ETV Bharat / entertainment

'ಸುವರ್ಣ ಅನಂತ ಸಂಭ್ರಮ'ದಲ್ಲಿ ಚಿತ್ರರಂಗದ ನೆನಪಿನ ಬುತ್ತಿ ತೆರೆದಿಟ್ಟ ಮೇರು ನಟ

author img

By

Published : Aug 15, 2023, 11:50 AM IST

Updated : Aug 15, 2023, 1:08 PM IST

Anant Nag
'ಸುವರ್ಣ ಅನಂತ ಸಂಭ್ರಮ'

ಚಂದನವನದಲ್ಲಿ ಐವತ್ತು ವರ್ಷ ಪೂರೈಸಿರುವ ಕನ್ನಡದ ಮೇರು ನಟ ಅನಂತ್​ ನಾಗ್​ ಅವರಿಗೆ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯು ಗೌರವ ಸಮರ್ಪಿಸಿದೆ.

ಅನಂತ್​ ನಾಗ್​ ಜೊತೆ ನಟ‌ ರಮೇಶ್‌ ಅರವಿಂದ್ ಸಂವಾದ

ಭಾರತೀಯ ಚಿತ್ರರಂಗದಲ್ಲಿ ತಮ್ಮ ಅಮೋಘ ಅಭಿನಯದಿಂದಲೇ ಹೆಸರು ಮಾಡಿರುವ ನಟ ಅನಂತ್​ ನಾಗ್.‌ ಈ‌ ಎವರ್​ಗ್ರೀನ್ ಸ್ಟಾರ್​ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಐದು ದಶಕಗಳೇ ಕಳೆದಿದೆ. ಈ ಹಿನ್ನೆಲೆಯಲ್ಲಿ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯು 'ಸುವರ್ಣ ಅನಂತ ಸಂಭ್ರಮ' ಎಂಬ ಕಾರ್ಯಕ್ರಮ ಆಯೋಜಿಸಿ ಮೇರು ನಟನಿಗೆ ಅಭಿನಂದನೆ ಸಲ್ಲಿಸಿತು. ಈ ಸಂದರ್ಭದಲ್ಲಿ ಅನಂತ್​ ನಾಗ್​ ಜೊತೆ ನಟ‌ ರಮೇಶ್‌ ಅರವಿಂದ್ ಸಂವಾದ ನಡೆಸಿದರು.

ಸತತ ಐವತ್ತು ವರ್ಷದ ಸಿನಿ ಪಯಣವನ್ನು ಮೆಲುಕು ಹಾಕಿದ ಅನಂತ್​ ನಾಗ್ ಅವರು ಬಾಲ್ಯದ ದಿನಗಳು, ಅಧ್ಯಾತ್ಮಿಕ ವಾತಾವರಣ, ಸಂಗೀತ, ತಬಲಾ ಕಲಿತಿದ್ದು, ನಂತರ ಮುಂಬೈಗೆ ಹೋಗಿ ಒಂದಷ್ಟು ವರ್ಷಗಳ ಕಾಲ ಕೆಲಸ ಮಾಡುತ್ತಾ ಮಧ್ಯೆ ರಂಗಭೂಮಿ ಹೋಗಿ ಪಾತ್ರಗಳನ್ನು ಮಾಡಿದ ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡರು.

ಆ ದಿನಗಳನ್ನು ಮೆಲುಕು ಹಾಕಿದ ಅವರು, "ನನ್ನ ಬಾಲ್ಯದ ದಿನಗಳು ಅಧ್ಯಾತ್ಮಿಕ ವಾತಾವರಣದಲ್ಲಿತ್ತು. ಅಲ್ಲೆಲ್ಲ ಸಂಗೀತ, ಹಾರ್ಮೋನಿಯಮ್​, ತಬಲ ಕಲಿತೆ‌. ಆಗ ನನಗೆ ಯಾವುದೇ ನಿರ್ದಿಷ್ಟವಾದ ಗುರಿ ಇರಲಿಲ್ಲ. ಒಮ್ಮೆ ವಿಜ್ಞಾನ ಮತ್ತೊಮ್ಮೆ ಆರ್ಟ್ಸ್​, ಕಾಮರ್ಸ್​ ಅಂತ ಬದಲಾಯಿಸುತ್ತಿದ್ದೆ. ಸುಮಾರು ಐದು ವರ್ಷ ರಂಗಭೂಮಿಯಲ್ಲಿ ಕಳೆದೆ. ಚಿಕ್ಕಂದಿನಿಂದಲೂ ಇನ್ನೊಬ್ಬರ ಹಾವಭಾವವನ್ನು ನೋಡಿ ನಕಲು ಮಾಡುವ ಅಭ್ಯಾಸವಿತ್ತು. ಅದು ನಂತರ ಮಠಗಳಲ್ಲಿ ಕಲಿತ ಮಂತ್ರಘೋಷ ಕಲೆಗೆ ಹಾಗೂ ಸ್ಪಷ್ಟ ಉಚ್ಚಾರಣೆಗೆ ಪೂರಕವಾದವು" ಎಂದು ಹೇಳಿದರು.

ಅನಂತನಾಗ್ ಅವರಿಗೆ ಪರೀಕ್ಷೆ ಎಂದರೆ ದೊಡ್ಡ ಭಯವಿತ್ತಂತೆ. ಅದು ಬಿಟ್ಟರೆ ಭಯ, ಸಿಟ್ಟು ಎಲ್ಲ ಕಡಿಮೆ. ಇನ್ನು, ನಟನೆಯ ವಿಷಯಕ್ಕೆ ಬಂದರೆ, ಹಾಸ್ಯದ ಪಾತ್ರಗಳು ನೋಡೋಕೆ ಚೆಂದ, ಆದರೆ ನಟಿಸುವುದು ಬಹಳ ಕಷ್ಟ ಎಂದು ನಗುತ್ತಾ ಹೇಳಿದರು. ಇದರ ಜೊತೆಗೆ ರಮೇಶ್ ಅರವಿಂದ್ ಕೇಳಿದ ಸಾಕಷ್ಟು ಪ್ರಶ್ನೆಗಳಿಗೆ ಉತ್ತರಿಸಿದ ಅನಂತನಾಗ್, "ಭಗವಂತನ ಶಕ್ತಿ ಇಲ್ಲದೆ ಏನನ್ನೂ ಸಾಧಿಸುವುದು ಸಾಧ್ಯವಿಲ್ಲ. ನಾನೊಬ್ಬ ತೆರೆಯ ಮೇಲೆ ಕಾಣುತ್ತೇನೆ ಎಂದರೆ ಅದರ ಹಿಂದೆ ಅನೇಕರ ಶ್ರಮವಿರುತ್ತದೆ. ಕಥೆ ಬರೆದವರು, ನಿರ್ದೇಶಕರು, ಕ್ಯಾಮರಾ ಹೀಗೆ ಹಲವರು. ಅವರೆಲ್ಲರ ಶಕ್ತಿ ಜೊತೆಗೆ ದೇವರ ಕೃಪೆಯು ಇರಬೇಕು ಅಥವಾ ಆ ಶಕ್ತಿಗಳನ್ನೇ ದೇವರು ಎಂದು ನಂಬುತ್ತೇನೆ. ಬಹಳಷ್ಟು ರಿಹರ್ಸಲ್ ಬಳಿಕವೂ ಒಮ್ಮೊಮ್ಮೆ ತೆರೆಯ ಮೇಲೆ ಅಂದುಕೊಂಡಿದ್ದಕ್ಕಿಂತಲೂ ವಿಭಿನ್ನವಾಗಿ ಮೂಡಿಬರುತ್ತದೆ ಎಂದರೆ ಅಲ್ಲಿ ಏನೋ ಶಕ್ತಿ ಕೆಲಸ ಮಾಡುತ್ತಿದೆ ಎಂದರ್ಥ" ಎಂದು ಮನಬಿಚ್ಚಿ ಮಾತನಾಡಿದರು.

ಒಮ್ಮೆ ಬಾಲಿವುಡ್ ನಟ ಪಂಕಜ್ ತ್ರಿಪಾಠಿ ಅವರಿಗೆ ನಿಮ್ಮ ಇಷ್ಟದ ನಟ ಯಾರು? ಎಂಬ ಪ್ರಶ್ನೆ ಎದುರಾಗಿತ್ತಂತೆ. ಈ ವೇಳೆ,ಅವರು ಹೇಳಿದ ಉತ್ತರ ಅನಂತ್​ ನಾಗ್​. ರಮೇಶ್ ಅರವಿಂದ್ ಅವರ ಮತ್ತೆ ಕೆಲವೊಂದು ಪ್ರಶ್ನೆಗೆ ಉತ್ತರಿಸಿದ ಅನಂತ್​ ನಾಗ್, "ನಿಜವಾದ ನಾಯಕ ಎಂದರೆ ತೆರಯ ಮೇಲೆ ಅನೇಕರು ನಾಯಕನ ಪಾತ್ರದಲ್ಲಿ ಮಿಂಚುತ್ತಾರೆ. ಜೀವನದಲ್ಲಿ ಯಾರು ನಿಜವಾಗಿಯೂ ಬಹಳ ಕಷ್ಟ ಪಡುತ್ತಾನೋ, ಯಾರು ತನಗೆ ಒಪ್ಪಿಸಿದ ಕೆಲಸವನ್ನು ಜವಾಬ್ದಾರಿಯುತವಾಗಿ ನಿರ್ವಹಿಸುತ್ತಾನೋ ಆತ ನಿಜವಾದ ನಾಯಕ. ಹಾಗೆ, ಯಾವುದೇ ಕೆಲಸ ಮಾಡಬೇಕಾದರೂ ಗುರು ಬೇಕಾಗುತ್ತಾರೆ. ಗುರು ಇಲ್ಲದಿದ್ದರೆ ಬ್ರಹ್ಮ, ವಿಷ್ಣು, ಮಹೇಶ್ವರ, ರಾಮ, ಕೃಷ್ಣ ಹೀಗೆ ದೇವರುಗಳ ಕಲ್ಪನೆ ಬರುವುದೇ ಕಷ್ಟವಾಗುತ್ತಿತ್ತು" ಎಂದ ಅವರು ಗುರುವಿನ ಬಗ್ಗೆ ಒಂದು ಹಾಡು ಕೂಡ ಹಾಡಿದರು.

ಅನಂತನಾಗ್ ಅವರ ಸಿಟ್ಟಿನ ಬಗ್ಗೆ ಪತ್ನಿ ಗಾಯತ್ರಿ ಒಂದು ಘಟನೆಯನ್ನು ನೆನಪಿಸಿಕೊಂಡರು‌‌. ಅನಂತನಾಗ್ ‌ಅವರಿಗೆ ಕೋಪ ಸಿಕ್ಕಾಪಟ್ಟೆ ಬರುತ್ತದೆ. ಒಂದು ಹೊಟೆಲ್​ನಲ್ಲಿ ದಕ್ಷಿಣ ಭಾರತ ಊಟ ಇರಲಿಲ್ಲ ಎಂದಿದ್ದಕ್ಕೆ 'ಕರ್ನಾಟಕದಲ್ಲಿದ್ದುಕೊಂಡು ಇಲ್ಲಿನ ಊಟ ಇಲ್ಲ ಅಂತೀರಲ್ಲ' ಎಂದು ರೇಗಾಡಿದ್ದರು ಎಂದು ಹೇಳಿದರು.

ಇದರ ಜೊತೆಗೆ "ರಾಘವೇಂದ್ರ ಚಿತ್ರವಾಣಿ ಸಂಸ್ಥಾಪಕ ಡಿ.ವಿ.ಸುದೀಂದ್ರ ಅವರೊಂದಿಗೆ ಉತ್ತಮ ಒಡನಾಟವಿತ್ತು. 'ಗಣೇಶನ ಮದುವೆ' ಚಿತ್ರ ನಿರ್ಮಾಣ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಂಸ್ಥೆ ಮುನ್ನಡೆಸಿಕೊಂಡು ಹೋಗುತ್ತಿರುವ ವೆಂಕಟೇಶ್, ವಾಸು ಮತ್ತು ಸುನಿಲ್ ಅವರುಗಳಿಗೆ ಕೃತಜ್ಞತೆ ಸಲ್ಲಿಸಬೇಕು. 90ರ ದಶಕದಲ್ಲಿ ರಾಜಕೀಯಕ್ಕೆ ಪ್ರವೇಶ ಮಾಡಿ ಮಂತ್ರಿಯೂ ಆದೆ. ಅದು ಸರಿಹೋಗುವುದಿಲ್ಲ ಎಂದು ಮರಳಿ ಬಣ್ಣದ ಲೋಕಕ್ಕೆ ಬಂದೆ. ಸರಿಯಾದ ತರಬೇತಿ ಇರದ ಕಾರಣ ಗಾಯನ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಹಾಡುವ ಸಾಹಸಕ್ಕೆ ಹೋಗಲಿಲ್ಲ. ಹಾಗೆ ನೋಡಿದರೆ ಎಲ್ಲರಲ್ಲೂ ಒಬ್ಬ ಗಾಯಕ, ನಟ, ಕಲಾವಿದ ಇರುತ್ತಾನೆ. ಈ ರಂಗದಲ್ಲಿ ನನಗೆ ಆಗದ ಜನರು ಯಾರು ಇಲ್ಲ" ಎಂದು ಅನೇಕ ವಿಚಾರಗಳನ್ನು ತೆರೆದಿಟ್ಟರು.

ಇದನ್ನೂ ಓದಿ: ಅನಂತ್​ ನಾಗ್ ಸಿನಿ ಪಯಣಕ್ಕೆ 50ರ ಸಂಭ್ರಮ.. ಎವರ್ ಗ್ರೀನ್ ಹೀರೋನ ಅಪರೂಪದ ಫೋಟೋಗಳು ನಿಮಗಾಗಿ

Last Updated :Aug 15, 2023, 1:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.