ETV Bharat / business

ಸಿರಿಧ್ಯಾನಗಳ ಹಿಟ್ಟಿಗೆ ತೆರಿಗೆ ವಿನಾಯಿತಿ: ಬಟ್ಟಿ ಇಳಿಸಿದ ಮದ್ಯದ ಮೇಲೆ ತೆರಿಗೆ ವಿಧಿಸಲು ರಾಜ್ಯಗಳಿಗೆ ಅಧಿಕಾರ.. ಜಿಎಸ್‌ಟಿ ಕೌನ್ಸಿಲ್​ ನಿರ್ಧಾರ

author img

By ETV Bharat Karnataka Team

Published : Oct 7, 2023, 8:12 PM IST

GST Council
ಜಿಎಸ್‌ಟಿ ಕೌನ್ಸಿಲ್​

58ನೇ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕೌನ್ಸಿಲ್ ಸಭೆಯಲ್ಲಿ ಹಲವು ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ.

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಇಂದು ನಡೆದ 58ನೇ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕೌನ್ಸಿಲ್ ಸಭೆಯಲ್ಲಿ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಮಾನವ ಬಳಕೆಗಾಗಿ ಮದ್ಯವನ್ನು ತಯಾರಿಸಲು ಬಳಸುವ ಬಟ್ಟಿ ಇಳಿಸಿದ ಮದ್ಯದ ಮೇಲೆ ತೆರಿಗೆ ವಿಧಿಸಲು ರಾಜ್ಯಗಳಿಗೆ ಮುಕ್ತ ಹಸ್ತ ನೀಡಲು ತೀರ್ಮಾನಿಸಲಾಗಿದೆ.

ಜಿಎಸ್‌ಟಿ ಕೌನ್ಸಿಲ್ ಸಭೆಯ ನಂತರ ಮಾಧ್ಯಮಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ವಿತ್ತ ಸಚಿವರು, ಬಟ್ಟಿ ಇಳಿಸಿದ ಮದ್ಯದ ಮೇಲೆ ತೆರಿಗೆ ವಿಧಿಸಲು ರಾಜ್ಯಗಳಿಗೆ ಅಧಿಕಾರವಿಲ್ಲ. ಇದು ಕೇವಲ ಜಿಎಸ್‌ಟಿ ಕೌನ್ಸಿಲ್​ ಮತ್ತು ಕೇಂದ್ರದ ವ್ಯಾಪ್ತಿಗೆ ಬರುತ್ತದೆ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ. ಆದಾಗ್ಯೂ, ಕೇಂದ್ರ ಮತ್ತು ರಾಜ್ಯಗಳ ನಡುವೆ ಆರೋಗ್ಯಕರ ವಿಷಯವನ್ನು ಗಮನದಲ್ಲಿಟ್ಟುಕೊಂಡು ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಈ ಹಕ್ಕನ್ನು ರಾಜ್ಯಗಳಿಗೆ ನೀಡಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.

ಕಾಕಂಬಿ ಮೇಲಿನ ತೆರಿಗೆ ಇಳಿಕೆ: ಇದೇ ವೇಳೆ, ಮೊಲಾಸಸ್‌ ಅಥವಾ ಕಾಕಂಬಿ ಮೇಲಿನ ತೆರಿಗೆ ದರವನ್ನು ಶೇ.5ರಷ್ಟು ಇಳಿಕೆ ಮಾಡಲು ಜಿಎಸ್‌ಟಿ ಕೌನ್ಸಿಲ್ ನಿರ್ಧರಿಸಿದೆ. ಸದ್ಯ ಕಾಕಂಬಿ ಮೇಲೆ ಶೇ.28ರಷ್ಟು ಜಿಎಸ್​ಟಿ ವಿಧಿಸಲಾಗುತ್ತಿತ್ತು. ಈ ತೆರಿಗೆ ಇಳಿಕೆ ಲಾಭವು ಕಬ್ಬು ಬೆಳೆಗಾರರಿಗೆ ಸಿಗಲಿದೆ. ಅಲ್ಲದೇ, ಜಾನುವಾರುಗಳ ಮೇವು ತಯಾರಿಕೆಯ ವೆಚ್ಚವನ್ನು ಸಹ ಕಡಿಮೆ ಮಾಡುತ್ತದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಸಿರಿಧ್ಯಾನಗಳ ಹಿಟ್ಟಿಗೆ ಜಿಎಸ್​ಟಿ ವಿನಾಯಿತಿ: ಈ ವರ್ಷ ಸಿರಿಧ್ಯಾನಗಳ ಹಿಟ್ಟಿಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡಲು ತೀರ್ಮಾನಿಸಲಾಗಿದೆ. ಕನಿಷ್ಠ ಶೇ.70ರಷ್ಟು ಸಿರಿಧ್ಯಾನಗಳು ಹೊಂದಿರುವ ಪುಡಿ ರೂಪದಲ್ಲಿ ಆಹಾರ ತಯಾರಿಕೆಗೆ ಯಾವುದೇ ಜಿಎಸ್‌ಟಿ ಪಾವತಿಸಬೇಕಾಗಿಲ್ಲ ಎಂದು ಸಚಿವರು ತಿಳಿಸಿದರು. ಈ ಆಹಾರ ಉತ್ಪನ್ನಗಳನ್ನು ಸಡಿಲ ರೂಪದಲ್ಲಿ ಅಥವಾ ಬ್ರಾಂಡೆಡ್ ಅಲ್ಲದ ಪ್ಯಾಕೆಟ್‌ಗಳಲ್ಲಿ ಮಾರಾಟ ಮಾಡಬೇಕು. ಆದಾಗ್ಯೂ, ಬ್ರಾಂಡೆಡ್ ಸಿರಿಧ್ಯಾನಗಳ ಉತ್ಪನ್ನಗಳಿಗೆ ಶೇ.5ರಷ್ಟು ಜಿಎಸ್‌ಟಿ ವಿಧಿಸಲಾಗುವುದು. 2023ನ್ನು ಸಿರಿಧ್ಯಾನಗಳ ವರ್ಷ ಎಂದು ಘೋಷಿಸಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ಪ್ರವಾಸೋದ್ಯಮ ಉತ್ತೇಜನಕ್ಕೆ ಜಿಎಸ್‌ಟಿ ವಿನಾಯಿತಿ: ಸಾಗರೋತ್ತರ ಹಡಗುಗಳು ಪ್ರವಾಸಿ ಋತುವಿನಲ್ಲಿ ಭಾರತದ ಕರಾವಳಿ ಮಾರ್ಗದಲ್ಲಿ ಸಮುದ್ರಯಾನ ಕೈಗೊಂಡರೆ ಅವುಗಳ ಮೇಲೆ ಜಿಎಸ್‌ಟಿ ವಿನಾಯಿತಿ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. ಸಾಮಾನ್ಯವಾಗಿ ಸಾಗರೋತ್ತರ ಹಡಗುಗಳ ಶೇ.5ರ ಜಿಎಸ್‌ಟಿ ವಿಧಿಸಲಾಗುತ್ತದೆ. ಆದರೆ, ವಿದೇಶಿ ಪ್ರಯಾಣದ ಹಡಗುಗಳು ತಾತ್ಕಾಲಿಕವಾಗಿ ದೇಶದಲ್ಲಿ ಕರಾವಳಿ ಓಟಕ್ಕೆ ಬದಲಾಯಿಸಿದರೆ ಐಜಿಎಸ್‌ಟಿಯಿಂದ ವಿನಾಯಿತಿ ನೀಡಲು ನಿರ್ಧರಿಸಲಾಗಿದೆ.

ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದು ಮಹಾರಾಷ್ಟ್ರ, ಗುಜರಾತ್, ಗೋವಾ ಮತ್ತು ಕೊಚ್ಚಿ ಪ್ರವಾಸೋದ್ಯಮಕ್ಕೆ ಅನುಕೂಲವಾಗಿದೆ. ಪೂರ್ವ ಕರಾವಳಿಗೂ ಲಾಭವಾಗಲಿದೆ. ಈ ವಿದೇಶಿ ಹಡಗುಗಳು ಸಾಗರೋತ್ತರ ಮಾರ್ಗಗಳಲ್ಲಿದ್ದಾಗ ಸುಂಕದಿಂದ ವಿನಾಯಿತಿ ಪಡೆಯುತ್ತವೆ. ಪ್ರವಾಸೋದ್ಯಮ ಪ್ರೋತ್ಸಾಹಿಸಲು ಇದನ್ನು ಭಾರತೀಯ ಮಾರ್ಗಗಳಿಗೂ ವಿಸ್ತರಿಸಲಾಗಿದೆ ಎಂದು ಸಚಿವೆ ನಿರ್ಮಲಾ ಮಾಹಿತಿ ನೀಡಿದರು. (ಐಎಎನ್​ಎಸ್​)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.