿಜೆಪಿ ಗೆಲ್ಲಲಿದೆ, ಕೆಲವರು ಶಾಸಕರಾಗಬೇಕು ಅಂತ ಪಕ್ಷ ಬಿಡುತ್ತಾರೆ ಎಂದು ಪರೋಕ್ಷವಾಗಿ ಲಕ್ಷ್ಮಣ ಸವದಿಗೆ ಟಾಂಗ್ ನೀಡಿದರು.

ಬಿಜೆಪಿ ಅಭ್ಯರ್ಥಿಗಳ ಎರಡು ಪಟ್ಟಿಯನ್ನು ಬಿಡುಗಡೆ ಗೊಳಿಸಿದ್ದು, ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಕಾರ್ಯ ಆರಂಭಿಸಿದ್ದಾರೆ. ನಾಳೆ ನಾನು ಶಿಗ್ಗಾಂವಿ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದೇನೆ. ಬಾಕಿ ಇರುವ 12 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳುಳ್ಳ ಮೂರನೇ ಪಟ್ಟಿ ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇವೆ ಎಂದು ಬೊಮ್ಮಾಯಿ ಹೇಳಿದರು.

ಇದನ್ನೂ ಓದಿ: ಲಕ್ಷ್ಮಣ​ ಸವದಿ ಕಾಂಗ್ರೆಸ್ ಸೇರ್ಪಡೆಯಿಂದ ಪಕ್ಷಕ್ಕೆ ಶಕ್ತಿ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.