ETV Bharat / science-and-technology

ಯಾರಿಗೂ ಉಚಿತವಾಗಿರಲ್ಲ 'X'! ಮಸ್ಕ್ ಹೇಳಿದ್ದೇನು?

author img

By ETV Bharat Karnataka Team

Published : Sep 19, 2023, 12:39 PM IST

ಎಕ್ಸ್​ ಅಥವಾ ಈ ಹಿಂದಿನ ಟ್ವಿಟರ್​ ಇನ್ನು ಮುಂದೆ ಯಾರಿಗೂ ಉಚಿತವಾಗಿರುವುದಿಲ್ಲ ಎಂಬ ಸುಳಿವು ನೀಡಿದ್ದಾರೆ ಎಲೋನ್ ಮಸ್ಕ್.

x will soon charge user payment
x will soon charge user payment

ನವದೆಹಲಿ: ಇನ್ನು ಮುಂದೆ ಎಕ್ಸ್​ (ಟ್ವಿಟರ್) ಯಾರಿಗೂ ಉಚಿತವಾಗಿರುವುದಿಲ್ಲ. ಎಲ್ಲಾ ಎಕ್ಸ್​ ಬಳಕೆದಾರರಿಂದ ಮಾಸಿಕ ಸಣ್ಣ ಮೊತ್ತದ ಶುಲ್ಕ ಸಂಗ್ರಹಿಸಲು ಎಲೋನ್ ಮಸ್ಕ್ ಪ್ಲಾನ್ ಮಾಡುತ್ತಿದ್ದಾರೆ. ಲೈವ್ ಸ್ಟ್ರೀಮಿಂಗ್​ ಮೂಲಕ ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಸಂವಾದ ನಡೆಸಿದ ಮಸ್ಕ್, ಎಕ್ಸ್​ ಸಾಮಾಜಿಕ ಮಾಧ್ಯಮವು ಬಹಳ ದಿನಗಳ ಕಾಲ ಹೀಗೆಯೇ ಫ್ರೀ ಆಗಿರಲು ಸಾಧ್ಯವಿಲ್ಲ ಎಂದು ಹೇಳಿದರು. ಎಕ್ಸ್​ ಮಾಧ್ಯಮದಲ್ಲಿ ಬಾಟ್​ಗಳ ಹಾವಳಿಯನ್ನು ತಡೆಗಟ್ಟಲು ಹೆಚ್ಚಿನ ಆದಾಯದ ಅಗತ್ಯವಿದೆ ಎಂಬುದು ಮಸ್ಕ್ ಅವರ ಪ್ರತಿಪಾದನೆಯಾಗಿದೆ.

"ಬಾಟ್​​ಗಳ ವಿಶಾಲ ಸೈನ್ಯವನ್ನು ಎದುರಿಸಲು ನಾವು ಕೈಗೊಳ್ಳಬಹುದಾದ ಏಕೈಕ ಕ್ರಮ ಇದಾಗಿದೆ." ಎಂದು ಮಸ್ಕ್ ಸೋಮವಾರ ತಡರಾತ್ರಿ ಹೇಳಿದರು. "ಒಂದು ಬಾಟ್​ ತೆಗೆದುಹಾಕಲು ಒಂದು ಪೆನ್ನಿಯ ಒಂದು ಸಣ್ಣ ಭಾಗವನ್ನು ಖರ್ಚು ಮಾಡಬೇಕಾಗುತ್ತದೆ. ಅದು ಒಂದು ಪೆನ್ನಿಯ ಹತ್ತನೇ ಒಂದು ಭಾಗದಷ್ಟು ಸಣ್ಣದೇ ಇರಬಹುದು. ಆದರೆ ಇಂಥ ಬಾಟ್​ಗಳ ಸೈನ್ಯವನ್ನು ತಡೆಗಟ್ಟಲು ಅದೆಷ್ಟೋ ಡಾಲರ್​ಗಟ್ಟಲೆ ಖರ್ಚು ಮಾಡುವ ಪರಿಸ್ಥಿತಿ ಇರುವುದನ್ನು ನೋಡಿದರೆ ಬಾಟ್​ಗಳ ನಿರ್ವಹಣಾ ವೆಚ್ಚ ತೀರಾ ಅಧಿಕವಾಗಿದೆ ಎಂದು ನನಗನಿಸುತ್ತದೆ" ಎಂದು ಬಿಲಿಯನೇರ್ ಮಸ್ಕ್ ಹೇಳಿದರು.

ಎಕ್ಸ್ ನಲ್ಲಿ ಎಲ್ಲರಿಗೂ ಶುಲ್ಕ ವಿಧಿಸುವ ಆಲೋಚನೆ ಹೊಸದೇನಲ್ಲ. ಕಳೆದ ವರ್ಷವೇ ಮಸ್ಕ್ ಈ ಬಗ್ಗೆ ಮಾತನಾಡಿದ್ದರು. ಕಂಪನಿಯು ಪ್ರಸ್ತುತ ತನ್ನ ಎಕ್ಸ್ ಪ್ರೀಮಿಯಂ ಬಳಕೆದಾರರಿಗೆ ತಿಂಗಳಿಗೆ 8 ಡಾಲರ್ ಶುಲ್ಕ ವಿಧಿಸುತ್ತದೆ. ಪ್ರೀಮಿಯಂ ಬಳಕೆದಾರರು ತಮ್ಮ ಪೋಸ್ಟ್​ಗಳನ್ನು ಎಡಿಟ್ ಮಾಡಬಹುದು, ಸುದೀರ್ಘ ಪೋಸ್ಟ್​ಗಳನ್ನು ಬರೆಯಬಹುದು, ಅವರ ಟ್ವೀಟ್​​ಗಳು ಸರ್ಚ್​​ನಲ್ಲಿ ಆದ್ಯತೆಯ ಮೇರೆಗೆ ಕಾಣಿಸಿಕೊಳ್ಳುತ್ತವೆ ಮತ್ತು ಪ್ರೀಮಿಯಂ ಬಳಕೆದಾರರಿಗೆ ಜಾಹೀರಾತುಗಳು ಪದೇ ಪದೆ ಕಾಣಿಸಿಕೊಳ್ಳುವುದಿಲ್ಲ.

ಎಕ್ಸ್ ಈಗ 550 ಮಿಲಿಯನ್ ಮಾಸಿಕ ಬಳಕೆದಾರರನ್ನು ಹೊಂದಿದ್ದು, ಪ್ರತಿದಿನ 100-200 ಮಿಲಿಯನ್ ಪೋಸ್ಟ್​ಗಳನ್ನು ಸೃಷ್ಟಿಸುತ್ತಿದೆ ಎಂದು ಮಸ್ಕ್ ತಿಳಿಸಿದರು. ಪ್ರಸ್ತುತ ಎಷ್ಟು ಜನ ಪೇಡ್​ ಸಬ್​ಸ್ಕ್ರೈಬರ್ಸ್​ ಇದ್ದಾರೆ ಎಂಬುದನ್ನು ಮಾತ್ರ ಮಸ್ಕ್ ಬಹಿರಂಗಪಡಿಸಲಿಲ್ಲ. 2022 ರ ಮೊದಲ ತ್ರೈಮಾಸಿಕದಲ್ಲಿ ಕೊನೆಯ ಬಾರಿಗೆ ತನ್ನ ಗಳಿಕೆಯ ವರದಿ ಪ್ರಕಟಿಸಿದ್ದ ಟ್ವಿಟರ್​, ಆಗ 229 ಮಿಲಿಯನ್ ಎಂಡಿಎಯು (mDAUs -monetizable daily active user) ಬಳಕೆದಾರರು ತನ್ನ ಪ್ಲಾಟ್​ಫಾರ್ಮ್​ನಲ್ಲಿ ಇದ್ದಾರೆ ಎಂದು ಉಲ್ಲೇಖಿಸಿತ್ತು.

ಇದನ್ನೂ ಓದಿ : ಜೆಮಿನಿ; ಗೂಗಲ್​ನ ಹೊಸ ಎಐ ಚಾಟ್​ಬಾಟ್​.. ಏನೆಲ್ಲ ವೈಶಿಷ್ಟ್ಯತೆಗಳಿವೆ ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.