ETV Bharat / sports

ಟಿ20 ಕ್ರಿಕೆಟ್‌ ತ್ಯಜಿಸುವ ಕುರಿತು ನಿರ್ಧರಿಸಿಲ್ಲ: ರೋಹಿತ್ ಶರ್ಮಾ

author img

By

Published : Jan 10, 2023, 9:50 AM IST

ಭಾರತ ಕ್ರಿಕೆಟಿಗ ರೋಹಿತ್​ ಶರ್ಮಾ ಟಿ20 ಕ್ರಿಕೆಟ್‌ಗೆ ಗುಡ್​ಬೈ ಹೇಳ್ತಾರಾ?. ಇದಕ್ಕೆ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ.

rohit-sharma-on-t20-format
ರೋಹಿತ್ ಶರ್ಮಾ

ಗುವಾಹಟಿ: ವಿಶ್ವಕಪ್​ ಕಳಪೆ ಪ್ರದರ್ಶನದ ಬಳಿಕ ಟಿ20 ಕ್ರಿಕೆಟ್ ಮಾದರಿಯಿಂದ ಸ್ವಲ್ಪ ದೂರ ಉಳಿದಿರುವ ನಾಯಕ ರೋಹಿತ್​ ಶರ್ಮಾ ಕಮ್​ಬ್ಯಾಕ್​ ಮಾಡುವ ಸೂಚನೆ ನೀಡಿದ್ದಾರೆ. ಮುಂದಿನ ಐಪಿಎಲ್​ ಬಳಿಕ ತಾವು ಅಂತಾರಾಷ್ಟ್ರೀಯ ಟಿ20 ಆಡುವುದಾಗಿ ಹೇಳಿದ್ದಾರೆ. ಟಿ20 ಕ್ರಿಕೆಟ್ ಬಿಡುವ ಬಗ್ಗೆ ಸದ್ಯ ನಿರ್ಧಾರ ಮಾಡಿಲ್ಲ. ಮುಂದಿನ ದಿನಗಳಲ್ಲಿ ಕಾದು ನೋಡಿ ಎಂದರು.

ಶ್ರೀಲಂಕಾ ವಿರುದ್ಧ ನಡೆಯುವ ಮೊದಲ ಏಕದಿನ ಪಂದ್ಯಕ್ಕೂ ಮೊದಲು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ರೋಹಿತ್​, ನಾವು ಈ ಋತುವಿನಲ್ಲಿ ಕೇವಲ 6 ಟಿ20 ಪಂದ್ಯಗಳನ್ನು ಮಾತ್ರ ಹೊಂದಿದ್ದೇವೆ. ಈಗಾಗಲೇ ಮೂರು ಮ್ಯಾಚ್​ ಮುಗಿದಿದೆ. ಹಾಗಾಗಿ ಮುಂದಿನ ಪಂದ್ಯಗಳಲ್ಲಿ ನಾವು ಕಾಣಿಸಿಕೊಳ್ಳುತ್ತೇವೆ. ಐಪಿಎಲ್​ ಬಳಿಕ ನೀವು ಬದಲಾವಣೆ ಕಾಣಬಹುದು. ಯಾರೆಲ್ಲ ಈಗ ತಂಡದಿಂದ ಹೊರಗಿದ್ದಾರೋ ಅವರು ಮತ್ತೆ ವಾಪಸ್​ ಆಗಲಿದ್ದಾರೆ ಎಂದು ಹೇಳಿದರು.

ಐಪಿಎಲ್ ನಂತರ ಏನಾಗುತ್ತದೆ ಎಂಬುದನ್ನು ನೀವೇ ನೋಡುತ್ತೀರಿ. ಹೊಡಿಬಡಿ ಆಟವನ್ನು ನಾನು ಬಿಟ್ಟುಕೊಡಲು ನಿರ್ಧರಿಸಿಲ್ಲ. ಆ ಮಾದರಿಯಲ್ಲಿ ಆಡುವುದನ್ನು ನಾನು ಮುಂದುವರಿಯಲು ಇಚ್ಚಿಸುವೆ ಎನ್ನುವ ಮೂಲಕ ಟಿ20ಯಿಂದ ಹಿಂದೆ ಸರಿಯಲಿದ್ದಾರೆ ಎಂಬ ವದಂತಿಗಳಿಗೆ ತೆರೆ ಎಳೆದರು.

ಮುಂದಿನ ಏಕದಿನ ವಿಶ್ವಕಪ್​ಗಾಗಿ ಸಿದ್ಧತೆ ನಡೆಸಬೇಕಿದೆ. ಹೀಗಾಗಿ ಎಲ್ಲ ಆಟಗಾರರಿಗೂ ಸಮಾನ ಅವಕಾಶ ನೀಡಲಾಗದು. ಕೆಲವು ಮಾದರಿಗೆ ಆಟಗಾರರನ್ನು ಬಿಡಬೇಕಾಗುತ್ತದೆ. ಸತತ ಪಂದ್ಯಗಳಿಂದಾಗಿ ವಿಶ್ರಾಂತಿ ಕೂಡ ಬೇಕಿರುತ್ತದೆ. ವಿರಾಮದ ಬಳಿಕ ಆಟಗಾರರು ತಂಡಕ್ಕೆ ಮರಳಲಿದ್ದಾರೆ. ಅದರಲ್ಲಿ ನಾನು ಕೂಡ ಖಂಡಿತವಾಗಿ ಇರುತ್ತೇನೆ ಎಂದು ಶರ್ಮಾ ಹೇಳಿದರು.

ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್​ ವೇಳೆ ರೋಹಿತ್ ಶರ್ಮಾ, ವಿರಾಟ್​ ಕೊಹ್ಲಿ ಮತ್ತು ಕೆ.ಎಲ್.ರಾಹುಲ್ ಅವರು ಪವರ್‌ಪ್ಲೇ ವೇಳೆ ನಿಧಾನಗತಿಯ ತಂತ್ರ ಬಳಸಿದ್ದರಿಂದ ತೀವ್ರ ಟೀಕೆಗೆ ಗುರಿಯಾಗಿದ್ದರು. ಇದು ಏಷ್ಯಾಕಪ್ ಮತ್ತು ವಿಶ್ವಕಪ್‌ನಲ್ಲಿ ದುಬಾರಿಯಾಯಿತು. ರೋಹಿತ್​ ಶರ್ಮಾ, ಮುಂದಿನ ಐಪಿಎಲ್​ನಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ವಾಪಸ್ ಆಗಲು ನಿರ್ಧರಿಸಿದ್ದಾರೆ.

ಹೊಸ ತಂಡ ರೂಪಿಸಲು ಬಿಸಿಸಿಐ ಯೋಜನೆ​: ಇನ್ನೊಂದೆಡೆ, ಬಿಸಿಸಿಐ ಹಿಂದಿನ ತಪ್ಪುಗಳನ್ನು ಸರಿ ಮಾಡಿಕೊಳ್ಳಲು ಹೊಸ ಮತ್ತು ಯುವಕರ ತಂಡವನ್ನು ಕಟ್ಟಲು ಮುಂದಾಗಿದೆ. ಈಗಾಗಲೇ ಪ್ರಯೋಗಕ್ಕೆ ಕೈ ಹಾಕಲಾಗಿದ್ದು, ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ತಂಡ ಸಜ್ಜು ಮಾಡಲಾಗುತ್ತಿದೆ. ನ್ಯೂಜಿಲ್ಯಾಂಡ್​ ಮತ್ತು ಶ್ರೀಲಂಕಾ ಸರಣಿಯಲ್ಲಿ ಇದು ತುಸು ಮಟ್ಟಿಗೆ ಲಾಭ ತಂದಿದೆ. 2024 ರ ಟಿ20 ವಿಶ್ವಕಪ್​ಗೆ ಬಲಿಷ್ಠ ಯುವಪಡೆ ರಚನೆಯಾಗಬೇಕಿದೆ.

ಹಿರಿಯ ಆಟಗಾರರಾದ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ, ಕೆ.ಎಲ್.ರಾಹುಲ್​ ಅವರನ್ನು ತಂಡದಿಂದ ಕೈಬಿಡಲಾಗುತ್ತದೆಯೇ ಎಂಬ ಬಗ್ಗೆ ಸ್ಪಷ್ಟನೆ ಇಲ್ಲ. ಸತತ ವೈಫಲ್ಯ ಕಾಣುತ್ತಿರುವ ಆಟಗಾರರು ಬ್ಯಾಟಿಂಗ್​ನಲ್ಲಿ ಮೊನಚು ಕಳೆದುಕೊಂಡಿದ್ದಾರೆ. ಹೀಗಾಗಿ ಯುವ ಆಟಗಾರರು ಇವರ ಸ್ಥಾನವನ್ನು ಆಕ್ರಮಿಸಿಕೊಳ್ಳಲು ತುದಿಗಾಲ ಮೇಲೆ ನಿಂತಿದ್ದಾರೆ.

ಇಂದು ಲಂಕಾ ವಿರುದ್ಧ ಮೊದದಲ ಏಕದಿನ: ಗುವಾಹಟಿಯಲ್ಲಿಂದು ಶ್ರೀಲಂಕಾ ವಿರುದ್ಧ ಮೊದಲ ಏಕದಿನ ಕ್ರಿಕೆಟ್‌ ಸರಣಿ ನಡೆಯಲಿದೆ. ಈ ಸರಣಿಯು ಪ್ರಸಕ್ತ ವರ್ಷಾಂತ್ಯದಲ್ಲಿ ನಡೆಯುವ ವಿಶ್ವಕಪ್‌ಗೆ ಸಿದ್ಧತೆ ಎಂದೇ ಪರಿಗಣಿಸಲಾಗಿದೆ. ವಿರಾಟ್​ ಕೊಹ್ಲಿ, ರಾಹುಲ್​ ಹಾಗು ರೋಹಿತ್​ ಶರ್ಮಾ ತಂಡವನ್ನು ಸೇರಿಕೊಂಡಿದ್ದಾರೆ.

ಇದನ್ನೂ ಓದಿ: ಮುಂಬೈ ಇಂಡಿಯನ್ಸ್​ ಸೇರಿ 12 ವರ್ಷ.. ತಂಡಕ್ಕೆ ಧನ್ಯವಾದ ಹೇಳಿದ ರೋಹಿತ್​ ಶರ್ಮಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.