ETV Bharat / sports

IBSA World Games: ಆಸ್ಟ್ರೇಲಿಯಾ ಮಣಿಸಿ ಚಿನ್ನ ಗೆದ್ದ ಭಾರತೀಯ ಮಹಿಳಾ ಅಂಧರ ಕ್ರಿಕೆಟ್ ತಂಡ

author img

By ETV Bharat Karnataka Team

Published : Aug 26, 2023, 8:45 PM IST

Updated : Aug 26, 2023, 9:12 PM IST

ಅಂತಾರಾಷ್ಟ್ರೀಯ ಅಂಧರ ಕ್ರೀಡಾ ಫೆಡರೇಶನ್ ವಿಶ್ವ ಕ್ರೀಡಾಕೂಟದಲ್ಲಿ ಭಾರತೀಯ ಮಹಿಳಾ ಅಂಧರ ಕ್ರಿಕೆಟ್ ತಂಡ ಆಸ್ಟ್ರೇಲಿಯಾವನ್ನು ಮಣಿಸಿ ಚಿನ್ನ ಗೆದ್ದಿದೆ.

ಮಹಿಳಾ ಅಂಧರ ಕ್ರಿಕೆಟ್ ತಂಡ
ಮಹಿಳಾ ಅಂಧರ ಕ್ರಿಕೆಟ್ ತಂಡ

ಬರ್ಮಿಂಗ್​ಹ್ಯಾಮ್​:​ ಭಾರತೀಯ ಮಹಿಳಾ ಅಂಧರ ಕ್ರಿಕೆಟ್ ತಂಡ ಅಂತಾರಾಷ್ಟ್ರೀಯ ಅಂಧರ ಕ್ರೀಡಾ ಫೆಡರೇಶನ್​ (ಐಬಿಎಸ್‌ಎ) ವಿಶ್ವ ಕ್ರೀಡಾಕೂಟದಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ. ಬರ್ಮಿಂಗ್​ಹ್ಯಾಮ್​ನಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಆಸೀಸ್​ ಟೀಂಅನ್ನು 9 ವಿಕೆಟ್​ಗಳಿಂದ ಸೋಲಿಸಿ ಭಾರತದ ನಾರಿಯರು ಇತಿಹಾಸ ಬರೆದಿದ್ದಾರೆ.

ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ ಕಾಂಗರೂ ಪಡೆ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 114ರನ್​ ಕಲೆ ಹಾಕಿತು. ಎರಡನೇ ಇನ್ನಿಂಗ್ಸ್​ ವೇಳೆ ಮಳೆ ಬಂದ ಕಾರಣ ಪಂದ್ಯವನ್ನ ಡಿಎಲ್​ಎಸ್​ ನಿಯಮದಂತೆ 9 ಓವರ್​ಗಳಿಗೆ ಇಳಿಸಿ ಭಾರತಕ್ಕೆ 43 ರನ್​ಗಳ ಗುರಿ ನೀಡಲಾಯಿತು. ಈ ಗುರಿಯನ್ನ ಬೆನ್ನತ್ತಿದ ಭಾರತ ತಂಡದ ನಾರಿಯರು ಕೇವಲ 3.3 ಓವರ್​ಗಳಲ್ಲಿ 1 ವಿಕೆಟ್​ ನಷ್ಟಕ್ಕೆ 43 ರನ್​ ಕಲೆ ಹಾಕಿ ಗೆಲುವಿನ ನಗೆ ಬೀರಿದರು. ಈ ಮೂಲಕ ಮೊದಲ ಬಾರಿಗೆ ಐಬಿಎಸ್‌ಎ ವಿಶ್ವ ಕ್ರೀಡಾಕೂಟದಲ್ಲಿ ಭಾರತದ ಮಹಿಳೆಯರು ಚಿನ್ನಗೆದ್ದು ದಾಖಲೆ ನಿರ್ಮಿಸಿದರು.

  • History made at @Edgbaston! India are our first ever cricket winners at the IBSA World Games!

    Australia VI Women 114/8
    India VI Women 43/1 (3.3/9)

    India VI Women win by 9 wickets.

    📸 Will Cheshire pic.twitter.com/1Iqx1N1OCW

    — IBSA World Games 2023 (@IBSAGames2023) August 26, 2023 " class="align-text-top noRightClick twitterSection" data=" ">

ಇದಕ್ಕೂ ಮೊದಲು ಆಗಸ್ಟ್​ 20ರಂದು ನಡೆದ ಪಂದ್ಯದಲ್ಲೂ ಆಸ್ಟ್ರೇಲಿಯಾ ವಿರುದ್ಧ ಭಾರತೀಯ ಮಹಿಳಾ ತಂಡವು 8 ವಿಕೆಟ್‌ಗಳ ಗೆಲವು ಸಾಧಿಸಿದ್ದರು. ಆ ಮೂಲಕ ವರ್ಲ್ಡ್​ ಗೇಮ್ಸ್​ ಅಭಿಯಾನವನ್ನು ಭಾರತ ಪ್ರಭಾವಶಾಲಿ ರೀತಿಯಲ್ಲಿ ಪ್ರಾರಂಭಿಸಿತು.

ನಂತರ ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲೂ ಭಾರತದ ನಾರಿಯರು ಬಿರುಸಿನ ಪ್ರದರ್ಶನವನ್ನು ತೋರಿದ್ದರು. ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್​ ಕಳೆದುಕೊಂಡು 268ರನ್​ಗಳ ಕಲೆ ಹಾಕಿದ್ದರು. ಭಾರತದ ಪರ ಗಂಗವ್ವ ಎಚ್. 60 ಎಸೆತಗಳಲ್ಲಿ 117 ರನ್ ಗಳಿಸಿ ತಂಡ ಗೆಲವಿಗೆ ಪ್ರಮುಖ ಪಾತ್ರವಹಿಸಿದ್ದರು. ಈ ಅಸಾಧಾರಣ ಗುರಿಯನ್ನು ಬೆನ್ನಟ್ಟಿದ್ದ ಇಂಗ್ಲೆಂಡ್ 185 ರನ್‌ ಗಳಿಸಿ ಭಾರತದ ಎದುರು ಸೋಲೊಪ್ಪಿಕೊಂಡಿತ್ತು.

ಮತ್ತೊಂದೆಡೆ ಭಾರತದ ಪುರುಷರ ಅಂಧರ ಕ್ರಿಕೆಟ್​ ತಂಡವು IBSA ವಿಶ್ವ ಕ್ರೀಡಾಕೂಟದಲ್ಲಿ ಫೈನಲ್​ ತಲುಪಿದೆ. ಅಂತಿಮ ಪಂದ್ಯದಲ್ಲಿ ಭಾರತವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದೊಂದಿಗೆ ಸೆಣಸಲಿದೆ. ಕಳೆದ ವಾರ ಎರಡು ತಂಡಗಳು ತಮ್ಮ ವರ್ಲ್ಡ್​ ಗೇಮ್ಸ್​ ಟೂರ್ನಿಯನ್ನು ಆರಂಭಿಸಿದ್ದವು. ಈ ಪಂದ್ಯದಲ್ಲಿ ಪಾಕಿಸ್ತಾನವು ಭಾರತವನ್ನು 18 ರನ್‌ಗಳಿಂದ ಮಣಿಸಿತ್ತು.

ಇದೀಗ ಉಭಯ ತಂಡಗಳು ಎರಡನೇ ಬಾರಿಗೆ ಟೂರ್ನಿಯಲ್ಲಿ ಮುಖಾಮುಖಿ ಆಗಿರುವುದರಿಂದ ಚಿನ್ನದ ಮೇಲೆ ಕಣ್ಣಿಟ್ಟಿರುವ ಭಾರತವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೇಡು ತೀರಿಸಿಕೊಳ್ಳಲು ನೋಡುತ್ತಿದೆ.

ಇದನ್ನೂ ಓದಿ: Maharaja Trophy: ಮಂಗಳೂರು ವಿರುದ್ಧ ಹುಬ್ಬಳ್ಳಿಗೆ 5 ವಿಕೆಟ್‌ಗಳ ಗೆಲುವು.. ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಪಾಡಿಕೊಂಡ ಟೈಗರ್ಸ್

Last Updated :Aug 26, 2023, 9:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.