ETV Bharat / city

ಪ್ರತಿ ಶನಿವಾರ ಕೆರೆ ಒತ್ತುವರಿ ತೆರವು ಕಾರ್ಯ ನಡೆಸಲು ಡಿಸಿಗೆ ಸೂಚನೆ: ಸಚಿವ ಆರ್‌.ಅಶೋಕ್ ಭರವಸೆ

author img

By

Published : Sep 22, 2021, 2:10 PM IST

Minister R. Ashok talking in council Session
ಪ್ರತಿ ಶನಿವಾರ ಬೆಂಗಳೂರು ಕೆರೆ ಒತ್ತುವರಿ ತೆರವು ಕಾರ್ಯ ನಡೆಸಲು ಡಿಸಿಗೆ ಸೂಚನೆ; ಸಚಿವ ಆರ್‌.ಅಶೋಕ್

ಬೆಂಗಳೂರಿನ ಕೆರೆ ಒತ್ತುವರಿ ತೆರವು ಕಾರ್ಯ ನಡೆಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದು, ರಾಜ್ಯದ ಕೆರೆ ಒತ್ತುವರಿ ತೆರವಿಗೆ ಸರ್ಕಾರದ ದಿಟ್ಟ ಕ್ರಮ ಕೈಗೊಳ್ಳಲಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ವಿಧಾನ ಪರಿಷತ್‌ಗೆ ತಿಳಿಸಿದ್ದಾರೆ.

ಬೆಂಗಳೂರು: ಪ್ರತಿ ಶನಿವಾರ ಎಲ್ಲ ಕೆಲಸ ಬಿಟ್ಟು ಬೆಂಗಳೂರಿನ ಕೆರೆ ಒತ್ತುವರಿ ತೆರವು ಕಾರ್ಯ ನಡೆಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದು, ರಾಜ್ಯದ ಕೆರೆ ಒತ್ತುವರಿ ತೆರವಿಗೆ ಸರ್ಕಾರದ ದಿಟ್ಟ ಕ್ರಮ ಕೈಗೊಳ್ಳಲಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್ ಭರವಸೆ ನೀಡಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಅಪ್ಪಾಜಿಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಂಗಳೂರಿನ ಹಲವು ಕೆರೆ ಜಾಗಗಳಲ್ಲಿ ಬಸ್ ನಿಲ್ದಾಣ, ಬಿಡಿಎ ಲೇಔಟ್‌ಗಳು ತಲೆ ಎತ್ತಿವೆ. ಬಿಡಿಎ ಭೂ ಕಬಳಿಕೆ ಮಾಡಿಕೊಂಡಿದೆ. ಕೆರೆಗಳ ಒತ್ತುವರಿಯಲ್ಲಿ ಬಿಡಿಎಗೆ ಮೊದಲ ಸ್ಥಾನವಾಗಿದ್ದು, ಖಾಸಗಿಯವರೂ ಒತ್ತುವರಿ ಮಾಡಿದ್ದಾರೆ.

ಇದೆಲ್ಲವೂ ಈ ಹಿಂದೆ ಆಗಿದೆ, ಈಗ ಆಗಲು ಬಿಡುವುದಿಲ್ಲ. ಹಾಗಾಗಿಯೇ ಪ್ರತಿ ಶನಿವಾರ ಡಿಸಿಗಳು ಕೆರೆಗಳ ಒತ್ತುವರಿ ತೆರವು ಮಾಡಲು ಸೂಚನೆ ನೀಡಲಾಗಿದೆ. ಇರುವ ಕೆರೆ ಉಳಿಸಬೇಕಿದೆ, ಆ ದೃಷ್ಟಿಯಿಂದ ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂದು ಹೇಳಿದರು.

ಕೆರೆಗಳ ಒತ್ತುವರಿ ಜಾಗದಲ್ಲಿ ಮನೆ ಕಟ್ಟಿದ್ದಾರೆ, ಖಾತೆ, ಕಂದಾಯ ಕಟ್ಟಿದ್ದಾರೆ, ತೆರಿಗೆ ಕಟ್ಟಿದ್ದಾರೆ, ಬಿಜೆಪಿ ಸರ್ಕಾರವಿದ್ದರೆ ತೆರವು ಜಾಗದಲ್ಲಿ ಕಾಂಗ್ರೆಸ್, ಜೆಡಿಎಸ್ ಪ್ರತಿಭಟನೆ ಮಾಡಲಿದೆ. ಅಮಾಯಕರ ತೆರವು ಅಂತಾ ಆರೋಪಿಸಲಿದೆ, ತೆರವು ಮಾಡದೇ ಇದ್ದರೆ ಮೌನವಾಗಿದೆ ಕಣ್ಣು ಕಿವಿ ಇಲ್ಲದ ಸರ್ಕಾರ ಎನ್ನುತ್ತಾರೆ. ಹಾಗಾಗಿ ಇದು ಸದನದ ಎಲ್ಲರೂ ಸೇರಿ ನಿರ್ಧಾರ ಮಾಡಬೇಕು. ನಾವು ವಿರೋಧ ಪಕ್ಷದಲ್ಲಿದ್ದಾಗ ನಾವು ವಿರೋಧ, ನೀವು ಇದ್ದಾಗ ನೀವು ವಿರೋಧ ಮಾಡುವುದಿದೆ ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್,‌ ಈ ರೀತಿ ಹೇಳಬೇಡಿ, ಕಾನೂನು ಏನಿದೆಯೋ ಆ ರೀತಿ ಮಾಡಬೇಕು, ಯಾರು ಎಲ್ಲಿದ್ದಾರೆ ಎನ್ನುವುದು ಮುಖ್ಯವಲ್ಲ ಎಂದರು.

ಮಾತು ಮುಂದುವರೆಸಿದ ಸಚಿವ ಅಶೋಕ್, ರಾಜಕಾರಣ ಬಿಟ್ಟು ನಾವೆಲ್ಲ ಒಂದು ತೀರ್ಮಾನ ಮಾಡಿದರೆ ಕೆರೆಗಳು ಉಳಿಯಲಿವೆ. ಕೆರೆಗಳ ನಶಿಸಿರುವುದರಿಂದ ವಸತಿ ಪ್ರದೇಶಗಳಿಗೆ ನೀರು ನುಗ್ಗುತ್ತಿದೆ. ಬಿಡಿಎ ಒತ್ತುವರಿ ಬಡಾವಣೆ ಬಿಡೋಣ, ಬೇರೆಯದ್ದಾದರೂ ತೆರವು ಮಾಡಬೇಕು ಎಂದು ಹೇಳಿದರು.

ರಾಜ್ಯದಲ್ಲಿ 7 ಲಕ್ಷ ಎಕರೆಯಷ್ಟು ಕೆರೆಯ ಜಾಗವಿದೆ

ನಮ್ಮ ಯಾವ ಸರ್ಕಾರಗಳೂ ಒಂದೇ ಒಂದು ಕೆರೆ ಕಟ್ಟಿಲ್ಲ, ರಾಜಮಹಾರಾಜರು ಕಟ್ಟಿದ ಕರೆಗಳನ್ನೇ ನಮ್ಮಲ್ಲಿ ಉಳಿಸಿಕೊಳ್ಳಲು ಆಗುತ್ತಿಲ್ಲ, ಹಳ್ಳಿಗಳ ಕಡೆ ಕೆರೆ ಒತ್ತುವರಿ ಕಡಿಮೆ. ಆದರೆ ಬೆಂಗಳೂರಿನಲ್ಲಿ ಹೆಚ್ಚು. ಹಾಗಾಗಿ ಪ್ರತಿ ಶನಿವಾರ ಇಡೀ ದಿನ‌ ಡಿಸಿಗಳು ಕೆರೆ ಒತ್ತುವರು ತೆರವು ಕಾರ್ಯ ಮಾಡಬೇಕು ಎಂದು ಸೂಚಿಸಲಾಗಿದೆ. ಕೆರೆ ಒತ್ತುವರಿ ತೆರವಿಗೆ ದಿಟ್ಟಕ್ರಮ ಕೈಗೊಳ್ಳಲಿದ್ದೇವೆ ಎಂದರು.

ಬೆಂಗಳೂರು ಕೆರೆ ಒತ್ತುವರಿ ವಿವರ:

ಬೆಂಗಳೂರು ನಗರ ಜಿಲ್ಲೆ:

ಕೆರೆಗಳ ಸಂಖ್ಯೆ: 837

ಒತ್ತುವರಿ ಕೆರೆ: 744

ತೆರವು ಮಾಡಿದ ಕೆರೆ: 360

ತೆರವು ಬಾಕಿ ಕೆರೆ: 384

ಒತ್ತುವರಿ ಮುಕ್ತ ಕೆರೆ: 93

ಬೆಂಗಳೂರು ಗ್ರಾಮಾಂತರ ಜಿಲ್ಲೆ:

ಕೆರೆಗಳ ಸಂಖ್ಯೆ: 710

ಒತ್ತುವರಿ ಕೆರೆ: 643

ತೆರವು ಮಾಡಿದ ಕೆರೆ: 544

ತೆರವು ಬಾಕಿ ಕೆರೆ: 99

ಒತ್ತುವರಿ ಮುಕ್ತ ಕೆರೆ: 67

ಬಿಬಿಎಂಪಿ:

ಕೆರೆಗಳ ಸಂಖ್ಯೆ: 160

ಒತ್ತುವರಿ ಕೆರೆ: 148

ತೆರವು ಮಾಡಿದ ಕೆರೆ: 20

ತೆರವು ಬಾಕಿ ಕೆರೆ: 128

ಒತ್ತುವರಿ ಮುಕ್ತ ಕೆರೆ: 12

ETV Bharat Logo

Copyright © 2024 Ushodaya Enterprises Pvt. Ltd., All Rights Reserved.