ETV Bharat / international

ಇಸ್ರೇಲ್ ಡ್ರೋನ್​ ದಾಳಿ: ಹಮಾಸ್ ಉಪನಾಯಕ ಸಲೇಹ್ ಅಲ್ ಅರೂರಿ ಸಾವು

author img

By ANI

Published : Jan 3, 2024, 9:09 AM IST

aleh al Arouri
ಸಲೇಹ್ ಅಲ್ ಅರೂರಿ

ಲೆಬನಾನ್​​ ರಾಜಧಾನಿ ಬೈರುತ್‌ನಲ್ಲಿ ಮಂಗಳವಾರ ಇಸ್ರೇಲ್ ನಡೆಸಿದ ದಾಳಿಯಲ್ಲಿ ಹಮಾಸ್ ಉಪ ನಾಯಕ ಸಲೇಹ್ ಅಲ್ ಅರೂರಿ ಸಾವನ್ನಪ್ಪಿದ್ದಾರೆ.

ಟೆಲ್ ಅವೀವ್ : ಹಮಾಸ್ ಮತ್ತು ಇಸ್ರೇಲ್ ನಡುವೆ ಕಳೆದ 3 ತಿಂಗಳಿಂದ ಯುದ್ಧ ನಡೆಯುತ್ತಿದೆ. ಇಸ್ರೇಲಿ ಸೇನೆಯು ಗಾಜಾ ಪಟ್ಟಿಯಲ್ಲಿ ನಿರಂತರವಾಗಿ ಕಾರ್ಯಾಚರಣೆಯಲ್ಲಿ ತೊಡಗಿದೆ. ಈ ಬೆನ್ನಲ್ಲೇ ಲೆಬನಾನಿನ ರಾಜಧಾನಿ ಬೈರುತ್‌ನಲ್ಲಿ ಮಂಗಳವಾರ ಇಸ್ರೇಲಿ ಪಡೆಗಳು ನಡೆಸಿದ ಡ್ರೋನ್ ದಾಳಿಯಲ್ಲಿ ಹಮಾಸ್ ಉಪ ನಾಯಕ ಸಲೇಹ್ ಅಲ್ ಅರೂರಿ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಈ ಕುರಿತು ಹಮಾಸ್ ಸಂಘಟನೆ ಕೂಡ ದೃಢಪಡಿಸಿದೆ.

57 ವರ್ಷ ವಯಸ್ಸಿನ ಲೆಬನಾನ್ ನಿವಾಸಿ ಸಲೇಹ್ ಅಲ್ ಅರೂರಿ ಅವರು ಹಮಾಸ್‌ನ ಪಾಲಿಟ್‌ಬ್ಯೂರೋದಲ್ಲಿ ಹಿರಿಯ ಅಧಿಕಾರಿಯಾಗಿದ್ದರು. ಹಮಾಸ್‌ನ ಮಿಲಿಟರಿ ವಿಭಾಗದ ಮುಖ್ಯಸ್ಥರಾಗಿ ಪರಿಗಣಿಸಲ್ಪಟ್ಟಿದ್ದರು. ಮತ್ತು ಖಾಸಿಮ್ ಬ್ರಿಗೇಡ್ಸ್‌ನ ಸಂಸ್ಥಾಪಕರಲ್ಲಿ ಒಬ್ಬರು. ಈ ಬ್ರಿಗೇಡ್ ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ದಾಳಿ ಮಾಡಿತು. ಕಳೆದ ವರ್ಷ ಅಮೆರಿಕ ಅರೂರಿಗೆ ಐದು ಮಿಲಿಯನ್ ಡಾಲರ್ ಬಹುಮಾನ ಘೋಷಿಸಿತ್ತು.

ಅಲ್ ಅರೂರಿ ಬೈರುತ್‌ಗೆ ಸ್ಥಳಾಂತರಗೊಳ್ಳುವ ಮೊದಲು ಸಿರಿಯಾದಲ್ಲಿ ವಾಸಿಸುತ್ತಿದ್ದರು. ಅಲ್ಲಿಂದ ಅವರು ವೆಸ್ಟ್ ಬ್ಯಾಂಕ್‌ನಲ್ಲಿ ಹಮಾಸ್ ಮಿಲಿಟರಿ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡಿದರು, ಭಯೋತ್ಪಾದಕ ಕೃತ್ಯಗಳನ್ನು ಪ್ರೋತ್ಸಾಹಿಸಿದರು ಮತ್ತು ದಾಳಿಗಳಿಗೆ ಹಣಕಾಸು ಒದಗಿಸಲು ನೆರವು ನೀಡುತ್ತಿದ್ದರು. ಜೊತೆಗೆ, ಇರಾನ್ ಮತ್ತು ಲೆಬನಾನ್‌ನಲ್ಲಿರುವ ಭಯೋತ್ಪಾದಕ ಸಂಘಟನೆ ಹೆಜ್ಬೊಲ್ಲಾ ಜೊತೆ ನಿಕಟ ಸಂಬಂಧ ಹೊಂದಿದ್ದ ಹಮಾಸ್ ಅಧಿಕಾರಿಗಳಲ್ಲಿ ಒಬ್ಬರಾಗಿದ್ದರು.

ಸಲೇಹ್ ಕೊಲೆಗೆ ಖಂಡನೆ : ಈ ಮಧ್ಯೆ, ಲೆಬನಾನ್‌ನ ಹಂಗಾಮಿ ಪ್ರಧಾನಿ ನಜೀಬ್ ಮಿಕಾಟಿ ಸಲೇಹ್ ಅಲ್ ಅರೂರಿ ಹತ್ಯೆಯನ್ನು ಖಂಡಿಸಿದ್ದಾರೆ. ಹಮಾಸ್‌ನ ಉಪ ನಾಯಕನ ಹತ್ಯೆ 'ಇಸ್ರೇಲ್​ನ ಅಪರಾಧ' ಎಂದಿದ್ದಾರೆ. ಅಲ್ಲದೆ, ಲೆಬನಾನ್ ಅನ್ನು ಸಂಘರ್ಷಕ್ಕೆ ಎಳೆಯುವುದು ಇಸ್ರೇಲ್‌ನ ಗುರಿಯಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಆರು ಜನರು ಬಲಿ : ಮಂಗಳವಾರ ರಾತ್ರಿ ದಹಿಯಾದಲ್ಲಿರುವ ಹಮಾಸ್ ಕಚೇರಿ ಮೇಲೆ ಇಸ್ರೇಲಿ ಡ್ರೋನ್‌ಗಳು ದಾಳಿ ಮಾಡಿದ್ದು, ಒಟ್ಟು ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಲೆಬನಾನ್‌ನ ಸುದ್ದಿ ಸಂಸ್ಥೆ ವರದಿ ಮಾಡಿದೆ. ಸಲೇಹ್ ಅಲ್ ಅರೂರಿ ಜೊತೆಗೆ ವೈದ್ಯರು ಸೇರಿದಂತೆ ಗುರುತಿಸಲಾಗದ ಇತರೆ ಜನರು ಸೇರಿದ್ದಾರೆ. ಆದರೆ, ಹಮಾಸ್‌ನ ಹಿರಿಯ ನಾಯಕನ ಹತ್ಯೆ ಮಾಡಿರುವ ಬಗ್ಗೆ ಇಸ್ರೇಲ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ : ಭಾಗಶಃ ಕದನವಿರಾಮ ಪ್ರಸ್ತಾಪಿಸಿದ ಇಸ್ರೇಲ್ ; ಒತ್ತೆಯಾಳು ಬಿಡಲ್ಲ ಎಂದ ಹಮಾಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.