ETV Bharat / sports

ಡೇವಿಡ್ ವಾರ್ನರ್ ಅರಸಿ ಬಂದ ಅದೃಷ್ಟ! ದೆಹಲಿ ಕ್ಯಾಪಿಟಲ್ಸ್ ತಂಡದಲ್ಲಿ ಮಹತ್ವದ ಬದಲಾವಣೆ

author img

By

Published : Mar 16, 2023, 11:07 AM IST

ಐಪಿಎಲ್ 2023 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಮುನ್ನಡೆಸಲಿದ್ದಾರೆ.

David Warner to lead Delhi Capitals in IPL 2023
David Warner to lead Delhi Capitals in IPL 2023

ನವದೆಹಲಿ: ಸುದೀರ್ಘ ವಿಶ್ರಾಂತಿಯಲ್ಲಿರುವ ವಿಕೆಟ್​ ಕೀಪರ್ ರಿಷಬ್ ಪಂತ್ ಅವರ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆವೃತ್ತಿಯಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಪಂತ್, ಸದ್ಯಕ್ಕೆ ಕ್ರೀಡಾಂಗಣಕ್ಕೆ ಇಳಿಯುವುದು ಅನುಮಾನ. ಅಲ್ಲದೇ ವೈದ್ಯರು ಅವರಿಗೆ ಸುದೀರ್ಘ ವಿಶ್ರಾಂತಿ ಬೇಕಿದೆ ಎಂದಿದ್ದಾರೆ. ಹಾಗಾಗಿ ಅವರ ಜಾಗ ತುಂಬಲು ಮುಂದಾಗಿರುವ ದೆಹಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಡೇವಿಡ್ ವಾರ್ನರ್ ಅವರನ್ನು ನಾಯಕನನ್ನಾಗಿ ಮಾಡಿದೆ.

"ತಂಡ ಮುನ್ನಡೆಸಲು ಆಸೀಸ್ ತಾರೆ ಡೇವಿಡ್ ವಾರ್ನರ್ ಅತ್ಯುತ್ತಮ ವ್ಯಕ್ತಿ" ಎಂದು ಮುಖ್ಯ ಕೋಚ್ ರಿಕಿ ಪಾಂಟಿಂಗ್ ಮತ್ತು ತಂಡದ ಆಡಳಿತ ಮಂಡಳಿ ಸಹಮತ ಸೂಚಿಸಿದ್ದಾರೆ. "ಗಾಯದಿಂದ ಚೇತರಿಸುತ್ತಿರುವ ಪಂತ್‌ ಐಪಿಎಲ್‌ 2023 ಟೂರ್ನಿಯಿಂದ ಸಂಪೂರ್ಣ ಹೊರಗುಳಿಯಲಿದ್ದಾರೆ. ಅನಿವಾರ್ಯವಾಗಿ ತಂಡ ಹಂಗಾಮಿ ನಾಯಕನನ್ನು ಎದುರು ನೋಡಬೇಕಾಯಿತು. 2022ರಲ್ಲಿ ಉಪನಾಯಕರಾಗಿ ಬಡ್ತಿ ಪಡೆದ ಅಕ್ಷರ್ ಪಟೇಲ್ ಈ ಬಾರಿಯೂ ತಂಡದ ಉಪನಾಯಕನಾಗಿ ಮುಂದುವರೆಯಲಿದ್ದಾರೆ" ಎಂದು ಆಡಳಿತ ಮಂಡಳಿ ಖಚಿತಪಡಿಸಿದೆ.

ಡೇವಿಡ್ ವಾರ್ನರ್ ದೆಹಲಿ ಕ್ಯಾಪಿಟಲ್ಸ್ ತಂಡ ಮುನ್ನಡೆಸುತ್ತಿರುವುದು ಇದು ಎರಡನೇ ಬಾರಿ. 2009 ಮತ್ತು 2013ರ ಅವಧಿಯಲ್ಲಿ ಒಂದೆರಡು ಪಂದ್ಯಗಳಲ್ಲಿ ನಾಯಕರಾಗಿದ್ದರು. 2014ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಸೇರಿಕೊಂಡಿದ್ದ ವಾರ್ನರ್, 2016ರಲ್ಲಿ ತಂಡಕ್ಕೆ ಚೊಚ್ಚಲ ಪ್ರಶಸ್ತಿ ಕೊಡುಗೆ ನೀಡಿದ್ದರು. ನಾಯಕರಾಗಿ ಒಟ್ಟು 69 ಪಂದ್ಯಗಳನ್ನು ಆಡಿರುವ ಇವರು, 35 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವುದು ಗಮನಾರ್ಹ. 32 ಪಂದ್ಯಗಳಲ್ಲಿ ಸೋತಿದ್ದು, ಎರಡು ಪಂದ್ಯಗಳನ್ನು ಟೈ ಮಾಡಿಕೊಂಡಿದ್ದಾರೆ.

ನಾಯಕತ್ವದ ಜವಾಬ್ದಾರಿ ಹೊತ್ತ ಅವಧಿಯಲ್ಲಿ ವಾರ್ನರ್, ಒಂದು ಶತಕ ಮತ್ತು 26 ಅರ್ಧಶತಕ ಸಿಡಿಸಿದ್ದಾರೆ. 47.33ರ ಸರಾಸರಿಯಲ್ಲಿ 142.28ರ ಸ್ಟ್ರೈಕ್ ರೇಟ್‌ ಹೊಂದಿರುವ ಅವರು 2,840 ರನ್‌ಗಳನ್ನು ಗಳಿಸಿದ್ದಾರೆ. ಆದರೆ, 2021ರ ಇಂಡಿಯನ್ ಪ್ರೀಮಿಯರ್ ಲೀಗ್​ನ ಮೊದಲಾರ್ಧದಲ್ಲಿ ಕಳಪೆ ಪ್ರದರ್ಶನದಿಂದ ಅವರನ್ನು ಬೆಂಚ್​ ಕಾಯಿಸಲಾಯಿತು. ಅವರ ಬದಲಿಗೆ ನ್ಯೂಜಿಲೆಂಡ್ ಕ್ರಿಕೆಟಿಗ ಕೇನ್ ವಿಲಿಯಮ್ಸನ್‌ರನ್ನು ನಾಯಕನನ್ನಾಗಿ ನೇಮಿಸಲು ಒತ್ತಾಯ ಕೇಳಿ ಬಂದಿತ್ತು. ತಿಕ್ಕಾಟ ಮತ್ತು ಜಟಾಪಟಿ ಬಳಿಕ ಸನ್‌ರೈಸರ್ಸ್‌ ಹೈದರಾಬಾದ್​ ತಂಡದಿಂದ 2022ರ ಮೆಗಾ ಹರಾಜಿಗೆ ಮುಂಚಿತವಾಗಿ ಅವರನ್ನು ಕೈಬಿಡಲಾಯಿತು. ಇದನ್ನು ಕಾದು ಕುಳಿತಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ಫ್ರಾಂಚೈಸಿ ಅವರನ್ನು ಬರಮಾಡಿಕೊಂಡಿದ್ದರು.

ಸನ್‌ರೈಸರ್ಸ್‌ ತಂಡದಿಂದ ಬಿಡುಗಡೆ ಆಗಿದ್ದ ಡೇವಿಡ್‌ ವಾರ್ನರ್‌ರನ್ನು ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಮೆಗಾ ಹರಾಜಿನಲ್ಲಿ 6.25 ಕೋಟಿ ರೂ.ಗಳ ದೊಡ್ಡ ಬೆಲೆ ನೀಡಿ ಖರೀದಿ ಮಾಡಿತ್ತು. ಇದರ ಲಾಭ ಪಡೆದ ಅವರು, ಆವೃತ್ತಿಯಲ್ಲಿ ಐದು ಅರ್ಧಶತಕಗಳನ್ನು ಬಾರಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಮತ್ತೆ ಸಾಬೀತುಪಡಿಸಿದ್ದರು. 150.52 ಸ್ಟ್ರೈಕ್ ರೇಟ್‌ನೊಂದಿಗೆ 48 ರ ಸರಾಸರಿಯಲ್ಲಿ 432 ರನ್‌ ಬಾರಿಸಿ ಭರ್ಜರಿ ಪ್ರದರ್ಶನ ನೀಡಿದ್ದರು. ಈಗ ಮತ್ತೆ ನಾಯಕತ್ವ ಸ್ಥಾನಕ್ಕೆ ಬಡ್ತಿ ಪಡೆದಿದ್ದು, ಮತ್ತಷ್ಟು ಭರ್ಜರಿ ಪ್ರದರ್ಶನ ನೀಡುವ ಸಾಧ್ಯತೆ ಇದೆ.

ಇದನ್ನೂ ಓದಿ: ಈಜುಕೊಳದಲ್ಲಿ ಊರುಗೋಲಿನ ಸಹಾಯದಲ್ಲಿ ನಡೆದಾಡಿದ ರಿಷಬ್ ಪಂತ್- ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.