ETV Bharat / city

ಮತ್ತೆ ಕಾಂಗ್ರೆಸ್ ಬಾಗಿಲು ಬಡಿದರಾ ಪಕ್ಷೇತರ ಶಾಸಕ?

author img

By

Published : May 9, 2022, 3:57 PM IST

ಇದೀಗ ಮುಂಬರುವ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್​ಗೆ ಪರ್ಯಾಯವಾಗಿ ಕಾಂಗ್ರೆಸ್ ಪ್ರಬಲವಾಗಿದ್ದು, ಪಕ್ಷೇತರ ಶಾಸಕ ಎಚ್. ನಾಗೇಶ್ ಈ ಭಾಗದ ಪ್ರಭಾವಿ ನಾಯಕ ಸಿದ್ದರಾಮಯ್ಯರನ್ನು ಭೇಟಿಯಾಗಿ ಪಕ್ಷಕ್ಕೆ ಸೇರುವ ಒಲವು ವ್ಯಕ್ತಪಡಿಸಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

MLA H.Nagesh Talked to Press after meeting Siddaramayya
ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಹೆಚ್​.ನಾಗೇಶ್​

ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸುವ ಮೂಲಕ ಪಕ್ಷೇತರ ಶಾಸಕ ಎಚ್. ನಾಗೇಶ್ ತೀವ್ರ ಕುತೂಹಲ ಮೂಡಿಸಿದ್ದಾರೆ. ಬೆಂಗಳೂರಿನ ಶಿವಾನಂದ ವೃತ್ತ ಸಮೀಪ ಇರುವ ಸಿದ್ದರಾಮಯ್ಯ ಸರ್ಕಾರಿ ನಿವಾಸಕ್ಕೆ ಭೇಟಿ ನೀಡಿದ ಮುಳಬಾಗಿಲು ಪಕ್ಷೇತರ ಶಾಸಕ ಎಚ್.ನಾಗೇಶ್ ಇದಾದ ಬಳಿಕ ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ಸ್ಪಷ್ಟ ಉತ್ತರ ನೀಡಿಲ್ಲ.

ಪ್ರಸ್ತುತ ಸರ್ಕಾರದಲ್ಲಿ ಬಿಜೆಪಿ ಜೊತೆ ಕೈಜೋಡಿಸಿದ್ದ ಹೆಚ್.ನಾಗೇಶ್ ಹಿಂದೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿಯೂ ಕೆಲಕಾಲ ಕಾರ್ಯನಿರ್ವಹಿಸಿದ್ದರು. ಜೆಡಿಎಸ್ ಬೆಂಬಲದೊಂದಿಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ನಾಗೇಶ್ ಕೆಲ ತಿಂಗಳ ಅವಧಿಗೆ ಮಾತ್ರ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಮೈತ್ರಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಸಂದರ್ಭ ಇವರನ್ನು ಕೈಬಿಡಲಾಗಿತ್ತು.

ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಹೆಚ್​.ನಾಗೇಶ್​

2019ರಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಸಂದರ್ಭ ನಾಗೇಶ್ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದರು. ಈ ಸಂದರ್ಭದಲ್ಲಿ ಅಬಕಾರಿ ಸಚಿವರಾಗಿ ಅವರು ಕಾರ್ಯನಿರ್ವಹಿಸಿದ್ದರು. 2021ರಲ್ಲಿ ಸಚಿವ ಸಂಪುಟ ವಿಸ್ತರಣೆ ಸಂದರ್ಭ ಇವರನ್ನು ಕೈಬಿಡಲಾಗಿತ್ತು. ನಂತರ ರಚನೆಯಾದ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಅವರಿಗೆ ಅವಕಾಶ ಸಿಕ್ಕಿಲ್ಲ.

ಕಾಂಗ್ರೆಸ್​ಗೆ ಸೇರುವ ಇಂಗಿತ: ಇದೀಗ ಮುಂಬರುವ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್​ಗೆ ಪರ್ಯಾಯವಾಗಿ ಕಾಂಗ್ರೆಸ್ ಪ್ರಬಲವಾಗಿದ್ದು, ಈ ಭಾಗದ ಪ್ರಭಾವಿ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಪಕ್ಷಕ್ಕೆ ಸೇರುವ ಒಲವು ವ್ಯಕ್ತಪಡಿಸಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಜೊತೆಗೆ ನಾಗೇಶ್ ಇಂದು ಆಗಮಿಸಿ ಸಿದ್ದರಾಮಯ್ಯ ಜೊತೆ ಚರ್ಚಿಸಿದ್ದಾರೆ. ಈ ಸಂದರ್ಭ ಕಾಂಗ್ರೆಸ್ ಸೇರುವ ಇಂಗಿತ ವ್ಯಕ್ತಪಡಿಸಿದ್ದು, ಇದಕ್ಕೆ ಸಿದ್ದರಾಮಯ್ಯ ಪಕ್ಷದ ನಾಯಕರ ಜೊತೆ ಚರ್ಚಿಸಿ ಸೂಕ್ತ ಸಂದರ್ಭದಲ್ಲಿ ತೀರ್ಮಾನ ತಿಳಿಸುವುದಾಗಿ ಭರವಸೆ ನೀಡಿದ್ದಾರೆ ಎಂಬ ಮಾಹಿತಿ ಇದೆ.

ಕ್ಷೇತ್ರದ ಜನ ಹೇಳಿದಂತೆ ನಿರ್ಧಾರ: ಸಿದ್ದರಾಮಯ್ಯ ಭೇಟಿ ಬಳಿಕ ಪಕ್ಷೇತರ ಶಾಸಕ ಹೆಚ್.ನಾಗೇಶ್ ಮಾತನಾಡಿ, ವರುಣಾ ಕ್ಷೇತ್ರದ ಕೆಲಸದ ನಿಮಿತ್ತ ಬಂದಿದ್ದೆ. ನಮ್ಮ ಸಂಬಂಧಿಯೊಬ್ಬರ ಕೆಲಸ ಆಗುವುದಿತ್ತು. ಹಾಗಾಗಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಭೇಟಿಗೆ ಬಂದೆ. ಅವರಿಲ್ಲ‌, ಹೀಗಾಗಿ ವಾಪಸ್ ಹೋಗ್ತಿದ್ದೇನೆ. ಪ್ರತಿಪಕ್ಷ ನಾಯಕರಲ್ವೇ ಗೌರವ ಕೊಡಲು ಬಂದಿದ್ದೆ. ನಾನು ಬಿಜೆಪಿ ಜೊತೆಯೇ ಗುರ್ತಿಸಿಕೊಂಡಿದ್ದೇನೆ. ಹಾಗಾಗಿ ಮುಂದೆ ಟಿಕೆಟ್ ಕೊಡಬೇಕಲ್ವೇ? ನೊಡೋಣ ಇನ್ನೂ ಚುನಾವಣೆಗೆ ಸಮಯವಿದೆ. ಕ್ಷೇತ್ರದ ಜನ ಏನ್ ಹೇಳ್ತಾರೆ ಅದರಂತೆ ಮಾಡುತ್ತೇನೆ ಎಂದು ಕಾಂಗ್ರೆಸ್ ಸೇರ್ಪಡೆ ಬಗ್ಗೆ ದ್ವಂದ್ವ ಹೇಳಿಕೆ ನೀಡಿದರು.

ಬಂಗಾರಪೇಟೆ ಶಾಸಕರು ನಮ್ಮವರೇ. ಹಾಗಾಗಿ ಅವರ ಜೊತೆ ಇಲ್ಲಿಗೆ ಬಂದೆ. ಸಚಿವ ಸ್ಥಾನದಿಂದ ಕೈಬಿಟ್ಟ ವಿಚಾರ ಮಾತನಾಡಿ, ಆಗ ಮುಂದಿನ ದಿನಗಳಲ್ಲಿ ಕೊಡುತ್ತೇವೆ ಎಂದು ಭರವಸೆ ಕೊಟ್ಟಿದ್ದರು. ಈಗ ಆ ಸಮಯ ಬಂದಿದೆ ಏನು ಮಾಡ್ತಾರೆ ನೋಡೋಣ. ಸಚಿವ ಸ್ಥಾನ ಕೊಟ್ಟರೆ ಯಾರಿಗೆ ಬೇಡ ಹೇಳಿ. ನಾನು ಕಾಂಗ್ರೆಸ್ ಸೇರುವ ಬಗ್ಗೆ ಇನ್ನು ಚರ್ಚಿಸಿಲ್ಲ. ಕ್ಷೇತ್ರದ ಜನರು ಏನು‌ ಹೇಳ್ತಾರೆ ಎಂದು ನೋಡಿ ಆಮೇಲೆ ನಿರ್ಧರಿಸೋಣ ಎಂದರು.

ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಮಾತನಾಡಿ, ನಾಗೇಶ್ ಅವರು ನಮ್ಮ ಸಂಬಂಧಿಕರು. ನನ್ನ ಜೊತೆ ಅವರು ಬರಲಿಲ್ಲ. ಇಲ್ಲಿ ಇಬ್ಬರೂ ಭೇಟಿಯಾದೆವು. ಅವರು ಸಿದ್ದರಾಮಯ್ಯ ಮಗನನ್ನು ನೋಡೋಕೆ ಬಂದ್ರು. ಕಾಂಗ್ರೆಸ್ ಸೇರುವ ಬಗ್ಗೆ ಏನೂ ಬಂದಿಲ್ಲ ಎಂದು ನಗುತ್ತಲೇ ಹೊರಟರು.

ಇದನ್ನೂ ಓದಿ: ಬಿಎಸ್‍ವೈ, ಅಮಿತ್ ಶಾ, ಬಿಜೆಪಿಯ ಎಂಎಲ್​ಎಗಳು ಏಕೆ ಜೈಲಿಗೆ ಹೋಗಿದ್ರು?: ಡಿಕೆಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.