ETV Bharat / international

ಟಿಟಿಪಿ ಉಗ್ರರಿಗೆ ಬೆದರಿದ ಇಸ್ಲಾಮಾಬಾದ್: ಹದಗೆಟ್ಟ ಅಫ್ಘಾನಿಸ್ತಾನ - ಪಾಕಿಸ್ತಾನ ಸಂಬಂಧ!

author img

By

Published : Jul 18, 2023, 4:35 PM IST

pakistan afghanistan ties on crossroads
pakistan afghanistan ties on crossroads

ಅಫ್ಘಾನಿಸ್ತಾನದಿಂದ ಟಿಟಿಪಿ ಉಗ್ರವಾದಿಗಳು ಪಾಕಿಸ್ತಾನದಲ್ಲಿ ದಾಳಿ ನಡೆಸುತ್ತಿರುವ ಮಧ್ಯೆ ಎರಡೂ ದೇಶಗಳ ಮಧ್ಯದ ಸಂಬಂಧ ದಿನೇ ದಿನೆ ಹದಗೆಡುತ್ತಿದೆ.

ಇಸ್ಲಾಮಾಬಾದ್ (ಪಾಕಿಸ್ತಾನ) : ಪಾಕಿಸ್ತಾನದಲ್ಲಿ ಗಡಿಯಾಚೆಯಿಂದ ಭಯೋತ್ಪಾದನೆ ನಡೆಯುತ್ತಿರುವುದಾಗಿ ಮತ್ತು ಟಿಟಿಪಿ ಉಗ್ರಗಾಮಿಗಳು ಅಫ್ಘಾನಿಸ್ತಾನದಿಂದ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಇಸ್ಲಾಮಾಬಾದ್‌ನ ಆರೋಪಿಸುತ್ತಿದೆ. ಆದರೆ, ಇಸ್ಲಾಮಾಬಾದ್​ನ ಆರೋಪಗಳಿಗೆ ಕಾಬೂಲ್‌ನಲ್ಲಿನ ತಾಲಿಬಾನ್ ಆಡಳಿತವು ಆಕ್ರಮಣಕಾರಿಯಾಗಿ ಪ್ರತಿಕ್ರಿಯಿಸುತ್ತಿರುವುದರಿಂದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಸಂಬಂಧಗಳು ವೇಗವಾಗಿ ಹದಗೆಡಲಾರಂಭಿಸಿವೆ.

ಅಫ್ಘಾನಿಸ್ತಾನದೊಳಗೆ ಟಿಟಿಪಿ ಉಗ್ರಗಾಮಿಗಳಿದ್ದಾರೆ ಎಂಬ ಪಾಕಿಸ್ತಾನದ ಹೇಳಿಕೆಯನ್ನು ಅಫ್ಘಾನಿಸ್ತಾನ ತಿರಸ್ಕರಿಸಿದೆ. ಆದರೆ, ಅಫ್ಘಾನಿಸ್ತಾನದ ಈ ವಾದವನ್ನು ಪಾಕಿಸ್ತಾನದ ಉನ್ನತ ಸೇನಾ ಕಮಾಂಡರ್‌ಗಳು ತಳ್ಳಿ ಹಾಕಿದ್ದಾರೆ. ಟಿಟಿಪಿಯು ಗಡಿ ಉದ್ದಕ್ಕೂ ತನ್ನ ನೆಲೆಗಳನ್ನು ಹೊಂದಿದ್ದು ಮಾತ್ರವಲ್ಲದೇ ಇತ್ತೀಚಿನ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಸಹ ಹೊಂದಿದೆ ಎಂದು ಪಾಕಿಸ್ತಾನ ಹೇಳಿದೆ.

ಪಾಕಿಸ್ತಾನದಲ್ಲಿ ಭಯೋತ್ಪಾದಕ ಘಟನೆಗಳು, ಗುರಿಯಾಗಿಸಿಕೊಂಡು ನಡೆಸಲಾಗುತ್ತಿರುವ ದಾಳಿಗಳು, ಆತ್ಮಹತ್ಯಾ ಸ್ಫೋಟಗಳು ಮತ್ತು ಹತ್ಯೆಗಳ ಉಲ್ಬಣವು ಮಿಲಿಟರಿ ಆಡಳಿತ ಮತ್ತು ಸರ್ಕಾರಗಳನ್ನು ಆತಂಕಕ್ಕೆ ದೂಡಿದೆ. ಟಿಟಿಪಿ ಉಗ್ರರು ಸರಣಿ ದಾಳಿ ನಡೆಸುತ್ತಿದ್ದು, ಇತರ ಭಯೋತ್ಪಾದಕ ಬಣಗಳು ಸಹ ಈ ಗುಂಪಿನೊಂದಿಗೆ ಕೈಜೋಡಿಸಿವೆ. ಆದರೆ, ತಾಲಿಬಾನ್ ಆಡಳಿತವು ತನ್ನ ದೇಶದಲ್ಲಿ ಟಿಟಿಪಿ ಹಾಗೂ ಅದರ ಸದಸ್ಯರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸುತ್ತಿದೆ.

ಟಿಟಿಪಿ ವಿರುದ್ಧ ಕಾಬೂಲ್‌ನ ನಿಷ್ಕ್ರಿಯತೆಯ ಬಗ್ಗೆ ಪಾಕ್ ಸರ್ಕಾರವು ತನ್ನ ಗಂಭೀರ ಕಳವಳ ವ್ಯಕ್ತಪಡಿಸಿದೆ. ಆದರೆ, ತಾಲಿಬಾನ್ ಆಡಳಿತವು ದೋಹಾ ಒಪ್ಪಂದವನ್ನು ನೆನಪಿಸಿ ಇಸ್ಲಾಮಾಬಾದ್‌ಗೆ ತಿರುಗೇಟು ನೀಡುತ್ತಿದೆ. ಅಮೆರಿಕ ಮತ್ತು ತಾಲಿಬಾನ್ ಮಧ್ಯೆ ದೋಹಾ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಅಫ್ಘಾನಿಸ್ತಾನದ ನೆಲದಲ್ಲಿ ಯಾವುದೇ ಉಗ್ರಗಾಮಿ ಗುಂಪುಗಳು ತಮ್ಮ ಉಗ್ರವಾದಿ ಚಟುವಟಿಕೆಗಳನ್ನು ಅವಕಾಶ ನೀಡಲಾಗುವುದಿಲ್ಲ ಎಂದು ಒಪ್ಪಂದ ಹೇಳುತ್ತದೆ.

ದೋಹಾ ಒಪ್ಪಂದವನ್ನು ಅಮೆರಿಕದೊಂದಿಗೆ ಮಾಡಿಕೊಳ್ಳಲಾಗಿದೆಯೇ ಹೊರತು ಪಾಕಿಸ್ತಾನದೊಂದಿಗೆ ಅಲ್ಲ ಎಂದು ತಾಲಿಬಾನ್ ಪಾಕಿಸ್ತಾನಕ್ಕೆ ಪದೇ ಪದೆ ತಿವಿಯುತ್ತಿದೆ. ಅಲ್ಲದೆ, ಟಿಟಿಪಿ ಅಫ್ಘಾನಿಸ್ತಾನದಲ್ಲಿ ಅಲ್ಲ, ಪಾಕಿಸ್ತಾನದಲ್ಲಿ ಕೆಲಸ ಮಾಡುತ್ತಿದೆ, ಅದನ್ನು ನಿಭಾಯಿಸುವುದು ಇಸ್ಲಾಮಾಬಾದ್​ನ ಕೆಲಸವಾಗಿದೆ. ಅದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳುವ ಮೂಲಕ ತಾಲಿಬಾನ್ ಪಾಕಿಸ್ತಾನಕ್ಕೆ ಆತಂಕ ಹುಟ್ಟಿಸಿದೆ.

ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (TTP) ಅನ್ನು 2007 ರಲ್ಲಿ ಪಾಕಿಸ್ತಾನದಲ್ಲಿ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಮೂಲಭೂತವಾದಿ ಸುನ್ನಿ ಇಸ್ಲಾಮಿಸ್ಟ್ ಗುಂಪುಗಳ ಒಂದು ಸಮೂಹ ಸಂಘಟನೆಯಾಗಿ ರಚಿಸಲಾಯಿತು. ಪಾಕಿಸ್ತಾನಿ ತಾಲಿಬಾನ್ ಎಂದೂ ಕರೆಯಲ್ಪಡುವ TTP, ಆಫ್ಘನ್ ತಾಲಿಬಾನ್‌ಗೆ ನಿಷ್ಠೆ ಹೊಂದಿರುವುದಾಗಿ ಹೇಳುತ್ತದೆ ಮತ್ತು ಅದೇ ಹೆಸರನ್ನು ಇಟ್ಟುಕೊಂಡಿದೆ.

ಆದರೆ, ಅದು ಈಗ ನೆರೆಯ ಅಫ್ಘಾನಿಸ್ತಾನವನ್ನು ಆಳುವ ಆಡಳಿತ ಸರ್ಕಾರದ ಭಾಗವಾಗಿಲ್ಲ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಮಾಡಿದಂತೆ ಪಾಕಿಸ್ತಾನದಲ್ಲಿ ಇಸ್ಲಾಮಿಕ್ ಧಾರ್ಮಿಕ ಶರಿಯಾ ಕಾನೂನನ್ನು ಹೇರುವುದು ಇದರ ಉದ್ದೇಶವಾಗಿದೆ. 2001 ರಲ್ಲಿ ಯುಎಸ್ ನೇತೃತ್ವದ ಆಕ್ರಮಣದ ನಂತರ ಅಫ್ಘಾನಿಸ್ತಾನದಿಂದ ಪಲಾಯನ ಮಾಡಿದ ಅಲ್ ಖೈದಾ ಸೇರಿದಂತೆ ಉಗ್ರಗಾಮಿ ಗುಂಪುಗಳಿಗೆ ದೀರ್ಘಾವಧಿಯ ಕೇಂದ್ರವಾಗಿದ್ದ ಪಾಕಿಸ್ತಾನದ ಹಿಂದಿನ ಬುಡಕಟ್ಟು ಪ್ರದೇಶಗಳಲ್ಲಿ ಟಿಟಿಪಿ ಪ್ರಧಾನ ಕಚೇರಿಯನ್ನು ಹೊಂದಿತ್ತು.

ಇದನ್ನೂ ಓದಿ : ಸಾಕಿದ ನಾಯಿಗೆ ಊಟ ಹಾಕದ ಭಾರತೀಯ ಮೂಲದ ವ್ಯಕ್ತಿಗೆ ಜೈಲು ಶಿಕ್ಷೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.