ETV Bharat / international

ಮಾಜಿ ಪ್ರಧಾನಿ ಇಮ್ರಾನ್​ ಖಾನ್ ನಾಮಪತ್ರ ತಿರಸ್ಕರಿಸಿದ ಪಾಕ್ ಚು.ಆಯೋಗ

author img

By PTI

Published : Dec 31, 2023, 11:40 AM IST

ಇಮ್ರಾನ್​ ಖಾನ್
ಇಮ್ರಾನ್​ ಖಾನ್

ಮುಂದಿನ ವರ್ಷ ಪಾಕಿಸ್ತಾನದಲ್ಲಿ ಚುನಾವಣೆ ನಡೆಯಲಿದ್ದು, ಅನರ್ಹತೆ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಪ್ರಧಾನಿ ಇಮ್ರಾನ್​ ಖಾನ್ ಸಲ್ಲಿಸಿದ್ದ ನಾಮಪತ್ರಗಳು ತಿರಸ್ಕೃತವಾಗಿವೆ.

ಲಾಹೋರ್(ಪಾಕಿಸ್ತಾನ): ಸಾರ್ವತ್ರಿಕ ಚುನಾವಣೆಗೂ ಮೊದಲು ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ ಸಂಸ್ಥಾಪಕ, ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ಗೆ ದೊಡ್ಡ ಹಿನ್ನಡೆ ಉಂಟಾಗಿದೆ. ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಬಯಸಿ ಸಲ್ಲಿಸಿದ್ದ ಅಫಿಡವಿಟ್​ಗಳನ್ನು ಅಲ್ಲಿನ ಚುನಾವಣಾ ಆಯೋಗ ತಿರಸ್ಕರಿಸಿದೆ. ಇದರ ಜೊತೆಗೆ ಪಕ್ಷದ ಕೆಲ ಪ್ರಮುಖರ ನಾಮಪತ್ರಗಳೂ ರಿಜೆಕ್ಟ್​ ಆಗಿವೆ.

ತೋಷಖಾನಾ ಪ್ರಕರಣದಲ್ಲಿ ದೋಷಿಯಾಗಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಇಮ್ರಾನ್​ ಖಾನ್​ ಅನರ್ಹತೆಗೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ನಾಮಪತ್ರವನ್ನು ಆಯೋಗ ತಿರಸ್ಕರಿಸಿದೆ. ಇದನ್ನು ರಾಜಕೀಯ ಒತ್ತಡ ಎಂದು ಮಾಜಿ ಪ್ರಧಾನಿ ಆರೋಪಿಸಿದ್ದಾರೆ.

ಫೆಬ್ರವರಿ 8ರಂದು ಪಾಕಿಸ್ತಾನಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಇಮ್ರಾನ್​ ಖಾನ್ ಲಾಹೋರ್ ಮತ್ತು ಮಿಯಾನ್‌ವಾಲಿ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದರು. ಎರಡೂ ಕ್ಷೇತ್ರದ ಪ್ರತಿನಿಧಿಯಾಗಿರದ ಅವರ ವಿರುದ್ಧ ಸ್ಥಳೀಯವಾಗಿ ವಿರೋಧ ವ್ಯಕ್ತವಾಗಿದೆ. ಮತ್ತೊಮ್ಮೆ ಪ್ರಧಾನಿಯಾಗುವ ಅಭಿಲಾಷೆ ಹೊಂದಿರುವ ಖಾನ್​ಗೆ ಆರಂಭದಲ್ಲೇ ವಿಘ್ನಗಳು ಎದುರಾಗಿವೆ.

ಅನರ್ಹತೆಯ ತೊಡರುಗಾಲು: ಇಮ್ರಾನ್​ ಖಾನ್​ ಪ್ರಧಾನಿಯಾಗಿದ್ದಾಗ ತಮಗೆ ಬಂದ ವಿದೇಶಿ ಉಡುಗೊರೆಗಳನ್ನು ವೈಯಕ್ತಿಕ ಕಾರಣಕ್ಕಾಗಿ ಮಾರಾಟ ಮಾಡಿದ್ದರು. ಇದರ ವಿರುದ್ಧ ದಾಖಲಾದ ಪ್ರಕರಣದಲ್ಲಿ ದೋಷಿಯಾಗಿ, ಜೈಲು ಪಾಲಾಗಿದ್ದರು. ತೋಷಖಾನಾ ಪ್ರಕರಣ ಎಂದು ಹೇಳಲಾಗುವ ಈ ಕೇಸ್​ನಿಂದಾಗಿ ಪ್ರಧಾನಿ ಹುದ್ದೆಯನ್ನೂ ಕಳೆದುಕೊಳ್ಳುವಂತಾಯಿತು. ಬಳಿಕ ಸಂಸತ್​ ಸ್ಥಾನದಿಂದಲೂ ಅನರ್ಹರಾದರು.

ಬಳಿಕ ಖಾನ್ ಅವರ ಶಿಕ್ಷೆಯನ್ನು ಇಸ್ಲಾಮಾಬಾದ್ ಹೈಕೋರ್ಟ್ ಅಮಾನತುಗೊಳಿಸಿತು. ಆದರೆ, ಅನರ್ಹತೆ ಜಾರಿಯಲ್ಲಿದೆ. ಐದು ವರ್ಷಗಳವರೆಗೆ ಅನರ್ಹರಾಗಿರುವ ಖಾನ್​ ಇದೀಗ ಸ್ಪರ್ಧೆಗೆ ಸಲ್ಲಿಸಿರುವ ನಾಮಪತ್ರ ಅಸಿಂಧುವಾಗಿವೆ. ಭ್ರಷ್ಟಾಚಾರ ಅಪರಾಧದಡಿ ಚುನಾವಣಾ ಆಯೋಗ ಅಫಿಡವಿಟ್​ ಸ್ವೀಕರಿಸಲು ನಿರಾಕರಿಸಿದೆ.

ಖಾನ್​ ಜೊತೆಗೆ, ಮಾಜಿ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ, ಮಾಜಿ ಸಚಿವ ಹಮ್ಮದ್ ಅಜರ್, ಮುರಾದ್ ಸಯೀದ್, ಸಾಹಿಬ್ಜಾದಾ ಸಿಗ್ಬತುಲ್ಲಾ, ಡಾ.ಅಮ್ಜದ್ ಖಾನ್, ಫಜಲ್ ಹಕೀಮ್ ಖಾನ್, ಮಿಯಾನ್ ಶರಾಫತ್ ಮತ್ತು ಸಲೀಂ ಉರ್ ರೆಹಮಾನ್ ನಾಮಪತ್ರಗಳು ಅಸಿಂಧುವಾಗಿವೆ.

ಆಯೋಗದ ವಿರುದ್ಧ ಕಿಡಿ: ಇಮ್ರಾನ್​ ಖಾನ್​ ಸೇರಿದಂತೆ ಪಿಟಿಐ ಪಕ್ಷದ ಹಲವು ನಾಯಕರ ನಾಮಪತ್ರಗಳನ್ನು ತಿರಸ್ಕರಿಸಿದ್ದಕ್ಕೆ ಚುನಾವಣಾ ಆಯೋಗದ ವಿರುದ್ಧ ಮಾಜಿ ಪ್ರಧಾನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಕ್ತ, ನ್ಯಾಯಸಮ್ಮತ ಚುನಾವಣೆಯಲ್ಲಿ ಪಿಟಿಐ ಪಕ್ಷವನ್ನು ಎದುರಿಸಲು ಸಾಧ್ಯವಾಗದೇ, ಈ ಕುತಂತ್ರವನ್ನು ಮಾಡಲಾಗುತ್ತಿದೆ ಎಂದು ಈಗಿನ ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ.

ಚುನಾವಣೆಗೂ ಮೊದಲು ನಾಮಪತ್ರಗಳನ್ನು ನಿರಾಕರಿಸಿದರೆ, ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆಯೇ ನಾಶವಾಗಲಿದೆ. ಇದು ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ. ಕಾನೂನುಬಾಹಿರವಾಗಿ ನಿರ್ಧಾರವಾಗಿದೆ. ಚುನಾವಣಾ ಆಯೋಗ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ ಎಂದು ದೂರಿದ್ದಾರೆ.

ಇದನ್ನೂ ಓದಿ: ಹಫೀಜ್ ಸಯೀದ್ ಹಸ್ತಾಂತರಕ್ಕೆ ಭಾರತ ಮನವಿ: ಪಾಕಿಸ್ತಾನದ ಪ್ರತಿಕ್ರಿಯೆ ಏನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.