ETV Bharat / international

ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯ ಪ್ರಸ್ತಾಪಿಸಿದ ಪಾಕ್​ಗೆ ತಿರುಗೇಟು ನೀಡಿದ ಭಾರತ

author img

By ETV Bharat Karnataka Team

Published : Sep 23, 2023, 1:25 PM IST

Representative image
ಪ್ರಾತಿನಿಧಿಕ ಚಿತ್ರ

'ಪಿಒಕೆ ತೆರವು ಮಾಡಿ, ಭಯೋತ್ಪಾದನೆ ನಿಲ್ಲಿಸಿ' ಎಂದು ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾಕ್ಕೆ ಭಾರತ ಕಠಿಣ ಸಂದೇಶ ರವಾನಿಸಿದೆ.

ವಿಶ್ವಸಂಸ್ಥೆ: ಪಾಕಿಸ್ತಾನದ ಹಂಗಾಮಿ ಪ್ರಧಾನಮಂತ್ರಿ ಅನ್ವರ್ ಉಲ್ ಹಕ್‌ ಕಾಕರ್‌ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (ಯುಎನ್‌ಜಿಎ) ಜಮ್ಮು ಮತ್ತು ಕಾಶ್ಮಿರ ವಿಷಯ ಪ್ರಸ್ತಾಪಿಸಿದ್ದಕ್ಕೆ ಭಾರತ ತಿರುಗೇಟು ನೀಡಿದೆ.

ಶುಕ್ರವಾರ ನಡೆದ ವಿಶ್ವಸಂಸ್ಥೆ ಸಾಮಾನ್ಯ ಸಭೆಯ 78ನೇ ಅಧಿವೇಶನ ಉದ್ದೇಶಿಸಿ ಮಾತನಾಡಿದ್ದ ಕಾಕರ್‌, 'ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಂತಿ ಸ್ಥಾಪನೆಗೆ ಕಾಶ್ಮೀರ ವಿಷಯವೇ ನಿರ್ಣಾಯಕವಾದುದು" ಎಂದು ಪ್ರತಿಪಾದಿಸಿದರು. ಇದಕ್ಕೆ ವಿಶ್ವಸಂಸ್ಥೆಯಲ್ಲಿನ ಭಾರತದ ಕಾರ್ಯದರ್ಶಿ ಪೆಟಲ್ ಗೆಹಲೋತ್‌ ತಿರುಗೇಟು ನೀಡಿದ್ದಾರೆ. "ಪಾಕಿಸ್ತಾನ ಈ ವೇದಿಕೆಯನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಭಾರತದ ವಿರುದ್ಧ ಆಧಾರ ರಹಿತ ಮತ್ತು ದುರುದ್ದೇಶಪೂರಿತ ಪ್ರಚಾರ ಮಾಡುವ ತನ್ನ ಹಳೆಯ ಚಾಳಿ ಮುಂದುವರಿಸಿದೆ" ಎಂದರು.

"ವಿಶ್ವದಲ್ಲಿ ಅತಿ ಹೆಚ್ಚು ಅಂತರಾಷ್ಟ್ರೀಯವಾಗಿ ನಿಷೇಧಿತ ಭಯೋತ್ಪಾದಕ ತಾಣಗಳು ಮತ್ತು ವ್ಯಕ್ತಿಗಳಿಗೆ ಪಾಕಿಸ್ತಾನ ನೆಲೆಯಾಗಿದೆ. ತಾಂತ್ರಿಕ ಕುತಂತ್ರದಲ್ಲಿ ತೊಡಗುವ ಬದಲು ಮುಂಬೈ ಭಯೋತ್ಪಾದಕ ದಾಳಿಯ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಾವು ಪಾಕಿಸ್ತಾನಕ್ಕೆ ಕರೆ ನೀಡುತ್ತೇವೆ. ಘಟನೆಯಲ್ಲಿ ಬಲಿಯಾದವರು ಕುಟುಂಬಗಳ ಸದಸ್ಯರು 15 ವರ್ಷಗಳ ನಂತರವೂ ನ್ಯಾಯಕ್ಕಾಗಿ ಕಾಯುತ್ತಿದ್ದಾರೆ" ಎಂದು ಗೆಹಲೋತ್‌ ಕಟುವಾಗಿ ಪ್ರತಿಕ್ರಿಯಿಸಿದರು.

'ದಕ್ಷಿಣ ಏಷ್ಯಾದಲ್ಲಿ ಶಾಂತಿ ನೆಲೆಸಬೇಕಾದರೆ ಪಾಕಿಸ್ತಾನ 3 ಕ್ರಮಗಳನ್ನು ಕೈಗೊಳ್ಳಬೇಕು.

  • ಮೊದಲನೆಯದು, ಗಡಿಯಾಚೆಗಿನ ಉಗ್ರ ಚಟುವಟಿಕೆಗಳ ವಿರುದ್ಧ ಪಾಕಿಸ್ತಾನ ಕ್ರಮ ಕೈಗೊಳ್ಳಬೇಕು. ಜತೆಗೆ ಭಯೋತ್ಪಾದಕರಿಗೆ ಮೂಲಸೌಕರ್ಯ ಕಲ್ಪಿಸುವುದನ್ನು ತಕ್ಷಣವೇ ನಿಲ್ಲಿಸಬೇಕು.
  • ಎರಡನೆಯದಾಗಿ, ಅಕ್ರಮವಾಗಿ ಮತ್ತು ಒತ್ತಾಯ ಪೂರ್ವಕವಾಗಿ ಅತಿಕ್ರಮಣ ಮಾಡಿರುವ ಭಾರತದ ಭೂಪ್ರದೇಶದಿಂದ ಹೊರ ನಡೆಯಬೇಕು.
  • ಮೂರನೇಯದು, ಪಾಕ್​ನಲ್ಲಿ ಅಲ್ಪಸಂಖ್ಯಾತರ ವಿರುದ್ಧ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ಕೊನೆಯಾಗಬೇಕು ಎಂದು ಆಗ್ರಹಿಸಿದರು.

ತನ್ನ ಹಿಂದಿನ ಭಾಷಣದಲ್ಲಿ ಕಾಕರ್, ಭಾರತ ಸೇರಿದಂತೆ ತನ್ನ ಎಲ್ಲಾ ನೆರೆಹೊರೆಯವರೊಂದಿಗೆ ಪಾಕಿಸ್ತಾನ ಶಾಂತಿಯುತ ಮತ್ತು ಉತ್ಪಾದಕ ಸಂಬಂಧಗಳನ್ನು ಬಯಸುತ್ತದೆ ಎಂದು ಹೇಳಿದರು. ಅಲ್ಲದೇ ಪಾಕಿಸ್ತಾನ ಮತ್ತು ಭಾರತ ನಡುವಿನ ಶಾಂತಿಗೆ ಕಾಶ್ಮೀರವೇ ಕೀಲಿಕೈ ಎಂದು ಅವರು ಪ್ರತಿಪಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಗೆಹಲೋತ್‌ ಸಭೆಯ ಕಾರ್ಯಸೂಚಿ ಯಾವುದೇ ಇರಲಿ, ಜಮ್ಮು ಮತ್ತು ಕಾಶ್ಮೀರದ ವಿಚಾರವನ್ನು ಅಂತರರಾಷ್ಟ್ರೀಯ ಮಟ್ಟದ್ದಾಗಿಸಲು ಪಾಕಿಸ್ತಾನ ಹಲವು ವರ್ಷಗಳಿಂದ ವಿಶ್ವಸಂಸ್ಥೆ ಸೇರಿದಂತೆ ಜಾಗತಿಕ ವೇದಿಕೆಗಳಲ್ಲಿ ಪ್ರಯತ್ನಿಸುತ್ತಿದೆ. 'ಮಾನವ ಹಕ್ಕುಗಳ ಉಲ್ಲಂಘನೆಯ ವಿಚಾರದಲ್ಲಿ ದೇಶ ತಾನು ಹೊಂದಿರುವ ಹೀನಾಯ ದಾಖಲೆಯಿಂದ ಬೇರೆಡೆಗೆ ಗಮನ ಸೆಳೆಯಲು ಹೀಗೆ ಮಾಡುತ್ತಿದೆ ಎಂಬುದರ ಬಗ್ಗೆ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಮತ್ತು ಇತರ ಬಹುರಾಷ್ಟ್ರೀಯ ಸಂಘಟನೆಗಳಿಗೆ ಚೆನ್ನಾಗಿ ಗೊತ್ತಿದೆ. ಜಗತ್ತಿನ ಕಡೆಗೆ ಬೆರಳು ತೋರಿಸುವ ಮೊದಲು ತನ್ನ ಸ್ವಂತ ಮನೆಯನ್ನು ಸರಿಪಡಿಸಿಕೊಳ್ಳುವುದು ಒಳ್ಳೆಯದು' ಎಂದರು.

ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು-ಕಾಶ್ಮೀರ ಹಾಗೂ ಲಡಾಖ್‌ ಭಾರತದ ಅವಿಭಾಜ್ಯ ಅಂಗ. ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ಗೆ ಸಂಬಂಧಿಸಿದ ವಿಚಾರಗಳು ಸಂಪೂರ್ಣವಾಗಿ ಭಾರತದ ಆಂತರಿಕ ವಿಚಾರಗಳು. ನಮ್ಮ ದೇಶೀಯ ವಿಚಾರದ ಬಗ್ಗೆ ಹೇಳಿಕೆ ನೀಡಲು ಪಾಕಿಸ್ತಾನಕ್ಕೆ ಯಾವುದೇ ಅಧಿಕಾರವಿಲ್ಲ' ಎಂದು ಗೆಹಲೋತ್‌ ಪ್ರತಿಪಾದಿಸಿದರು.

ಅನ್ಯ ಧರ್ಮದ ಜನರ ಸ್ಥಿತಿ ಶೋಚನೀಯ: ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ವಿರುದ್ಧದ ವ್ಯವಸ್ಥಿತ ಹಿಂಸಾಚಾರದ ಇತ್ತೀಚಿನ ಉದಾಹರಣೆಯನ್ನು ಗೆಹಲೋತ್‌ ಉಲ್ಲೇಖಿಸಿದರು. ಆಗಸ್ಟ್ 2023ರಲ್ಲಿ ದೇಶದ ಫೈಸಲಾಬಾದ್ ಜಿಲ್ಲೆಯ ಜರನ್‌ವಾಲಾದಲ್ಲಿ ಅಲ್ಪಸಂಖ್ಯಾತ ಕ್ರಿಶ್ಚಿಯನ್ ಸಮುದಾಯದ ವಿರುದ್ಧ ನಡೆದ ದೊಡ್ಡ ಪ್ರಮಾಣದ ಕ್ರೌರ್ಯವನ್ನು ಅವರು ಉದಾಹರಿಸಿದರು. ಅಲ್ಲಿ ಒಟ್ಟು 19 ಚರ್ಚ್‌ಗಳನ್ನು ಮತ್ತು 89 ಕ್ರಿಶ್ಚಿಯನ್ ಮನೆಗಳನ್ನು ಸುಟ್ಟು ಹಾಕಲಾಯಿತು. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಮಹಿಳೆಯರ ಸ್ಥಿತಿ, ಮುಖ್ಯವಾಗಿ ಹಿಂದೂಗಳು, ಸಿಖ್ ಮತ್ತು ಕ್ರಿಶ್ಚಿಯನ್ನರ ಸ್ಥಿತಿ ಶೋಚನೀಯವಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗ ಪ್ರಕಟಿಸಿದ ಇತ್ತೀಚಿನ ವರದಿಯ ಪ್ರಕಾರ, ಪ್ರತಿ ವರ್ಷ ದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಅಂದಾಜು ಸಾವಿರ ಮಹಿಳೆಯರು ಅಪಹರಣ, ಬಲವಂತದ ಮತಾಂತರ ಮತ್ತು ಮದುವೆಗೆ ಒಳಗಾಗುತ್ತಿದ್ದಾರೆ ಎಂದು ಗೆಹಲೋತ್‌ ವಿವರಿಸಿದರು.

ಇದನ್ನೂ ಓದಿ: ವಿಶ್ವಸಂಸ್ಥೆಯಲ್ಲಿ ಮತ್ತೆ ಕಾಶ್ಮೀರ ವಿಷಯ ಪ್ರಸ್ತಾಪಿಸಿದ ಟರ್ಕಿ ಅಧ್ಯಕ್ಷ ಎರ್ಡೊಗನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.