ETV Bharat / city

ರಸ್ತೆ ಅಭಿವೃದ್ಧಿಗೆ 350 ಕೋಟಿ ಮೀಸಲು: ಬಜೆಟ್​ನಲ್ಲಿ ಸಾರಿಗೆ ಕ್ಷೇತ್ರದ ಯೋಜನೆಗಳು, ಅನುದಾನದ ವಿವರ..

author img

By

Published : Mar 4, 2022, 5:52 PM IST

transportation
ಸಾರಿಗೆ

ರಾಜ್ಯ ಸರ್ಕಾರ 2022-23ನೇ ಸಾಲಿನ ಆಯವ್ಯಯದಲ್ಲಿ ರಾಜ್ಯದ ಸಾರಿಗೆ ಕ್ಷೇತ್ರಕ್ಕೆ ಹಲವು ಯೋಜನೆಗಳನ್ನು ನೀಡಿದೆ. ಸಾರಿಗೆ ಕ್ಷೇತ್ರಕ್ಕೆ ನೀಡಿರುವ ಯೋಜನೆಗಳು ಹಾಗೂ ಅನುದಾನಗಳ ವಿವರ ಇಲ್ಲಿದೆ.

ಬೆಂಗಳೂರು: ರಾಜ್ಯ ಸರ್ಕಾರ 2022-23ನೇ ಸಾಲಿನ ಆಯವ್ಯಯದಲ್ಲಿ ರಾಜ್ಯದ ಸಾರಿಗೆ ಕ್ಷೇತ್ರಕ್ಕೆ ಹಲವು ಯೋಜನೆಗಳನ್ನು ನೀಡಿದೆ. ಸಾರಿಗೆ ಕ್ಷೇತ್ರಕ್ಕೆ ನೀಡಿರುವ ಯೋಜನೆಗಳು ಹಾಗೂ ಅನುದಾನಗಳ ವಿವರ ಇಲ್ಲಿದೆ.

ರಸ್ತೆ ಅಭಿವೃದ್ಧಿಗೆ 3500 ಕೋಟಿ: ರಾಜ್ಯದಲ್ಲಿ ಹೆದ್ದಾರಿಗಳ ಅಭಿವೃದ್ಧಿ ಯೋಜನೆ ಹಂತ- 4ರ ಘಟ್ಟ-2 ಅಡಿಯಲ್ಲಿ ಒಟ್ಟು 2,275 ಕಿ.ಮೀ. ರಾಜ್ಯ ಹೆದ್ದಾರಿ ಅಭಿವೃದ್ಧಿ ಪಡಿಸಲು 3,500 ಕೋಟಿ ರೂಪಾಯಿ ನೀಡಿದೆ. ಜೀವಿತಾವಧಿ ಮೀರಿದ 1,008 ಕಿ.ಮೀ ಉದ್ದದ ರಾಜ್ಯ ಹೆದ್ದಾರಿಗಳ ಮರುಡಾಂಬರೀಕರಣಕ್ಕೆ 440 ಕೋಟಿ ರೂ. ಅನುದಾನ ನೀಡಲಾಗಿದೆ.

ರೈಲು ಮಾರ್ಗ: 640 ಕೋಟಿ ಅಂದಾಜು ವೆಚ್ಚದ 55 ಕಿ.ಮೀ. ಉದ್ದದ ಗದಗ ಯಲವಿಗಿ ನೂತನ ರೈಲು ಮಾರ್ಗ ಯೋಜನೆಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿರುವ ಸರ್ಕಾರ, 927 ಕೋಟಿ ರೂ. ವೆಚ್ಚದ ಧಾರವಾಡ- ಕಿತ್ತೂರು-ಬೆಳಗಾವಿ ನೂತನ ರೈಲು ಮಾರ್ಗ ಯೋಜನೆಯ ತ್ವರಿತ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವುದಾಗಿ ಹೇಳಿದೆ. ಅಲ್ಲದೇ, ಕೇಂದ್ರದ ಸಹಯೋಗದೊಂದಿಗೆ ಚೆನ್ನೈ- ಬೆಂಗಳೂರು-ಮೈಸೂರು ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆ ಅನುಷ್ಠಾನಗೊಳಿಸುವುದಾಗಿ ಬಜೆಟ್ ನಲ್ಲಿ ಹೇಳಿದೆ.

ವಿಮಾನಯಾನ: ರಾಯಚೂರಿನಲ್ಲಿ 186 ಕೋಟಿ ರೂ. ವೆಚ್ಚದಲ್ಲಿ ಗ್ರೀನ್- ಫೀಲ್ಡ್ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದು, ದಾವಣಗೆರೆ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಕಾರ್ಯಸಾಧ್ಯತಾ ವರದಿ ತಯಾರಿಸುವುದು ಮೈಸೂರು ವಿಮಾನ ನಿಲ್ದಾಣ ರನ್ ವೇ ವಿಸ್ತರಣೆ ಮಾಡುವ ಯೋಜನೆಗಳನ್ನು ಹೊಂದಿದೆ.

ಜಲಸಾರಿಗೆ: ಕೇಂದ್ರದ ಸಾಗರ ಮಾಲಾ ಯೋಜನೆಯಡಿ 1,880 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಬಂದರುಗಳ ವಿಸ್ತರಣೆಗೆ ಸಂಬಂಧಿಸಿದಂತೆ 24 ಯೋಜನೆಗಳ ಅನುಷ್ಠಾನ. ಕಾರವಾರ, ಬೈಂದೂರು ಮತ್ತು ಮಲ್ಪೆಗಳಲ್ಲಿ ವಿವಿಧೋದ್ದೇಶ ಬಂದರು ನಿರ್ಮಾಣಕ್ಕೆ ಕಾರ್ಯಸಾಧ್ಯತಾ ವರದಿ ತಯಾರಿಸುವುದು. ಉತ್ತರ ಕನ್ನಡ ಜಿಲ್ಲೆಯ ಮಾಜಾಳಿಯಲ್ಲಿ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ 250 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಮೀನುಗಾರಿಕಾ ಬಂದರು ನಿರ್ಮಾಣ.

ಹಳೆ ಮಂಗಳೂರು ಬಂದರಿನಲ್ಲಿ 350 ಕೋಟಿ ರೂ. ವೆಚ್ಚದಲ್ಲಿ ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶಕ್ಕೆ ಮೀಸಲಾದ ಜೆಟ್ಟಿ ಮತ್ತು ಇತರ ಸಂಬಂಧಿತ ಮೂಲಸೌಕರ್ಯ ಸೌಲಭ್ಯ ಸ್ಥಾಪಿಸುವುದು. ಉತ್ತರ ಕನ್ನಡ ಜಿಲ್ಲೆಯ ಕೇಣಿ-ಬೆಳಕೇರಿಯಲ್ಲಿ ಗ್ರೀನ್‌ಫೀಲ್ಡ್ ಬಂದರು ಅಭಿವೃದ್ಧಿ ಹಾಗೂ ಕಾರವಾರದಲ್ಲಿ ರಾಜ್ಯದ ಮೊದಲ ಜಲಸಾರಿಗೆ ಮತ್ತು ಮೀನುಗಾರಿಕೆ ತರಬೇತಿ ಸಂಸ್ಥೆ ಸ್ಥಾಪನೆ ಮಾಡುವುದಾಗಿ ತಿಳಿಸಿದೆ.

ಮೆಟ್ರೋ ರೈಲು ಯೋಜನೆ: ಬೆಂಗಳೂರನಲ್ಲಿ 11,250 ಕೋಟಿ ರೂ. ವೆಚ್ಚದಲ್ಲಿ ನಮ್ಮ ಮೆಟ್ರೋ ಹಂತ-3 ಯೋಜನೆ ಜಾರಿಗೆ ಕೇಂದ್ರಕ್ಕೆ ಡಿ.ಪಿ.ಆರ್. ಸಲ್ಲಿಸುವುದು. 2022-23ನೇ ಸಾಲಿನಲ್ಲಿ 15,000 ಕೋಟಿ ರೂ. ವೆಚ್ಚದಲ್ಲಿ 37 ಕಿ.ಮೀ. ಉದ್ದದ ಹೊಸ ಮೆಟ್ರೋ ಮಾರ್ಗಕ್ಕೆ ಡಿಪಿಆರ್ ತಯಾರಿಸುವುದು. ವೈಟ್‌ಫೀಲ್ಡ್, ಕೆ.ಆರ್. ಪುರಂ, ಬೈಯ್ಯಪ್ಪನಹಳ್ಳಿ, ಯಶವಂತಪುರ, ಜ್ಞಾನಭಾರತಿ ಮತ್ತು ಯಲಹಂಕ ರೈಲ್ವೆ ನಿಲ್ದಾಣಗಳಲ್ಲಿ 55 ಕೋಟಿ ರೂ. ವೆಚ್ಚದಲ್ಲಿ ಮೆಟ್ರೋ ನಿಲ್ದಾಣದ ಸಂಪರ್ಕ ಕಾಮಗಾರಿ ಅನುಷ್ಠಾನಗೊಳಿಸುವುದು.

ಬನಶಂಕರಿ ಜಂಕ್ಷನ್‌ನಲ್ಲಿ 45 ಕೋಟಿ ರೂ. ವೆಚ್ಚದಲ್ಲಿ "ಸ್ಕೈವಾಕ್" ನಿರ್ಮಾಣ ಮಾಡುವುದು. ನನೆಗುದಿಗೆ ಬಿದ್ದಿರುವ 73 ಕಿ.ಮೀ ಉದ್ದ ಫೆರಿಫರಲ್ ರಿಂಗ್ ರಸ್ತೆ ನಿರ್ಮಾಣ 21,091 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಪ್ರಾರಂಭಿಸಲು ಕ್ರಮ ಕೈಗೊಳ್ಳುವುದು. ಗೊರಗುಂಟೆಪಾಳ್ಯ ಜಂಕ್ಷನ್‌ನಲ್ಲಿ ಸಿಗ್ನಲ್ ಮುಕ್ತ ವಾಹನ ಸಂಚಾರಕ್ಕೆ ಬಿ ಬಿ ಎಂ ಪಿ, ಬಿ ಡಿ ಎ ಮತ್ತು ಎನ್ ಹೆಚ್ ಎ ಐ ವತಿಯಿಂದ ಗ್ರೇಡ್ ಸೆಪರೇಟರ್ ಮತ್ತು ಮೇಲುಸೇತುವೆ ಕಾಮಗಾರಿಗಳ ಅನುಷ್ಠಾನಗೊಳಿಸುವುದು, ಬೆಂಗಳೂರು ಉಪನಗರ ರೈಲ್ವೆ ಯೋಜನೆಯನ್ನು 15,267 ಕೋಟಿ ರೂ. ವೆಚ್ಚದಲ್ಲಿ ಜಾರಿಗೆ ತರುವುದು ಹಾಗೂ ಚಿಕ್ಕಬಾಣಾವರ ಕಾರಿಡಾರ್‌ ಕಾಮಗಾರಿ ಶೀಘ್ರ ಪ್ರಾರಂಭಿಸುವ ಯೋಜನೆಗಳನ್ನು ಪ್ರಸಕ್ತ ಸಾಲಿನ ಬಜೆಟ್ ಒಳಗೊಂಡಿದೆ.

ತಜ್ಞರ ಸಮಿತಿ ರಚನೆ: ರಾಜ್ಯದ ಎಲ್ಲಾ ಸಾರಿಗೆ ನಿಗಮಗಳನ್ನು ಪುನಶ್ವೇತನಗೊಳಿಸಲು ತಜ್ಞ ಸಮಿತಿಯನ್ನು ರಚಿಸಲಾಗಿದೆ. ಆದಾಯ ಸೋರಿಕೆ ತಡೆಗಟ್ಟುವುದರೊಂದಿಗೆ ಸಂಪನ್ಮೂಲ ಸೃಷ್ಟಿಗೆ ಒತ್ತು ನೀಡಲು ಹಾಗೂ ಉತ್ತಮ ಸೇವೆಯ ಮೂಲಕ ಲಾಭದಾಯಕವಾಗಿ ಕಾರ್ಯನಿರ್ವಹಿಸುವ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಲಿದೆ. ಕುರಿತು ಸಮಿತಿ ನೀಡಲಿರುವ ರಾಜ್ಯ ತ್ವರಿತವಾಗಿ ಅನುಷ್ಠಾನಗೊಳಿಸುವುದಾಗಿ ತಿಳಿಸಿದೆ.

9 ಜಿಲ್ಲೆಗಳಲ್ಲಿ ಚಾಲನಾ ಪರೀಕ್ಷಾ ಪಥ: ಕೋವಿಡ್​ನಿಂದಾಗಿ ಆರ್ಥಿಕ ನಷ್ಟ ಅನುಭವಿಸಿದ ರಾಜ್ಯದ ಸಾರಿಗೆ ಸಂಸ್ಥೆಗಳ ನೆರವಿಗೆ 2020-21 ರಲ್ಲಿ 1,953 ಕೋಟಿ ರೂ. ಮತ್ತು 2021-22ರಲ್ಲಿ 1,208 ಕೋಟಿ ರೂ.ಗಳ ಸಹಾಯಧನ ಒದಗಿಸಿದೆ.

ದೇವನಹಳ್ಳಿ, ಕೋಲಾರ, ಹೊಸಪೇಟೆ, ಗದಗ, ಬಳ್ಳಾರಿ, ವಿಜಯಪುರ, ಬೀದರ್‌, ಯಾದಗಿರಿ ಮತ್ತು ದಾವಣಗೆರೆಗಳಲ್ಲಿ ಒಟ್ಟು 80 ಕೋಟಿ ರೂ.ಗಳ ವೆಚ್ಚದಲ್ಲಿ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥಗಳನ್ನು ರಸ್ತೆ ಸುರಕ್ಷತಾ ನಿಧಿಯಡಿ ಸ್ಥಾಪಿಸುವ ಯೋಜನೆಗಳನ್ನು ಬಜೆಟ್ ಹೊಂದಿದೆ. ಹಾಗೆಯೇ, ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಬಸ್ ಘಟಕ ಮತ್ತು ಚಾಲನಾ ತರಬೇತಿ ಕೇಂದ್ರವನ್ನು 28 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ತಿಳಿಸಲಾಗಿದೆ.

ಸಾರಿಗೆ ವಾಹನಗಳ ತೆರಿಗೆ ಪಾವತಿಗೆ ಕಾಲಾವಕಾಶ: ರಾಜ್ಯದಲ್ಲಿ 30,000 ರೂ.ಗಳಿಗಿಂತ ಹೆಚ್ಚು ತ್ರೈಮಾಸಿಕ ತೆರಿಗೆ ಪಾವತಿಸುವ ಸಾರಿಗೆ ವಾಹನಗಳಿಗೆ ಮಾಹೆಯಾನ ತೆರಿಗೆ ಪಾವತಿಸಲು ಅವಕಾಶ ಕಲ್ಪಿಸಲಾಗುವುದು. ಮೋಟಾರು ವಾಹನ ತೆರಿಗೆ ಪಾವತಿಯನ್ನು ತೆರಿಗೆ ಅವಧಿ ಮುಕ್ತಾಯದ ದಿನಾಂಕದಿಂದ 15 ದಿನಗಳ ಕಾಲಾವಧಿಯನ್ನು ನೀಡಲಾಗಿದ್ದು, ಈ ಕಾಲಾವಧಿಯನ್ನು ಒಂದು ತಿಂಗಳಿಗೆ ವಿಸ್ತರಿಸಲಾಗುವುದು ಎಂದು ತಿಳಿಸಲಾಗಿದೆ.

ವೃತ್ತಿಪರ ಚಾಲಕರ ಮಕ್ಕಳಿಗೆ ವಿದ್ಯಾನಿಧಿ: ರಾಜ್ಯದಲ್ಲಿನ 'ಯೆಲ್ಲೊ ಬೋರ್ಡ್‌' (Yellow Board) ಚಾಲಕರ ಮಕ್ಕಳ ಉನ್ನತ ವಿದ್ಯಾಭ್ಯಾಸವನ್ನು ಉತ್ತೇಜಿಸಲು ವಿದ್ಯಾನಿಧಿ ಯೋಜನೆಯನ್ನು ವಿಸ್ತರಿಸಲಾಗುವುದು. ಇದಲ್ಲದೆ ಆರೋಗ್ಯ ಸೌಲಭ್ಯಕ್ಕಾಗಿ ವಿಶೇಷ ಯೋಜನೆ ರೂಪಿಸಲಾಗುವುದು. ರಾಜ್ಯದಲ್ಲಿನ ಹೆದ್ದಾರಿಗಳ ಅಕ್ಕಪಕ್ಕ ಪ್ರಯಾಣಿಕರಿಗೆ ಮೂಲಸೌಕರ್ಯಗಳನ್ನು (Wayside amenities) ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ನಿರ್ಮಿಸಲಾಗುವುದು.

ಟೆಂಡರ್ ಪರಿಶೀಲನೆಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸಮಿತಿ: ಸರ್ಕಾರದಿಂದ ಕರೆಯಲಾಗುವ ಟೆಂಡರ್‌ಗಳ ಆಹ್ವಾನ ಮತ್ತು ಅಂಗೀಕಾರ ಪ್ರಕ್ರಿಯೆಯಲ್ಲಿ ಹೆಚ್ಚಿನ ಪಾರದರ್ಶಕತೆಯನ್ನು ತರುವ ಉದ್ದೇಶದಿಂದ 50 ಕೋಟಿ ರೂ.ಗಳು ಮೀರಿದ ನಿರ್ಮಾಣ ಕಾಮಗಾರಿಗಳೂ ಸೇರಿದಂತೆ ಎಲ್ಲಾ ಸರಕು ಮತ್ತು ಸೇವೆಗಳ ಟೆಂಡರ್ ಮತ್ತು ಅಂದಾಜುಗಳನ್ನು ಟೆಂಡರ್ ಪೂರ್ವ ಪರಿಶೀಲನೆ ಮಾಡಲು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಟೆಂಡರ್ ಪೂರ್ವ ಪರಿಶೀಲನಾ ಸಮಿತಿಯನ್ನು ರಚಿಸಲು ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ: ಮತ್ತೆ ರಾಜಸ್ವ ಕೊರತೆಯ ಬಜೆಟ್ ಮಂಡನೆ; ಆದಾಯ ಸಂಗ್ರಹದ ಬೊಮ್ಮಾಯಿ ಲೆಕ್ಕಾಚಾರ ಹೇಗಿದೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.