ETV Bharat / international

G20 Summit: ಜಿ20 ಶೃಂಗದಲ್ಲಿ ಭಾಗಿಯಾಗಲು ಭಾರತಕ್ಕೆ ಪ್ರಯಾಣಿಸಿದ ಅಮೆರಿಕ ಅಧ್ಯಕ್ಷ ಬೈಡನ್

author img

By PTI

Published : Sep 8, 2023, 8:19 AM IST

Updated : Sep 8, 2023, 8:25 AM IST

G20 Summit
ಜಿ20 ಶೃಂಗಸಭೆಯಲ್ಲಿ ಭಾಗಿಯಾಗಲು ಭಾರತಕ್ಕೆ ತೆರಳಿದ ಅಮೆರಿಕ ಅಧ್ಯಕ್ಷ ಜೋ ಬೈಡನ್

US President Joe Biden: ಭಾರತದ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿ ನಾಳೆಯಿಂದ ನಡೆಯಲಿರುವ ಮಹತ್ವದ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜೋ ಬೈಡನ್ ಭಾರತಕ್ಕೆ ಆಗಮಿಸುತ್ತಿದ್ದಾರೆ.

ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿ ನಾಳೆ ಮತ್ತು ನಾಡಿದ್ದು (ಸೆ.9.10) ನಡೆಯಲಿರುವ ಐತಿಹಾಸಿಕ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ವಿಮಾನವೇರಿದ್ದಾರೆ. ಈ ಪ್ರವಾಸಕ್ಕೂ ಮುನ್ನ ರೋಗ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಕೇಂದ್ರಗಳ (ಸಿಡಿಸಿ) ಕೋವಿಡ್​ 19 ಮಾರ್ಗಸೂಚಿಗಳನ್ನು ಅವರು ಅನುಸರಿಸಿದ್ದಾರೆ. ಪತ್ನಿ ಜಿಲ್ ಬೈಡನ್ ಕೂಡಾ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು. ಇಬ್ಬರ ಕೋವಿಡ್ ವರದಿ ನೆಗೆಟಿವ್​ ಬಂದಿದೆ ಎಂದು ಶ್ವೇತಭವನ ತಿಳಿಸಿದೆ.

ಬೈಡನ್​ ಭಾರತಕ್ಕೆ ಹೊರಡುವ ಒಂದು ಗಂಟೆಗೂ ಮೊದಲು ಮಾಹಿತಿ ನೀಡಿದ ಶ್ವೇತಭವನ, ''ಅಧ್ಯಕ್ಷರು ಕೋವಿಡ್‌ ಪರೀಕ್ಷೆ ಮಾಡಿಸಿದ್ದಾರೆ. ವರದಿ ನೆಗೆಟಿವ್​ ಬಂದಿದೆ. ಜಿಲ್ ಬೈಡನ್ ಅವರು ಡೆಲವೇರ್ ಮನೆಯಲ್ಲಿ ಕ್ವಾರಂಟೈನ್​ ಆಗಿದ್ದು, ಭಾರತ ಮತ್ತು ವಿಯೆಟ್ನಾಂಗೆ ಅಧ್ಯಕ್ಷರೊಂದಿಗೆ ಪ್ರಯಾಣಿಸುತ್ತಿಲ್ಲ'' ಎಂದು ಹೇಳಿದೆ.

ಬೈಡನ್ ಜೊತೆಗೆ ಅಧಿಕಾರಿಗಳ ನಿಯೋಗ: ಏರ್ ಫೋರ್ಸ್ ಒನ್‌ ವಿಮಾನದಲ್ಲಿ ಅಮೆರಿಕ ಅಧ್ಯಕ್ಷರೊಂದಿಗೆ ಯುಎಸ್​ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್, ಸಿಬ್ಬಂದಿ ಉಪ ಮುಖ್ಯಸ್ಥ ಜೆನ್ ಒ'ಮಲ್ಲಿ ದಿಲ್ಲನ್ ಮತ್ತು ಓವಲ್ ಆಫೀಸ್ ಕಾರ್ಯಾಚರಣೆಗಳ ನಿರ್ದೇಶಕಿ ಅನ್ನಿ ಟೊಮಾಸಿನಿ ಇದ್ದಾರೆ. ಅಧ್ಯಕ್ಷರೊಂದಿಗೆ ಪ್ರಧಾನ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಫೈನರ್, ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್-ಪಿಯರ್, ಭಾಷಣ ಬರವಣಿಗೆಯ ನಿರ್ದೇಶಕ ವಿನಯ್ ರೆಡ್ಡಿ, ಸಂವಹನ ನಿರ್ದೇಶಕ ಬೆನ್ ಲಾಬೋಲ್ಟ್, ವೇಳಾಪಟ್ಟಿ ಮತ್ತು ಅಡ್ವಾನ್ಸ್ ನಿರ್ದೇಶಕ ರಿಯಾನ್ ಮೊಂಟೊಯಾ, ಪ್ರೊಟೊಕಾಲ್‌ನ ಹಂಗಾಮಿ ಮುಖ್ಯಸ್ಥ ಎಥಾನ್ ರೊಸೆಂಜ್‌ವೀಗ್, ಎನ್‌ಎಸ್‌ಸಿ ಸಂಯೋಜಕ ಇಂಡೋ-ಪೆಸಿಫಿಕ್ ಕರ್ಟ್ ಕ್ಯಾಂಪ್ಬೆಲ್, ಕಾರ್ಯತಂತ್ರದ ಸಂವಹನಕ್ಕಾಗಿ ಎನ್​ಎಸ್​ಸಿ ಸಂಯೋಜಕ ಜಾನ್ ಕಿರ್ಬಿ, ಶಕ್ತಿ ಮತ್ತು ಹೂಡಿಕೆಯ ಹಿರಿಯ ಸಲಹೆಗಾರ ಅಮೋಸ್ ಹೊಚ್‌ಸ್ಟೈನ್, ಸಂವಹನಗಳ ಉಪನಿರ್ದೇಶಕ ಹರ್ಬಿ ಜಿಸ್ಕೆಂಡ್, ದಕ್ಷಿಣ ಏಷ್ಯಾದ ಹಿರಿಯ ನಿರ್ದೇಶಕಿ, ರಾಷ್ಟ್ರೀಯ ಭದ್ರತಾ ಮಂಡಳಿ ಐಲೀನ್ ಲಾಬಾಚರ್ ಹಾಗೂ ಇತರರು ಇದ್ದಾರೆ.

ಚರ್ಚೆಯ ವಿಷಯಗಳು: ಶ್ವೇತಭವನದ ಪ್ರಕಾರ, ಬೈಡನ್ ಅವರು ಶುಕ್ರವಾರ ಸಂಜೆ ನವದೆಹಲಿಗೆ ಆಗಮಿಸುವರು. ಅಮೆರಿಕ ಅಧ್ಯಕ್ಷರು ಯಶಸ್ವಿ ಜಿ20 ಶೃಂಗಸಭೆಯನ್ನು ಎದುರು ನೋಡುತ್ತಿದ್ದಾರೆ. ಹವಾಮಾನ ಬದಲಾವಣೆಯಂತಹ ಹಲವಾರು ಕಾರಣಗಳು ಮತ್ತು ವಿಶ್ವಬ್ಯಾಂಕ್, ಅಂತಾರಾಷ್ಟ್ರೀಯ ಹಣಕಾಸು ನಿಧಿಗಳಂತಹ ಅಂತಾರಾಷ್ಟ್ರೀಯ ವೇದಿಕೆಗಳ ಸುಧಾರಣೆಗಳ ಕುರಿತು ಮಾತುಕತೆ ನಡೆಸಲಿದ್ದಾರೆ. ಅಮೆರಿಕದ ಅಧ್ಯಕ್ಷರಾದ ನಂತರ ಬೈಡನ್‌ ಅವರಿಗಿದು ಮೊದಲ ಭಾರತ ಪ್ರವಾಸವಾಗಿದೆ. ಜಿ20ಗೆ ಆಫ್ರಿಕನ್ ಯೂನಿಯನ್ ಸೇರ್ಪಡೆ ವಿಚಾರವನ್ನು ಅಮೆರಿಕ ಸ್ವಾಗತಿಸುತ್ತದೆ. ಇದನ್ನು ಇತರೆ ವಿಶ್ವ ನಾಯಕರು ಕೂಡಾ ಬೆಂಬಲಿಸಿದ್ದಾರೆ ಎಂದು ತಿಳಿಸಿದೆ.

ಶುಕ್ರವಾರ ಪ್ರಧಾನಿ ಮೋದಿ ಅವರೊಂದಿಗೆ ಬೈಡನ್ ದ್ವಿಪಕ್ಷೀಯ ಸಭೆ ನಡೆಸುವ ನಿರೀಕ್ಷೆ ಇದೆ. ಈ ಸಭೆಯಲ್ಲಿ, ಮೋದಿ ಅವರು ಕಳೆದ ಜೂನ್‌ನಲ್ಲಿ ವಾಷಿಂಗ್ಟನ್‌ಗೆ ಭೇಟಿ ನೀಡಿರುವ ಸಂದರ್ಭದಲ್ಲಿ ತೆಗೆದುಕೊಂಡ ನಿರ್ಧಾರಗಳ ಕುರಿತು ಉಭಯ ನಾಯಕರು ಪ್ರಗತಿ ಪರಿಶೀಲಿಸುವ ನಡೆಸುವ ಸಾಧ್ಯತೆಯಿದೆ. ಉಕ್ರೇನ್ ವಿಚಾರವೂ ಚರ್ಚೆಗೆ ಬರಲಿದೆ. ಹೊಸ ತಂತ್ರಜ್ಞಾನ ಹಾಗೂ ಜನರಲ್ ಅಟಾಮಿಕ್ಸ್‌ನೊಂದಿಗೆ ಡ್ರೋನ್‌ಗಳು ಮತ್ತು ಜನರಲ್ ಎಲೆಕ್ಟ್ರಿಕ್‌ನೊಂದಿಗೆ ಜೆಟ್ ಎಂಜಿನ್‌ಗಳಂತ ಮಹತ್ವದ ಕೆಲವು ಒಪ್ಪಂದಗಳೂ ಸೇರಿವೆ.

'ಒನ್ ಅರ್ಥ್ ಒನ್​ ಫ್ಯಾಮಿಲಿ' ಸೆಷನ್​ಗಳು: ಸೆಷನ್ 1: "ಒನ್ ಅರ್ಥ್" ಸೇರಿದಂತೆ ಜಿ20 ನಾಯಕರ ಶೃಂಗಸಭೆಗಳ ಸರಣಿಯಲ್ಲಿ ಬೈಡನ್ ಭಾಗವಹಿಸುತ್ತಾರೆ. ಸೆಷನ್ 2: "ಒನ್​ ಫ್ಯಾಮಿಲಿ", ಈ ವೇಳೆ ಜಾಗತಿಕ ಮೂಲಸೌಕರ್ಯ ಮತ್ತು ಹೂಡಿಕೆ ಕಾರ್ಯಕ್ರಮಕ್ಕಾಗಿ ಪಾಲುದಾರಿಕೆಯ ಚರ್ಚೆ ನಡೆಯಲಿದೆ. ನಂತರ ಜಿ20 ನಾಯಕರೊಂದಿಗೆ ಭೋಜನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ದಿನ ಮುಗಿಯಲಿದೆ. ವಿಯೆಟ್ನಾಂನ ಹನೋಯಿಗೆ ತೆರಳುವ ಮುನ್ನ ಅಧ್ಯಕ್ಷರು ಜಿ20 ನಾಯಕರೊಂದಿಗೆ ರಾಜ್ ಘಾಟ್ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.

ಬುಧವಾರ, ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯತಂತ್ರದ ಸಂವಹನದ ಸಂಯೋಜಕ ಜಾನ್ ಕಿರ್ಬಿ ಸುದ್ದಿಗಾರರೊಂದಿಗೆ ಮಾತನಾಡಿದ್ದು, ಬೈಡನ್​ ಗಮನವು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಆರ್ಥಿಕ ಅವಕಾಶವನ್ನು ತಲುಪಿಸುವುದು, ಹವಾಮಾನ ಮತ್ತು ತಂತ್ರಜ್ಞಾನದಂತಹ ಅಮೆರಿಕನ್ ಜನರಿಗೆ ಪ್ರಮುಖ ಆದ್ಯತೆಗಳ ಮೇಲೆ ಪ್ರಗತಿ ಸಾಧಿಸುವುದು ಮತ್ತು ಯುಎಸ್ ಬದ್ಧತೆಯನ್ನು ತೋರಿಸುತ್ತದೆ ಎಂದು ಹೇಳಿದ್ದರು.

ಇದನ್ನೂ ಓದಿ: ಆಸಿಯಾನ್​ ಶೃಂಗಸಭೆ: ಇಂಡೋನೇಷ್ಯಾದಿಂದ ಭಾರತಕ್ಕೆ ವಾಪಸ್​ ಆದ ಪ್ರಧಾನಿ ಮೋದಿ

Last Updated :Sep 8, 2023, 8:25 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.