ETV Bharat / city

ಈ ಬಾರಿ ವೈಭವದ ದಸರಾ ಮಹೋತ್ಸವ: ಮೈಸೂರಿನತ್ತ ಗಜಪಡೆ ಪಯಣ

author img

By

Published : Aug 7, 2022, 7:55 AM IST

Jumbo Squad
ಗಜಪಡೆ

ಈ ಸಲದ ದಸರಾ ಮಹೋತ್ಸವದಲ್ಲಿ ದೇಶ, ವಿದೇಶಗಳಿಂದ ಪ್ರವಾಸಿಗರನ್ನು ಆಕರ್ಷಿಸುವ ಪ್ರಯತ್ನ ಮಾಡಲಾಗುತ್ತದೆ. ಉತ್ಸವ ಮುಕ್ತಾಯವಾಗುತ್ತಿದ್ದಂತೆ ಸಾರ್ವಜನಿಕರಿಗೆ ವೆಚ್ಚದ ಲೆಕ್ಕ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಮೈಸೂರು: ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಅದ್ಧೂರಿ ದಸರಾ ಆಚರಣೆ ಮಾಡಲಾಗುವುದು ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2022 ಕಾರ್ಯಕಾರಿ ಸಮಿತಿ ಸಭೆ ಬಳಿಕ ಅವರು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

ಕೋವಿಡ್​ ಕಾರಣಕ್ಕೆ ಕಳೆದೆರಡು ವರ್ಷಗಳಿಂದ ಸರಳ ದಸರಾ ಆಚರಣೆ ಮಾಡಲಾಗಿತ್ತು. ಈ ಬಾರಿ ವೈಭವದ ದಸರಾ ಆಚರಣೆ ಮಾಡುವ ಬಗ್ಗೆ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. ದಸರಾ ಉದ್ಘಾಟಕರ ಆಯ್ಕೆ ಅಧಿಕಾರ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಬಿಟ್ಟದ್ದು. ಉದ್ಘಾಟಕರ ಬಗ್ಗೆ ಸಲಹೆಗಳನ್ನು ನೀಡಬಹುದು. ಅಂತಿಮವಾಗಿ ಮುಖ್ಯಮಂತ್ರಿಗಳು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.

ಸಭೆಯಲ್ಲಿ ಕಾರ್ಯಕ್ರಮಗಳ ಆಯೋಜನೆ, ದೀಪಾಲಂಕಾರ, ವಸ್ತುಪ್ರದರ್ಶನ, ಪುಷ್ಪಪ್ರದರ್ಶನ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆಯಾಯಿತು. ಪಾಸ್ ವಿತರಣೆ ವಿಷಯದಲ್ಲಿ ಯಾವುದೇ ಗೊಂದಲ, ದುರ್ಬಳಕೆಗೆ ಅವಕಾಶ ನೀಡುವುದಿಲ್ಲ. ದಸರಾ ಮಹೋತ್ಸವ 2022ರ ಸಂಬಂಧ 16 ಸಮಿತಿಗಳನ್ನು ರಚಿಸಲಾಗಿದೆ. ಇದರ ಜೊತೆಗೆ ಉಪಸಮಿತಿಗಳಿಂದ ಆಯೋಜಿಸುವ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಯಿತು ಎಂದು ಹೇಳಿದರು.

ಇದಕ್ಕೂ ಮುನ್ನ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ದಸರಾ ಕಾರ್ಯಕ್ರಮ ಆಯೋಜನೆ, ಅನುದಾನ ಬಿಡುಗಡೆ ಕುರಿತು ಚರ್ಚೆ ನಡೆಯಿತು. ದಸರಾದಲ್ಲಿ ಪ್ರವಾಸೋದ್ಯಮ, ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಒತ್ತು ನೀಡುವುದು ಮಾತ್ರವಲ್ಲದೆ "ಬ್ರ್ಯಾಂಡ್ ಮೈಸೂರು" ಮಾಡಲು ಎಲ್ಲಾ ರೀತಿಯ ಯೋಜನೆಗಳನ್ನು ರೂಪಿಸುವಂತೆಯೂ ಸಚಿವರು ಅಧಿಕಾರಿಗಳಿಗೆ ಸಲಹೆ ನೀಡಿದರು.

ಗಜಪಡೆ ಪೋಸ್ಟರ್ ಬಿಡುಗಡೆ: ಗಜಪಡೆಗಳ ಮಾಹಿತಿಯನ್ನು ಒಳಗೊಂಡ ಪೋಸ್ಟರ್ ಅನ್ನು ಎಸ್.ಟಿ.ಸೋಮಶೇಖರ್ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಶಾಸಕರುಗಳಾದ ಹರ್ಷವರ್ಧನ್, ತನ್ವೀರ್ ಸೇಠ್, ಸಾ.ರಾ.ಮಹೇಶ್, ಅಶ್ವಿನ್, ವಿಧಾನ ಪರಿಷತ್ ಸದಸ್ಯರುಗಳಾದ ವಿಶ್ವನಾಥ್, ಮಂಜೇಗೌಡ, ಡಾ. ತಿಮ್ಮಯ್ಯ, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಮೈಸೂರು ಪೊಲೀಸ್ ಕಮಿಷನರ್ ಚಂದ್ರಗುಪ್ತ, ಎಸ್.ಪಿ.ಚೇತನ್ ಸೇರಿದಂತೆ ಹಲವು ಅಧಿಕಾರಿಗಳು, ನಿಗಮ ಮಂಡಳಿಗಳ ಅಧ್ಯಕ್ಷರು ಉಪಸ್ಥಿತರಿದ್ದರು.

ಗಜಪಡೆ ಪಯಣಕ್ಕೆ ಚಾಲನೆ: ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಗ್ರಾಮದಲ್ಲಿಂದು ಬೆಳಗ್ಗೆ 9.01ರಿಂದ 9.35ರ ಕನ್ಯಾ ಲಗ್ನದಲ್ಲಿ ಗಜಪಡೆ ಪಯಣಕ್ಕೆ ಚಾಲನೆ ನೀಡಲಾಗುತ್ತದೆ. ಆ.10ರಂದು ಅರಮನೆಗೆ ಗಜಪಡೆಗಳ ಆಗಮನವಾಗಲಿದೆ. ಅಂದು ಬೆಳಗ್ಗೆ 9.20ರಿಂದ 10.00ರ ಕನ್ಯಾ ಲಗ್ನದಲ್ಲಿ ಗಜಪಡೆಗಳನ್ನು ಬರಮಾಡಿಕೊಳ್ಳಲಾಗುತ್ತದೆ. ಎರಡು ತಂಡಗಳಲ್ಲಿ 14 ಆನೆಗಳ‌ ಆಗಮನವಾಗಲಿದೆ. ಮೊದಲ ತಂಡದಲ್ಲಿ 9, ಎರಡನೇ ತಂಡದಲ್ಲಿ 5 ಆನೆಗಳು ಆಗಮಿಸಲಿದೆ. ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ 3 ಆನೆಗಳನ್ನು ಕಳುಹಿಸಿ ಕೊಡಲಿದ್ದು, ಉಳಿದ 11 ಆನೆಗಳು ಮೈಸೂರು ದಸರಾ ಮಹೋತ್ಸವದಲ್ಲಿ ಹೆಜ್ಜೆ ಹಾಕಲಿವೆ.

Mysore Dasara
ಕೊಡಗಿನಿಂದ ಪ್ರಯಾಣ ಬೆಳಸಿದ ಆನೆಗಳು

ಕೊಡಗಿನಿಂದ ಪ್ರಯಾಣ ಬೆಳಸಿದ ಆನೆಗಳು: ನಾಡ ಹಬ್ಬದಲ್ಲಿ ಭಾಗವಹಿಸಲು ಕೊಡಗಿನಿಂದ ಆನೆಗಳು ಪ್ರಯಾಣ ಬೆಳೆಸಿವೆ. ದುಬಾರೆ ಸಾಕಾನೆ ಶಿಬಿರದಿಂದ ಮೊದಲ ಹಂತದಲ್ಲಿ ಎರಡು ಆನೆಗಳು ಹೊರಟಿವೆ. ಕಾವೇರಿ, ಧನಂಜಯ ಆನೆಗಳಿಗೆ ಸಂಪ್ರದಾಯದಂತೆ ಪೂಜೆ ಮಾಡಿ, ಬೀಳ್ಕೊಡುಗೆ ನೀಡಲಾಯಿತು.

ಇದನ್ನೂ ಓದಿ: ಆನೆಗಳಿಗೆ ಪೂಜೆ ಮಾಡಿ ಬೀಳ್ಕೊಟ್ಟ ಅರಣ್ಯ ಇಲಾಖೆ: ಮೈಸೂರಿಗೆ ಹೊರಟ ಬಂಡೀಪುರದ ಲಕ್ಷ್ಮೀ, ಚೈತ್ರಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.