ETV Bharat / entertainment

ಹೆಸರು ಬದಲಾಯಿಸಿದ 'ಹೊಯ್ಸಳ'.. 'ಗುರುದೇವ ಹೊಯ್ಸಳ'ನಾಗಿ ಬಿಡುಗಡೆ

author img

By

Published : Mar 14, 2023, 4:25 PM IST

ನಟ ಡಾಲಿ ಧನಂಜಯ್​ ಅಭಿನಯದ 'ಹೊಯ್ಸಳ' ಸಿನಿಮಾದ ಹೆಸರನ್ನು 'ಗುರುದೇವ ಹೊಯ್ಸಳ' ಎಂಬುದಾಗಿ ಬದಲಾಯಿಸಿದೆ

hoysala
'ಗುರುದೇವ ಹೊಯ್ಸಳ'

ಸ್ಯಾಂಡಲ್​ವುಡ್​ನ ಬಹುನಿರೀಕ್ಷಿತ 'ಹೊಯ್ಸಳ' ಸಿನಿಮಾ ತನ್ನ ಹೆಸರನ್ನು ಬದಲಾಯಿಸಿದೆ. ಬೇರೊಂದು ಸಿನಿಮಾ ಇದೇ ಹೆಸರಿನಲ್ಲಿ ನಿರ್ಮಾಣವಾಗುತ್ತಿರುವುದರಿಂದ ಡಾಲಿ ಧನಂಜಯ್​​ ಸಿನಿಮಾದ ಹೆಸರನ್ನು 'ಗುರುದೇವ ಹೊಯ್ಸಳ' ಎಂಬುದಾಗಿ ಮರುನಾಮಕರಣ ಮಾಡಲಾಗಿದೆ. ಈಗಾಗಲೇ ಟೀಸರ್​, ಹಾಡುಗಳಿಂದ ಪ್ರೇಕ್ಷಕರ ಮನಗೆದ್ದಿರುವ ಚಿತ್ರದ ಪ್ರಚಾರ ಕಾರ್ಯ ಉತ್ತರ ಕರ್ನಾಟಕದಲ್ಲಿ ಭರ್ಜರಿಯಾಗಿ ಮಾಡಲಾಗುತ್ತಿದೆ.

ಸಿನಿಮಾ ಬಗ್ಗೆ ಮಾತನಾಡಿರುವ ಡಾಲಿ, ರತ್ನನ್​ ಪ್ರಪಂಚ ಆದ ಮೇಲೆ ಕೆ ಆರ್ ಜಿ ಸ್ಟುಡಿಯೋ ಜೊತೆ ಕನೆಕ್ಟ್ ಆಗಿ ಒಂದಿಷ್ಟು ಸಿನಿಮಾ ಮಾಡುವ ಪ್ಲ್ಯಾನ್ ಮಾಡಿಕೊಂಡೆವು. ಆಗ ಈ ಚಿತ್ರದ ಕಥೆ ಬಂತು. ಕಥೆ ಕೇಳಿದಾಗ ತುಂಬಾ ಇಷ್ಟವಾಯ್ತು. ಆ ನಂತರ ನನಗೆ ಗೊತ್ತಾಯ್ತು, ಇದುವೇ ನನ್ನ 25 ನೇ ಸಿನಿಮಾ ಅಂತ. ಅಲ್ಲದೇ ನನಗೂ ಕೂಡ ಸಮಾಜಕ್ಕೆ ಸಂದೇಶ ನೀಡುವ ಸಿನಿಮಾವೊಂದನ್ನು ಮಾಡಬೇಕೆಂಬ ಆಸೆ ಇತ್ತು. ಅದರಂತೆಯೇ ಫ್ಯಾಮಿಲಿ ಕುಳಿತು ನೋಡುವ ಗುರುದೇವ ಹೊಯ್ಸಳ ಸಿನಿಮಾ ನನ್ನನ್ನು ಅರಸಿ ಬಂತು ಎಂದು ಹೇಳಿದರು.

hoysala
'ಗುರುದೇವ ಹೊಯ್ಸಳ' ಚಿತ್ರತಂಡ

ಮುಂದುವರೆದು, ಈ ಸಿನಿಮಾದಲ್ಲಿ ಒಂದು ಪ್ರಮುಖ ಅಂಶವನ್ನು ಹೇಳುವ ಪ್ರಯತ್ನ ಮಾಡಲಾಗಿದ್ದು, ಒಳ್ಳೆಯ ಸಂದೇಶವನ್ನು ನೀಡಲಾಗಿದೆ. ನಾವು ರಾಮು ಫಿಲ್ಮ್ಸ್​ ಜೊತೆ ಮಾತಾಡಿ ಹೊಯ್ಸಳ ಶೀರ್ಷಿಕೆಯನ್ನು ಪಡೆದುಕೊಂಡೆವು. ಆದರೆ ಇದೇ ಹೆಸರಿನಲ್ಲಿ ಇನ್ನೊಂದು ಸಿನಿಮಾ ಸೆನ್ಸಾರ್​ ಆಗಿದೆಯಂತೆ. ಹೀಗಾಗಿ ನಾನು ಈ ಚಿತ್ರದಲ್ಲಿ ಗುರದೇವ ಹೊಯ್ಸಳ ಪಾತ್ರದಲ್ಲಿ ಅಭಿನಯಿಸಿದ್ದು, ಅದೇ ಹೆಸರಿನಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಲಿದ್ದೇವೆ ಎಂದು ಹೇಳಿದರು.

ಇನ್ನು ಸಿನಿಮಾದಲ್ಲಿ ಖಳನಟನಾಗಿ ಅಭಿನಯಿಸಿರುವ ನವೀನ ಶಂಕರ್ ಮಾತನಾಡಿ ‘ಈ ಸಿನಿಮಾ ಸಿಕ್ಕಿದ್ದು ತುಂಬಾ ಖುಷಿಯ ವಿಷಯ. ಇದರಲ್ಲಿ ನಾನು ಬಲಿ ಪಾತ್ರ ಮಾಡಿದ್ದು ರಗಡ್ ಲುಕ್‌ನಲ್ಲಿ ವಿಲನ್ ಆಗಿ ಕಾಣಿಸಿದ್ದೇನೆ. ಧನಂಜಯ್ ‘ಹೆಡ್​ ಬುಷ್’ ಸಿನಿಮಾಗೆ ಕರೆದಿದ್ದರೂ ಆಗಿರಲಿಲ್ಲ. ಈಗ ಗೆಳೆಯನ ಜೊತೆ ನಟನೆ ಮಾಡಿದ್ದು ಖುಷಿ ಇದೆ. ನಿರ್ಮಾಪಕರು ಕರೆದು ಅವಕಾಶ ಕೊಟ್ಟರು. ಪಾತ್ರ ಅದ್ಭುತವಾಗಿ ಮೂಡಿ ಬಂದಿದೆ. ಅಪ್ಪಟ ಕಮರ್ಷಿಯಲ್ ಸಿನಿಮಾ ಇದಾಗಿದ್ದು, ಎಲ್ಲಾ ಪಾತ್ರಗಳಿಗೂ ಗಟ್ಟಿತನ ಇದೆ ಎಂದರು.

"ಧನಂಜಯ ಜೊತೆ ನಂಗೆ ಇದು 3ನೇ ಸಿನಿಮಾ. ಇದರಲ್ಲಿ ನಾನು ಗಂಗಾ ಆಗಿ ಪೊಲೀಸ್ ಆಫೀಸರ್ ಹೆಂಡತಿ ಪಾತ್ರ ಮಾಡಿದ್ದೇನೆ. ಜೊತೆಗೆ ನಾನು ಭರತನಾಟ್ಯ ಟೀಚರ್ ಆಗಿರುತ್ತೇನೆ. ಈ ಪಾತ್ರ ಮಾಡುವುದು ನನಗೆ ನಿಜಕ್ಕೂ ಚಾಲೆಂಜಿಂಗ್ ಆಗಿತ್ತು. ಈ ಚಿತ್ರ ಒಳ್ಳೆ ಪೊಲೀಸ್ ಸ್ಟೋರಿ ಫೀಲ್ ಕೊಡುತ್ತದೆ ಎಂದು ಚಿತ್ರದ ನಾಯಕಿ ಅಮೃತ ಅಯ್ಯಂಗಾರ್ ಹೇಳಿದರು.

ಇದನ್ನೂ ಓದಿ: ಎಸ್​​ಆರ್​ಕೆ ಅಪ್ಪುಗೆ ನಿರೀಕ್ಷೆಯಲ್ಲಿ ಗುನೀತ್ ಮೊಂಗಾ.. ಪಠಾಣ್​ ನಟನಿಗೆ ಧನ್ಯವಾದ ಅರ್ಪಿಸಿದ ರಾಜಮೌಳಿ

ಬಳಿಕ ಹಿರಿಯ ನಟ ಅವಿನಾಶ್ ಮಾತನಾಡಿ, ಇದರಲ್ಲಿ ನಾನು ವಿಲನ್ ಪಾತ್ರ ಮಾಡಿದ್ದು, ಅದ್ಭುತವಾಗಿ ಬಂದಿದೆ. ನಿರ್ದೇಶಕರು ನನಗೆ ಕಥೆ ಹೇಳುವಾಗ ನಾನಾ ಪಾಟೇಕರ್ ತರಹದ ಪಾತ್ರ ಇರುತ್ತದೆ ಎಂದು ಹೇಳಿದ್ದರು. ಈ ಪೊಲೀಸ್ ಸ್ಟೋರಿ ಸಿನಿಮಾ ಅದ್ಭುತವಾಗಿ ಮೂಡಿ ಬಂದಿದ್ದು, ನಾನಿಲ್ಲಿ ದಾದಾ ಪಾತ್ರ ಮಾಡಿದ್ದೇನೆ ಎಂದು ತಿಳಿಸಿದರು.

ಇದೇ ವೇಳೆ ನಿರ್ಮಾಪಕ ಯೋಗಿ ಜಿ ರಾಜ್ ಮಾತನಾಡಿ, ಧನು ಜೊತೆ ಸಿನಿಮಾ ಮಾಡಲು ಸಿದ್ದರಾದಾಗ ನಿರ್ದೇಶಕರು ಕಥೆ ಹೇಳಿದ್ರು. ಕಥೆ ತುಂಬಾ ಚೆನ್ನಾಗಿದೆ ಅನಿಸಿ ನಿರ್ಮಾಣಕ್ಕೆ ಮುಂದಾದೆವು. ಇದರಲ್ಲಿ ನಾಯಕನ ಹೆಸರು ಗುರುದೇವ ಹೊಯ್ಸಳ ಅಂತ ಇರುತ್ತದೆ. ಕಥೆ ಬೆಳಗಾವಿ ಭಾಗದಲ್ಲಿ ನಡೆಯುತ್ತದೆ. ಈ ಚಿತ್ರವನ್ನು ಪೊಲೀಸ್ ಡಿಪಾರ್ಟ್ಮೆಂಟ್‌ಗೆ ಅರ್ಪಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ಇನ್ನು, ಕೆ ಆರ್ ಜಿ ಸ್ಟುಡಿಯೋಸ್ ಬ್ಯಾನರ್‌ ಅಡಿಯಲ್ಲಿ ಯೋಗಿ ಜಿ ರಾಜ್ ಹಾಗೂ ಕಾರ್ತಿಕ್ ಗೌಡ ನಿರ್ಮಿಸಿರುವ ‘ಗುರುದೇವ ಹೊಯ್ಸಳ' ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು, ಇದೇ ಮಾರ್ಚ್ 30 ರಂದು ತೆರೆ ಕಾಣಲಿದೆ.

ಇದನ್ನೂ ಓದಿ: ಆರ್​ಆರ್​ಆರ್​ ಸಾಧನೆಗೆ ಪ್ರತಿಕ್ರಿಯಿಸಲು ಸಿದ್ಧಾರ್ಥ್ ಮಲ್ಹೋತ್ರಾ ಹಿಂದೇಟು? ಅಸಲಿ ವಿಚಾರ ಇಲ್ಲಿದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.