ETV Bharat / international

ಮ್ಯಾನ್ಮಾರ್ ಮೂಲಕ ಹಿಂದೂ ಮಹಾಸಾಗರಕ್ಕೆ ಮತ್ತೊಂದು ಮಾರ್ಗ ತೆರೆದ ಡ್ರ್ಯಾಗನ್

author img

By

Published : Aug 31, 2021, 5:36 PM IST

ಡ್ರ್ಯಾಗನ್ ರಾಷ್ಟ್ರ
ಡ್ರ್ಯಾಗನ್ ರಾಷ್ಟ್ರ

ವ್ಯಾಪಾರದ ಅನುಕೂಲಕ್ಕಾಗಿ ಚೀನಾ, ಮ್ಯಾನ್ಮಾರ್ ಮೂಲಕ ಹಿಂದೂ ಮಹಾಸಾಗರ ಸಂಪರ್ಕಿಸುವ ರೈಲು ಮಾರ್ಗವನ್ನು ನಿರ್ಮಿಸಿದೆ.

ಬೀಜಿಂಗ್: ಆಗಸ್ಟ್ 25 ರಂದು ಮ್ಯಾನ್ಮಾರ್ ಮೂಲಕ ಹಿಂದೂ ಮಹಾಸಾಗರ ಪ್ರವೇಶಿಸುವ ಹೊಸ ರೈಲು ಮಾರ್ಗವನ್ನು ಚೀನಾ ಗಡಿಯಲ್ಲಿ ಉದ್ಘಾಟಿಸಲಾಗಿದೆ. ಸಿಚುವಾನ್​ ಪ್ರಾಂತ್ಯದ ರಾಜಧಾನಿಯಾದ ಚೆಂಗ್ಡುವಿನಿಂದ ಚೀನಾದ ಯುನ್ನಾನ್ ಪ್ರಾಂತ್ಯ ಹಾಗೂ ಮ್ಯಾನ್ಮಾರ್​ನ ಚಿನ್​ ಶ್ವೆ ಹಾವ್​ವರೆಗೂ ಈ ರೈಲು ಮಾರ್ಗ ವಿಸ್ತರಿಸಿದೆ.

ಈ ರೈಲು ಮಾರ್ಗವು ಚೀನಾಗೆ ಸಿಂಗಾಪುರ ಬಂದರಿನಿಂದ ಮ್ಯಾನ್ಮಾರ್ ಮೂಲಕ ಸರಕು ಸಾಗಿಸಲು ಅನುವು ಮಾಡಿಕೊಡುತ್ತದೆ. ಸಿಂಗಾಪುರ ಬಂದರಿಂದ ಯಾಂಗೋನ್ ಬಂದರಿಗೆ ಸರಕುಗಳನ್ನು ಸಾಗಿಸಲಾಗುವುದು. ಅಲ್ಲಿಂದ ಅದನ್ನು ಕೊಕಾಂಗ್ ಸ್ವ - ಆಡಳಿತ ವಲಯದ ಚಿನ್ ಶ್ವೇ ಹಾವ್‌ಗೆ ರಸ್ತೆಯ ಮೂಲಕ ಸಾಗಿಸಲಾಗುತ್ತದೆ. ನಂತರ ಲಿಂಕಾಂಗ್‌ನಿಂದ ಚೆಂಗ್ಡುಗೆ ರೈಲಿನ ಮೂಲಕ ಸಾಗಿಸಲಾಗುತ್ತದೆ. ಮ್ಯಾನ್ಮಾರ್‌ನ ಚೀನೀ ರಾಯಭಾರ ಕಚೇರಿಯ ಪ್ರಕಾರ, ಲಿಂಕಾಂಗ್‌ನಿಂದ ರೈಲ್ವೆ ಮೂಲಕ ಚೆಂಗ್ಡುಗೆ ಹೋಗಲು ಮೂರು ದಿನಗಳು ಬೇಕಾಗುತ್ತದೆ.

ಈ ಮಾರ್ಗವು ಪಶ್ಚಿಮ ಚೀನಾವನ್ನು ಹಿಂದೂ ಮಹಾಸಾಗರದೊಂದಿಗೆ ಸಂಪರ್ಕಿಸುವ ಮೊದಲ ಮಾರ್ಗವಾಗಿದೆ. ಜತೆಗೆ ಯುನಾನ್ ಪ್ರಾಂತ್ಯಕ್ಕೆ ಸರಕುಗಳನ್ನು ಆಮದು ಮಾಡಿಕೊಳ್ಳಲು ಬೇಕಾದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಈ ಮಾರ್ಗವು ಮ್ಯಾನ್ಮಾರ್ ಭಾಗದಲ್ಲಿ ಮಂಡಲೇ, ಲಶಿಯೊ ಮತ್ತು ಹ್ಸೆನ್ವಿ ಮೂಲಕ ಹಾದು ಹೋಗುತ್ತದೆ. ಈ ಮಾರ್ಗವು ಮ್ಯಾನ್ಮಾರ್ ನ ಸೇನಾ ಆಡಳಿತಕ್ಕೆ ಆದಾಯ ಒದಗಿಸುತ್ತಿದ್ದು, ಚೀನಾ ಮತ್ತು ಮ್ಯಾನ್ಮಾರ್ ಗೆ ಅಂತಾರಾಷ್ಟ್ರೀಯ ವ್ಯಾಪಾರದ ಜೀವನಾಡಿಯಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: ತಾಲಿಬಾನ್‌ಗೆ ಭಾರತದ ಜೊತೆ ವ್ಯಾಪಾರ ಸಂಬಂಧ ಮುಂದುವರಿಸುವ ಬಯಕೆ

ಬೀಜಿಂಗ್‌ನ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ (ಬಿಆರ್‌ಐ) ನ ಭಾಗವಾಗಿ ಚಿನ್ ಶ್ವೇ ಹಾವ್​​ನಲ್ಲಿ ಗಡಿ ಆರ್ಥಿಕ ಸಹಕಾರ ವಲಯ ಸ್ಥಾಪಿಸಲು ಕ್ರಮಗಳು ನಡೆಯುತ್ತಿವೆ. ಈ ಮಾರ್ಗವು ಯುನ್ನಾನ್ ಪ್ರಾಂತ್ಯದ ಆಮದು ಮತ್ತು ರಫ್ತಿಗೆ ಮಧ್ಯಂತರ ಆರ್ಥಿಕ ಕೇಂದ್ರವಾಗಿ ಪರಿಣಮಿಸುತ್ತದೆ.

ಚೀನಾದ ಈ ನಿರ್ಧಾರ ಭಾರತಕ್ಕೆ ಅಪಾಯವೇ ಸರಿ. ಮತ್ತೊಂದು ಮಾರ್ಗ ತೆರೆದಿರುವ ಚೀನಾ ನಿಧಾನವಾಗಿ ಹಿಂದೂಮಹಾಸಾಗರದ ಮೇಲೆ ನಿಯಂತ್ರಣ ಹೊಂದಲು ಮಾಡಿರುವ ಮೆಗಾ ಪ್ಲಾನ್​ ಎಂದೇ ವಿಶ್ಲೇಷಿಸಲಾಗುತ್ತಿದೆ. ಮೊದಲೇ ಭಾರತದ ಮೇಲೆ ವಾಣಿಜ್ಯಿಕ ವ್ಯವಹಾರದ ಜತೆ ದ್ವೇಷವನ್ನು ಹೊಂದಿರುವ ಚೀನಾ ಏನಾದರೂ ಪ್ಲಾನ್​ ಮಾಡುತ್ತಲೇ ಇರುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.