ETV Bharat / state

ಹೆಚ್​ ವೈ ಮೇಟಿ ಗೆಲ್ಲಿಸಿ, ಬಿಜೆಪಿಯನ್ನು ಸೋಲಿಸಿ.. ಆಪ್ತನ ಪರ ಸಿದ್ದರಾಮಯ್ಯ ಪ್ರಚಾರ

author img

By

Published : May 2, 2023, 9:14 PM IST

siddaramaiah-reaction-on-bjp-leaders
ಕುಮಾರಸ್ವಾಮಿ ಸಿಎಂ ಆಗಿದ್ದಾಗ ತಾಜ್ ಹೋಟೆಲ್​ನಿಂದಲೇ ​ಅಧಿಕಾರ ಚಲಾಯಿಸುತ್ತಿದ್ದರು: ಸಿದ್ದರಾಮಯ್ಯ

ಜಾತಿಯ ವಿಷ ಬೀಜ ಬಿತ್ತುವಂತಹ ಬಿಜೆಪಿ ಪಕ್ಷದ ವಿರುದ್ಧ ಮತ ಹಾಕುವ ಮೂಲಕ ತಕ್ಕ ಪಾಠ ಕಲಿಸಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಬಾಗಲಕೋಟೆ: ಕೋಮುವಾದ ಕೆರಳಿಸಿ, ಜಾತಿ ಸಂಘರ್ಷ ಮಾಡುವಂತಹ ಸಂಘಟನೆ ನಿಷೇಧ ಮಾಡುವ ಬಗ್ಗೆ ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು. ಬಾಗಲಕೋಟೆಯ ಪ್ರಚಾರ ಸಭೆಗೆ ಆಗಮಿಸುವುದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋಮುವಾದ ಕೆರಳಿಸಿ, ಜಾತಿ ವಿಷ ಬೀಜ ಬಿತ್ತುವಂತಹ ಸಂಘಟನೆಗಳನ್ನು ನಿಷೇಧ ಮಾಡುತ್ತೇವೆ ಎಂದು‌ ಹೇಳಿದರು.

ವರುಣದಲ್ಲಿ ಸೋಮಣ್ಣ ಗೆದ್ದರೆ ವರುಣವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡುತ್ತೇವೆ ಎಂದು ಅಮಿತ್​ ಶಾ ಹೇಳಿಕೆಗೆ ಪ್ರತಿಕ್ರಿಯಿಸಿ, ಮೊದಲು ಇಲ್ಲಿಯವರೆಗೆ ಏನು ಮಾಡಿದ್ದೀವಿ ಎಂದು ಹೇಳಬೇಕಲ್ವಾ, ವಸತಿ ಸಚಿವರಾಗಿ ಸೋಮಣ್ಣ ವರುಣದಲ್ಲಿ ಮನೆ ಕೊಟ್ಟಿದ್ದಾರೆ, ಏನು ಅಭಿವೃದ್ಧಿ ಮಾಡಿದ್ದಾರೆ? ಏನು ಮಾಡದೆ ನಾನು ಮುಂದೆ ಅಭಿವೃದ್ಧಿ ಮಾಡುತ್ತೇನೆಂದರೆ ಜನ ನಂಬುತ್ತಾರಾ. ಚುನಾವಣೆಗೋಸ್ಕರ ಸುಳ್ಳು ಹೇಳುತ್ತಾರೆ ಎಂದು ಟೀಕಿಸಿದರು.

ಇಂದು ಬಿಡುಗಡೆಯಾದ ಕಾಂಗ್ರೆಸ್​ ಪ್ರಣಾಳಿಕೆ ಬಿಜೆಪಿಯ ಕಾಪಿ ಎಂದು ಸಿಎಂ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿ 2018ರಲ್ಲಿ ಘೋಷಣೆ ಮಾಡಿದ್ದ ಎಷ್ಟು ಯೋಜನೆಗಳನ್ನು ​ಜಾರಿ ಮಾಡಿದೆ ಎಂದು ಸಿಎಂ ಬೊಮ್ಮಾಯಿಗೆ ಕೇಳಿ, ಸಾಲ ಮನ್ನಾ ಮಾಡಿದ್ರ, ಮನೆ ಕೊಟ್ಟರಾ, 10 ಗಂಟೆ ಕರೆಂಟ್​ ಕೊಡ್ತಿವಿ ಎಂದು ಹೇಳಿದ್ದರು ಕೊಟ್ರ. ರೈತರಿಗೆ ಏನು ಮಾಡಿದ್ದಾರೆ?. ಪ್ರಧಾನಮಂತ್ರಿ ಮೋದಿ ಏನು ಮಾಡಿದ್ರು 15 ಲಕ್ಷ ಕೊಡ್ತಿವಿ ಎಂದಿದ್ದರು ಕೊಟ್ರಾ, ಅಚ್ಛೆ ದಿನ ಅಂದರೂ, ಅಚ್ಛೆ ದಿನ ಬಂದಿದಿಯಾ ಎಂದು ಪ್ರಶ್ನೆ ಮಾಡಿದರು. ರಾಜ್ಯ ಬಿಜೆಪಿಯವರಿಗೆ ಇವರು ಮುಖ ನೋಡಿದರೆ ಯಾರು ವೋಟ್​ ಹಾಕಲ್ಲ ಎಂದು ಗೊತ್ತಾಗಿದೆ ಅದಕ್ಕೆ ಅಮಿತ್​ ಶಾ, ನರೇಂದ್ರ ಮೋದಿ, ನಡ್ಡಾ ಅವರು ಕರೆಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್​ಗೆ ಸ್ಟಾರ್ ಪ್ರಚಾರಕರಿಲ್ಲ ಎಂಬ ಬಿಜೆಪಿ ನಾಯಕರ ಟೀಕೆಗೆ ಪ್ರತಿಕ್ರಿಯಿಸಿ, ನಮ್ಮಲ್ಲಿಯೂ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಣದೀಪ್​ ಸಿಂಗ್ ಸುರ್ಜೇವಾಲ, ವೇಣುಗೋಪಾಲ್​ ಇದ್ದಾರೆ ಎಂದು ತಿರುಗೇಟು ಕೊಟ್ಟರು.​ ನಂತರ ನಡೆದ ಪ್ರಚಾರ ಸಭೆಯನ್ನು‌ ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ತಾಜ್ ಹೋಟೆಲ್​ನಲ್ಲಿದ್ದುಕೊಂಡೇ ಅಧಿಕಾರ ಚಲಾಯಿಸುತ್ತಿದ್ದರು. ಶಾಸಕರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಕಾಂಗ್ರೆಸ್ ಶಾಸಕರ ಜೊತೆ ಬೇಜವಾಬ್ದಾರಿ ವರ್ತಸಿದ ಹಿನ್ನೆಲೆ ಕುಮಾರಸ್ವಾಮಿ ಸ್ವಾಮಿ ಅಧಿಕಾರ ಕಳೆದುಕೊಂಡರು. ಆಗ ಇದನ್ನೇ ಕಾಯುತ್ತಿದ್ದ ಬಿಜೆಪಿ ಪಕ್ಷದವರು ಒಬ್ಬೊಬ್ಬ ಶಾಸಕರಿಗೂ 25 ಕೋಟಿ ಕೊಟ್ಟು ಖರೀದಿ ಮಾಡಿ, ಅನೈತಿಕವಾಗಿ ಸರ್ಕಾರ ರಚನೆ ಮಾಡಿದರು ಎಂದರು.

ಕರ್ನಾಟಕದಲ್ಲಿ ಇಂತಹ ಭ್ರಷ್ಟ ಸರ್ಕಾರವನ್ನು ನಾನು ಈ ಹಿಂದೆ ನೋಡಿರಲಿಲ್ಲ, ಪ್ರಧಾನಿ ನರೇಂದ್ರ ಮೋದಿಗೆ ಒಂದೂವರೆ ವರ್ಷಗಳ ಹಿಂದೆ ಗುತ್ತಿಗೆದಾರರ ಸಂಘದವರು ಪತ್ರ ಬರೆದಿದ್ದರು. ಇವತ್ತಿನವರೆಗೂ ಬಿಜೆಪಿ ಸರ್ಕಾರದ ವಿರುದ್ಧ ಕ್ರಮ ಕೈಗೊಂಡಿಲ್ಲ, ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ ಸಿಎಂ ಬಸವರಾಜ ಬೊಮ್ಮಾಯಿ ದಾಖಲೆಕೊಡಿ ಎಂದು ಕೇಳುತ್ತಾರೆ. ಪಿಎಸ್​ಐ ನೇಮಕಾತಿಯಲ್ಲಿ ಲಂಚ ಪಡೆದ ಆರೋಪದಲ್ಲಿ ಎಡಿಜಿಪಿಯೊಬ್ಬರು ಜೈಲಿನಲ್ಲಿದ್ದಾರೆ. ಇನ್ನೂ ತನಿಖೆ ನಡೆಯುತ್ತಿದೆ ಇದು ದಾಖಲೆ ಅಲ್ಲವಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಎಲ್ಲಾ ಇಲಾಖೆಯಲ್ಲಿ 40 ಪ್ರತಿಶತದಷ್ಟು ಕಮಿಷನ್ ಕೇಳುವುದೇ‌ ಬಿಜೆಪಿ ಪಕ್ಷದ ಆಡಳಿತ ವೈಖರಿಯಾಗಿದೆ. ಬಿಜೆಪಿ ಶಾಸಕ ಮಾಡಾಳ್​ ವಿರೂಪಾಕ್ಷಪ್ಪ ಅವರ ಪುತ್ರ ಅಪ್ಪನ ಪರವಾಗಿ ಲಂಚ ತೆಗೆದುಕೊಂಡಿದ್ದು ದಾಖಲಾತಿ ಅಲ್ಲವೇ, ನಾನು ಸಿಎಂ ಇದ್ದಾಗ ಮೆಡಿಕಲ್ ಕಾಲೇಜ್ ನೀಡಿದ್ದೆ, 8365 ಕೋಟಿ ರೈತರ ಸಾಲ‌ಮನ್ನಾ ಮಾಡಿದೆ. 5 ವರ್ಷದಲ್ಲಿ 15 ಲಕ್ಷ ಮನೆಗಳನ್ನು ಕಟ್ಟಿಸಿದ್ದೆ. ಇವರ ಮನೆ ಹಾಳಾಗಲಿ, ಒಂದು ಮನೆಯನ್ನೂ ಸಹ ಕಟ್ಟಿಸಿಲಿಲ್ಲ. ಇಂತಹ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬೇಕಾ ಎಂದು ಬಿಜೆಪಿ ವಿರುದ್ಧ ಅವರು ಹರಿಹಾಯ್ದರು.

ಕರ್ನಾಟಕದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ, ಕಾಂಗ್ರೆಸ್ ಪಕ್ಷದ ಪರವಾಗಿ ಗಾಳಿ ಬೀಸುತ್ತಿದೆ. ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೂ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಹೇಳುವ ಮೋದಿ ಅವರು ರಾಜ್ಯದಲ್ಲಿ ಒಬ್ಬ ಮುಸ್ಲಿಂ, ಕ್ರಿಶ್ಚಿಯನ್​ ಧರ್ಮದವರಿಗೆ ಟಿಕೆಟ್ ನೀಡಿದ್ದಾರಾ ಎಂದು ಪ್ರಶ್ನಿಸಿದರು.

ಕನಸು ಮನಸನಲ್ಲಿಯೂ ಬಿಜೆಪಿ ಪಕ್ಷಕ್ಕೆ ವೋಟ್​ ಹಾಕುವ ವಿಚಾರ ಮಾಡಬಾರದು, ಜಾತಿಯ ವಿಷ ಬೀಜ ಬಿತ್ತುವಂತಹ ಬಿಜೆಪಿ ವಿರುದ್ಧ ಮತ ಹಾಕುವ ಮೂಲಕ ತಕ್ಕ ಪಾಠ ಕಲಿಸಬೇಕಾಗಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ, ನೇಕಾರರಿಗೆ ಬಡ್ಡಿ ರಹಿತ ಸಾಲ ನೀಡುವುದು, ಸಾಲ ಮನ್ನಾ ಮಾಡುವುದು ಸೇರಿದಂತೆ ಇತರ ಅಭಿವೃದ್ಧಿ ಪರ ಯೋಜನೆಯನ್ನು ಜಾರಿಗೆ ತರುತ್ತೇವೆ. ಈ ಬಾರಿ ಮಾಜಿ ಸಚಿವರಾದ ಹೆಚ್ ವೈ ಮೇಟಿ‌ ಅವರಿಗೆ ಮತ ಹಾಕಿ ಗೆಲ್ಲಿಸಿ ಎಂದು ಜನರಲ್ಲಿ ಮನವಿ ಮಾಡಿದರು. ಈ ವೇಳೆ ಸಂಯುಕ್ತ ಜನತಾ ದಳ ಮುಖಂಡರಾದ ಎಂ ಪಿ ನಾಡಗೌಡ, ಕಾಂಗ್ರೆಸ್ ಪಕ್ಷಕ್ಕೆ‌ ಸೇರ್ಪಡೆ ಗೊಂಡರು, ವೇದಿಕೆಯ ಮೇಲೆ ಮಾಜಿ ಸಚಿವರಾದ ಎಸ್ ಆರ್ ಪಾಟೀಲ, ಸತೀಶ್​ ಜಾರಕಿಹೊಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ:ಬಜರಂಗದಳ ಕರ್ನಾಟಕದ ಅಸ್ಮಿತೆ, ತಾಕತ್ತಿದ್ದರೆ ಬ್ಯಾನ್ ಮಾಡಿ ನೋಡಿ: ತೇಜಸ್ವಿ ಸೂರ್ಯ ಸವಾಲ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.