ETV Bharat / state

ಬಿಜೆಪಿ ಸರ್ಕಾರ ದಲಿತರ ಏಳ್ಗೆಗೆ ಒಳಮೀಸಲಾತಿ ಜಾರಿಗೆ ತಂದಿದೆ: ಸಚಿವ ಅಶ್ವತ್ಥನಾರಾಯಣ

author img

By

Published : Apr 14, 2023, 4:15 PM IST

Ambedkar Jayanti
ಅಂಬೇಡ್ಕರ್ ಜಯಂತಿ

ಅಂಬೇಡ್ಕರ್‌ ಜಯಂತಿಯಂದು ಒಳಮೀಸಲಾತಿ ವಿಚಾರವಾಗಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿದರು.

ಅಂಬೇಡ್ಕರ್‌ ಜಯಂತಿ

ಬೆಂಗಳೂರು: ''ರಾಜ್ಯ ಬಿಜೆಪಿ ಸರಕಾರವು ದಲಿತರ ಏಳ್ಗೆಯ ಗುರಿಯೊಂದಿಗೆ ಮೀಸಲಾತಿಯನ್ನು ಹೆಚ್ಚಿಸಿದ್ದು, ಒಳಮೀಸಲಾತಿಯನ್ನೂ ಜಾರಿಗೆ ತಂದಿದೆ. ಇಂತಹ ಇಚ್ಛಾಶಕ್ತಿಯನ್ನು ಕಾಂಗ್ರೆಸ್ಸಾಗಲೀ, ಜೆಡಿಎಸ್‌ ಆಗಲೀ ಪ್ರದರ್ಶಿಸಿಲ್ಲ. ಒಳಮೀಸಲಾತಿಯನ್ನು ಕೊಡಲು ಆ ಪಕ್ಷಗಳಿಗೆ ಭಯವಿತ್ತು. ಈ ಮೂಲಕ ಬಿಜೆಪಿ ಸರಕಾರವು ಹೊಸ ಚರಿತ್ರೆ ಸೃಷ್ಟಿಸಿದ್ದು, ಇದು ಇಡೀ ದೇಶಕ್ಕೆ ಮಾದರಿ'' ಎಂದು ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಬಣ್ಣಿಸಿದ್ದಾರೆ.

ಅಂಬೇಡ್ಕರ್ ಜಯಂತಿ ದಿನವಾದ ಇಂದು ಯಶವಂತಪುರದ ಸಂವಿಧಾನ ವೃತ್ತದಲ್ಲಿರುವ ಪ್ರತಿಮೆಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್ ಮತ್ತು ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾಲಾರ್ಪಣೆ ಮಾಡಿದರು. ನಂತರ ಸಮೀಪದ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅಶ್ವತ್ಥನಾರಾಯಣ, ''ಮೀಸಲಾತಿ ಪರಿಷ್ಕರಣೆ ಮತ್ತು ಒಳಮೀಸಲಾತಿ ಎರಡನ್ನೂ ಜನಸಂಖ್ಯೆಯ ಪ್ರಮಾಣವನ್ನು ಆಧರಿಸಿ ಜಾರಿಗೊಳಿಸಲಾಗಿದೆ. ಇದಕ್ಕೆ ಯಾವುದೇ ತೊಡಕು ಎದುರಾಗದಂತೆ 9ನೇ ಷೆಡ್ಯೂಲ್‌ಗೆ ಸೇರಿಸಲಾಗುತ್ತಿದೆ. ಇದರಿಂದ ದಲಿತ ಸಮುದಾಯಗಳಿಗೆ ಶಿಕ್ಷಣ ಮತ್ತು ಉದ್ಯೋಗಗಳ ಪ್ರಯೋಜನ ಸಿಗಲಿದೆ. ಇದನ್ನು ಕಂಡು ಪ್ರತಿಪಕ್ಷಗಳಿಗೆ ನಡುಕ ಉಂಟಾಗಿದ್ದು, ಅವು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿವೆ. ನಮ್ಮ ಸರಕಾರವು ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಒಟ್ಟು ಶೇ.24ರಷ್ಟು ಮೀಸಲಾತಿ ಕೊಟ್ಟಿದೆ'' ಎಂದರು.

10 ಪುಣ್ಯಸ್ಥಳಗಳ ಅಭಿವೃದ್ಧಿ: ದೇಶದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೂ ಸೂಕ್ತ ಮೀಸಲಾತಿ ಕೊಡಲಾಗಿದೆ. ಇದನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿ ಹಿಡಿದಿದೆ. ದೇಶದಲ್ಲಿ ಇಂದು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಜನಪರವಾಗಿ ಕೆಲಸ ಮಾಡುತ್ತಿದ್ದರೆ ಅದರ ಹಿಂದೆ ಸಂವಿಧಾನದ ಜನಕರಾದ ಬಾಬಾಸಾಹೇಬ್‌ ಅಂಬೇಡ್ಕರ್ ಅವರೇ ಮೂಲಕಾರಣರಾಗಿದ್ದಾರೆ. ಅವರ ದೂರದರ್ಶಿತ್ವದಿಂದಾಗಿ 140 ಕೋಟಿ ದೇಶವಾಸಿಗಳು ನೆಮ್ಮದಿಯ ಬದುಕು ನಡೆಸುತ್ತಿದ್ದಾರೆ. ಜೊತೆಗೆ ರಾಜ್ಯದಲ್ಲಿ ಅವರು ಭೇಟಿ ನೀಡಿದ್ದ 10 ಸ್ಥಳಗಳನ್ನು ಪುಣ್ಯಕ್ಷೇತ್ರಗಳಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ'' ಎಂದು ಅವರು ಅಭಿಪ್ರಾಯಪಟ್ಟರು.

'ಶ್ರಮಿಕರ ಭವನ' ನಿರ್ಮಾಣ ಕಾರ್ಯ ಜೋರು: ''ಬಿಜೆಪಿ ಸರಕಾರವು ಪೌರಕಾರ್ಮಿಕರ ಉದ್ಯೋಗವನ್ನು ಖಾಯಂ ಮಾಡಿದೆ. ಅವರಿಗೆ ಘನತೆ ತಂದುಕೊಡುವ ಆಶಯದಿಂದ ವಿಧಾನಸೌಧದ ಸಮೀಪದಲ್ಲೇ 'ಶ್ರಮಿಕರ ಭವನ'ವನ್ನು ನಿರ್ಮಿಸಲಾಗುತ್ತಿದೆ. ಅಲ್ಲದೆ, ದಲಿತರ ಪರವಾಗಿ ಪಿಟಿಸಿಎಲ್ ಮತ್ತು ದೌರ್ಜನ್ಯ ತಡೆ ಕಾಯ್ದೆಗಳನ್ನು ಶಕ್ತಿಯುತಗೊಳಿಸಲಾಗಿದೆ. ಯಶವಂತಪುರ ಮತ್ತು ಮತ್ತೀಕೆರೆಗಳಲ್ಲಿ ದಲಿತ ಸಮುದಾಯದ ಬಂಧುಗಳಿಗೆ ಸಮರ್ಪಕ ಸೌಲಭ್ಯಗಳನ್ನು ಒದಗಿಸಲಾಗಿದೆ'' ಎಂದು ಅವರು ಮಾಹಿತಿ ನೀಡಿದರು.

ಪಂಚತೀರ್ಥ ಕ್ಷೇತ್ರಗಳಾಗಿ ಅಭಿವೃದ್ಧಿ: ''ಅಂಬೇಡ್ಕರ್​ ಅವರು ಬಲಿಷ್ಠ ಭಾರತವನ್ನು ಕಟ್ಟುವ ಕನಸು ಕಂಡಿದ್ದರು. ಅದಕ್ಕೆ ತಕ್ಕಂತೆ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ನವೆಂಬರ್ ತಿಂಗಳಲ್ಲಿ ದೇಶದಲ್ಲಿ ಸಂವಿಧಾನ ದಿನವನ್ನು ಆಚರಿಸುವ ಸತ್ಸಂಪ್ರದಾಯ ಆರಂಭವಾಗಿದೆ. ಈ ಮೂಲಕ ಸಂವಿಧಾನವನ್ನು ಮನನ ಮಾಡಿಕೊಳ್ಳುವ ಸಂಸ್ಕೃತಿಗೆ ನಾಂದಿ ಹಾಡಲಾಗಿದೆ. ಇದರ ಜತೆಗೆ ಅಂಬೇಡ್ಕರ್ ಅವರ ಬದುಕಿನಲ್ಲಿ ಮಹತ್ತರ ಪಾತ್ರ ವಹಿಸಿದ ಐದು ಸ್ಥಳಗಳನ್ನು ಪಂಚತೀರ್ಥ ಕ್ಷೇತ್ರಗಳನ್ನಾಗಿ ಅಭಿವೃದ್ಧಿ ಪಡಿಸಲಾಗಿದೆ ಎಂದು ಅವರು ವಿವರಿಸಿದರು.

ಸಂವಿಧಾನ ಧರ್ಮಗ್ರಂಥಗಳಿಗಿಂತ ಹೆಚ್ಚು ಪವಿತ್ರ: ಬಿಜೆಪಿ ಸರಕಾರವು ದಲಿತ ಸಮುದಾಯಗಳ ಏಳ್ಗೆಗೆ ಹತ್ತಾರು ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಿ, ಅನುಷ್ಠಾನಕ್ಕೆ ತಂದಿದೆ. ನಾವು ಅಂಬೇಡ್ಕರ್ ರೂಪಿಸಿದ ಸಂವಿಧಾನವನ್ನು ಪೂಜ್ಯ ಭಾವದಿಂದ ನೋಡುತ್ತೇವೆ. ಹೀಗಾಗಿಯೇ ಮೋದಿಯವರು ಸಂವಿಧಾನವನ್ನು ಧರ್ಮಗ್ರಂಥಗಳಿಗಿಂತ ಹೆಚ್ಚು ಪವಿತ್ರವಾಗಿದೆ ಎಂದು ಬಣ್ಣಿಸಿದರು. ನಮ್ಮದು ಎಲ್ಲ ಸಮುದಾಯಗಳನ್ನೂ ಜೊತೆಯಲ್ಲಿ ಕೊಂಡೊಯ್ಯುತ್ತಿರುವ ನೀತಿಯಾಗಿದೆ ಎಂದು ಸಚಿವರು ನುಡಿದರು.

ಇದನ್ನೂ ಓದಿ: 'ಹಿಂಡಲಗಾ ಜೈಲಿನಲ್ಲಿರುವ ಜೆ.ಹೆಚ್.ಪೂಜಾರ ನನ್ನ ಕೊಲೆಗೆ ಸ್ಕೆಚ್​ ಹಾಕಿದ್ದಾನೆ': ಕೆ.ಎಸ್.ಈಶ್ವರಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.