ETV Bharat / state

ಅಕ್ರಮ ಭೂ ಮಂಜೂರಾತಿ ಆರೋಪ: ಶಾಸಕ ಕೆ.ಎಸ್. ಲಿಂಗೇಶ್ ವಿರುದ್ಧ ಎಫ್‌ಐಆರ್ ದಾಖಲಿಸಲು ನ್ಯಾಯಾಲಯ ಆದೇಶ

author img

By

Published : Mar 30, 2023, 11:01 PM IST

allegation-of-illegal-land-allotment-mla-ks-court-orders-registration-of-fir-against-lingesh
ಅಕ್ರಮ ಭೂ ಮಂಜೂರಾತಿ ಆರೋಪ: ಶಾಸಕ ಕೆ.ಎಸ್. ಲಿಂಗೇಶ್ ವಿರುದ್ಧ ಎಫ್‌ಐಆರ್ ದಾಖಲಿಸಲು ನ್ಯಾಯಾಲಯ ಆದೇಶ

ಜೆಡಿಎಸ್ ಶಾಸಕ ಕೆ.ಎಸ್.ಲಿಂಗೇಶ್ ವಿರುದ್ಧ ಅಕ್ರಮ ಭೂ ಮಂಜೂರಾತಿ ಆರೋಪ ಸಂಬಂಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲು ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಜೆ.ಪ್ರೀತ್ ಅವರು ಆದೇಶ ನೀಡಿದ್ದಾರೆ.

ಬೆಂಗಳೂರು: ಅಕ್ರಮ ಭೂ ಮಂಜೂರಾತಿ ಆರೋಪ ಸಂಬಂಧ ಹಾಸನ ಜಿಲ್ಲೆ ಬೇಲೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಕೆ.ಎಸ್.ಲಿಂಗೇಶ್ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲು ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ. ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಜೆ.ಪ್ರೀತ್ ಅವರು ಈ ಆದೇಶ ನೀಡಿದ್ದು, ಅಪರಾಧ ಪ್ರಕ್ರಿಯಾ ಸಂಹಿತೆ ಕಲಂ 156(3)ರ ಅನುಸಾರ ತನಿಖೆ ನಡೆಸಿ 2023ರ ಜುಲೈ 7ಕ್ಕೆ ವರದಿ ಸಲ್ಲಿಸುವಂತೆ ಬೇಲೂರು ಪೊಲೀಸ್ ಠಾಣಾಧಿಕಾರಿಗೆ ನಿರ್ದೇಶಿಸಿದ್ದಾರೆ.

ಪ್ರಕರಣದ ಹಿನ್ನೆಲೆ ಏನು ?: ಬೇಲೂರು ತಾಲ್ಲೂಕಿನ ಅಂದಾಜು ಮಾರುಕಟ್ಟೆ ದರ 775 ಕೋಟಿಗೂ ಹೆಚ್ಚಿನ ಮೌಲ್ಯದ 2,750 ಎಕರೆ 86 ಗುಂಟೆಯಷ್ಟು ಸರ್ಕಾರಿ ಜಮೀನನ್ನು ಬಲಾಢ್ಯ, ಅನರ್ಹ, ಅಪ್ರಾಪ್ತ ಮತ್ತು ಬೆಂಗಳೂರಿನ ವ್ಯಕ್ತಿಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಮಂಜೂರು ಮಾಡಲಾಗಿದೆ. ಶಾಸಕ ಕೆ.ಎಸ್.ಲಿಂಗೇಶ್ ಸೇರಿದಂತೆ ಒಟ್ಟು 15 ಜನರು ಈ ಕೃತ್ಯದಲ್ಲಿ ಭಾಗಿಯಾಗಿದ್ದು ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆರೋಪಿಸಿ ಕೋಲಾರ ಗಾಂಧಿನಗರದ ನಿವಾಸಿ ಕೆ.ಸಿ.ರಾಜಣ್ಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.

ಮಾಹಿತಿ ಹಕ್ಕು ಕಾಯ್ದೆಯಡಿ ಪಡೆಯಲಾದ ವಿವರಗಳಂತೆ, ಬೇಲೂರು ತಾಲ್ಲೂಕು ವಿವಿಧ ಗ್ರಾಮಗಳ ವಿವಿಧ ಸರ್ವೆ ನಂಬರ್‌ಗಳಲ್ಲಿ 18 ಜನರಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಜಮೀನನ್ನು ಕಾನೂನು ಬಾಹಿರವಾಗಿ ಮಂಜೂರು ಮಾಡಲಾಗಿದೆ. 2016ರ ಅಕ್ಟೋಬರ್ 28 ರಿಂದ 2022ರ ಡಿಸೆಂಬರ್ 11ರ ಮಧ್ಯದ ಅವಧಿಯಲ್ಲಿ ನಡೆದ ಭೂ ಸಕ್ರಮೀಕರಣದ 26 ಸಭೆಗಳಲ್ಲಿ ಒಟ್ಟು 1,430 ಅರ್ಜಿದಾರರ ಪೈಕಿ 2,750 ಎಕರೆ 86 ಗುಂಟೆ ಜಮೀನಿನ ಅಕ್ರಮ ಮಂಜೂರಾತಿ ಪ್ರಕ್ರಿಯೆ ಜರುಗಿದೆ ಎಂದು ದೂರುದಾರರು ಆರೋಪಿಸಿದ್ದರು.

ಹೇಮಾವತಿ, ಯಗಚಿ, ಜಲಾಶಯ ಯೋಜನೆಯಡಿ ಮುಳುಗಡೆ ಸಂತ್ರಸ್ತ ರೈತರು, ಯೋಧರಿಗೆ ಕಾಯ್ದಿರಿಸಿದ್ದ ಈ ಸರ್ಕಾರಿ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಲಾಗಿದೆ. ಇದನ್ನು ಬೆಂಗಳೂರು ಹಾಗೂ ಬೇರೆ ಬೇರೆ ತಾಲ್ಲೂಕಿನ, ಹೊರಗಿನ ನಿವಾಸಿಗಳಿಗೆ ಅಕ್ರಮವಾಗಿ ಮಂಜೂರು ಮಾಡಲಾಗಿದೆ. ಮಂಜೂರಾದ ಅರ್ಜಿದಾರರ ಪೈಕಿ 1,260 ಮಂದಿಗೆ ಸಾಗುವಳಿ ಚೀಟಿ ವಿತರಿಸಲಾಗಿದ್ದು, 1,260 ಅರ್ಜಿದಾರರಿಗೆ ಖಾತೆ ಮಾಡಲಾಗಿದೆ.

ಇವುಗಳ ಪೈಕಿ ಬಹುತೇಕ ಭೂ ಮಂಜೂರಾತಿ ಪ್ರಕ್ರಿಯೆಯಲ್ಲಿ ಅಧಿಕಾರಿಗಳು, ಭೂ ಮಂಜೂರಾತಿ ಸಮಿತಿ ಅಧ್ಯಕ್ಷ, ಸದಸ್ಯರು, ಸದಸ್ಯ ಕಾರ್ಯದರ್ಶಿಗಳು ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ನಕಲಿ ದಾಖಲೆಗಳನ್ನು ಸೃಷ್ಠಿಸಿದ್ದಾರೆ. ಇದರಿಂದ ಸರ್ಕಾರದ ಖಜಾನೆಗೆ ಕೋಟ್ಯಂತರ ರೂಪಾಯಿಗಳ ನಷ್ಟವುಂಟಾಗಿದ್ದು, ಐಪಿಸಿ, ಕಲಂ 468, 465, 464, 420, 471, 120ಬಿ ಹಾಗೂ 409ರ ಅನ್ವಯ ಕಾನೂನು ಕ್ರಮ ಜರುಗಿಸಬೇಕು’ ಎಂದು ದೂರುದಾರರು ಕೋರಿದ್ದರು.

ಇದನ್ನೂ ಓದಿ : ಬಿಜೆಪಿ ತೊರೆಯಲ್ಲ, ಕಾಂಗ್ರೆಸ್ ಸೇರಲ್ಲ: ಕೈ ಆಹ್ವಾನ ತಳ್ಳಿಹಾಕಿದ ಸಚಿವ ಬೈರತಿ ಬಸವರಾಜ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.