ETV Bharat / state

ರಾಜ್ಯದಲ್ಲಿ ಮೂರ್ನಾಲ್ಕು ಜನ ಮುಖ್ಯಮಂತ್ರಿ ಆಗಿದ್ದಾರೆ ಅಂದರೇ ಅದು ನನ್ನಿಂದಲೇ: ಗಾಲಿ ಜರ್ನಾದನ ರೆಡ್ಡಿ

author img

By

Published : Apr 10, 2023, 3:54 PM IST

Updated : Apr 10, 2023, 4:11 PM IST

gali-jarnadhana-reddy-speech-at-bagalkote
ರಾಜ್ಯದಲ್ಲಿ ಮೂರ್ನಾಲ್ಕು ಜನ ಮುಖ್ಯಮಂತ್ರಿ ಆಗಿದ್ದಾರೆ ಅಂದರೇ ಅದು ನನ್ನಿಂದಲೇ: ಗಾಲಿ ಜರ್ನಾಧನ ರೆಡ್ಡಿ

ಗಾಲಿ ಜರ್ನಾದನ ರೆಡ್ಡಿ ಅವರು ಬಾಗಲಕೋಟೆ ಜಿಲ್ಲೆಯ ಬೀಳಗಿ ಕ್ಷೇತ್ರದ ಕಲಾದಗಿ ಗ್ರಾಮದಲ್ಲಿ ಕಾರ್ಯಕರ್ತರ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು. ಇದೇ ವೇಳೆ, ರೈತರ ಮಗನಿಗೆ ಕನ್ಯೆ ನೀಡುವಂತೆ ಯೋಜನೆ ರೂಪಿಸಲಾಗುವುದು ಎಂದು ರೆಡ್ಡಿ ಭರವಸೆ ನೀಡಿದರು.

ರಾಜ್ಯದಲ್ಲಿ ಮೂರ್ನಾಲ್ಕು ಜನ ಮುಖ್ಯಮಂತ್ರಿ ಆಗಿದ್ದಾರೆ ಅಂದರೇ ಅದು ನನ್ನಿಂದಲೇ: ಗಾಲಿ ಜರ್ನಾದನ ರೆಡ್ಡಿ

ಬಾಗಲಕೋಟೆ: "ಯಡಿಯೂರಪ್ಪ ಅವರು ಒಳ್ಳೆಯ ವ್ಯಕ್ತಿ, ಪಕ್ಷದ ಸಂಘಟನೆಗಾಗಿ ಬಿಜೆಪಿ ಪಕ್ಷದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರ ಪಕ್ಷ ಬೇರೆ, ನಮ್ಮ ಪಕ್ಷ ಬೇರೆ ಇದ್ದರೂ ಅವರ ಮೇಲೆ ಅಭಿಮಾನ ಇದೆ. ಅಂತಹ ನಾಯಕ ರಾಜ್ಯದಲ್ಲಿ ಮತ್ತೆ ಹುಟ್ಟಿ ಬರಲು ಸಾಧ್ಯವಿಲ್ಲ" ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಗಾಲಿ ಜರ್ನಾದನ ರೆಡ್ಡಿ ಹೊಗಳಿದರು.

ಬಾಗಲಕೋಟೆ ಜಿಲ್ಲೆಯ ಬೀಳಗಿ ಕ್ಷೇತ್ರದ ಕಲಾದಗಿ ಗ್ರಾಮದಲ್ಲಿ ಕಾರ್ಯಕರ್ತರ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,"ರಾಜ್ಯದಲ್ಲಿ ನಾಲ್ಕು ಜನ ಮುಖ್ಯಮಂತ್ರಿ, 45 ಜನ ಶಾಸಕರು ಆಗಿದ್ದಾರೆ ಎಂದರೇ ಅದು ನನ್ನಿಂದಲೇ ಎಂದು ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಬಿಜೆಪಿ ಪಕ್ಷದವರು ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ಕಣ್ಣೀರು ಹಾಕಿಸಿದ್ದರು. ಅದರ ಕರ್ಮ ಪಕ್ಷದವರೇ ಅನುಭವಿಸುತ್ತಾರೆ. ಈ ಸಂದರ್ಭದಲ್ಲಿ ನಿಮ್ಮೂರಿನ ಶಾಸಕರೊಬ್ಬರು ದೆಹಲಿಗೆ ಹೋಗಿ ಮುಖ್ಯಮಂತ್ರಿ ಆಗುವ ಹುನ್ನಾರ ನಡೆಸಿದ್ದರು" ಎಂದು ಪರೋಕ್ಷವಾಗಿ ನಿರಾಣಿ ಅವರ ವಿರುದ್ಧ ಕಿಡಿಕಾರಿದರು.

ಸಕ್ಕರೆ ಕಾರ್ಖಾನೆ ಇದ್ದವರಿಗೆ ಮಾತ್ರ ಬೆಂಬಲಿಸಬೇಡಿ: ಬೀಳಗಿ ಕ್ಷೇತ್ರದ ಕೆಆರ್​ಪಿ ಪಕ್ಷದ ಅಭ್ಯರ್ಥಿಯಾಗಿರುವ 32 ವರ್ಷದ ರಾಜು ನ್ಯಾಮಗೌಡ ಅವರಿಗೆ ಜನರು ಬೆಂಬಲ ನೀಡಬೇಕಾಗಿದೆ. ಯುವಕರು ರಾಜಕೀಯ ಕ್ಷೇತ್ರಕ್ಕೆ ಬಂದರೆ ಕೆಲಸ ಕಾರ್ಯ ಆಗಲಿದೆ. ಶ್ರೀಮಂತರಿಗೆ ದೊಡ್ಡವರಿಗೆ, ಸಕ್ಕರೆ ಕಾರ್ಖಾನೆ ಇದ್ದವರಿಗೆ ಮಾತ್ರ ಬೆಂಬಲಿಸಬೇಡಿ. ಅವರನ್ನು ದೊಡ್ಡವರಾಗಿ ಮಾಡಿದ್ದು ನೀವು, ಅಂತಹವರಿಗೆ ಸಣ್ಣವರು ಮಾಡುವವರು ನೀವೇ ಎಂದು ಸಚಿವ ಮುರುಗೇಶ್ ನಿರಾಣಿ ಅವರ ಹೆಸರು ಹೇಳದೇ ಹರಿಹಾಯ್ದರು.

ನಮ್ಮ ಪಕ್ಷ ಅಧಿಕಾರಕ್ಕೆ ಬಂದರೇ ರೈತರಿಗೆ ಸಹಾಯ ಕೇಂದ್ರ, ರಸಗೊಬ್ಬರ, ಬಿತ್ತನೆ ಬೀಜ ಸೇರಿದಂತೆ ಇತರ ಕೆಲಸ ಕಾರ್ಯಗಳನ್ನು ನೇರವಾಗಿ ರೈತರ ಮನೆಗೆ ಮುಟ್ಟಿಸುವಂತಹ ಕೆಲಸ ಮಾಡುತ್ತೇವೆ. ಏತ ನೀರಾವರಿ ಯೋಜನೆ, ಉತ್ತರ ಕರ್ನಾಟಕದಲ್ಲಿ ಸಮಗ್ರ ನೀರಾವರಿ ಯೋಜನೆ, ರೈತರ ಮಗನಿಗೆ ಕನ್ಯೆ ನೀಡುವಂತೆ ಯೋಜನೆ ರೂಪಿಸಲಾಗುವುದು. ರಾಜ್ಯ ಬಜೆಟ್​ನಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚು ಒತ್ತು ನೀಡಿ ಅಭಿವೃದ್ಧಿಪಡಿಸಲಾಗುವುದು, ಮನೆ ಇಲ್ಲದವರಿಗೆ ಮನೆ ನಿರ್ಮಾಣ ಮಾಡಿಕೊಡಲಾಗುವುದು ಎಂದು ಜನಾರ್ದನ ರೆಡ್ಡಿ ಭರವಸೆ ನೀಡಿದರು.

ಆದರೆ, 224 ಕ್ಷೇತ್ರದಲ್ಲಿ ಅಭ್ಯರ್ಥಿ ಇಲ್ಲವಾದರೂ ಅಧಿಕಾರಕ್ಕೆ ಹೇಗೆ ಬರುತ್ತಾರೆ ಎಂಬ ಚರ್ಚೆ ಇರಬಹುದು. ಮುಂದೆ ಜರ್ನಾರ್ದನ ರೆಡ್ಡಿ ಇಲ್ಲದೇ ಸರ್ಕಾರ ರಚನೆ ಆಗಲ್ಲ. ಕೆಲ ಕ್ಷೇತ್ರಗಳಿಂದ ನಮ್ಮ ಪಕ್ಷದ ಅಭ್ಯರ್ಥಿಗಳು ವಿಧಾನಸಭೆಗೆ ಕಾಲಿಡಲಿದ್ದಾರೆ. ಮೇ 15ಕ್ಕೆ ಸರ್ಕಾರದ ರಚನೆ ಬಗ್ಗೆ ಗೊತ್ತಾಗುತ್ತದೆ. ಕಲ್ಯಾಣ ರಾಜ್ಯ ಪಗ್ರತಿ ಪಕ್ಷಕ್ಕೆ 2028ರ ಚುನಾವಣೆಯಲ್ಲಿ ಸುಮಾರು 150 ಸೀಟುಗಳನ್ನು ಗೆಲ್ಲಿಸಿ, ಮುಂದೆ ಪೂರ್ಣ ಪ್ರಮಾಣದಲ್ಲಿ ಅಧಿಕಾರ ರಚನೆ ಮಾಡುವುದಕ್ಕೆ ಹಗಲು ರಾತ್ರಿ ಶ್ರಮಿಸುತ್ತೇನೆ. ಇದರ ಜೊತೆಗೆ ಜಿಲ್ಲಾ ಪಂಚಾಯತ್​​ ಚುನಾವಣೆಯಲ್ಲಿ ಸಹ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುತ್ತದೆ ಎಂದು ತಿಳಿಸಿ. ಫುಟ್ಬಾಲ್​​​ ಚಿಹ್ನೆಗೆ ತಮ್ಮ ಬೆಂಬಲ ನೀಡುವಂತೆ ಮನವಿ ಜನಾರ್ದನ ರೆಡ್ಡಿ ಮನವಿ ಮಾಡಿಕೊಂಡರು.

ಇದನ್ನೂ ಓದಿ: ಜೆಡಿಎಸ್​ ಅಭ್ಯರ್ಥಿಗಳ ಎರಡನೇ ಪಟ್ಟಿ ಸದ್ಯದಲ್ಲೇ ಬಿಡುಗಡೆ: ಹೆಚ್​​​ಡಿಕೆ

Last Updated :Apr 10, 2023, 4:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.