ETV Bharat / sports

ಮಹಿಳಾ ಕ್ರಿಕೆಟ್‌ ಟೆಸ್ಟ್‌: 2ನೇ ದಿನದಾಟ ಅಂತ್ಯ, 478 ರನ್‌​ ಮುನ್ನಡೆ ಸಾಧಿಸಿದ ಭಾರತ

author img

By ETV Bharat Karnataka Team

Published : Dec 15, 2023, 6:09 PM IST

India Women vs England Women Test Day 2
India Women vs England Women Test Day 2

INDW vs ENGW cricket Test, Day 2: ಇಂಗ್ಲೆಂಡ್​ ವಿರುದ್ಧದ ಏಕೈಕ ಟೆಸ್ಟ್​ಪಂದ್ಯದ ಎರಡನೇ ದಿನದಂತ್ಯಕ್ಕೆ ಭಾರತ 478 ರನ್‌ಗಳ​ ಮುನ್ನಡೆ ಸಾಧಿಸಿದೆ.

ಮುಂಬೈ(ಮಹಾರಾಷ್ಟ್ರ): ಟಿ20 ಸರಣಿ ಗೆದ್ದು ಬೀಗಿದ್ದ ಇಂಗ್ಲೆಂಡ್​ ತಂಡಕ್ಕೆ ಟೆಸ್ಟ್​ನಲ್ಲಿ ಭಾರತೀಯ ವನಿತೆಯರು ಕಠಿಣ ಸವಾಲಾಗಿದ್ದಾರೆ. 9 ವರ್ಷಗಳ ನಂತರ ತವರಿನಲ್ಲಿ ಟೆಸ್ಟ್​ ಆಡುತ್ತಿದ್ದರೂ ತಂಡ ಉತ್ತಮ ಲಯದಲ್ಲಿದೆ. ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಕೈಕ ಟೆಸ್ಟ್​ನ ಎರಡನೇ ದಿನದ ಮುಕ್ತಾಯಕ್ಕೆ ಭಾರತ 478 ರನ್​ಗಳ ಮುನ್ನಡೆ ಗಳಿಸಿತು.

ಟಾಸ್​ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಭಾರತ ಮೊದಲ ಇನ್ನಿಂಗ್ಸ್​ನಲ್ಲಿ 428 ರನ್​ ಪೇರಿಸಿತು. ನಂತರ ಮೈದಾನಕ್ಕಿಳಿದ ಇಂಗ್ಲೆಂಡ್ ತಂಡವನ್ನು 136 ರನ್‌ಗಳಿಗೆ ಭಾರತೀಯ ಬೌಲರ್​ಗಳು ಕಟ್ಟಿ ಹಾಕಿದರು. ಇದರಿಂದಾಗಿ 292 ರನ್​​ಗಳ ಮುನ್ನಡೆಯೊಂದಿಗೆ ಭಾರತ ಎರಡನೇ ಇನ್ನಿಂಗ್ಸ್ ಆರಂಭಿಸಿತು.

ಇಂದು 42 ಓವರ್​ ಆಡಿದ ಭಾರತ 6 ವಿಕೆಟ್​ ಕಳೆದುಕೊಂಡು 186 ರನ್​ ಗಳಿಸಿದೆ. ಇದರೊಂದಿಗೆ 478 ರನ್​ಗಳ ಮುನ್ನಡೆಯಲ್ಲಿದೆ. ಇನ್ನೂ ಎರಡು ದಿನದ ಆಟ ಬಾಕಿ ಇದ್ದು, 500ಕ್ಕೂ ಹೆಚ್ಚಿನ ಗುರಿ ನೀಡುವ ನಿರೀಕ್ಷೆ ಇದೆ.

ಉತ್ತಮ ಆರಂಭ: ಎರಡನೇ ಇನ್ನಿಂಗ್ಸ್‌ನಲ್ಲಿ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಉತ್ತಮ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್​ಗೆ ಅರ್ಧಶತಕದ (61) ಪಾಲುದಾರಿಕೆ ಹಂಚಿಕೊಂಡಿತು. ಉಪನಾಯಕಿ ಸ್ಮೃತಿ ಮಂಧಾನ (26) ಎರಡನೇ ಇನ್ನಿಂಗ್ಸ್​ನಲ್ಲೂ ದೊಡ್ಡ ಮೊತ್ತವನ್ನು ಕಲೆಹಾಕುವಲ್ಲಿ ಎಡವಿದರು. ಮಂಧಾನ ಬೆನ್ನಲ್ಲೇ ಶಫಾಲಿ ವರ್ಮಾ (33) ಸಹ ವಿಕೆಟ್​ ಕೊಟ್ಟರು. ಮೊದಲ ಇನ್ನಿಂಗ್ಸ್​ನಲ್ಲಿ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್​ ಮಾಡಿ ಅರ್ಧಶತಕ ಗಳಿಸಿದ್ದ ಯಾಸ್ತಿಕಾ ಭಾಟಿಯಾ ಬಡ್ತಿ ಪಡೆದು ಮೂರನೇ ಕ್ರಮಾಂಕದಲ್ಲಿ ಬಂದು ಕೇವಲ 9 ರನ್​ ಗಳಿಸಿ ಔಟಾದರು.

ನಾಯಕಿ ಕೌರ್​ ಬಲ: 3 ವಿಕೆಟ್​ ಕಳೆದುಕೊಂಡ ಭಾರತಕ್ಕೆ ನಾಯಕಿ ಕೌರ್​ ಆಸರೆಯಾದರು. ಜೆಮಿಮಾ ರಾಡ್ರಿಗಸ್ ಮತ್ತು ದೀಪ್ತಿ ಶರ್ಮಾ ಜೊತೆ ಹರ್ಮನ್‌ಪ್ರೀತ್ ಕೌರ್ ನಿಧಾನಗತಿಯಲ್ಲಿ ಬ್ಯಾಟಿಂಗ್​ ಮಾಡಿ ಪಾಲುದಾರಿಕೆ ಹಂಚಿಕೊಂಡರು. ಬಿರುಸಿನ ಇನ್ನಿಂಗ್ಸ್​ ಕಟ್ಟುತ್ತಿದ್ದ ಜೆಮಿಮಾ ರಾಡ್ರಿಗಸ್ 29 ಬಾಲ್​ನಲ್ಲಿ 5 ಬೌಂಡರಿಸಹಿತ 27 ರನ್​ ಗಳಿಸಿ ವಿಕೆಟ್​ ಕೊಟ್ಟರೆ, ಬೌಲಿಂಗ್​ನಲ್ಲಿ ಕಮಾಲ್ ಮಾಡಿದ ದೀಪ್ತಿ 18 ಬಾಲ್​ನಲ್ಲಿ 20 ರನ್​ ಗಳಿಸಿ ಔಟಾದರು. ನಂತರ ಬಂದ ಸ್ನೇಹ ರಾಣಾ ಶೂನ್ಯಕ್ಕೆ ವಿಕೆಟ್​ ಕೊಟ್ಟರು. ದಿನದ ಕೊನೆಯ ಓವರ್​ಗಳಲ್ಲಿ ಹರ್ಮನ್‌ಪ್ರೀತ್ ಕೌರ್ ಜೊತೆಗೆ ಪೂಜಾ ವಸ್ತ್ರಾಕರ್ ಅರ್ಧಶತಕದ ಇನ್ನಿಂಗ್ಸ್​ ಹಂಚಿಕೊಂಡರು. 44 ರನ್​ ಗಳಿಸಿ ಕೌರ್ ಮತ್ತು 17 ರನ್​ನಿಂದ ಪೂಜಾ ವಸ್ತ್ರಾಕರ್ ದಿನದಾಟದ ಅಂತ್ಯದ ವೇಳೆಗೆ ಅಜೇಯವಾಗುಳಿದರು.

ಟೀಮ್​ ಇಂಡಿಯಾವನ್ನು ಕಾಡಿದ ಡೀನ್: ಭಾರತಕ್ಕೆ ಬೌಲಿಂಗ್​ ವೇಳೆ ಸ್ಪಿನ್ನರ್​ಗೆ ಪಿಚ್​ ಸಹಕರಿಸಿದಂತೆ ಇಂಗ್ಲೆಂಡ್​ಗೂ ಸಹಕಾರಿಯಾಯಿತು. ಆಂಗ್ಲರ ಷಾರ್ಲೆಟ್ ಡೀನ್ ಮತ್ತು ಸೋಫಿ ಎಕ್ಲೆಸ್ಟೋನ್ ಕಠಿಣ ಸವಾಲಾಗಿದ್ದಲ್ಲದೇ ವಿಕೆಟ್​ ಪಡೆದರು. ಷಾರ್ಲೆಟ್ ಡೀನ್ ಭಾರತದ ಪ್ರಮುಖ ನಾಲ್ವರನ್ನು ಪೆವಿಲಿಯನ್‌ಗೆ ಕಳಿಸಿದರೆ, ಸೋಫಿ ಎಕ್ಲೆಸ್ಟೋನ್ 2 ವಿಕೆಟ್​ ಪಡೆದರು.

ಇದನ್ನೂ ಓದಿ: ಮಹಿಳಾ ಕ್ರಿಕೆಟ್‌ ಟೆಸ್ಟ್‌: ದೀಪ್ತಿಗೆ 'ಪಂಚ'ಕಜ್ಜಾಯ​; ಇಂಗ್ಲೆಂಡ್‌ ವಿರುದ್ಧ ಭಾರತಕ್ಕೆ ಭಾರಿ ಮುನ್ನಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.