ETV Bharat / international

ಟರ್ಕಿ, ಸಿರಿಯಾ ಭೂಕಂಪ: ಸಾವಿನ ಸಂಖ್ಯೆ 15 ಸಾವಿರಕ್ಕೆ.. ಓರ್ವ ಭಾರತೀಯ ನಾಪತ್ತೆ

author img

By

Published : Feb 9, 2023, 9:15 AM IST

ಟರ್ಕಿ ಸಿರಿಯಾ ಭೀಕರ ಭೂಕಂಪ- ಸಾವಿನ ಸಂಖ್ಯೆ 15 ಸಾವಿರಕ್ಕೆ ಏರಿಕೆ-ವ್ಯಾಪಾರಕ್ಕಾಗಿ ಬಂದ ಭಾರತೀಯ ನಾಪತ್ತೆ - ಮೂರು ತಿಂಗಳು ತುರ್ತು ಪರಿಸ್ಥಿತಿ ಘೋಷಣೆ- ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಮಾಹಿತಿ

quake-hit-turkey-update
ಟರ್ಕಿ, ಸಿರಿಯಾ ಭೂಕಂಪ

ಅಂಕಾರಾ (ಟರ್ಕಿ): ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ 15,383 ಕ್ಕೆ ತಲುಪಿದೆ. ಇದರಲ್ಲಿ ಟರ್ಕಿಯಲ್ಲಿ 12,391 ಜನರು ಸಾವನ್ನಪ್ಪಿದ್ದರೆ, 2,992 ಮಂದಿ ಸಮಾಧಿಯಾಗಿದ್ದಾರೆ. ಒಟ್ಟಾರೆ 62,914 ಜನರು ಗಾಯಗೊಂಡಿದ್ದಾರೆ. ಇನ್ನೊಂದೆಡೆ ದುರಂತದಲ್ಲಿ ಓರ್ವ ಭಾರತೀಯ ನಾಪತ್ತೆಯಾಗಿದ್ದು, 10 ಮಂದಿ ಭೂಕಂಪ ಪೀಡಿತ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದಾರೆ. ಅವರು ಸುರಕ್ಷಿತವಾಗಿದ್ದಾರೆ ಎಂದು ಭಾರತದ ವಿದೇಶಾಂಗ ಸಚಿವಾಲಯ ತಿಳಿಸಿದೆ.

ನಿರಂತರ ಯುದ್ಧದಿಂದಲೇ ಬಳಲಿದ್ದ ಸಿರಿಯಾದಲ್ಲೂ ಸಾವಿನ ಸಂಖ್ಯೆ ಏರುತ್ತಿದೆ. ಬಂಡುಕೋರರ ಹಿಡಿತದಲ್ಲಿರುವ ಪ್ರದೇಶಗಳಲ್ಲಿ 1,730 ಜನರು ಸಾವನ್ನಪ್ಪಿರುವುದು ಭೀಕರತೆಯನ್ನು ಹೆಚ್ಚಿಸಿದೆ. ಸರ್ಕಾರಿ ನಿಯಂತ್ರಿತ ಪ್ರದೇಶಗಳಲ್ಲಿ ಒಟ್ಟು 1,262 ಜನರು ಹತರಾಗಿದ್ದಾರೆ. 5,108 ಜನರು ಗಾಯಗೊಂಡಿದ್ದಾರೆ.

ಭೂಕಂಪನಕ್ಕೂ ಮುನ್ನ ಸಿದ್ಧತೆ ಕಷ್ಟ: ಇನ್ನೊಂದೆಡೆ ಭೂಕಂಪನವಾಗಿ ನಾಶವಾದ ಪ್ರದೇಶಗಳಿಗೆ ಭೇಟಿ ನೀಡಿದ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್, ಸರ್ಕಾರದ ವೈಫಲ್ಯಗಳನ್ನು ಒಪ್ಪಿಕೊಂಡಿದ್ದಾರೆ. ಭೂಕಂಪ ವಿನಾಶಕಾರಿಯಾಗಿದೆ. ತೀವ್ರ ಸಾವು ನೋವು ಸಂಭವಿಸಿವೆ. ಮೊದಲೇ ವಿಪತ್ತನ್ನು ಗುರುತಿಸಿ ಸಿದ್ಧರಾಗಲು ಸಾಧ್ಯವಿಲ್ಲ. ನಾಗರಿಕರ ರಕ್ಷಣೆಗೆ ಕಟಿಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.

ಹಾನಿಯಾದ ಪ್ರದೇಶಗಳಲ್ಲಿ 21 ಸಾವಿರ ರಕ್ಷಣಾ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಅವಶೇಷಗಳಡಿ ಸಿಲುಕಿದ ಜನರನ್ನು ರಕ್ಷಿಸಲು ಹರಸಾಹಸ ಮಾಡಲಾಗುತ್ತಿದೆ. ನಮ್ಮ ಕೆಲಸ ಸುಲಭವಾಗಿಲ್ಲ. ವಿದೇಶಗಳ ನೆರವಿನಿಂದ ಜನರ ರಕ್ಷಣೆ ಮಾಡಲಾಗುವುದು ಎಂದು ಹೇಳಿದರು.

ಮೂರು ತಿಂಗಳು ತುರ್ತು ಪರಿಸ್ಥಿತಿ: ಟರ್ಕಿಯ ಭೂಕಂಪ ಪೀಡಿತ ಪ್ರದೇಶಗಳಲ್ಲಿ ಮೂರು ತಿಂಗಳ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ವಿನಾಶಕಾರಿ ಭೂಕಂಪಗಳ ನಂತರ ಟರ್ಕಿ ಏಳು ದಿನಗಳ ಶೋಕ ಆಚರಿಸುತ್ತಿದೆ. 13 ದಶಲಕ್ಷಕ್ಕೂ ಹೆಚ್ಚು ಜನರು ಭೂಕಂಪದಿಂದ ಬಾಧಿತರಾಗಿದ್ದಾರೆ. ಅಲೆಪ್ಪೊ, ಹಮಾ, ಹೋಮ್ಸ್, ಟಾರ್ಟಸ್ ಮತ್ತು ಲಟಾಕಿಯಾ ಸೇರಿದಂತೆ ಹಲವೆಡೆ ಭೂಕಂಪದ ಸಂತ್ರಸ್ತರಿಗೆ 100 ಕ್ಕೂ ಹೆಚ್ಚು ಆಶ್ರಯ ತಾಣಗಳನ್ನು ಸ್ಥಾಪಿಸಲಾಗಿದೆ.

ಭಾರತೀಯ ನಾಪತ್ತೆ, 10 ಮಂದಿ ಟ್ರ್ಯಾಪ್​: ಇನ್ನು ಟರ್ಕಿಯಲ್ಲಿ ನೆಲೆಸಿದ್ದ ಭಾರತೀಯರ ಪೈಕಿ ಓರ್ವ ನಾಪತ್ತೆಯಾಗಿದ್ದಾನೆ. 10 ಮಂದಿ ಭೂಕಂಪ ಪೀಡಿತ ಪ್ರದೇಶಗಳಲ್ಲಿ ಸಿಲುಕಿದ್ದಾರೆ. ಭಾರತದ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ. 10 ಮಂದಿ ಭೂಕಂಪ ಪೀಡಿತ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದರೂ, ಸುರಕ್ಷಿತವಾಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಟರ್ಕಿ ಮತ್ತು ಸಿರಿಯಾಕ್ಕೆ ನೆರವು ನೀಡಲು ಭಾರತವು 'ಆಪರೇಷನ್ ದೋಸ್ತ್' ಕಾರ್ಯಾಚರಣೆ ನಡೆಸುತ್ತಿದೆ. ಹಾನಿ ಪ್ರದೇಶಗಳಲ್ಲಿ ಸಿಲುಕಿರುವವರಲ್ಲಿ ಮೂವರು ಸಂಪರ್ಕಕ್ಕೆ ಸಿಕ್ಕಿದ್ದು, ಅವರನ್ನು ಸುರಕ್ಷಿಯ ಪ್ರದೇಶಕ್ಕೆ ಕರೆದೊಯ್ಯಲಾಗಿದೆ. ಉಳಿದಿರುವ ಜನರನ್ನು ರಕ್ಷಿಸಲಾಗುವುದು.

ವ್ಯಾಪಾರಕ್ಕಾಗಿ ಬಂದವ ನಾಪತ್ತೆ: ಟರ್ಕಿಗೆ ವ್ಯಾಪಾರ ಉದ್ದೇಶದ ಮೇಲೆ ಬಂದ ವ್ಯಕ್ತಿ ಭೂಕಂಪನದಲ್ಲಿ ನಾಪತ್ತೆಯಾಗಿದ್ದಾರೆ. ಈವರೆಗೂ ಯಾರ ಸಂಪರ್ಕಕ್ಕೂ ಬಂದಿಲ್ಲ. ಎರಡು ದಿನಗಳಿಂದ ಅವರ ಕುಟುಂಬ ಮತ್ತು ಬೆಂಗಳೂರಿನಲ್ಲಿರುವ ಕಂಪನಿಯೊಂದಿಗೆ ಸಂಪರ್ಕದಲ್ಲಿದ್ದೇವೆ. ಭಾರತದ ರಾಯಭಾರ ಕಚೇರಿಗೆ ಮಾಹಿತಿ ಮತ್ತು ಸಹಾಯ ಕೋರಿ 75 ಕರೆಗಳನ್ನು ಸ್ವೀಕರಿಸಿದ್ದೇವೆ ಎಂದು ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಟರ್ಕಿಯಲ್ಲಿ ಸುಮಾರು 3,000 ಜನರು ವಾಸವಾಗಿದ್ದಾರೆ. ಅವರಲ್ಲಿ 1,800 ಜನರು ಇಸ್ತಾಂಬುಲ್ ಮತ್ತು ಅದರ ಸುತ್ತಮುತ್ತ ವಾಸಿಸುತ್ತಿದ್ದಾರೆ. 250 ಮಂದಿ ಅಂಕಾರಾದಲ್ಲಿದ್ದಾರೆ. ಉಳಿದವರು ದೇಶದ ವಿವಿಧೆಡೆ ಇದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಓದಿ: ಟರ್ಕಿ, ಸಿರಿಯಾ ಭೂಕಂಪನದಲ್ಲಿ 7 ಸಾವಿರಕ್ಕೂ ಹೆಚ್ಚು ಮಂದಿ ಸಾವು: ವಿಶ್ವ ಆರೋಗ್ಯ ಸಂಸ್ಥೆ ಕಳವಳ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.