ETV Bharat / state

ಆಸ್ತಿಗಾಗಿ ವೃದ್ಧ ತಂದೆಯನ್ನೇ ಮನೆಯಿಂದ ಹೊರಹಾಕಿದ ಮಕ್ಕಳು: ಸ್ವಯಾರ್ಜಿತ ಆಸ್ತಿಗಾಗಿ ಪಂಚಾಯಿತಿ ಎದುರು ಪ್ರತಿಭಟನೆಗೆ ಕುಳಿತ ವೃದ್ಧ

author img

By

Published : Jun 2, 2023, 8:25 PM IST

elderly-father-protested-for-his-property-in-devanahalli
ಆಸ್ತಿಗಾಗಿ ವೃದ್ಧ ತಂದೆಯನ್ನೇ ಹೊರಹಾಕಿದ ಮಕ್ಕಳು: ಸ್ವಯಾರ್ಜಿತ ಆಸ್ತಿಗಾಗಿ ಪಂಚಾಯಿತಿ ಮುಂದೆ ಪ್ರತಿಭಟನೆಗೆ ಕುಳಿತ ವೃದ್ಧ ತಂದೆ

ಮಕ್ಕಳು ವಶಪಡಿಸಿಕೊಂಡಿದ್ದ ಸ್ವಯಾರ್ಜಿತ ಆಸ್ತಿಯನ್ನು ಮರಳಿ ಪಡೆಯಲು ವೃದ್ಧ ತಂದೆಯೊಬ್ಬರು ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.

ದೇವನಹಳ್ಳಿ: ತಾಲೂಕಿನ ಬೂದಿಗೆರೆ ಗ್ರಾಮದಲ್ಲಿ ಆಸ್ತಿಗಾಗಿ ಜನ್ಮ ನೀಡಿದ ತಂದೆಯನ್ನೇ ಮಕ್ಕಳು ಬೀದಿ ಪಾಲು ಮಾಡಿರುವ ಘಟನೆ ನಡೆದಿದೆ. ಇಳಿ ವಯಸ್ಸಿನಲ್ಲಿ ಪೋಷಕರಿಗೆ ಒಂದೊತ್ತು ಅನ್ನ ನೀಡಲು ಹಿಂದೇಟು ಹಾಕಿದ್ದ ಕಾರಣಕ್ಕೆ ಸಂತ್ರಸ್ತ ಪಾಪಣ್ಣ ಅವರು ತಾನು ಸಂಪಾದನೆ ಮಾಡಿದ ಆಸ್ತಿಯನ್ನು ಕೋರ್ಟ್ ಮೆಟ್ಟಿಲೇರಿ ಮರಳಿ ಪಡೆದಿದ್ದರು. ಕೋರ್ಟ್​ನ ಆದೇಶಕ್ಕೂ ಬೆಲೆ ಕೊಡದ ಮಕ್ಕಳು ಆಸ್ತಿಯನ್ನ ತಂದೆಗೆ ಬಿಟ್ಟು ಕೊಡದೇ ಸತಾಯಿಸುತ್ತಿದ್ದರು. ಹೀಗಾಗಿ ಬೂದಿಗೆರೆ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಸಂತ್ರಸ್ತ ಪಾಪಣ್ಣ ಒಂಬಟ್ಟಿಯಾಗಿ ಇಂದು ಪ್ರತಿಭಟನೆ ನಡೆಸಿದರು.

70 ವರ್ಷದ ಪಾಪಣ್ಣ ರವರಿಗೆ ಇಬ್ಬರು ಹೆಂಡತಿಯರು, ಮೊದಲ ಹೆಂಡತಿ ನಾಗರತ್ನಮ್ಮ ಮತ್ತು ಎರಡನೇ ಹೆಂಡತಿ ಭಾಗ್ಯಲಕ್ಷ್ಮೀ. ಸ್ವತಃ ಅಕ್ಕ ತಂಗಿಯರನ್ನೆ ಮದುವೆಯಾಗಿದ್ದ ಪಾಪಣ್ಣ ಅವರಿಗೆ ಇಬ್ಬರು ಗಂಡು ಮತ್ತು ಆರು ಹೆಣ್ಣು ಸೇರಿ ಎಂಟು ಜನ ಮಕ್ಕಳು. ಬೂದಿಗೆರೆಯಲ್ಲಿ ಪಾಪಣ್ಣನಿಗೆ ಸ್ವಂತ ದುಡಿಮೆಯಿಂದ ಎರಡು ಮನೆ, ಮೂರ್ನಾಲ್ಕು ಅಂಗಡಿ, ಒಂದು ಎಕರೆ ಕೃಷಿ ಭೂಮಿ ಸೇರಿದಂತೆ ಒಂದು ಸೈಟ್ ಇತ್ತು.

ಕುಟುಂಬದಲ್ಲಿ ಗಂಡು ಮಕ್ಕಳಿಗೆ ಮದುವೆಯಾದ ನಂತರ ಆಸ್ತಿ ಭಾಗದ ತಗಾದೆ ಶುರು ಆಗಿ. ಮೊದಲ ಹೆಂಡತಿ ಮಗ ಮತ್ತು ಎರಡನೇ ಹೆಂಡತಿ ಮಗ‌ ಇಬ್ಬರು ಸೇರಿ ಸಂತ್ರಸ್ತ ಪಾಪಣ್ಣ ಮನೆಯಿಂದ ಹೊರಹಾಕಿದ್ದಾರೆ. ಬೀದಿಗೆ ಬಿದ್ದ ಪಾಪ್ಪಣ್ಣ ನ್ಯಾಯಕ್ಕಾಗಿ ದೊಡ್ಡಬಳ್ಳಾಪುರ ಎ.ಸಿ. ಕೋರ್ಟ್ ಮೆಟ್ಟಿಲೇರಿದ್ದರು, ದಾಖಲೆ ಪರಿಶೀಲಿಸಿದ್ದ ಉಪವಿಭಾಗಾಧಿಕಾರಿ ತೇಜಸ್ ಕುಮಾಪ್ ಹಿರಿಯ ನಾಗರೀಕರ ‌ಕಾಯಿದೆ ಅನ್ವಯ ಎಲ್ಲ ಆಸ್ತಿ ಪಾಪಣ್ಣನಿಗೆ ಸೇರಬೇಕು. ಮತ್ತು ದೇವನಹಳ್ಳಿ ತಹಶೀಲ್ದಾರರು ಮತ್ತು ಬೂದಿಗೆರೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಆಸ್ತಿಯನ್ನು ಪಾಪಣ್ಣನ ಸುಪರ್ದಿಗೆ ನೀಡಬೇಕೆಂದು ಸೂಚಿಸಿದ್ದರು.

ನಂತರ ಅಧಿಕಾರಿಗಳು ಪಾಪಣ್ಣನ ಗಂಡುಮಕ್ಕಳಾದ ಬಾಬು ಮತ್ತು‌ ಮೂರ್ತಿರವರಿಂದ ಮನೆ ಮತ್ತು ಅಂಗಡಿಗಳನ್ನು‌ ವಶಕ್ಕೆ ಪಡೆದು ಬೀಗ ಹಾಕಿದ್ದರು. ಇದರ ನಡುವೇ ಮಹಿಳೆ ಸಂಘಟನೆಯ ಲಕ್ಷ್ಮೀ ಎಂಬುವವರು ಎ.ಸಿ‌.ಆದೇಶ ಉಲ್ಲಂಘನೆ ಮಾಡಿ ಮನೆ ಮತ್ತು ಅಂಗಡಿ ಬೀಗ ಒಡೆದು‌. ಇಬ್ಬರು ಗಂಡು ಮಕ್ಕಳಿಗೆ ನೋಡಿಕೊಳ್ಳುವಂತೆ ತಿಳಿಸಿದ್ದಳು. ಈ ಬಗ್ಗೆ ಲಕ್ಷ್ಮೀ ವಿರುದ್ಧ ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿತ್ತು.

ಉಪ ವಿಭಾಗಾಧಿಕಾರಿಗಳ ಆದೇಶವಾಗಿ ಒಂದು ವರ್ಷವಾದರೂ ನ್ಯಾಯ ಸಿಗದಿದ್ದಕ್ಕೆ ಸಂತ್ರಸ್ತ ಪಾಪಣ್ಣ ಇಂದು ಬೂದಿಗೆರೆ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಪಾಪಣ್ಣನ ಪ್ರತಿಭಟನೆಯಿಂದ ಎತ್ತೆಚ್ಚುಕೊಂಡ ದೇವನಹಳ್ಳಿ ಕಂದಾಯ ಅಧಿಕಾರಿಗಳು ಮನೆ ಮತ್ತು ಅಂಗಡಿಗೆ ಬೀಗ ಹಾಕಿ ಅವುಗಳ ಕೀ ಯನ್ನು ಪಾಪಣ್ಣನಿಗೆ ಹಸ್ತಾಂತರಿಸಿದ್ದಾರೆ. ಜೊತೆಗೆ ಇನ್ನೆರಡು ದಿನಗಳ ಒಳಗಾಗಿ ಮನೆ ಮತ್ತು ಅಂಗಡಿಯಲ್ಲಿರುವ ವಸ್ತುಗಳನ್ನು ತೆರವುಗೊಳಿಸಿ ಕೊಡುವುದಾಗಿ ಭರವಸೆ ನೀಡಿದ್ದಾರೆ.

ಈ ಬಗ್ಗೆ ಬೂದಿಗೆರೆ ಗ್ರಾಪಂ ಪಿಡಿಒ ನರ್ಮದಾ ಮಾತನಾಡಿ, ಪಾಪಣ್ಣರವರ ಮಕ್ಕಳಿಗೆ ಈಗಾಗಲೇ ದೂರವಾಣಿಯ ಮೂಲಕ ತಿಳಿಸಿದ್ದೇವೆ. ನೋಟಿಸ್‌ ನೀಡಿದ್ದರೂ ಅದಕ್ಕೆ ಸೂಕ್ತವಾಗಿ ಸ್ಪಂದಿಸಿಲ್ಲ, ಇಷ್ಟಾದರೂ ಮನೆ, ಅಂಗಡಿಯ ಒಳಗೆ ಇರುವ ವಸ್ತುಗಳನ್ನು ತೆಗೆದುಕೊಂಡು ಹೋಗಿಲ್ಲ. ನ್ಯಾಯಾಲಯದ ಆದೇಶದ ಅನ್ವಯ ಕರ್ತವ್ಯ ನಿರ್ವಹಣೆ ಮಾಡಿದ್ದೇವೆ. ಅವರಿಗೆ ಇನ್ನೆರಡು ದಿನ ಸಮಯವನ್ನು ನೀಡುತ್ತೇವೆ ಎಲ್ಲ ವಸ್ತುಗಳನ್ನು ತೆಗೆದುಕೊಂಡು ಹೋಗಿ, ಪೂರ್ಣ ಪ್ರಮಾಣದಲ್ಲಿ ಪಾಪಣ್ಣರಿಗೆ ಸ್ವತ್ತುಗಳನ್ನು ಒದಗಿಸುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ:2000 ರೂ ನೋಟು ಬದಲಾವಣೆ ಹೆಸರಲ್ಲಿ ಪಂಗನಾಮ ಹಾಕಿದ್ದ ಮೂವರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.