ETV Bharat / international

ಹಫೀಜ್ ಸಯೀದ್ ಹಸ್ತಾಂತರಕ್ಕೆ ಭಾರತ ಮನವಿ: ಪಾಕಿಸ್ತಾನದ ಪ್ರತಿಕ್ರಿಯೆ ಏನು?

author img

By ANI

Published : Dec 30, 2023, 9:03 AM IST

Updated : Dec 30, 2023, 9:15 AM IST

ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಹಸ್ತಾಂತರ ಮಾಡುವಂತೆ ಭಾರತದ ಮನವಿಗೆ ಪಾಕಿಸ್ತಾನ ಪ್ರತಿಕ್ರಿಯೆ ನೀಡಿದೆ.

no-bilateral-treaty-exists-pakistan-on-india-request-for-hafiz-saeeds-extradition
ಹಫೀಜ್ ಸಯೀದ್

ಇಸ್ಲಾಮಾಬಾದ್ (ಪಾಕಿಸ್ತಾನ) : 26/11ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಹಸ್ತಾಂತರಿಸುವಂತೆ ಭಾರತದ ಮನವಿಗೆ ಪಾಕಿಸ್ತಾನ ಪ್ರತಿಕ್ರಿಯಿಸಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವುದೇ ಹಸ್ತಾಂತರದ ಒಪ್ಪಂದವಿಲ್ಲ ಎಂದು ಹೇಳುವ ಮೂಲಕ ಭಯೋತ್ಪಾದಕನನ್ನು ಭಾರತಕ್ಕೆ ಹಸ್ತಾಂತರಿಸಲು ಪಾಕ್​ ನಿರಾಕರಿಸಿದೆ.

ಹಫೀಜ್ ಸಯೀದ್ ಹಸ್ತಾಂತರಕ್ಕೆ ಕೋರಿದ್ದ ಭಾರತದ ಮನವಿಯನ್ನು ಪಾಕಿಸ್ತಾನ ಸ್ವೀಕರಿಸಿದೆ ಎಂದು ಪಾಕ್​ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರೆ ಮುಮ್ತಾಜ್ ಜಹ್ರಾ ಬಲೂಚ್ ಶುಕ್ರವಾರ ತಿಳಿಸಿದ್ದಾರೆ. "ಹಫೀಜ್ ಸಯೀದ್​​ನನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಹಸ್ತಾಂತರಿಸುವಂತೆ ಭಾರತೀಯ ಅಧಿಕಾರಿಗಳು ಪಾಕಿಸ್ತಾನಕ್ಕೆ ಮನವಿ ಮಾಡಿದ್ದಾರೆ. ಆದರೆ, ಪಾಕಿಸ್ತಾನ ಮತ್ತು ಭಾರತದ ನಡುವೆ ಯಾವುದೇ ದ್ವಿಪಕ್ಷೀಯ ಹಸ್ತಾಂತರ ಒಪ್ಪಂದ ಅಸ್ತಿತ್ವದಲ್ಲಿಲ್ಲ ಎಂಬುದನ್ನು ಗಮನಿಸುವುದು ಸೂಕ್ತ" ಎಂದಿದ್ದಾರೆ.

ಕಳೆದ ದಿನ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವಕ್ತಾರ ಅರಿಂದಮ್ ಬಾಗ್ಚಿ ಅವರು, ನಿರ್ದಿಷ್ಟ ಪ್ರಕರಣದಲ್ಲಿ ವಿಚಾರಣೆ ಎದುರಿಸಲು ಹಫೀಜ್ ಸಯೀದ್‌ನನ್ನು ಭಾರತಕ್ಕೆ ಹಸ್ತಾಂತರಿಸುವ ಬಗ್ಗೆ ಭಾರತವು ಪಾಕಿಸ್ತಾನ ಸರ್ಕಾರಕ್ಕೆ ವಿನಂತಿ ಮಾಡಿದೆ. ಹಫೀಜ್ ಸಯೀದ್ ಭಾರತದಲ್ಲಿನ ಹಲವಾರು ಪ್ರಕರಣಗಳಿಗೆ ಬೇಕಾಗಿದ್ದಾನೆ. ಅವನು ಯುಎನ್ ನಿಷೇಧಿತ ಭಯೋತ್ಪಾದಕನಾಗಿದ್ದು, ಈ ನಿಟ್ಟಿನಲ್ಲಿ ಆತನನ್ನು ಭಾರತಕ್ಕೆ ಹಸ್ತಾಂತರಿಸಲು ಪಾಕಿಸ್ತಾನ ಸರ್ಕಾರಕ್ಕೆ ಸಂಬಂಧಿತ ದಾಖಲೆಗಳೊಂದಿಗೆ ವಿನಂತಿ ಮಾಡಲಾಗಿದೆ ಎಂದು ಹೇಳಿದ್ದರು.

ಗಮನಾರ್ಹವೆಂದರೆ, ಯುಎನ್ ನಿಷೇಧಿತ ಭಯೋತ್ಪಾದಕನಾಗಿರುವ ಸಯೀದ್ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (ಎಲ್ಇಟಿ)ದ ಸ್ಥಾಪಕ. ಮುಂಬೈನಲ್ಲಿ ನಡೆದ ಮಾರಣಾಂತಿಕ 26/11 ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ ಈತ, ಹಲವಾರು ಪ್ರಕರಣಗಳಲ್ಲಿ ಭಾರತಕ್ಕೆ ಬೇಕಾಗಿದ್ದಾನೆ. ಇತರೆ ಆರೋಪಗಳಿಗಾಗಿ ಜುಲೈ 17, 2019 ರಿಂದ ಜೈಲಿನಲ್ಲಿರುವ ಮುಹಮ್ಮದ್ ಹಫೀಜ್ ಸಯೀದ್‌ಗೆ ಏಪ್ರಿಲ್ 2022 ರಲ್ಲಿ ಪಾಕಿಸ್ತಾನದ ಲಾಹೋರ್‌ನಲ್ಲಿರುವ ವಿಶೇಷ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು "ಭಯೋತ್ಪಾದನೆಗೆ ಹಣಕಾಸು ಒದಗಿಸುವುದಕ್ಕಾಗಿ" 33 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.

2000 ರ ದಶಕದಲ್ಲಿ UN ಮತ್ತು EU ನಿಂದ ಭಯೋತ್ಪಾದಕ ಎಂದು ಗೊತ್ತುಪಡಿಸಿದರೂ ಸುಮಾರು ಎರಡು ದಶಕಗಳಿಂದ ಸಯೀದ್ ಮೇಲೆ ಆರೋಪ ಹೊರಿಸಲಾಗಿಲ್ಲ. ಡಿಸೆಂಬರ್ 2008 ರಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಸಯೀದ್‌ನನ್ನು ಭಯೋತ್ಪಾದಕ ಎಂದು ಹೆಸರಿಸಿತ್ತು. ಈ ಮಧ್ಯೆ, ಹಫೀಜ್ ಸಯೀದ್ ಅವರ ರಾಜಕೀಯ ಘಟಕವಾದ ಪಾಕಿಸ್ತಾನ್ ಮಾರ್ಕಾಜಿ ಮುಸ್ಲಿಂ ಲೀಗ್ (ಪಿಎಂಎಂಎಲ್) ಫೆಬ್ರವರಿಯಲ್ಲಿ ನಡೆಯಲಿರುವ ಮುಂಬರುವ ಸಾರ್ವತ್ರಿಕ ಚುನಾವಣೆಗೆ ಪಾಕಿಸ್ತಾನದಾದ್ಯಂತ ಪ್ರತಿಯೊಂದು ರಾಷ್ಟ್ರೀಯ ಮತ್ತು ಪ್ರಾಂತೀಯ ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಇದನ್ನೂ ಓದಿ : ಮುಂಬೈ ದಾಳಿಯ ಮಾಸ್ಟರ್​ ಮೈಂಡ್ ಸಯೀದ್​ ಹಫೀಜ್​ಗೆ 31 ವರ್ಷ ಜೈಲು ಶಿಕ್ಷೆ

ಹಫೀಜ್ ಸಯೀದ್ ಪುತ್ರ ತಲ್ಹಾ ಸಯೀದ್ ಕೂಡ ಲಾಹೋರ್​ನ ಎನ್‌ಎ-127 ಕ್ಚೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ಅಲ್ಲಿನ ಸುದ್ದಿಸಂಸ್ಥೆ ವರದಿ ಮಾಡಿದೆ. ಪಿಎಂಎಂಎಲ್‌ನ ಕೇಂದ್ರ ಅಧ್ಯಕ್ಷ ಖಾಲಿದ್ ಮಸೂದ್ ಸಿಂಧು ಅವರು ಪಾಕಿಸ್ತಾನ್ ಮುಸ್ಲಿಂ ಲೀಗ್ ಮುಖ್ಯಸ್ಥ ನವಾಜ್ ಷರೀಫ್ ವಿರುದ್ಧ ಎನ್‌ಎ-130 ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.

Last Updated :Dec 30, 2023, 9:15 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.