ETV Bharat / city

70 ಸಂಚಾರಿ ಪಶು ಚಿಕಿತ್ಸಾ ವಾಹನಗಳಿಗೆ ನಾಳೆ ಚಾಲನೆ

author img

By

Published : May 6, 2022, 8:30 AM IST

Prabhu Chauhan
ಸಚಿವ ಪ್ರಭು ಚವ್ಹಾಣ್

ಹೊಸದಾಗಿ ಮಂಜೂರಾಗಿರುವ 275 ಸಂಚಾರಿ ಪಶು ಚಿಕಿತ್ಸಾ ವಾಹನಗಳ ಪೈಕಿ 70 ವಾಹನಗಳಿಗೆ ನಾಳೆ ಕೇಂದ್ರ ಮೀನುಗಾರಿಕೆ, ಪಶುಪಾಲನೆ ಮತ್ತು ಹೈನುಗಾರಿಕೆ ಸಚಿವ ಪುರುಷೋತ್ತಮ ರೂಪಾಲ ಚಾಲನೆ ನೀಡಲಿದ್ದಾರೆ ಎಂದು ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.

ಬೆಂಗಳೂರು: ಹೊಸದಾಗಿ ಮಂಜೂರಾಗಿರುವ 275 ಸಂಚಾರಿ ಪಶು ಚಿಕಿತ್ಸಾ ವಾಹನಗಳ ಪೈಕಿ 70 ವಾಹನಗಳನ್ನು ಮೇ 7 ರಂದು ಲೋಕಾರ್ಪಣೆ ಮಾಡಲಾಗುತ್ತಿದೆ ಎಂದು ಪಶುಸಂಗೋಪನೆ ಇಲಾಖೆ ಸಚಿವ ಪ್ರಭು ಚವ್ಹಾಣ್ ನಿನ್ನೆ ಸಂಜೆ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ವಿಧಾನಸೌಧದ ಮುಂಭಾಗದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕೇಂದ್ರ ಮೀನುಗಾರಿಕೆ, ಪಶುಪಾಲನೆ ಮತ್ತು ಹೈನುಗಾರಿಕೆ ಸಚಿವ ಪುರುಷೋತ್ತಮ ರೂಪಾಲ ಪಶು ಚಿಕಿತ್ಸಾ ವಾಹನಗಳಿಗೆ ಚಾಲನೆ ನೀಡುವರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಇತರೆ ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

ರಾಜ್ಯದಲ್ಲಿ ದನ, ಎಮ್ಮೆ, ಕುರಿ, ಮೇಕೆ ಮತ್ತು ಹಂದಿ ಸೇರಿದಂತೆ ಒಟ್ಟು 2.90 ಕೋಟಿ ಜಾನುವಾರುಗಳಿವೆ. ಜಾನುವಾರುಗಳಿರುವ ರೈತರ ಮನೆ ಬಾಗಿಲಿಗೆ ತುರ್ತು ಚಿಕಿತ್ಸೆ ನೀಡಲು ಉದ್ದೇಶಿಸಲಾಗಿದೆ. ಕೇಂದ್ರ ಸರ್ಕಾರದ ಶೇ.100 ರ ಸಹಾಯಧನದಲ್ಲಿ 44 ಕೋಟಿ ರೂ. ಅನುದಾನದಲ್ಲಿ ರಾಜ್ಯಕ್ಕೆ ಹೊಸದಾಗಿ 275 ಸಂಚಾರಿ ಪಶು ಚಿಕಿತ್ಸಾ ವಾಹನಗಳು ಮಂಜೂರಾಗಿರುತ್ತವೆ. ಪ್ರತಿ ಲಕ್ಷ ಜಾನುವಾರುಗಳಿಗೆ ಒಂದು ಸಂಚಾರಿ ವಾಹನವನ್ನು ಒದಗಿಸಲಾಗುತ್ತದೆ.


ಈ ಸಂಚಾರಿ ಪಶು ಚಿಕಿತ್ಸಾ ವಾಹನದಲ್ಲಿ ಒಬ್ಬ ಪಶುವೈದ್ಯರು, ಒಬ್ಬರು ಪಶುವೈದ್ಯ ಸಹಾಯಕರು, ವಾಹನ ಚಾಲಕ ಕಂ ಡಿ ದರ್ಜೆ ನೌಕರರು ಸೇರಿದಂತೆ 3 ಜನ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಾರೆ. ಈಗಾಗಲೇ 15 ವಾಹನಗಳು ಆಯ್ದ ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಸಿಬ್ಬಂದಿ ವೇತನ ವಾಹನಗಳ ನಿರ್ವಹಣಾ ವೆಚ್ಚವನ್ನು ಪ್ರತಿ ವಾಹನಕ್ಕೆ ಪ್ರತಿ ತಿಂಗಳಿಗೆ 1,56,000 ರೂ. ಒದಗಿಸಲಾಗಿದೆ. ಇದಕ್ಕಾಗಿ ವಾರ್ಷಿಕ 54.78 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಇದರಲ್ಲಿ ಕೇಂದ್ರ ಸರ್ಕಾರದ ಶೇ.60 ಮತ್ತು ರಾಜ್ಯ ಸರ್ಕಾರದ ಶೇ.40 ಪಾಲಿರುತ್ತದೆ. 1962- ಸಂಚಾರಿ ಪಶುಚಿಕಿತ್ಸಾ ವಾಹನಗಳ ನಿಗಾ ವ್ಯವಸ್ಥೆಗಾಗಿ ಪ್ರತ್ಯೇಕ ಕಾಲ್ ಸೆಂಟರ್‌ ಸ್ಥಾಪಿಸಲಾಗುವುದು ಎಂದು ಹೇಳಿದರು.

ಪ್ರಾಣಿ ಕಲ್ಯಾಣ ಮಂಡಳಿ ಸ್ಥಾಪನೆ: ಪ್ರಾಣಿಹಿಂಸೆ ತಡೆಯುವ ಕಾನೂನುಗಳನ್ನು ಬಿಗಿಗೊಳಿಸಲು ಕ್ರಮವಹಿಸಿ, ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯನ್ನು ಸ್ಥಾಪನೆ ಮಾಡಲಾಗಿದೆ. ಪಶು ಸಂಜೀವಿನಿ ಆಂಬುಲೆನ್ಸ್- ರಾಜ್ಯದ 15 ಜಿಲ್ಲೆಗಳಲ್ಲಿ ಸೇವೆ ಒದಗಿಸಲಾಗುತ್ತಿದ್ದು, ಇನ್ನು ಮುಂದೆ ಎಲ್ಲಾ ತಾಲೂಕುಗಳಿಗೆ ವಿಸ್ತರಿಸಲಾಗುವುದು. ಕರ್ನಾಟಕ ರಾಜ್ಯ ಜಾನುವಾರು ಪ್ರತಿಬಂಧಕ ಮತ್ತು ಸಂರಕ್ಷಣ ಅಧಿನಿಯಮ 2020 ಅನುಷ್ಠಾನಗೊಳಿಸಲಾಗುತ್ತಿದೆ.

ಜಿಲ್ಲೆಗೊಂದು ಸರ್ಕಾರಿ ಗೋಶಾಲೆ: 30 ಜಿಲ್ಲೆಗಳಲ್ಲಿ ಸರ್ಕಾರಿ ಗೋಶಾಲೆ ಸ್ಥಾಪಿಸಲಾಗಿದೆ. ಇನ್ನೂ 70 ಸ್ಥಾಪಿಸಲಾಗುವುದು. ಪಿಂಜರಾಪೋಲ ಮತ್ತು ಇತರೆ ಗೋಶಾಲೆಗಳಿಗೆ ಸಹಾಯಾನುದಾನ ಯೋಜನೆ-141 ಗೋಶಾಲೆಗಳಿಗೆ 3.80 ಕೋಟಿ ರೂ. ಅನುದಾನ ನೀಡಲಾಗಿದೆ. ರಾಜ್ಯದಲ್ಲಿ ಪಶುಗಳ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಎಲ್ಲಾ ರೋಗಗಳ ವಿರುದ್ಧ ಲಸಿಕೆ ಸೇರಿದಂತೆ, ಕಾಲು-ಬಾಯಿ ರೋಗ ನಿರೋಧಕ ಲಸಿಕೆಯನ್ನು ರಾಜ್ಯಾದ್ಯಂತ ನೀಡಲಾಗಿದೆ.

ರಾಷ್ಟ್ರದ ಮೊದಲ ಪ್ರಾಣಿ ಕಲ್ಯಾಣ ಸಹಾಯವಾಣಿ (WAR ROOM Toll Free number - 8277100200) 24X7 ಸೇವೆ ಒದಗಿಸಲಾಗಿದೆ. ಎಲ್ಲಾ ಜಿಲ್ಲೆಗಳ ಪ್ರಗತಿ ಪರಿಶೀಲನೆ ಅಧಿಕಾರಿಗಳಿಗೆ ಚುರುಕು ಮುಟ್ಟಿಸಲಾಗಿದೆ. ಪ್ರತಿ ಲೀಟರ್ ಹಾಲಿಗೆ ರೂ. 5/ ರಂತೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ವಾರ್ಷಿಕ 1200 ಕೋಟಿ ರೂ.ಗಳು ವೆಚ್ಚವಾಗುತ್ತದೆ.

ಆಕಸ್ಮಿಕ ಮರಣ ಹೊಂದಿದ ಕುರಿ ಮತ್ತು ಮೇಕೆಗಳಿಗೆ ಅನುಗ್ರಹ ಯೋಜನೆಯಡಿ ಪರಿಹಾರ ಧನ ನೀಡುತ್ತಿದ್ದು, ಒಟ್ಟು 38.00 ಕೋಟಿ ರೂ. ಅನುದಾನ ವಿತರಿಸಲಾಗಿದೆ. 2022-23 ನೇ ಸಾಲಿನ ಆಯವ್ಯಯದಲ್ಲಿ 70 ಹೊಸ ಗೋ ಶಾಲೆಗಳು, ಗವ್ಯ ಉತ್ಪನ್ನ ಸಂಶೋಧನೆ ಮತ್ತು ಮಾರಾಟಕ್ಕಾಗಿ ಸಹಕಾರಿ ಸಂಘ ಸ್ವಾವನೆ, ಆತ್ಮ ನಿರ್ಭರ ಗೋಶಾಲೆ, ಪುಣ್ಯಕೋಟಿ ದತ್ತು ಯೋಜನೆ ಪ್ರಮುಖವಾಗಿವೆ.‌ ಆತ್ಮ ನಿರ್ಭರ ಗೋಶಾಲಾ ಉತ್ತರಪ್ರದೇಶ, ಮಹಾರಾಷ್ಟ್ರ, ಗುಜರಾತ್ ರಾಜ್ಯಗಳಿಗೆ ಅಧ್ಯಯನ ಪವಾಸ ಮಾಡಿ ಗೋಶಾಲೆಗಳನ್ನು ಸ್ವಾವಲಂಬಿಯನ್ನಾಗಿಸಲು ಪುಯತ್ನ ಮಾಡಲಾಗಿದೆ ಎಂದು ಸಚಿವರು ಹೇಳಿದರು.

ನೇರ ನೇಮಕಾತಿ: ಪಶುವೈದ್ಯಕೀಯ ಸಿಬ್ಬಂದಿ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ 47 ಪಶುವೈದ್ಯರು ಹಾಗೂ 79 ವಶುವೈದ್ಯಕೀಯ ಸಹಾಯಕರುಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಪಶುಸಂಗೊಪನಾ ಇಲಾಖೆಗೆ 1000 ವೈದ್ಯರ ಅಗತ್ಯವಿದೆ. ರಾಜ್ಯವ್ಯಾಪಿ 400 ಪಶುವೈದ್ಯರುಗಳ ನೇಮಕಾತಿ ಪ್ರಕ್ರಿಯೆ ಜಾರಿಯಲ್ಲಿದೆ. ಪಾರದರ್ಶಕ ದೃಷ್ಟಿಯಿಂದ ನೇರ ನೇಮಕಾತಿ ಮಾಡಲಾಗುವುದು ಎಂದರು.

ಇದನ್ನೂ ಓದಿ: Petrol-Diesel Price: ಇಂದಿನ ಪೆಟ್ರೋಲ್​​, ಡೀಸೆಲ್ ದರ ಹೀಗಿದೆ...

ETV Bharat Logo

Copyright © 2024 Ushodaya Enterprises Pvt. Ltd., All Rights Reserved.