ETV Bharat / sports

ಏಷ್ಯಾಕಪ್ ತಪ್ಪಿಸಿಕೊಂಡರೆ ಪಾಕಿಸ್ತಾನಕ್ಕೆ 3 ಮಿಲಿಯನ್ ಡಾಲರ್ ಆದಾಯ ನಷ್ಟ: ಪಿಸಿಬಿ ಅಧ್ಯಕ್ಷ

author img

By

Published : Apr 11, 2023, 5:46 PM IST

ಏಷ್ಯಾಕಪ್ ಕ್ರಿಕೆಟ್‌ ಟೂರ್ನಿಯಲ್ಲಿ ತಮ್ಮ ತಂಡವು ಆಡಲು ನಿರಾಕರಿಸಿದರೆ ಸುಮಾರು ಮೂರು ಮಿಲಿಯನ್ ಡಾಲರ್​ನಷ್ಟು ಆದಾಯ ನಷ್ಟ ಉಂಟಾಗಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಹೇಳಿದ್ದಾರೆ.

pakistan-could-lose-usd-3-million-if-it-skips-asia-cup-pcb-chief-najam-sethi
ಏಷ್ಯಾಕಪ್ ತಪ್ಪಿಸಿಕೊಂಡರೆ ಪಾಕಿಸ್ತಾನಕ್ಕೆ 3 ಮಿಲಿಯನ್ ಡಾಲರ್ ಆದಾಯ ನಷ್ಟ: ಪಿಸಿಬಿ ಅಧ್ಯಕ್ಷ ಸೇಥಿ

ಕರಾಚಿ (ಪಾಕಿಸ್ತಾನ): ಪಾಕಿಸ್ತಾನದಲ್ಲಿ ಏಷ್ಯಾಕಪ್​ ಕ್ರಿಕೆಟ್ ಆಯೋಜನೆ ಸಂಬಂಧ ಬಿಕ್ಕಟ್ಟು ಮುಂದುವರೆದಿದೆ. ಇದರ ನಡುವೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ನಜಮ್ ಸೇಥಿ ಈ ಟೂರ್ನಿಯಲ್ಲಿ ತಮ್ಮ ತಂಡವು ಆಡಲು ನಿರಾಕರಿಸಿದರೆ ನಮಗೆ ಸುಮಾರು ಮೂರು ಮಿಲಿಯನ್ ಡಾಲರ್​ನಷ್ಟು ಆದಾಯ ನಷ್ಟ ಉಂಟಾಗಲಿದೆ. ಏಷ್ಯಾಕಪ್‌ನ ಆತಿಥ್ಯ ಹಕ್ಕುಗಳ ವಿಚಾರಕ್ಕೆ ಬಂದರೆ ಪಾಕಿಸ್ತಾನವು ಈ ನಷ್ಟ ಭರಿಸಲು ಸಿದ್ಧವಿದೆ ಎಂದು ತಿಳಿಸಿದರು.

ಪ್ರಸಕ್ತ ಸಾಲಿನ ಟೂರ್ನಿಯು ಪಾಕಿಸ್ತಾನದಲ್ಲಿ ಸೆಪ್ಟೆಂಬರ್​ನಲ್ಲಿ ನಿಗದಿಯಾಗಿತ್ತು. ಆದರೆ, ಭದ್ರತೆಯ ಕಾರಣವೊಡ್ಡಿ ಟೀಂ ಇಂಡಿಯಾ ಪಾಕ್‌ಗೆ ಪ್ರವಾಸ ಕೈಗೊಳ್ಳುವುದಿಲ್ಲ. ಇದನ್ನು ಈಗಾಗಲೇ ಭಾರತ ಸ್ಪಷ್ಟಪಡಿಸಿದೆ. ಇದೇ ಕಾರಣದಿಂದ ಟೂರ್ನಿ ನಡೆಯುವ ಸ್ಥಳದ ಬಗ್ಗೆ ಅನಿಶ್ಚಿತತೆ ಮುಂದುವರೆದಿದೆ. ಹೀಗಾಗಿ ಪಾಕ್​ನ ಹೊರಗಡೆ ಕೂಡ ಕೆಲವು ಪಂದ್ಯಗಳನ್ನು ಆಯೋಜಿಸುವ ಚಿಂತನೆ ನಡೆದಿದೆ.

ಇದನ್ನೂ ಓದಿ: ಏಷ್ಯಾಕಪ್​​ 2023: ಪಾಕ್​ಗೆ ತಂಡ ಕಳಿಸುವಂತೆ ಮೋದಿಗೆ ಮನವಿ ಮಾಡಿದ ಅಫ್ರಿದಿ

ಈ ಬಗ್ಗೆ ಮಾತನಾಡಿರುವ ಪಿಸಿಬಿ ಅಧ್ಯಕ್ಷ ಸೇಥಿ, ‘‘ನಾವು ಈಗಾಗಲೇ ಹೈಬ್ರಿಡ್ ಮಾದರಿಯ ಏಷ್ಯಾಕಪ್ ಟೂರ್ನಿ ಕುರಿತು ಪ್ರಸ್ತಾಪಿಸಿದ್ದೇವೆ. ಅಂದರೆ ಭಾರತವು ತನ್ನ ಪಂದ್ಯಗಳನ್ನು ದೇಶದ ಹೊರಗಿನ ಸ್ಥಳದಲ್ಲಿ ಆಡುತ್ತದೆ. ಪಾಕಿಸ್ತಾನವು ಉಳಿದ ಪಂದ್ಯಗಳನ್ನು ತವರಿನಲ್ಲಿ ಆಯೋಜಿಸುತ್ತಿದೆ. ಇದರ ಹೊರತಾಗಿ ನಾವು ಬೇರೆ ಯಾವುದೇ ವೇಳಾಪಟ್ಟಿಯನ್ನು ಸ್ವೀಕರಿಸುವುದಿಲ್ಲ ಮತ್ತು ಆಡುವುದಿಲ್ಲ'' ಎಂದು ಸ್ಪಷ್ಟಪಡಿಸಿದ್ದಾರೆ.

ಮುಂದುವರೆದು, ''ಏಷ್ಯಾಕಪ್​ನಲ್ಲಿ ಭಾರತವು ತನ್ನ ಪಂದ್ಯಗಳನ್ನು ಹೊರ ಸ್ಥಳದಲ್ಲಿ ಆಡಿದರೂ ಉಳಿದ ಪಂದ್ಯಗಳು ಪಾಕಿಸ್ತಾನದಲ್ಲೇ ನಡೆಯುತ್ತವೆ. ನಮ್ಮ ಹೋಸ್ಟಿಂಗ್ ಹಕ್ಕುಗಳನ್ನು ನಾವು ಕಳೆದುಕೊಳ್ಳುವುದಿಲ್ಲ'' ಎಂದು ಸೇಥಿ ಹೇಳಿದರು. ಇದೇ ವೇಳೆ, ''ಭದ್ರತೆ ಅವರಿಗೆ (ಭಾರತ) ನಿಜವಾದ ಕಾರಣವಲ್ಲ. ಪಾಕಿಸ್ತಾನದಲ್ಲಿ ಆಡಲು ಅವರ ಸರ್ಕಾರವು ಅನುಮತಿ ನೀಡದಿದ್ದರೆ, ಇದಕ್ಕೆ ಸಂಬಂಧಿಸಿದ ಕೆಲವು ಲಿಖಿತ ಪುರಾವೆಗಳನ್ನು ನಮಗೆ ನೀಡುವಂತೆ ಕೇಳಿದ್ದೇವೆ'' ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಏಷ್ಯಾ ಕಪ್​: ಪಾಕ್​ಗೆ ಟೀಂ ಇಂಡಿಯಾ ಪ್ರಯಾಣದ ಬಗ್ಗೆ ಸ್ಪಷ್ಟನೆ ನೀಡಿದ ರೋಜರ್​ ಬಿನ್ನಿ

"ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್ ಸೇರಿದಂತೆ ಇತರ ಎಲ್ಲ ತಂಡಗಳು ಯಾವುದೇ ಸಮಸ್ಯೆಗಳಿಲ್ಲದೆ ಪಾಕಿಸ್ತಾನದಲ್ಲಿ ಆಡುತ್ತಿರುವಾಗ ಭಾರತಕ್ಕೂ ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ಯಾವುದೇ ಭದ್ರತಾ ಕಾಳಜಿ ಇರಬಾರದು. ಏಷ್ಯನ್ ಕ್ರಿಕೆಟ್ ಕೌನ್ಸಿಲ್​ ಗಳಿಸಿರುವ ಶೇ.80ರಷ್ಟು ಆದಾಯವು ಪಾಕಿಸ್ತಾನ ಮತ್ತು ಭಾರತ ಪಂದ್ಯಗಳಿಂದಲೇ ಬಂದಿದೆ'' ಎಂದು ಪಾಕ್​ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮಾಹಿತಿ ನೀಡಿದರು.

ನಾವು ಹೇಳಿರುವ ಹೈಬ್ರಿಡ್ ಮಾದರಿಯನ್ನು ಟೂರ್ನಿಗೆ ಎಸಿಸಿ ಒಪ್ಪಿಕೊಂಡರೆ, ಅದು ಐಸಿಸಿ ವಿಶ್ವಕಪ್‌ನ ಮೇಲೂ ಪ್ರಭಾವ ಬೀರಬಹುದು ಎಂಬ ಪ್ರಶ್ನೆಯೊಂದನ್ನು ಸೇಥಿ ಒಪ್ಪಿಕೊಂಡಿದ್ದಾರೆ. ಅಲ್ಲದೇ, ವಿಶ್ವಕಪ್‌ನಲ್ಲಿ ಆಡಲು ಪಾಕಿಸ್ತಾನ ನಿರಾಕರಿಸುವ ಸಾಧ್ಯತೆಯ ಬಗ್ಗೆ ಕೇಳಿದ ಪ್ರಶ್ನೆಗೆ ಸೇಥಿ, ಐಸಿಸಿಯೊಂದಿಗಿನ ಸಂಬಂಧಗಳು ವಿಭಿನ್ನ. ಅಂತಹ ಸನ್ನಿವೇಶದಲ್ಲಿ ಸಂಬಂಧಗಳು ನೆಗೆಟಿವ್​ ಪರಿಣಾಮ ಬೀರಬಹುದು ಎಂದು ಹೇಳಿದರು.

ಇದನ್ನೂ ಓದಿ: ಬಿಸಿಸಿಐ ಮುಂದೆ ಐಸಿಸಿ ಏನೂ ಮಾಡಲಾಗದು: ಶಾಹಿದ್ ಅಫ್ರಿದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.