ETV Bharat / city

ಕೊರಟಗೆರೆಯಲ್ಲಿ'ಹೊರಬೀಡು' ಆಚರಣೆ : ಊರಿಗೆ ಊರೇ ಖಾಲಿ ಖಾಲಿ

author img

By

Published : Dec 25, 2021, 12:53 PM IST

ಶೂನ್ಯ ಮಾಸದಲ್ಲಿ ಸ್ಥಳೀಯ ನಾಗರಿಕರು ಈ ಪದ್ದತಿಯನ್ನು ಆಚರಿಸುತ್ತಾರೆ. ಈ ಬಾರಿ 550ಕ್ಕೂ ಅಧಿಕ ಕುಟುಂಬದ 3 ಸಾವಿರಕ್ಕೂ ಹೆಚ್ಚು ಜನರು ತಮ್ಮ ಮನೆಗಳಿಗೆ ಬೀಗ ಹಾಕಿಕೊಂಡು ಗ್ರಾಮದ 2 ಕಡೆಯ ರಸ್ತೆಗಳಿಗೆ ಮುಳ್ಳಿನ ಬೇಲಿಯನ್ನು ಹಾಕಿ ಊರು ಬಿಟ್ಟಿದ್ದರು. ಇದರಿಂದ ಮುಂಜಾನೆ 5 ಗಂಟೆಯಿಂದ ಸಂಜೆ 6 ಗಂಟೆವರೆಗೆ ಗ್ರಾಮಗಳು ಬಿಕೋ ಎನ್ನುತ್ತಿದ್ದವು..

Horabidu celebration in Tumkur
ಕೊರಟಗೆರೆಯಲ್ಲಿ ಹೊರಬೀಡು ಆಚರಣೆ

ತುಮಕೂರು : ಪ್ರತಿ 3 ವರ್ಷಕೊಮ್ಮೆ ಒಂದು ದಿನ ಜನ ಜಾನುವಾರು, ಸಾಕು ಪ್ರಾಣಿಗಳು ಸೇರಿದಂತೆ ಪ್ರತಿಯೊಬ್ಬರು ಗ್ರಾಮದಿಂದ ಹೊರಗುಳಿಯುವಂತಹ 'ಹೊರಬೀಡು' ಆಚರಣೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಐದು ಗ್ರಾಮದಲ್ಲಿ ನಡೆದಿದೆ.

ಕೊರಟಗೆರೆಯಲ್ಲಿ ಹೊರಬೀಡು ಆಚರಣೆ..

ಕೊರಟಗೆರೆ ತಾಲೂಕಿನ ಚನ್ನರಾಯನ ದುರ್ಗ ಹೋಬಳಿ ಬುಕ್ಕಾಪಟ್ಟಣ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಬುಕ್ಕಾಪಟ್ಟಣ, ಗೊಲ್ಲರಹಟ್ಟಿ, ಮಾರುತಿನಗರ, ಶ್ರೀನಿವಾಸಪುರ, ಹೊಸಪಾಳ್ಯದಲ್ಲಿ ಗುರುವಾರ ಹೊರಬೀಡು ಸಂಪ್ರದಾಯವನ್ನು ಆಚರಿಸಿದ್ದಾರೆ.

ಶೂನ್ಯ ಮಾಸದಲ್ಲಿ ಸ್ಥಳೀಯ ನಾಗರಿಕರು ಈ ಪದ್ದತಿಯನ್ನು ಆಚರಿಸುತ್ತಾರೆ. ಈ ಬಾರಿ 550ಕ್ಕೂ ಅಧಿಕ ಕುಟುಂಬದ 3 ಸಾವಿರಕ್ಕೂ ಹೆಚ್ಚು ಜನರು ತಮ್ಮ ಮನೆಗಳಿಗೆ ಬೀಗ ಹಾಕಿಕೊಂಡು ಗ್ರಾಮದ 2 ಕಡೆಯ ರಸ್ತೆಗಳಿಗೆ ಮುಳ್ಳಿನ ಬೇಲಿಯನ್ನು ಹಾಕಿ ಊರು ಬಿಟ್ಟಿದ್ದರು. ಇದರಿಂದ ಮುಂಜಾನೆ 5 ಗಂಟೆಯಿಂದ ಸಂಜೆ 6 ಗಂಟೆವರೆಗೆ ಗ್ರಾಮಗಳು ಬಿಕೋ ಎನ್ನುತ್ತಿದ್ದವು.

ಶಾಲೆಗಳಿಗೆ ರಜೆ ಘೋಷಣೆ : 'ಹೊರಬೀಡು' ಆಚರಣೆ ಹಿನ್ನೆಲೆ ಗ್ರಾಮಸ್ಥರು, ತಮ್ಮ ಸಾಕು ಪ್ರಾಣಿಗಳೊಂದಿಗೆ ಗ್ರಾಮದ ಹೊರವಲಯದ ಜಮೀನುಗಳಿಗೆ ಹೋಗಿ ವಾಸಿಸುತ್ತಾರೆ. 4 ಗ್ರಾಮದ ಸಂಪರ್ಕದ ರಸ್ತೆಗಳು ಸಂಪೂರ್ಣ ಬಂದ್ ಆಗಿದ್ದು, ಸರ್ಕಾರಿ ಕಚೇರಿಗಳು ಬಿಕೋ ಎನ್ನುತ್ತಿದ್ದವು.

ಇದಲ್ಲದೇ ಬುಕ್ಕಾಪಟ್ಟಣ, ಗೊಲ್ಲರಹಟ್ಟಿ, ಶ್ರೀನಿವಾಸಪುರ, ಮಾರುತಿ ನಗರದ ಸರ್ಕಾರಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಅಂಗನವಾಡಿ ಕೇಂದ್ರ, ಕಂದಾಯ ಇಲಾಖೆ, ಬುಕ್ಕಾ ಪಟ್ಟಣ ಗ್ರಾಪಂ, ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ಪಾಲನಾ ಇಲಾಖೆಗಳಿಗೆ ರಜೆ ಘೋಷಣೆ ಮಾಡಲಾಗಿತ್ತು.

ಬೆಳಿಗ್ಗೆಯಿಂದ ಸಂಜೆಯವರೆಗೂ ಗ್ರಾಮದೊಳಗೆ ಯಾರೂ ಕೂಡ ಪ್ರವೇಶ ಮಾಡದಂತೆ ಕಾವಲು ಕಾಯುತ್ತಾರೆ. ಗ್ರಾಮ ದೇವತೆ ಮಾರಮ್ಮದೇವಿ ಊರನ್ನು ಸುತ್ತುವುದಲ್ಲದೇ ಕಾವಲು ಕಾಯುತ್ತಾಳೆ ಎಂಬ ನಂಬಿಕೆ ಗ್ರಾಮಸ್ಥರದ್ದಾಗಿದೆ.

ಮಾರಮ್ಮ ದೇವಿ ಪ್ರತಿಷ್ಠಾಪಿಸಿ ಪೂಜೆ : ಸಂಜೆ 6 ಗಂಟೆ ಬಳಿಕ ಬುಕ್ಕಾಪಟ್ಟಣದ ಹೊರಗೆ ಗುಡಿಸಲು ಹಾಕಿ ಮಾರಮ್ಮ ದೇವಿಯನ್ನು ಪ್ರತಿಷ್ಠಾಪಿಸಿ ಪ್ರತಿಯೊಬ್ಬರು ಪೂಜೆ ಮಾಡುತ್ತಾರೆ. ನಂತರ ತಮ್ಮ ಜಮೀನುಗಳಲ್ಲಿ ಗುಡಿಸಲು ಹಾಕಿ ಕೊಂಡು ತಮಗಿಷ್ಟವಾದ ಆಹಾರ ತಯಾರಿಸಿ ಸೇವಿಸುತ್ತಾರೆ. ಅಲ್ಲದೇ ತಮ್ಮ ಸಂಬಂಧಿಗಳನ್ನು ಆಹ್ವಾನಿಸಿ ಜಮೀನಿನಲ್ಲಿ ಸೇರಿ ಊಟ ಮಾಡಿ ಸಂಭ್ರಮಿಸುತ್ತಾರೆ.

ಸಂಜೆ 6ಗಂಟೆ ವೇಳೆಗೆ ಸೂರ್ಯ ಮುಳುಗಿದ ನಂತರ ಗೋಧೂಳಿ ಸಮಯದಲ್ಲಿ ಊರಿನ ಬಾಗಿಲಿನಲ್ಲಿ ಗ್ರಾಮ ದೇವತೆ ಮಾರಮ್ಮ ದೇವಿಗೆ ಪೂಜೆ ಸಲ್ಲಿಸಿ ಗ್ರಾಮಸ್ಥರ ಸಂಪ್ರದಾಯದಂತೆ ರಣಬಲೆ, ಕೋಬಲೆ ಎಂದು ಕೂಗುತ್ತಾ ಪ್ರವೇಶಿಸುತ್ತಾರೆ.

ನಂತರ ಪ್ರತಿ ಮನೆಯ ಬಾಗಿಲಿಗೆ ಪೂಜೆ ಸಲ್ಲಿಸಿ, ಮನೆ ಸುತ್ತಮುತ್ತ ಮೊಸರನ್ನ ಹಾಕಿ ಮನೆ ಒಳಗೆ ಹೋಗುತ್ತೇವೆ. ಹಿಂದಿನಿಂದಲೂ ನಮ್ಮ ಹಿರಿಯರ ಆಶಯದಂತೆ ಆಚರಣೆ ನಡೆಸಿಕೊಂಡು ಬರಲಾಗುತ್ತಿದೆ. 15 ದಿನಗಳ ಮುನ್ನವೇ ಸಭೆ ನಡೆಸಿ ಪ್ರತಿಯೊಬ್ಬರು ಈ ಆಚರಣೆಗೆ ಒಪ್ಪಿಯೇ ಆಚರಿಸುತ್ತೇವೆ ಎನ್ನುತ್ತಾರೆ ಗ್ರಾಮದ ಮುಖಂಡ ಚಂದ್ರು.

ಇದನ್ನೂ ಓದಿ: ವಿದೇಶದಿಂದ ಬಂದ 10 ಜನರಿಗೆ ಕೋವಿಡ್​ ಸೋಂಕು ದೃಢ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.