ETV Bharat / city

ಪ್ರಾಯೋಗಿಕವಾಗಿ ಗೋ ಮಾತಾ ಸಹಕಾರ ಸಂಘ ಸ್ಥಾಪಿಸಿ: ಸಿಎಂ ಬೊಮ್ಮಾಯಿ ಸೂಚನೆ

author img

By

Published : May 7, 2022, 7:39 AM IST

ಗ್ರಾಮೀಣ ಪ್ರದೇಶಗಳ ಪಶುಚಿಕಿತ್ಸಾಲಯಗಳನ್ನು ಹೊಸ ಮಾದರಿಯಲ್ಲಿ ಮಾಡಬೇಕು. ಸಿಬ್ಬಂದಿ ನೇಮಕಾತಿಗಾಗಿ ಡಿಪ್ಲೋಮಾ ವಿದ್ಯಾರ್ಥಿಗಳನ್ನು ನೇಮಿಸಬೇಕು. 50 ಪಶು ಚಿಕಿತ್ಸಾಲಯಗಳನ್ನು ಬಾಡಿಗೆ ಆಧಾರದ ಮೇಲೆ ಪ್ರಾರಂಭಿಸಲು ಅನುಮತಿ ನೀಡಬೇಕು ಎಂದು ಸಿಎಂ ಸೂಚಿಸಿದ್ದಾರೆ.

ಗೋ ಮಾತಾ ಸಹಕಾರ ಸಂಘ
ಗೋ ಮಾತಾ ಸಹಕಾರ ಸಂಘ

ಬೆಂಗಳೂರು: ರಾಜ್ಯ ಮಟ್ಟದಲ್ಲಿ ಪ್ರಾಯೋಗಿಕವಾಗಿ ಗೋ ಮಾತಾ ಸಹಕಾರ ಸಂಘ ಸ್ಥಾಪಿಸಿ ಗೋ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ರೂಪುರೇಷೆಗಳನ್ನು ಸಿದ್ಧಪಡಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ. 2022-23 ನೇ ಸಾಲಿನ ಆಯವ್ಯಯ ಘೋಷಣೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಪಶುಸಂಗೋಪನಾ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಿಎಂ ಮಾತನಾಡಿದರು.

ಗ್ರಾಮೀಣ ಪ್ರದೇಶಗಳ ಪಶು ಚಿಕಿತ್ಸಾಲಯಗಳನ್ನು ಹೊಸ ಮಾದರಿಯಲ್ಲಿ ಮಾಡಬೇಕು. ಸಿಬ್ಬಂದಿ ನೇಮಕಾತಿಗಾಗಿ ಡಿಪ್ಲೋಮಾ ವಿದ್ಯಾರ್ಥಿಗಳನ್ನು ನೇಮಿಸಬೇಕು. 50 ಪಶು ಚಿಕಿತ್ಸಾಲಯಗಳನ್ನು ಬಾಡಿಗೆ ಆಧಾರದ ಮೇಲೆ ಪ್ರಾರಂಭಿಸಲು ಅನುಮತಿ ನೀಡಬೇಕು. ಇಲ್ಲಿ ಜೆ.ಒ.ಸಿ ಮತ್ತು ಡಿಪ್ಲೋಮಾ ಮಾಡಿರುವ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಬೇಕು. ಹಾವೇರಿ ಜಿಲ್ಲೆಯಲ್ಲಿ ಒಂದು ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೈರಿಯಡಿ ಯುಹೆಚ್​​ಟಿ ಘಟಕಕ್ಕೆ ಅಗತ್ಯವಿರುವ 20 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗುವುದು. ಅದಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಬೇಕು, ಗೋಶಾಲೆಗಳ ಸಂಖ್ಯೆಯನ್ನು 31 ರಿಂದ 100 ಕ್ಕೆ ಹೆಚ್ಚಿಸುವ ಸಂಬಂಧ 70 ಹೊಸ ಗೋಶಾಲೆಗಳನ್ನು ಸ್ಥಾಪಿಸಲು ನಿವೇಶನಗಳನ್ನು ಗೊತ್ತು ಮಾಡಬೇಕು, ಪುಣ್ಯಕೋಟಿ ದತ್ತು ಯೋಜನೆಯ ಪೋರ್ಟಲ್​ಅನ್ನು ಜೂನ್ ತಿಂಗಳ ಅಂತ್ಯದಲ್ಲಿ ಪ್ರಾರಂಭಿಸುವುದು. ಯಾವ ಗೋಶಾಲೆಯಲ್ಲಿ ಯಾವ ಗೋವುಗಳನ್ನು ದತ್ತು ಪಡೆಯಲಾಗಿದೆ ಎನ್ನುವುದನ್ನು ಪೋರ್ಟಲ್​​ನಲ್ಲಿ ಬಿಂಬಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಪಶುಸಂಗೋಪನಾ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ
ಗೃಹ ಕಚೇರಿ ಕೃಷ್ಣಾದಲ್ಲಿ ಪಶುಸಂಗೋಪನಾ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ

ಗೋ ತಳಿಗಳನ್ನು ಸಂರಕ್ಷಿಸಲು ಮತ್ತು ಅವುಗಳ ಸಂತತಿಯನ್ನು ಹೆಚ್ಚಿಸಲು ಕೆಎಂಎಫ್ ಮೂಲಕ 2000 ಗೋ ತಳಿಗಳನ್ನು ರೈತರಿಗೆ ಹಂಚಿಕೆ ಮಾಡಬೇಕು. ಈ ವರ್ಷ ಇದಕ್ಕಾಗಿ 4 ಕೋಟಿ ರೂ. ಅನುದಾನ ಒದಗಿಸುತ್ತೇನೆ. ಶಿವಮೊಗ್ಗದ ಪಶುವೈದ್ಯಕೀಯ ಕಾಲೇಜಿನಲ್ಲಿ ಗೋ ಉತ್ಪನ್ನಗಳ ತಾಂತ್ರಿಕತೆ ಮತ್ತು ಪ್ರಾಮಾಣೀಕರಣದ ಅಭಿವೃದ್ಧಿಗಾಗಿ ಸಂಶೋಧನಾ ಕೋಶ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು, ಕುರಿಗಾಹಿಗಳಿಗೆ ವಸತಿ ಸೌಕರ್ಯದ ಜೊತೆಗೆ ಕುರಿ ದೊಡ್ಡಿ ನಿರ್ಮಿಸಲು ಐದು ಲಕ್ಷ ರೂ. ಸಹಾಯಧನ ನೀಡಲಾಗುತ್ತದೆ. ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಈ ಕಾರ್ಯಕ್ರಮವನ್ನು ವಹಿಸಿ, ನಿವೇಶನವಿದ್ದವರಿಗೆ ಮನೆ ನಿರ್ಮಿಸಿ ಕೊಡುವುದು ಹಾಗೂ ನರೇಗಾ ಮತ್ತು ರಾಜೀವ್ ಗಾಂಧಿ ವಸತಿ ನಿಗಮ ಸೇರಿಸಿ 5000 ಗುರಿ ನಿಗದಿಪಡಿಸಿಕೊಳ್ಳಬೇಕು ಎಂದು ಸಿಎಂ ಸೂಚಿಸಿದರು.

ಮೆಣಸಿನಕಾಯಿಯಿಂದ ಔಷಧಿಯುಕ್ತ ತೈಲ ಉತ್ಪಾದನೆ ಸಾಧ್ಯತೆ ಬಗ್ಗೆ ವರದಿ ಸಿದ್ಧಪಡಿಸಿ: ಸೌಂದರ್ಯವರ್ಧಕಗಳಲ್ಲಿ ಹಾಗೂ ಔಷಧಗಳಲ್ಲಿ ಬಳಸಲಾಗುವ ಮೆಣಸಿನಕಾಯಿಯಿಂದ ಔಷಧಿಯುಕ್ತ ತೈಲ ಉತ್ಪಾದನೆಯ ಸಾಧ್ಯತೆಗಳ ಬಗ್ಗೆ ರೂಪುರೇಷೆ ಸಿದ್ಧಪಡಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ. 2022-23 ನೇ ಸಾಲಿನ ಆಯವ್ಯಯ ಘೋಷಣೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ನಡೆದ ತೋಟಗಾರಿಕಾ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಮೆಣಸು ಮತ್ತು ಇತರೆ ಸಾಂಬಾರು ಪದಾರ್ಥಗಳ ಗುಣಮಟ್ಟವನ್ನು ಹೆಚ್ಚಿಸಲು ಬ್ಯಾಡಗಿಯಲ್ಲಿ ಸಂಶೋಧನಾ ಕೇಂದ್ರ ಸ್ಥಾಪಿಸುವ ಬಗ್ಗೆ ವ್ಯಾಪಾರಸ್ಥರ ಸಲಹೆ ಪಡೆಯಬೇಕು, ತೋಟಗಾರಿಕೆಯಲ್ಲಿ ವಿನೂತನ ತಂತ್ರಜ್ಞಾನ ಹಾಗೂ ಯಂತ್ರೋಪಕರಣಗಳನ್ನು ಅಳವಡಿಸುವ ನಿಟ್ಟಿನಲ್ಲಿ ಐಐಎಸ್ಸಿ ತಜ್ಞರಿಂದ ಸಲಹೆ ಪಡೆದುಕೊಳ್ಳಬೇಕು ಎಂದರು.

ಕೊಡಗು ಮತ್ತು ಜಾಂಬೋಟಿ ಜೇನುತುಪ್ಪಗಳನ್ನು ಜನಪ್ರಿಯಗೊಳಿಸಲು ಹಾಗೂ ಹೆಚ್ಚಿಸಲು ಸುಧಾರಿತ ಮಾರುಕಟ್ಟೆ ವ್ಯವಸ್ಥೆ ಕೈಗೊಳ್ಳಲು ಕ್ರಮ ವಹಿಸಬೇಕು. ಬೆಂಗಳೂರಿನ ಯಲಹಂಕದಲ್ಲಿ ಅಟಲ್ ಬಿಹಾರಿ ವಾಜಪೇಯಿ ಉದ್ಯಾನವನವನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಿದ್ದ ಸ್ಥಳವನ್ನು ತೋಟಗಾರಿಕೆ ಇಲಾಖೆಗೆ ಒಳಪಡುವ ಜಮೀನಿಗೆ ಬದಲಾಯಿಸಬೇಕು ಎಂದು ಸಿಎಂ ನಿರ್ದೇಶನ ನೀಡಿದರು.

(ಇದನ್ನೂ ಓದಿ: ಪರ್ಫಾರ್ಮೆನ್ಸ್​ನತ್ತ ಸಿಎಂ ಚಿತ್ತ: ಇಲಾಖೆವಾರು ಸರಣಿ ಸಭೆ, ಆಡಳಿತಕ್ಕೆ ಮತ್ತಷ್ಟು ಚುರುಕು)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.