ETV Bharat / entertainment

ಕಲರ್​ಫುಲ್​ ಬಿಗ್​ ಬಾಸ್​ ಮನೆಗೆ ಎಂಎಲ್​ಎ ಪ್ರದೀಪ್​ ಈಶ್ವರ್​ ಎಂಟ್ರಿ

author img

By ETV Bharat Karnataka Team

Published : Oct 9, 2023, 12:30 PM IST

Updated : Oct 9, 2023, 1:25 PM IST

MLA Pradeep Eshwar entry to bigg boss season 10
ಬಿಗ್​ ಬಾಸ್​ ಮನೆಗೆ ಎಂಎಲ್​ಎ ಪ್ರದೀಪ್​ ಈಶ್ವರ್​ ಎಂಟ್ರಿ

ಬಿಗ್​ ಬಾಸ್​ ಸೀಸನ್​ 10ರ ಸ್ಪರ್ಧಿಯಾಗಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್​ ಈಶ್ವರ್​ ದೊಡ್ಮನೆಗೆ ಅಚ್ಚರಿಯ ಎಂಟ್ರಿ ಕೊಟ್ಟಿದ್ದಾರೆ.

'ಬಿಗ್​ ಬಾಸ್​'.. ಕನ್ನಡದ ಜನಪ್ರಿಯ ರಿಯಾಲಿಟಿ ಶೋನ 10ನೇ ಸೀಸನ್​ ಭಾನುವಾರದಿಂದ ಆರಂಭವಾಗಿದೆ. ಕಿಚ್ಚ ಸುದೀಪ್​ ಸಾರಥ್ಯದ 100 ದಿನಗಳ ಕಾರ್ಯಕ್ರಮವು ನಿನ್ನೆ ಗ್ರ್ಯಾಂಡ್​​ ಲಾಂಚ್​ ಆಗಿದೆ. ಈ ವೇಳೆಯೇ ಕಲರ್​ಫುಲ್​ ಬಿಗ್​ ಬಾಸ್​ ಮನೆಗೆ ಸ್ಪರ್ಧಿಗಳು ಪ್ರವೇಶಿಸಿದ್ದಾರೆ. ಇದೀಗ ಒಂದು ದಿನ ತಡವಾಗಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್​ ಈಶ್ವರ್​ ದೊಡ್ಮನೆಗೆ ಅಚ್ಚರಿಯ ಎಂಟ್ರಿ ಕೊಟ್ಟಿದ್ದಾರೆ. ಡೊಳ್ಳು ಕುಣಿತದ ಮೂಲಕ ಅವರನ್ನು ಬಿಗ್​ ಬಾಸ್​ ಮನೆಗೆ ಸ್ವಾಗತಿಸಲಾಗಿದೆ.

"ಕಲರ್​ಫುಲ್ ಮನೆಗೆ ತಾಳ್ಮೆಯ ಬಿಳುಪು; ಎಂಟ್ರೀ ಕೊಟ್ರು ಎಮ್.ಎಲ್.ಎ ಪ್ರದೀಪು!" ಎಂಬ ಶೀರ್ಷಿಕೆಯೊಂದಿಗೆ ಕಲರ್ಸ್​ ಕನ್ನಡ ವಾಹಿನಿ ಪ್ರೋಮೋ ಹಂಚಿಕೊಂಡಿದೆ. ಎಂಎಲ್​ಎ ಸಡನ್​ ಎಂಟ್ರಿ ಕಂಡು ದೊಡ್ಮನೆ ಸ್ಪರ್ಧಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. "ನಾನು ನಿನ್ನೆಯೇ ಬಿಗ್​ ಬಾಸ್​ ವೇದಿಕೆಗೆ ಬರಬೇಕಿತ್ತು. ಸ್ಪರ್ಧಿಯಾಗಿ ಜಾಯಿನ್​ ಆಗಿದ್ದಕ್ಕೆ ಬಹಳ ಸಂತೋಷವಾಯಿತು" ಎಂದು ಪ್ರದೀಪ್​ ಈಶ್ವರ್​ ಹೇಳಿದ್ದಾರೆ.

"ಅನಾಥ ಮಕ್ಕಳ ಏಳಿಗೆಗಾಗಿ ಶಾಸಕ ಪ್ರದೀಪ್​ ಈಶ್ವರ್​ ಬಿಗ್​ ಬಾಸ್​ ಮನೆಗೆ ಹೋಗಿದ್ದಾರೆ. ಬಿಗ್​ ಬಾಸ್​ನಿಂದ ಬಂದ ಹಣವನ್ನು ಅಪ್ಪ-ಅಮ್ಮ ಇಲ್ಲದ ಮಕ್ಕಳಿಗೆ ನೀಡಲು ಅವರು ನಿರ್ಧರಿಸಿದ್ದಾರೆ" ಎಂದು ಪ್ರದೀಪ್​ ಈಶ್ವರ್​ ಆಪ್ತರು ಮಾಹಿತಿ ನೀಡಿದ್ದಾರೆ. ಸದ್ಯ ಶಾಸಕರು ಬಿಗ್​ ಬಾಸ್​ಗೆ ಎಂಟ್ರಿ ಕೊಟ್ಟಿರುವುದು ಸೋಷಿಯಲ್​ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಇದನ್ನೂ ಓದಿ: Bigg Boss Kannada : ಬಿಗ್​ ಬಾಸ್​ ಅಸಲಿ ಆಟ ಶುರು.. ಇಲ್ಲಿದೆ ಸ್ಪರ್ಧಿಗಳ ಮಾಹಿತಿ

ಪ್ರದೀಪ್​ ಅವರು ಮೊದಲ ದಿನವೇ ದೊಡ್ಮನೆಗೆ ಎಂಟ್ರಿ ಕೊಡಬೇಕಿತ್ತು. ಆದರೆ, ಕಾರಣಾಂತರಗಳಿಂದ ಒಂದು ದಿನ ತಡವಾಗಿ ಬಂದಿರುವುದಾಗಿ ಅವರೇ ಹೇಳಿಕೊಂಡಿದ್ದಾರೆ. ಇನ್ನು ಪ್ರದೀಪ್​ ಈಶ್ವರ್​ ಶಾಸಕರಾಗಿರುವುದರಿಂದ ಅವರು ಪೂರ್ಣಪ್ರಮಾಣದಲ್ಲಿ ಬಿಗ್​ ಬಾಸ್​ ಸ್ಪರ್ಧಿಯಾಗಿರುತ್ತಾರೋ ಅಥವಾ ಕೆಲವು ದಿನಗಳ ಅತಿಥಿಯಾಗಿರುತ್ತಾರೋ? ಎಂಬುದನ್ನು ಕಾದು ನೋಡಬೇಕಿದೆ.

ಈ ಬಾರಿಯ ಸ್ಪರ್ಧಿಗಳಿವರು.. ಈ ಬಾರಿಯ ಬಿಗ್​ ಬಾಸ್​ ತುಂಬಾ ಸ್ಪೆಷಲ್​ ಆಗಿರಲಿದೆ. ಹಲವು ವಿಶೇಷ ಸ್ಪರ್ಧಾಳುಗಳನ್ನು ದೊಡ್ಮನೆಗೆ ಕರೆತರಲಾಗಿದೆ. ಕಿರುತೆರೆ ನಟಿ ನಮ್ರತಾ, ಕಿರುತೆರೆ ನಟ ಸ್ನೇಹಿತ್​, ರ‍್ಯಾಪರ್ ಈಶಾನಿ, ಕಿರುತೆರೆ ನಟ ವಿನಯ್​, ಚಾರ್ಲಿ 777 ನಟಿ ಸಂಗೀತಾ ಶೃಂಗೇರಿ, ಹಾಸ್ಯನಟ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಬುಲೆಟ್‌, ಕಿರುತೆರೆ ನಟಿ ಸಿರಿಜಾ, ಡ್ರೋನ್​ ಪ್ರತಾಪ್​, ವರ್ತೂರು ಸಂತೋಷ್‍, ತುಕಾಲಿ ಸಂತೋಷ್‍, ನೀತು ವನಜಾಕ್ಷಿ, ಸ್ನೇಕ್‍ ಶ್ಯಾಮ್‍, ಗೌರೀಶ್‍ ಅಕ್ಕಿ, ಕಾರ್ತಿಕ್‍ ಮಹೇಶ್‍ ಮತ್ತು ಮೈಕಲ್‍ ಅಜಯ್ ಸ್ಪರ್ಧಿಗಳು.

ಚಾರ್ಲಿ ಎಲ್ಲಿ?: ಇನ್ನೂ ಈ ಮೊದಲೇ ಹೇಳಿದಂತೆ ಚಾರ್ಲಿ 777 ಖ್ಯಾತಿಯ ಶ್ವಾನ ಚಾರ್ಲಿ ಬಿಗ್​ ಬಾಸ್​ ಮನೆಗೆ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಡಲಿದೆ ಎಂದು ಹೇಳಲಾಗಿತ್ತು. ಆದರೆ, ಗ್ರ್ಯಾಂಡ್​ ಲಾಂಚ್​ಗೂ ಚಾರ್ಲಿ ಆಗಮನ ಇರಲಿಲ್ಲ. ನಂತರವೂ ಬಿಗ್​ ಬಾಸ್​ ಮನೆಗೆ ಎಂಟ್ರಿ ಕೊಟ್ಟಿಲ್ಲ. ಹೀಗಾಗಿ ಚಾರ್ಲಿ ಎಲ್ಲಿ ಬಿಗ್​ ಬಾಸ್​? ಎಂದು ಅಭಿಮಾನಿಗಳು ಸೋಷಿಯಲ್​ ಮೀಡಿಯಾದಲ್ಲಿ ಪ್ರಶ್ನೆ ಎತ್ತಿದ್ದಾರೆ.

ಈ ಬಾರಿಯ ಮನೆ ಸಖತ್​ ಸ್ಪೆಷಲ್​: 4 ತಿಂಗಳಲ್ಲಿ ಬಿಗ್​ ಬಾಸ್ ಹೊಸ ಮನೆ ನಿರ್ಮಾಣ ಆಗಿದೆ. ಹೊಸ ಸೀಸನ್​ಗೆ ತಕ್ಕಂತೆ ಮನೆಯೂ ಸ್ಪೆಷಲ್ ಆಗಿದೆ. ಹೆಚ್ಚಿನ ಸಂಖ್ಯೆಯ ಕಾರ್ಮಿಕರನ್ನು ಒಳಗೊಂಡು 12 ಸಾವಿರ ಚದರ​ ಅಡಿ ಮನೆ ನಿರ್ಮಾಣ ಮಾಡಲಾಗಿದೆ. ಇಡೀ ಮನೆಯ ಚಿತ್ರಣವನ್ನು ತೋರಿಸುವ ವಿಡಿಯೋವನ್ನು ನಿನ್ನೆಯಷ್ಟೇ ಕಲರ್ಸ್​ ಕನ್ನಡ ವಾಹಿನಿ ಹಂಚಿಕೊಂಡಿದೆ.

ಈ ಹೊಸ ಮನೆ ಹೆಚ್ಚು ವಿಶಾಲವಾಗಿದ್ದು, ಬೇರೆಲ್ಲ ಭಾಷೆಯ 'ಬಿಗ್ ಬಾಸ್' ಮನೆಗಳಿಗಿಂತ ದೊಡ್ಡದಾಗಿದೆ. ಈ ಮನೆಯನ್ನು ಕಾಯಲು ಒಟ್ಟು 73 ಕ್ಯಾಮರಾಗಳು ಸಜ್ಜಾಗಿವೆ. ಒಟ್ಟಾರೆಯಾಗಿ ಈ ಬಾರಿಯ ಬಿಗ್​ ಬಾಸ್​ ಮನೆ ಕಲರ್​ಫುಲ್​ ಆಗಿದೆ. ಇಂದಿನಿಂದ ಪ್ರತಿ ರಾತ್ರಿ 9.30ಕ್ಕೆ ಬಿಗ್​ ಬಾಸ್​ ಸೀಸನ್​ 10 ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಜೊತೆಗೆ ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್‌ ಚಾನೆಲ್‌ನಲ್ಲಿ ಉಚಿತವಾಗಿ ವೀಕ್ಷಿಸುವ ಸೌಲಭ್ಯವನ್ನು ಕಲ್ಪಿಸಲಾಗಿದೆ.

ಇದನ್ನೂ ಓದಿ: ಬಿಗ್​ ಬಾಸ್ ಸೀಸನ್​ 10: ಗ್ರ್ಯಾಂಡ್​ ಈವೆಂಟ್​ಗೆ ಕ್ಷಣಗಣನೆ - ಸ್ಪರ್ಧಿಗಳ್ಯಾರಿರಬಹುದು?

Last Updated :Oct 9, 2023, 1:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.