ETV Bharat / sports

ETV Bharat Exclusive:ರೋಹಿತ್​ ಪಡೆ ದಶಕದ ಟ್ರೋಫಿ ಬರ ನೀಗಿಸುತ್ತದೆ: ಲಾಲ್‌ಚಂದ್ ರಜಪೂತ್ ವಿಶ್ವಾಸ

author img

By ETV Bharat Karnataka Team

Published : Sep 30, 2023, 4:24 PM IST

Lalchand Rajput
ಲಾಲ್‌ಚಂದ್ ರಜಪೂತ್

Cricket World Cup 2023: ಏಷ್ಯಾಕಪ್​ ಮತ್ತು ಆಸ್ಟ್ರೇಲಿಯಾ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಭಾರತ ತಂಡ ವಿಶ್ವಕಪ್​ ಗೆಲ್ಲಲಿದೆ ಎಂದು ಭಾರತದ ಮಾಜಿ ಆಟಗಾರ ಮತ್ತು ಕ್ರಿಕೆಟ್ ಮ್ಯಾನೇಜರ್ ಲಾಲ್‌ಚಂದ್ ರಜಪೂತ್ ಈಟಿವಿ ಭಾರತಕ್ಕೆ ನೀಡಿದ ಸಂದರ್ಶನದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹೈದರಾಬಾದ್: ವಿಶ್ವಕಪ್​ಗೂ ಮುನ್ನ ಭಾರತ ತಂಡ ಏಷ್ಯಾಕಪ್​ ಗೆದ್ದು ತನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. 5 ವರ್ಷದ ನಂತರ ಎಸಿಸಿ ಆಯೋಜಿಸಿದ ಟ್ರೋಫಿಯನ್ನು ವಶ ಪಡಿಸಿಕೊಂಡಿದೆ. 8 ಐಸಿಸಿ ಟ್ರೋಫಿಗಳಿಂದ ಕಳೆದ 10 ವರ್ಷಗಳಿಂದ ಭಾರತ ವಂಚಿತವಾಗಿದೆ. ಆದರೆ, ಈ ಬಾರಿ ಏಕದಿನ ಕ್ರಕೆಟ್​ ವಿಶ್ವಕಪ್​ ಭಾರತದಲ್ಲೇ ನಡೆಯುತ್ತಿದ್ದು, ದಶಕದ ಐಸಿಸಿ ಟ್ರೋಫಿ ಬರವನ್ನು ನೀಗಿಸುವ ಭರವಸೆ ತಂಡದಲ್ಲಿ ಮೂಡುತ್ತಿದೆ. ಇದೇ ಆಧಾರದಲ್ಲಿ ಭಾರತದ ಮಾಜಿ ಆಟಗಾರ ಮತ್ತು ಕ್ರಿಕೆಟ್ ಮ್ಯಾನೇಜರ್ ಲಾಲ್‌ಚಂದ್ ರಜಪೂತ್ ರೋಹಿತ್​ ಶರ್ಮಾ ನಾಯಕತ್ವದ ತಂಡ ವಿಶ್ವಕಪ್​ ಅನ್ನು ಗೆಲ್ಲುತ್ತದೆ ಮತ್ತು ಗೆಲ್ಲಲೇ ಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

2007ರಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಭಾರತ ಚೊಚ್ಚಲ ಟಿ-20 ವಿಶ್ವಕಪ್ ಗೆದ್ದಾಗ ಕ್ರಿಕೆಟ್ ಮ್ಯಾನೇಜರ್ ಆಗಿದ್ದ ಲಾಲ್‌ಚಂದ್ ರಜಪೂತ್ ಈಟಿವಿ ಭಾರತದ ಜೊತೆಗೆ ಮಾತನಾಡಿದ್ದು,"ಭಾರತವು ಮೂರು ವೇಗಿಗಳನ್ನು ಒಳಗೊಂಡು ಆಡುವುದನ್ನು ನೋಡಲು ಸಂತೋಷವಾಗುತ್ತದೆ. ಮೊಹಮ್ಮದ್ ಶಮಿ ಜೊತೆಗೆ ಮೊಹಮ್ಮದ್ ಸಿರಾಜ್ ಮತ್ತು ಜಸ್ಪ್ರೀತ್ ಬುಮ್ರಾ ಅವರನ್ನು ನೋಡಲು ನಾನು ಇಷ್ಟಪಡುತ್ತೇನೆ. ಟೀಮ್​ ಮ್ಯಾನೇಜ್​ಮೆಂಟ್​ ಎಂಟನೇ ಆಟಗಾರನ ವರೆಗೆ ಬ್ಯಾಟಿಂಗ್​ ನಿರೀಕ್ಷಿಸುತ್ತಿದೆ. ಆದರೆ, ಹಾರ್ದಿಕ್​ ಪಾಂಡ್ಯ ಮತ್ತು ರಚವೀಂದ್ರ ಜಡೇಜಾ ಉತ್ತಮವಾಗಿ ಬ್ಯಾಟಿಂಗ್​ ಮಾಡುವಾಗ 7ನೇ ಆಟಗಾರನ ತನಕ ಬ್ಯಾಟಿಂಗ್​ ಬಲ ಇರುತ್ತದೆ. ಕೇವಲ ಇಬ್ಬರು ಪ್ರಮುಖ ವೇಗಿಗಳಿಗೆ ಮಣೆ ಹಾಕಿದರೆ ಆಡುತ್ತಿದ್ದರೆ, ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಎಂಟನೇ ಕ್ರಮಾಂಕದಲ್ಲಿ ಆಡುತ್ತಾರೆ" ಎಂದಿದ್ದಾರೆ.

ಭಾರತ ಏಕದಿನ ಪಂದ್ಯಗಳ ಆಟಗಳನ್ನು ಗಮನಿಸಿದ ಲಾಲ್‌ಚಂದ್ ಅವರು ಭಾರತ ವಿಶ್ವಕಪ್​ ಗೆಲ್ಲಲೇ ಬೇಕು ಎಂದು ಹೇಳಿದ್ದಾರೆ. "ಭಾರತವು 2023ರ ವಿಶ್ವಕಪ್ ಅನ್ನು ಗೆಲ್ಲಬೇಕು ಎಂದು ನಾನು ಭಾವಿಸುತ್ತೇನೆ, ಅವರು ಇತ್ತೀಚೆಗೆ ಪ್ರದರ್ಶಿಸಿದ ರೀತಿ, ವಿಶೇಷವಾಗಿ ಏಷ್ಯಾಕಪ್ ಫೈನಲ್‌ನಲ್ಲಿ ಅವರು ಅದನ್ನು ಗೆದ್ದ ರೀತಿ. ಅಲ್ಲದೇ, ತಂಡವು ಈಗ ವಿಶ್ವಕಪ್ ಗೆಲ್ಲುವ ಹಸಿವಿನಲ್ಲಿರುವ ತಂಡದಂತೆ ಕಾಣುತ್ತದೆ," ಎಂದಿದ್ದಾರೆ.

ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್​ ಫೈನಲ್ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಅವರ ಮಾರಕ ಬೌಲಿಂಗ್ (6/21)​ ದಾಳಿಯಿಂದ ಭಾರತ ತಂಡ ಎದುರಾಳಿ ಲಂಕಾವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿತು. ಮತ್ತೆ ಭಾರತ ವಿಕೆಟ್​ ನಷ್ಟವಿಲ್ಲದೇ ಪಂದ್ಯವನ್ನು ಸುಲಭವಾಗಿ ಗೆದ್ದು ಬೀಗಿತು. ಇದಾದ ಬೆನ್ನಲ್ಲೇ ತವರು ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ವಿರಾಟ್​ ಕೊಹ್ಲಿ ಮತ್ತು ರೋಹಿತ್​ ಶರ್ಮಾ ರಹಿತವಾಗಿಯೇ ಭಾರತ ಸರಣಿ ವಶ ಪಡಿಸಿಕೊಂಡಿತ್ತು.

ಗಿಲ್​​ ಮೇಲೆ ನಿರೀಕ್ಷೆ: ತಂಡ ಯುವ ಸ್ಟಾರ್​ ಆಟಗಾರ ಶುಭಮನ್​ ಗಿಲ್​ ಬಗ್ಗೆ ಮಾತನಾಡಿದ ಅವರು "ಗಿಲ್ ಪ್ರಚಂಡ ಫಾರ್ಮ್‌ನಲ್ಲಿದ್ದಾರೆ, ಏಷ್ಯಾಕಪ್‌ನಲ್ಲಿ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಶತಕ ದಾಖಲಿಸಿದರು, ನಾಯಕ ರೋಹಿತ್ ಶರ್ಮಾ ಎಂದಿನಂತೆ ತಮ್ಮ ಫಾರ್ಮ್​ನಲ್ಲಿದ್ದಾರೆ. ಆಸ್ಟ್ರೇಲಿನಯಾ ವಿರುದ್ಧ ಶ್ರೇಯಸ್ ಅಯ್ಯರ್ ನಿಜವಾಗಿಯೂ ಉತ್ತಮವಾಗಿ ಬ್ಯಾಟಿಂಗ್ ಮಾಡಿ ಶತಕ ಗಳಿಸಿದರು. ಭಾರತಕ್ಕಾಗಿ ವಿಶ್ವಕಪ್‌ನಲ್ಲಿ ಶುಭಮನ್ ಗಿಲ್ ಅವರಿಂದ ನಾನು ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದೇನೆ" ಎಂದು ಹೇಳಿದ್ದಾರೆ.

ಬ್ಯಾಟಿಂಗ್​ ಫಾರ್ಮ್​ ಕಂಡುಕೊಳ್ಳಬೇಕಿದೆ ಜಡೇಜಾ: ರವೀಂದ್ರ ಜಡೇಜಾ ಅವರ ಬ್ಯಾಟಿಂಗ್ ಫಾರ್ಮ್ ಬಗ್ಗೆ ಕೇಳಿದಾಗ, ವಿಶೇಷವಾಗಿ ಏಕದಿನ ಪಂದ್ಯಗಳಲ್ಲಿ,"ಅವರ ಫಾರ್ಮ್ ಬಗ್ಗೆ ನಾನು ಚಿಂತಿಸುವುದಿಲ್ಲ. ಏಕೆಂದರೆ ಅವರು ಮ್ಯಾಚ್ ವಿನ್ನರ್ ಆಗಿದ್ದಾರೆ, ಅವರು ಬೌಲಿಂಗ್ ಆಲ್ ರೌಂಡರ್ ಮತ್ತು ಅವರು ಬ್ಯಾಟಿಂಗ್ ಸಹ ಮಾಡಬಹುದು. ಜಡೇಜಾ ಎಲ್ಲ ಮೂರು ಕೌಶಲ್ಯಗಳನ್ನು ಹೊಂದಿದ್ದಾರೆ. ಆದರೆ, ಹೌದು ಸಹಜವಾಗಿ ಅವರು ಇತ್ತೀಚೆಗೆ ಬ್ಯಾಟಿಂಗ್​ನಲ್ಲಿ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಲಿಲ್ಲ. ಪಂದ್ಯಗಳು ಮುಂದುವರೆದಂತೆ ಅವರು ಉತ್ತಮವಾಗಿ ಬರುತ್ತಾರೆ ಎಂದು ನನಗೆ ಖಾತ್ರಿಯಿದೆ." ಎಂದಿದ್ದಾರೆ.

ಎಲ್ಲ ಪಂದ್ಯಗಳನ್ನು ಏಕ ರೀತಿಯಾಗಿ ಕಾಣುವುದು ಮುಖ್ಯವಾಗುತ್ತದೆ ಎನ್ನುತ್ತಾರೆ ಲಾಲ್​ಚಂದ್​,"ನಾಕ್‌ಔಟ್ ಆಟಗಳ ವಿಷಯಕ್ಕೆ ಬಂದಾಗ ತಂಡಗಳು ಅತ್ಯುತ್ತಮವಾದ ಪ್ರದರ್ಶನ ನೀಡಬೇಕು. ನೀವು ಇದನ್ನು ಸೆಮಿಫೈನಲ್ ಅಥವಾ ಅಂತಿಮ ಎನ್‌ಕೌಂಟರ್ ಎಂದು ಯೋಚಿಸಬೇಕಾಗಿಲ್ಲ, ಇದು ಕೇವಲ ಇನ್ನೊಂದು ಆಟ ಎಂದು ಪರಿಗಣಿಸಿ. ಏಕೆಂದರೆ ನಾವು ಸೆಮಿಫೈನಲ್ ಎಂದು ಭಾವಿಸಲು ಪ್ರಾರಂಭಿಸುವ ಕ್ಷಣ ನಾವು ನಮ್ಮ ಮೇಲೆ ಒತ್ತಡವನ್ನು ಹಾಕುತ್ತೇವೆ, ಏಕೆಂದರೆ ಇದು ಸೆಮಿಫೈನಲ್ ಮತ್ತು ನಾವು ಗೆಲ್ಲಬೇಕು ಎಂದು ನೀವು ಭಾವಿಸಿದಾಗ, ಏನಾಗುತ್ತದೆ ಮತ್ತು ಇದೆಲ್ಲವೂ ಬರುತ್ತದೆ, ಅದರತ್ತ ಗಮನ ಹರಿಸಿದರೆ ಒತ್ತಡ ಹೆಚ್ಚಾಗುತ್ತದೆ. ಈ ಹಿಂದೆ ಆಡುತ್ತಾ ಬಂದಂತೆ ನಾಕ್​ಔಟ್​ ಪಂದ್ಯವನ್ನು ಇನ್ನೊಂದು ಆಟವಾಗಿ ತೆಗೆದುಕೊಳ್ಳಿ" ಎಂದು ಲಾಲ್‌ಚಂದ್ ರಜಪೂತ್ ಸಲಹೆ ನೀಡಿದ್ದಾರೆ.

ಏಷ್ಯಾಕಪ್​ ಸೂಪರ್​ 4ಹಂತದ ಕೊನೆಯ ಪಂದ್ಯದಲ್ಲಿ ಗಾಯಕ್ಕೆ ತುತ್ತಾದ ಅಕ್ಷರ್​ ಪಟೇಲ್​ ಬದಲಿಗೆ ವಿಶ್ವಕಪ್​ ತಂಡಕ್ಕೆ ಆರ್​. ಅಶ್ವಿನ್​ ಅವರನ್ನು ಆಯ್ಕೆ ಮಾಡಲಾಗಿದೆ. ವಿಶ್ವಕಪ್​ನ ಪಂದ್ಯಗಳು ಅಕ್ಟೋಬರ್​ 5 ರಿಂದ ಆರಂಭವಾಗಲಿದ್ದು, ಭಾರತ ತನ್ನ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಚೆನ್ನೈನ ಚೆಪಾಕ್​ ಕ್ರೀಡಾಂಗಣದಲ್ಲಿ ಅಕ್ಟೋಬರ್​ 8 ರಂದು ಆಡಲಿದೆ. ಇದಕ್ಕೂ ಮುನ್ನ ಭಾರತ ಇಂಗ್ಲೆಂಡ್​ ಮತ್ತು ನೆದರ್ಲೆಂಡ್ಸ್ ವಿರುದ್ಧ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ.

ಇದನ್ನೂ ಓದಿ: ರೋಹಿತ್ ಶರ್ಮಾ ನಿಷ್ಠಾವಂತ ನಾಯಕ.. ಆದರೆ, ಧೋನಿಗೆ ಎದುರಾಳಿ ಯೋಜನೆ ಅರಿಯುವ ಸಾಮರ್ಥ್ಯ ಇತ್ತು: ಚಂಚಲ್ ಭಟ್ಟಾಚಾರ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.