ETV Bharat / city

ಬಿಡಿಎ ಮೂಲೆ ನಿವೇಶನಗಳ ಹರಾಜಿನ ಜಾಹೀರಾತಿಗೆ ಕೋಟಿ ಕೋಟಿ ಹಣ ಖರ್ಚು!

author img

By

Published : Apr 24, 2021, 3:02 AM IST

ಕೊರೊನಾ ಲಾಕ್‌ಡೌನ್‌ನಿಂದ ಆಗಿರುವ ನಷ್ಟ ಹಾಗೂ ಸರ್ಕಾರದ ಖಾಲಿ ಖಜಾನೆಯನ್ನು ತುಂಬಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ತನ್ನ 9 ಬಡಾವಣೆಗಳಲ್ಲಿರುವ ಮೂಲೆ ನಿವೇಶನಗಳನ್ನು ಹಾರಾಜು ಹಾಕುತ್ತಿದೆ. ಈ ಹಾರಾಜಿನ ಜಾಹೀರಾತಿಗೇ ಕೋಟಿ ಕೋಟಿ ಹಣ ಖರ್ಚು ಮಾಡಿದೆ ಎಂಬುದು ಆರ್‌ಟಿಐ ಮಾಹಿತಿಯಿಂದ ಬಯಲಾಗಿದೆ.

Bda Spent 3.65 crore for advertisement to sale bda corner sites; rti revealed information
ಬಿಡಿಎ ಮೂಲೆ ನಿವೇಶನಗಳ ಹರಾಜಿನ ಜಾಹೀರಾತಿಗೆ ಕೋಟಿ ಕೋಟಿ ಹಣ ಖರ್ಚು!

ಬೆಂಗಳೂರು: ಪರ್ಯಾಯ ಆದಾಯ ಸಂಗ್ರಹದ ಮೂಲವಾಗಿ ಸರ್ಕಾರ ಬಿಡಿಎ ಮೂಲೆ ‌ನಿವೇಶನ ಹರಾಜಿನ ಮೊರೆ ಹೋಗಿದೆ. ಸರ್ಕಾರದ ಖಾಲಿ ಖಜಾನೆಯನ್ನು ತುಂಬಿಸಲು ಬಿಡಿಎ ಮೂಲೆ ನಿವೇಶನಗಳನ್ನು ಹರಾಜು ಹಾಕುವ ಪ್ರಕ್ರಿಯೆ ನಡೆಯುತ್ತಿದೆ. ಆದರೆ ವಿಪರ್ಯಾಸವೆಂದರೆ ಈ ಹರಾಜು ಪ್ರಕ್ರಿಯೆಯ ಜಾಹಿರಾತಿಗೇ ಬಿಡಿಎ ಕೋಟಿ ಕೋಟಿ ಸುರಿದಿರುವ ಅಂಶ ಆರ್ ಟಿಐ ದಾಖಲಾತಿಯಿಂದ ಬಯಲಾಗಿದೆ.

ಕಳೆದ ವರ್ಷದ ಲಾಕ್‌ಡೌನ್‌ನಿಂದ ಉಂಟಾದ ಆದಾಯ ಕೊರತೆ ನೀಗಿಸಲು ಸರ್ಕಾರ ನಾನಾ ಪರ್ಯಾಯ ಮಾರ್ಗಗಳ ಮೊರೆ ಹೋಗಿತ್ತು. ಅದರರಲ್ಲಿ ಬಿಡಿಎ ಮೂಲೆ ನಿವೇಶನಗಳ ಹರಾಜು ಕೂಡ ಒಂದು. ಬಿಡಿಎಗೆ ಸೇರಿದ ಎಲ್ಲಾ 9 ಬಡಾವಣೆಗಳಲ್ಲಿರುವ 12,000 ಕಾರ್ನರ್ ಸೈಟನ್ನು ಹರಾಜು ಮಾಡಿ ಲಾಕ್‌ಡೌನ್ ನಿಂದ ಸೊರಗಿದ ಬೊಕ್ಕಸ ತುಂಬಿಸುವ ಇರಾದೆ ಸರ್ಕಾರದ್ದಾಗಿದೆ.

ಮೂಲೆ ನಿವೇಶನ ಹರಾಜು ಮೂಲಕ ಸುಮಾರು15,000 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಲಾಗಿದೆ. ಬಿಡಿಎ ಕಳೆದ ವರ್ಷ ಜೂನ್ ನಿಂದ ಕಾರ್ನರ್ ಸೈಟ್ ಹರಾಜು ಪ್ರಕ್ರಿಯೆನ್ನು ಪ್ರಾರಂಭಿಸಿತ್ತು. ಇಲ್ಲಿವರೆಗೆ ಸುಮಾರು 7 ಸುತ್ತಿನ ಹರಾಜು ನಡೆದಿದೆ. 1,842 ಮೂಲೆ ನಿವೇಶನಗಳನ್ನು ಬಿಡಿಎ ಹರಾಜು ಮಾಡಿದೆ. ಸುಮಾರು 1,704 ಕೋಟಿ ರೂ. ಮೊತ್ತದ ಮೂಲೆ ನಿವೇಶನವನ್ನು ಹರಾಜು ಹಾಕಿದೆ. ಆದರೆ, ಈ‌ ಮೂಲೆ ನಿವೇಶನಗಳನ್ನು ಹರಾಜು ಹಾಕುವ ಪ್ರಕ್ರಿಯೆಯ ಜಾಹೀರಾತಿಗೇ ಬಿಡಿಎ ಕೋಟಿ ಕೋಟಿ ಖರ್ಚು ಮಾಡಿದೆ.

ಹರಾಜಿನ ಜಾಹೀರಾತಿಗೇ ಕೋಟಿ ಕೋಟಿ ವ್ಯಯ

ಕಳೆದ ಜೂನ್ ರಿಂದ ಈವರೆಗೆ ಬಿಡಿಎ ಒಟ್ಟು ಏಳು ಸುತ್ತಿನಲ್ಲಿ ಮೂಲೆ ನಿವೇಶನಗಳನ್ನು ಹರಾಜು ಹಾಕಿದೆ. ಈ ಹರಾಜು ಪ್ರಕ್ರಿಯೆಯ ಜಾಹೀರಾತನ್ನೂ ನೀಡಬೇಕಾಗುತ್ತದೆ. ಅದರಂತೆ ಬಿಡಿಎ ಹರಾಜು ಪ್ರಕ್ರಿಯೆ ಸಂಬಂಧ ಕಳೆದ ಜೂನ್ ರಿಂದ ಈ ವರ್ಷ ಫೆಬ್ರವರಿವರೆಗೆ ಜಾಹೀರಾತು ನೀಡಿದ್ದು, ಇದಕ್ಕೆ ಬರೋಬ್ಬರಿ 3.65 ಕೋಟಿ ರೂ. ಖರ್ಚು ಮಾಡಿದೆ. ಆರ್ ಟಿಐಯಿಂದ ತೆಗೆದ ಮಾಹಿತಿಯಂತೆ ಬಿಡಿಎ ಫೆಬ್ರವರಿವರೆಗೆ ಮೂಲೆ ನಿವೇಶನ ಹರಾಜು ಜಾಹೀರಾತಿಗೆ ಇಷ್ಟು ಮೊತ್ತವನ್ನು ಖರ್ಚು ಮಾಡಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ತಡರಾತ್ರಿ ವರುಣನ ಆರ್ಭಟ; ಕೆಲವೆಡೆ ರಸ್ತೆಗಳು ಸಂಪೂರ್ಣ ಜಲಾವೃತ!

ಸಾಲ ಮಾಡಿ ತನ್ನ ಸಿಬ್ಬಂದಿಗೆ ವೇತನ ನೀಡುವ ಪರಿಸ್ಥಿತಿ ಎದುರಿಸುತ್ತಿರುವ ಬಿಡಿಎ ಹರಾಜಿನ ಜಾಹೀರಾತಿಗೆ ಕೋಟಿ ಕೋಟಿ ಖರ್ಚು ಮಾಡಿರುವುದು ದುಂದು ವೆಚ್ಚಕ್ಕೆ ಹಿಡಿದ ಕೈಗನ್ನಡಿ ಎಂಬ ಆರೋಪ ಕೇಳಿ ಬಂದಿದೆ. ವಿವಿಧ ಜಾಹೀರಾತು ಏಜೆನ್ಸಿಗಳಿಗೆ ಮತ್ತು ಪತ್ರಿಕೆಗಳಿಗೆ ಬಿಡಿಎ ಹರಾಜಿನ ಜಾಹೀರಾತನ್ನು ನೀಡಿದೆ. ಆದರೆ ಇದರಲ್ಲಿ ಪ್ರಮುಖ ಪತ್ರಿಕೆಗಳಲ್ಲಿ ಹರಾಜಿನ ಜಾಹೀರಾತು ಹೆಚ್ಚಿಗೆ ಪ್ರಕಟವಾಗಿರುವುದು ಕಂಡುಬಂದಿಲ್ಲ ಎಂದು ಆರ್‌ಟಿಐ ಹೋರಾಟಗಾರ ಶಿವಕುಮಾರ್ ಆರೋಪಿಸಿದ್ದಾರೆ.

ಜಾಹೀರಾತಿಗೆ ಕೋಟಿ ಗಟ್ಟಲೆ ಹಣ ಖರ್ಚು ಮಾಡಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಇದು ಫೆಬ್ರವರಿ ವರೆಗಿನ ಜಾಹೀರಾತಿನ ವೆಚ್ಚವಾಗಿದ್ದು, ಬಿಡಿಎ ಈ ಸಂಬಂಧ ಸುಮಾರು 7-8 ಕೋಟಿ ರೂ. ದುಂದು ವೆಚ್ಚ ಮಾಡಿದೆ ಎಂದು ಆರ್ ಟಿಐ ಮೂಲಕ ಮಾಹಿತಿ ಪಡೆದಿರುವ ಬಿ.ಎಂ.ಶಿವಕುಮಾರ್ ಆರೋಪಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.