ETV Bharat / sports

ಸೆಮಿಫೈನಲ್‌ ಪ್ರವೇಶಿಸಿದ ಲಕ್ಷ್ಯ ಸೇನ್: ಕ್ವಾರ್ಟರ್‌ಫೈನಲ್‌ನಲ್ಲಿ ಎಡವಿದ ಪ್ರಣಯ್, ಸಾತ್ವಿಕ್‌, ಚಿರಾಗ್

author img

By

Published : Jul 28, 2023, 7:44 PM IST

Japan Oprn 2023
ಲಕ್ಷ್ಯ ಸೇನ್

ಕೆನಡಾ ಓಪನ್ ವಿಜೇತ ಲಕ್ಷ್ಯ ಸೇನ್ ಮತ್ತೊಂದು ಪ್ರಶಸ್ತಿಯತ್ತ ಮುನ್ನಡೆದಿದ್ದಾರೆ. ಟೋಕಿಯೊದಲ್ಲಿ ನಡೆಯುತ್ತಿರುವ ಜಪಾನ್ ಓಪನ್​ನಲ್ಲಿ ಸೆಮಿಸ್​​​ ಪ್ರವೇಶ ಪಡೆದುಕೊಂಡಿದ್ದಾರೆ.

ಟೋಕಿಯೊ (ಜಪಾನ್): ಇಲ್ಲಿ ನಡೆಯುತ್ತಿರುವ ಜಪಾನ್ ಓಪನ್‌ನಲ್ಲಿ ಕೆನಡಾ ಓಪನ್ 2023 ವಿಜೇತ ಲಕ್ಷ್ಯ ಸೇನ್ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್‌ನಲ್ಲಿ ಸತತ ಮೂರನೇ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ. ಆದರೆ, ಎಚ್‌ಎಸ್ ಪ್ರಣಯ್ ಮತ್ತು ಇನ್‌ಫಾರ್ಮ್ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿ ರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಕ್ವಾರ್ಟರ್ ಫೈನಲ್‌ನಲ್ಲಿ ಹಿನ್ನಡೆ ಅನುಭವಿಸಿದೆ.

ಜಪಾನಿನ ರಾಜಧಾನಿಯ ಯೊಯೋಗಿ 1 ನೇ ಜಿಮ್ನಾಷಿಯಂನಲ್ಲಿ ಕೋರ್ಟ್ 2ರಲ್ಲಿ ಸೇನ್ ಜಪಾನ್‌ನ ಕೋಕಿ ವಟನಾಬೆ​ ವಿರುದ್ಧ 47 ನಿಮಿಷದ ಆಟದಲ್ಲಿ 21-15, 21-19ರ ನೇರ ಸೆಟ್​​ನ ಜಯ ದಾಖಲಿಸಿದರು. ಇದಕ್ಕೂ ಮುನ್ನ ಕೆನಡಾ ಓಪನ್​ನಲ್ಲಿ ಸೆಮಿಸ್​ ತಲುಪಿ ಪ್ರಶಸ್ತಿಗೆ ಮುತ್ತಿಕ್ಕಿದರೆ, ಅಮೆರಿಕ ಓಪನ್‌ನಲ್ಲಿ ಸೆಮಿಫೈನಲ್​​ನಲ್ಲಿ 2023 ರ ಆಲ್ - ಇಂಗ್ಲೆಂಡ್ ಚಾಂಪಿಯನ್ ಲಿ ಶಿ ಫೆಂಗ್ ವಿರುದ್ಧ ಸೋಲನುಭವಿಸಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸುವಲ್ಲಿ ಎಡವಿದ್ದರು.

ಪ್ರಣಯ್​ಗೆ ಹಿನ್ನಡೆ: ಪ್ರಸಕ್ತ ವರ್ಷದಲ್ಲಿ ಉತ್ತಮ ಲಯದಲ್ಲಿರುವ ಎಚ್​ ಎಸ್​​ ಪ್ರಣಯ್​​ ಮೊದಲ ಗೇಮ್​​ನಲ್ಲಿ ಡೆನ್ಮಾರ್ಕ್‌ನ ಅಗ್ರ ಶ್ರೇಯಾಂಕದ ವಿಕ್ಟರ್ ಆಕ್ಸೆಲ್‌ಸೆನ್ ವಿರುದ್ಧ ಗೆಲುವು ದಾಖಲಿಸಿದರು. ಎರಡನೇ ಮತ್ತು ಮೂರನೇ ಸೆಟ್​ನಲ್ಲಿ ಮುನ್ನಡೆ ಪಡೆಯಲು ಸಾಧ್ಯವಾಗದೇ ಪಂದ್ಯದಿಂದ ಹೊರಗುಳಿದರು. 76 ನಿಮಿಷದ ಹಣಾಹಣಿಯಲ್ಲಿ ಪ್ರಣಯ್​​ 21-19, 18-21, 8-21 ರಿಂದ ಕ್ವಾರ್ಟರ್‌ಫೈನಲ್‌ನಲ್ಲಿ ಸೋತರು.

ಪುರುಷರ ಡಬಲ್ಸ್​ನಲ್ಲಿ ಸೋಲು: ಪುರುಷರ ಡಬಲ್ಸ್‌ ಕ್ವಾರ್ಟರ್‌ಫೈನಲ್‌ನಲ್ಲಿ ಮೂರನೇ ಶ್ರೇಯಾಂಕದ ಸಾತ್ವಿಕ್‌ಸಾಯಿರಾಜ್‌ ರಾಂಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಜೋಡಿಯು ಚೈನೀಸ್‌ ತೈಪೆಯ ಲೀ ಯಾಂಗ್‌ ಮತ್ತು ವಾಂಗ್‌ ಚಿ-ಲಿನ್‌ ವಿರುದ್ಧ 70 ನಿಮಿಷದ ಆಟದಲ್ಲಿ 15-21, 25-23, 16-21ರ ಮೂರು ಸೆಟ್‌ನ ಗೇಮ್​ನಲ್ಲಿ ಸೋಲು ಕಂಡರು. ಪುರುಷರ ಡಬಲ್ಸ್ ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ ವಿಶ್ವದ ನಂ.2 ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಕಳೆದ ವಾರ ಕೊರಿಯಾ ಓಪನ್ ಪುರುಷರ ಡಬಲ್ಸ್ ಪ್ರಶಸ್ತಿ ಗೆದ್ದಿದ್ದಾರೆ.

ಕೆಲವು ವಾರಗಳ ಹಿಂದೆ ಕೆನಡಾ ಓಪನ್‌ನಲ್ಲಿ ಫೈನಲ್‌ನಲ್ಲಿ ಚೀನಾದ ಲಿ ಶಿ ಫೆಂಗ್‌ ಅವರನ್ನು ಸೋಲಿಸಿದ ವಿಶ್ವದ 13ನೇ ಶ್ರೇಯಾಂಕದ ಲಕ್ಷ್ಯ ಸೇನ್, ಬಿಡಬ್ಲ್ಯೂಎಫ್​ ವರ್ಲ್ಡ್ ಟೂರ್ ಸೂಪರ್ 750 ಈವೆಂಟ್‌ನಲ್ಲಿ ವಟನಬೆ ವಿರುದ್ಧ ಅದೇ ಕಮಾಂಡಿಂಗ್ ಆಟವನ್ನು ಪ್ರದರ್ಶಿಸಿ ಮುಂದಿನ ಹಂತಕ್ಕೆ ಕಾಲಿಟ್ಟಿದ್ದಾರೆ. ಹಾಲಿ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಲಕ್ಷ್ಯ ಸೇನ್ ನಾಳೆ ನಡೆಯುವ ಸೆಮಿಫೈನಲ್​ ಪಂದ್ಯದಲ್ಲಿ ಐದನೇ ಶ್ರೇಯಾಂಕದ ಇಂಡೋನೇಷ್ಯಾದ ಜೊನಾಟನ್ ಕ್ರಿಸ್ಟಿ ಅವರನ್ನು ಎದುರಿಸಲಿದ್ದಾರೆ.

ಜಪಾನ್ ಓಪನ್‌ನಲ್ಲಿನ ಫಲಿತಾಂಶಗಳು ಪ್ಯಾರಿಸ್ 2024 ರ ಒಲಿಂಪಿಕ್ಸ್‌ಗೆ ಆಟಗಾರರ ಅರ್ಹತಾ ಶ್ರೇಯಾಂಕಗಳಿಗೆ ಪರಿಗಣಿಸಲ್ಪಡುತ್ತವೆ. ಈ ವರ್ಷದ ಮೇ 1 ರಿಂದ ಬ್ಯಾಡ್ಮಿಂಟನ್ ಅರ್ಹತಾ ಶ್ರೇಯಾಂಕಗಳು ಪ್ರಾರಂಭವಾಗಿದ್ದವು.

ಇದನ್ನೂ ಓದಿ: ಕ್ವಾರ್ಟರ್​ ಫೈನಲ್ ತಲುಪಿದ ಲಕ್ಷ್ಯಸೇನ್​, ಸಾತ್ವಿಕ್​- ಚಿರಾಗ್​ ಜೋಡಿ: ಮಹಿಳಾ ಡಬಲ್ಸ್​ ಜೋಡಿಗೆ ಸೋಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.