ETV Bharat / international

ವಿಶ್ವಸಂಸ್ಥೆಯಲ್ಲಿ ಮತ್ತೆ ಕಾಶ್ಮೀರ ವಿಷಯ ಪ್ರಸ್ತಾಪಿಸಿದ ಟರ್ಕಿ ಅಧ್ಯಕ್ಷ ಎರ್ಡೊಗನ್

author img

By ETV Bharat Karnataka Team

Published : Sep 20, 2023, 1:13 PM IST

ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಗನ್ ಕಾಶ್ಮೀರ ವಿಷಯದಲ್ಲಿ ಮತ್ತೆ ಮೂಗು ತೂರಿಸಿದ್ದಾರೆ.

Erdogan again raises Kashmir at UN
Erdogan again raises Kashmir at UN

ವಿಶ್ವಸಂಸ್ಥೆ: ಭಾರತ ಮತ್ತು ಪಾಕಿಸ್ತಾನಗಳು ಮಾತುಕತೆಯ ಮೂಲಕ ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಿಕೊಂಡರೆ ಪ್ರಾದೇಶಿಕ ಸ್ಥಿರತೆ ಸಾಧ್ಯವಾಗುತ್ತದೆ ಎಂದು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಗನ್ ಹೇಳಿದ್ದಾರೆ. ಈ ಮೂಲಕ ಅವರು ಮತ್ತೊಮ್ಮೆ ಕಾಶ್ಮೀರ ವಿಷಯದಲ್ಲಿ ಅನಗತ್ಯವಾಗಿ ಹಸ್ತಕ್ಷೇಪ ಮಾಡಿದ್ದಾರೆ.

"ಭಾರತ ಮತ್ತು ಪಾಕಿಸ್ತಾನಗಳು ಮಾತುಕತೆಯ ಮೂಲಕ ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸುವುದು ಸಾಧ್ಯವಾದರೆ ಅದು ದಕ್ಷಿಣ ಏಷ್ಯಾದಲ್ಲಿ ಪ್ರಾದೇಶಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗೆ ದಾರಿ ಮಾಡಿಕೊಡಲಿದೆ" ಎಂದು ಅವರು ಮಂಗಳವಾರ ಉನ್ನತ ಮಟ್ಟದ ಯುಎನ್ ಜನರಲ್ ಅಸೆಂಬ್ಲಿ ಸಭೆಯಲ್ಲಿ ಹೇಳಿದರು. "ಈ ದಿಕ್ಕಿನಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ತುರ್ಕಿಯೆ ಬೆಂಬಲಿಸುವುದನ್ನು ಮುಂದುವರಿಸುತ್ತದೆ" ಎಂದು ಅವರು ತಿಳಿಸಿದರು.

ಆದರೆ ಎರ್ಡೊಗನ್ ಅವರ ಕಾಶ್ಮೀರ ಕುರಿತಾದ ಹೇಳಿಕೆಯು ಕಳೆದ ಎರಡು ವರ್ಷಗಳಂತೆ ಸೌಮ್ಯವಾಗಿಯೇ ಇತ್ತು ಮತ್ತು ವಿಶ್ವಸಂಸ್ಥೆಯ ನಿರ್ಣಯ ಅಥವಾ ನೇರ ಮಧ್ಯಸ್ಥಿಕೆ ಪ್ರಸ್ತಾಪದ ಉಲ್ಲೇಖಗಳನ್ನು ತಪ್ಪಿಸುವ ಮೂಲಕ, ಕಾಶ್ಮೀರ ವಿವಾದವು ದ್ವಿಪಕ್ಷೀಯ ವಿಷಯವಾಗಿದೆ ಎಂಬ ಭಾರತದ ನಿಲುವಿಗೆ ಅವರ ಹೇಳಿಕೆ ಹತ್ತಿರವಾಗಿದೆ. 2020 ರಲ್ಲಿ ಎರ್ಡೊಗನ್ ಕಾಶ್ಮೀರ ಪರಿಸ್ಥಿತಿಯನ್ನು ಜ್ವಲಂತ ಸಮಸ್ಯೆ ಎಂದು ಕರೆದಿದ್ದರು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ್ದನ್ನು ಟೀಕಿಸಿದ್ದರು.

ಕಳೆದ ವರ್ಷ, ಎರ್ಡೊಗನ್ ಮತ್ತು ಆಗಿನ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮಾತ್ರ ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯವನ್ನು ಉಲ್ಲೇಖಿಸಿದ ಇಬ್ಬರು ನಾಯಕರಾಗಿದ್ದಾರೆ. ಇಸ್ಲಾಮಾಬಾದ್​ನ ಲಾಬಿಯ ಹೊರತಾಗಿಯೂ ಇತರ 191 ದೇಶಗಳ ನಾಯಕರು ಕಾಶ್ಮೀರ ವಿಷಯವನ್ನು ನಿರ್ಲಕ್ಷಿಸಿದ್ದರು.

ಇಸ್ಲಾಂ ಹೆಸರಿನಲ್ಲಿ ಮಹಿಳೆಯರು ಮತ್ತು ಬಾಲಕಿಯರ ಶಿಕ್ಷಣದ ಮೇಲೆ ನಿಷೇಧ ಹೇರಿರುವ ತಾಲಿಬಾನ್ ಆಡಳಿತಕ್ಕೆ ಸಂಕೇತ ನೀಡಿದ ಎರ್ಡೊಗನ್, ತಾಲಿಬಾನ್ ಇಂಥ ನಿರ್ಬಂಧಗಳನ್ನು ಕೈಬಿಟ್ಟರೆ ಅದನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ವೀಕರಿಸಲಾಗುವುದು ಎಂದು ಹೇಳಿದರು.

"ಅಫ್ಘಾನಿಸ್ತಾನದ ಮಧ್ಯಂತರ ಸರ್ಕಾರವನ್ನು ಸಮಾಜದ ಎಲ್ಲಾ ವರ್ಗಗಳನ್ನು ನ್ಯಾಯಯುತವಾಗಿ ಪ್ರತಿನಿಧಿಸುವ ಅಂತರ್ಗತ ಆಡಳಿತವಾಗಿ ಪರಿವರ್ತಿಸುವುದು ಅಫ್ಘಾನಿಸ್ತಾನವನ್ನು ಅಂತರರಾಷ್ಟ್ರೀಯ ರಂಗದಲ್ಲಿ ಸಕಾರಾತ್ಮಕವಾಗಿ ಸ್ವೀಕರಿಸಲು ದಾರಿ ಮಾಡಿಕೊಡುತ್ತದೆ" ಎಂದು ಅವರು ಹೇಳಿದರು. ಮುಸ್ಲಿಮರಾಗಿರುವ ಉಯಿಘರ್ ಅಲ್ಪಸಂಖ್ಯಾತರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿರುವ ಚೀನಾದ ಕ್ರಮವನ್ನು ಇದೇ ಸಂದರ್ಭದಲ್ಲಿ ಅವರು ಟೀಕಿಸಿದರು. "ಬಲವಾದ ಐತಿಹಾಸಿಕ ಮತ್ತು ಮಾನವೀಯ ಸಂಬಂಧಗಳನ್ನು ಹೊಂದಿರುವ ಉಯಿಘರ್ ಟರ್ಕರ ಮೂಲಭೂತ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳ ರಕ್ಷಣೆಯ ಬಗ್ಗೆ ನಮ್ಮ ಕಾಳಜಿ ವ್ಯಕ್ತಪಡಿಸುವುದನ್ನು ಮುಂದುವರಿಸುತ್ತೇವೆ" ಎಂದು ಅವರು ಹೇಳಿದರು.

ಇದನ್ನೂ ಓದಿ : ಬಂಡವಾಳ ಹೂಡುವಂತೆ ಪಾಶ್ಚಿಮಾತ್ಯ ಕಂಪನಿಗಳ ಓಲೈಕೆಗೆ ಮುಂದಾದ ಚೀನಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.