ETV Bharat / city

ಆಗಸ್ಟ್ ಒಳಗೆ ತಲಾ 100 ಗ್ರಾಮಗಳಲ್ಲಿ ಹೊಸ ಆರ್​​ಟಿಸಿ ವಿತರಿಸಿ: ಸಿಎಂ ಬೊಮ್ಮಾಯಿ ಸೂಚನೆ

author img

By

Published : May 7, 2022, 9:15 AM IST

Progress Review Meeting of the Revenue Dept
ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ

ಆರ್​​ಟಿಸಿಗಳನ್ನು ಅಧಿಕೃತವಾಗಿ ನೀಡದಿದ್ದರೆ, ವ್ಯಾಜ್ಯಗಳು ಬಗೆಹರಿಯುವುದಿಲ್ಲ. ಈ ಬಗ್ಗೆ ಪರಿಶೀಲನಾ ಕಾರ್ಯವನ್ನು ಹಂತ ಹಂತವಾಗಿ ಮಾಡಬೇಕು. ಭೂ ವಿವಾದಗಳ ಪ್ರಕರಣಗಳಿಂದ ಜನರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಸೂಕ್ತ ಗಮನ ಹರಿಸಬೇಕು ಎಂದು ಸಿಎಂ ಬೊಮ್ಮಾಯಿ ಸೂಚನೆ ನೀಡಿದ್ದಾರೆ.

ಬೆಂಗಳೂರು: ರಾಜ್ಯದ ಎಲ್ಲಾ ಕಂದಾಯ ವಿಭಾಗಗಳ ತಲಾ 100 ಗ್ರಾಮಗಳಲ್ಲಿ ಹೊಸ ಆರ್​​ಟಿಸಿಗಳನ್ನು ಆಗಸ್ಟ್ ಮಾಹೆಯೊಳಗೆ ವಿತರಿಸಲು ಕ್ರಮ ವಹಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು. 2022-23ನೇ ಸಾಲಿನ ಆಯವ್ಯಯ ಘೋಷಣೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕೃಷಿ ಜಮೀನು ಮತ್ತು ಇತರೆ ಸ್ವತ್ತುಗಳ ಡ್ರೋನ್ ಆಧಾರಿತ ಸರ್ವೆ ಕಾರ್ಯವನ್ನು ಕೈಗೊಂಡು ದಾಖಲೆಗಳ ಡಿಜಿಟಲೀಕರಣವಾಗಬೇಕು. ಪೋಡಿ ಕೆಲಸಗಳು ಸೂಕ್ತವಾಗಿ ಆಗಬೇಕು ಎಂದು ಸೂಚಿಸಿದರು.

Progress Review Meeting of the Revenue Dept
ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ

ವಿವಿಧ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಡಿ 59.45 ಲಕ್ಷ ಫಲಾನುಭವಿಗಳಿಗೆ ನೀಡುತ್ತಿರುವ ಮಾಶಾಸನ ಹೆಚ್ಚಳವಾಗಿದೆ. ಅವಿವಾಹಿತ, ವಿಚ್ಛೇದಿತ ಮಹಿಳೆಯರಿಗೆ ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ 1.32 ಲಕ್ಷ ಫಲಾನುಭವಿಗಳಿಗೆ ಅನುಕೂಲವಾಗಲಿದೆ. ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ಉತ್ತಮ ಕೆಲಸವಾಗಿರುವ ಬಗ್ಗೆ ಮುಖ್ಯಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಬದಲಾದ ಆಡಳಿತ ವ್ಯವಸ್ಥೆ ಇರಬೇಕು: ಆರ್​​ಟಿಸಿಗಳನ್ನು ಅಧಿಕೃತವಾಗಿ ನೀಡದಿದ್ದರೆ, ವ್ಯಾಜ್ಯಗಳು ಬಗೆಹರಿಯುವುದಿಲ್ಲ. ಈ ಬಗ್ಗೆ ಪರಿಶೀಲನಾ ಕಾರ್ಯವನ್ನು ಹಂತ ಹಂತವಾಗಿ ಮಾಡಬೇಕು. ಭೂ ವಿವಾದಗಳ ಪ್ರಕರಣಗಳಿಂದ ಜನರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಸೂಕ್ತ ಗಮನ ಹರಿಸಬೇಕು. ಬದಲಾದ ಸನ್ನಿವೇಶದಲ್ಲಿ ಬದಲಾದ ಆಡಳಿತ ವ್ಯವಸ್ಥೆ ಇರಬೇಕು. ಹಳೆ ವ್ಯವಸ್ಥೆಯಲ್ಲಿ ಪ್ರತಿದಿನಕ್ಕೆ 3-4 ನೋಂದಣಿಯಾಗುತ್ತದೆ. ಹಾಗಾಗಿ ಬದಲಾವಣೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

Progress Review Meeting of the Revenue Dept
ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ

ರಾಜ್ಯದ ಪ್ರತಿ ವಿಭಾಗದಲ್ಲಿ 4 ಅಥವಾ 5 ತಾಲೂಕಗಳಲ್ಲಿ ನೋಂದಣಿ ಪ್ರಕ್ರಿಯೆಯನ್ನು ಕೈಗೊಳ್ಳಬೇಕು, ಸಾರ್ವಜನಿಕರಿಗೆ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಬೆಂಗಳೂರಿಗೆ ಹೆಚ್ಚಿನ ಉಪನೋಂದಣಾಧಿಕಾರಿಗಳ ಕಚೇರಿಯನ್ನು ಸ್ಥಾಪಿಸುವ ಬಗ್ಗೆ ಕ್ರಮ ವಹಿಸಬೇಕು. ಎಲ್ಲಾ ಪಾರಂಪರಿಕ ನೋಂದಾಯಿತ ಶಾಶ್ವತ ದಾಖಲೆಗಳ ಆಧುನೀಕರಣ ಆಗಬೇಕು. ಪಂಡರಾಪುರದಲ್ಲಿ 7.50 ಕೋಟಿ ರೂ.ಗಳ ವೆಚ್ಚದಲ್ಲಿ ಅತಿಥಿಗೃಹ ನಿರ್ಮಾಣದಲ್ಲಿ ಕರ್ನಾಟಕದ ಸ್ಥಳ ಲಭ್ಯವಿದ್ದು, ಡಾರ್ಮಿಟರಿಗಳನ್ನು ಕಟ್ಟಲು ಹೆಚ್ಚಿನ ಆದ್ಯತೆ ನೀಡುವುದು. ಪ್ರಸ್ತಾವನೆ ಮರು ಯೋಜಿಸಿ ಜುಲೈ 2 ರೊಳಗೆ ಶಂಕುಸ್ಥಾಪನೆ ನೆರವೇರಿಸಲು ಕ್ರಮ ವಹಿಸಬೇಕು ಎಂದರು.

ಸಣ್ಣ ತಾಲೂಕುಗಳಿಗೆ ಮಿನಿ ವಿಧಾನಸೌಧ ವಿನ್ಯಾಸಗೊಳಿಸುವಾಗ ಅಗತ್ಯವಿರುವ ಇಲಾಖೆಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಲಭ್ಯವಿರುವ ಸ್ಥಳಗಳ ಪಟ್ಟಿ ನೀಡುವುದು ಹಾಗೂ ಎರಡು ವರ್ಷಗಳ ಅವಧಿಗೆ ಕಟ್ಟಡ ನಿರ್ಮಾಣ ಪೂರ್ಣಗೊಳ್ಳಬೇಕು. ಪ್ರಮುಖ ಇಲಾಖೆಗಳು ಕಟ್ಟಡದಲ್ಲಿ ಕಾರ್ಯನಿರ್ವಹಿಸಬೇಕು ಎಂದು ಸಿಎಂ ತಿಳಿಸಿದರು.

ನಿರ್ದಿಷ್ಟ ಕಾರ್ಯಕ್ರಮಗಳಿಗೆ ಮಾರ್ಗಸೂಚಿ: ಪ್ರಾದೇಶಿಕ ಸಮತೋಲನ ಯೋಜನೆಯಡಿ ನಿರ್ದಿಷ್ಟ ಕಾರ್ಯಕ್ರಮಗಳಿಗೆ ಮಾರ್ಗಸೂಚಿಗಳನ್ನು ರೂಪಿಸಿ ಅಭಿವೃದ್ಧಿ ಆಕಾಂಕ್ಷಿ ತಾಲೂಕುಗಳಲ್ಲಿ ಯೋಜನೆಗಳನ್ನು ಅನುಷ್ಠಾನ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು. ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ವಿಶೇಷ ಅಭಿವೃದ್ಧಿ ಯೋಜನೆಯಡಿ ಆರೋಗ್ಯ, ಶಿಕ್ಷಣ ಹಾಗೂ ಪೌಷ್ಟಿಕತೆಗೆ ಪ್ರಾಶಸ್ತ್ಯ ನೀಡಲು ಸೂಚಿಸಿದರು.

Progress Review Meeting of the Revenue Dept
ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ

ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ದಿ ಮಂಡಳಿಗೆ 1500 ಕೋಟಿ ರೂ.ಗಳ ಮ್ಯಾಕ್ರೋ ಅನುದಾನ ಹಾಗೂ ಎಸ್.ಡಿ.ಪಿ ಯೋಜನೆಯಡಿ ಎಷ್ಟು ಶಾಲೆಗಳು, ಅಂಗನವಾಡಿಗಳಿಗೆ, ಆರೋಗ್ಯ ಕೇಂದ್ರಗಳಿಗೆ ಅನುದಾನ ನೀಡಲಾಗಿದೆ ಹಾಗೂ ಇಲಾಖೆಗಳಿಂದ ನಿಯಮಿತ ಕಾರ್ಯಕ್ರಮಗಳಲ್ಲಿ ಎಷ್ಟು ಅನುದಾನ ವೆಚ್ಚವಾಗುತ್ತಿದೆ ಎನ್ನುವ ಕುರಿತು ಮಾಸ್ಟರ್ ಪ್ಲಾನ್ ರೂಪಿಸಿ ಮೇಲ್ವಿಚಾರಣೆ ಮಾಡುವಂತೆ ಸೂಚಿಸಿದರು.

ಅವಲೋಕನ ತಂತ್ರಾಂಶದ ಮೂಲಕ ಜಿಲ್ಲೆ/ ತಾಲ್ಲೂಕುವಾರು ಆರ್ಥಿಕ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳ ಶ್ರೇಯಾಂಕವನ್ನು ತ್ರೈಮಾಸಿಕವಾಗಿ ಮಾಡಬೇಕು. ಎಸ್‍ಡಿಪಿಯಡಿ ಅನುದಾನವನ್ನು ಅಭಿವೃದ್ಧಿ ಆಕಾಂಕ್ಷಿ ತಾಲೂಕು/ ಜಿಲ್ಲೆಗಳಲ್ಲಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಒದಗಿಸಬೇಕು. ಉಳಿದ ಇಲಾಖಾ ಕಾರ್ಯಕ್ರಮಗಳೊಂದಿಗೆ ಸೇರ್ಪಡೆ ಮಾಡಬಾರದು ಎಂದರು.

ಸಚಿವ ಸಂಪುಟ ಉಪಸಮಿತಿಯು ನೀತಿ ಆಯೋಗದ ಸೂಚಕಗಳ ಪ್ರಕಾರ ವಲಯವಾರು ಆರೋಗ್ಯ, ಕೃಷಿ, ಜಲಸಂಪನ್ಮೂಲ, ಆರ್ಥಿಕ ಸೇರ್ಪಡೆ ಮತ್ತು ಕೌಶಲ್ಯಾಭಿವೃದ್ಧಿ, ಮೂಲಸೌಕರ್ಯ ಸೇರಿದಂತೆ 3000 ಕೋಟಿ ರೂಪಾಯಿ ಅನುದಾನ ಹಂಚಿಕೆ ಮಾಡಲು ಶಿಫಾರಸು ಮಾಡಿದೆ ಎಂದು ಸಿಎಂ ಬೊಮ್ಮಾಯಿ ಮಾಹಿತಿ ನೀಡಿದರು.

ಇದನ್ನೂ ಓದಿ: ಪ್ರಾಯೋಗಿಕವಾಗಿ ಗೋ ಮಾತಾ ಸಹಕಾರ ಸಂಘ ಸ್ಥಾಪಿಸಿ: ಸಿಎಂ ಬೊಮ್ಮಾಯಿ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.