ETV Bharat / bharat

''ಮೋದಿಯವರ ನಾಯಕತ್ವಕ್ಕಾಗಿ ಜನರು ಬಿಜೆಪಿಗೆ ಮತ ಹಾಕಿದ್ದಾರೆ'': ಪ್ರಹ್ಲಾದ್ ಜೋಶಿ

author img

By ETV Bharat Karnataka Team

Published : Dec 3, 2023, 2:40 PM IST

Updated : Dec 3, 2023, 3:40 PM IST

ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಬಂದಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Prahlad Joshi
ಪ್ರಹ್ಲಾದ್ ಜೋಶಿ

ನವದೆಹಲಿ/ಜೈಪುರ: ಜನರು ಕಾಂಗ್ರೆಸ್‌ ಪಕ್ಷವನ್ನು ತಿರಸ್ಕರಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಬದ್ಧತೆ ಮತ್ತು ನಾಯಕತ್ವಕ್ಕಾಗಿ ಮತ ಹಾಕಿದ್ದಾರೆ ಎಂದು ರಾಜಸ್ಥಾನದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಉಸ್ತುವಾರಿಯೂ ಆಗಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ. ಬಿಜೆಪಿ ಮುನ್ನಡೆ ಸಾಧಿಸಿದ ಬೆನ್ನಲ್ಲೇ, ಸಂತಸ ಹಂಚಿಕೊಂಡಿದ್ದಾರೆ.

ಬಿಜೆಪಿ ಮೂರು ರಾಜ್ಯಗಳಲ್ಲಿ ಸರ್ಕಾರ ರಚಿಸಲು ಸಿದ್ಧವಾಗಿದೆ. ಮಧ್ಯಪ್ರದೇಶದಲ್ಲಿ 230 ಕ್ಷೇತ್ರಗಳ ಪೈಕಿ 158 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ರಾಜಸ್ಥಾನದಲ್ಲಿ 199 ಕ್ಷೇತ್ರಗಳ ಪೈಕಿ 111 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಛತ್ತೀಸ್‌ಗಢದಲ್ಲಿ 90 ಕ್ಷೇತ್ರಗಳ ಪೈಕಿ 54 ಸ್ಥಾನಗಳಲ್ಲಿ ಮುಂದಿದೆ. ಜೆಪಿ ನಡ್ಡಾ ನೇತೃತ್ವದ ಪಕ್ಷವು ಮಧ್ಯಪ್ರದೇಶದಲ್ಲಿ ಅಧಿಕಾರವನ್ನು ಉಳಿಸಿಕೊಂಡರೆ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ನಿಂದ ಅಧಿಕಾರವನ್ನು ಕಸಿದುಕೊಂಡಿದೆ.

ಮೋದಿ ನಾಯಕತ್ವಕ್ಕೆ ಮತ: ಈ ಬಗ್ಗೆ ಕೇಂದ್ರ ಸಚಿವ ಹಾಗೂ ಬಿಜೆಪಿ ರಾಜಸ್ಥಾನ ಉಸ್ತುವಾರಿ ಪ್ರಹ್ಲಾದ್ ಜೋಶಿ ಮಾತನಾಡಿ, "ಜನರು ಬಿಜೆಪಿ, ಸಕಾರಾತ್ಮಕ ಬದ್ಧತೆ ಮತ್ತು ಪ್ರಧಾನಿ (ನರೇಂದ್ರ ಮೋದಿಯವರ)ಯ ನಾಯಕತ್ವಕ್ಕೆ ಮತ ಹಾಕಿದ್ದಾರೆ. ಮತದಾರರು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ್ದಾರೆ" ಎಂದು ತಿಳಿಸಿದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ: ರಾಜ್ಯದ ಧಾರವಾಡ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಮತ್ತು ಸಂಸದೀಯ ವ್ಯವಹಾರ - ಕಲ್ಲಿದ್ದಲು ಮತ್ತು ಗಣಿ ಸಚಿವರಾಗಿರುವ ಜೋಶಿ, "ಬೋಗಸ್ ಭರವಸೆ" ನೀಡಿದ್ದಕ್ಕಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಪಕ್ಷವನ್ನು ಮತದಾರರು ದೂರವಿಟ್ಟಿದ್ದಾರೆ ಎಂದು ತಿಳಿಸಿದರು.

ಬೋಗಸ್ ಭರವಸೆ ವರ್ಕ್ ಆಗಲಿಲ್ಲ: "ಕಾಂಗ್ರೆಸ್ ಪಕ್ಷ ಬೋಗಸ್ ಭರವಸೆಗಳನ್ನು ನೀಡುತ್ತಾ ಬಂದಿದೆ. ಮತದಾರರು ಅದನ್ನು ಕರ್ನಾಟಕ, ಹಿಮಾಚಲ ಪ್ರದೇಶದಲ್ಲಿ ಈಗಾಗಲೇ ನೋಡಿದ್ದಾರೆ. ಹಾಗಾಗಿ ಕಾಂಗ್ರೆಸ್​ನವರೀಗ ಸೋತಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಲಾಗಿದೆ. ನನಗೆ ಬಹಳ ಸಂತೋಷವಾಗಿದೆ. ನಾವು ರಾಜಸ್ಥಾನದಲ್ಲಿ ಕನಿಷ್ಠ 124 ಸ್ಥಾನಗಳನ್ನು ದಾಟುತ್ತೇವೆ ಎಂದು ಪ್ರಹ್ಲಾದ್ ಜೋಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸದ್ಯ 111 ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷ ಮುನ್ನಡೆ ಸಾಧಿಸಿದೆ.

ಇದನ್ನೂ ಓದಿ: 'ಈ ದೇಶವನ್ನು ಆಳುವ ನಾಯಕತ್ವ ಬಿಜೆಪಿ ಬಿಟ್ಟು ಬೇರೆ ಪಕ್ಷಗಳಲ್ಲಿಲ್ಲ ': ಬಿಎಸ್​ವೈ

ಬಿಜೆಪಿ ನಾಯಕ ಜೆಪಿ ನಡ್ಡಾ, ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿಯ ಹಿರಿಯ ನಾಯಕ ಅಮಿತ್ ಶಾ ಅವರ ನಾಯಕತ್ವವನ್ನು ಕೂಡ ಪ್ರಹ್ಲಾದ್ ಜೋಶಿ ಶ್ಲಾಘಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ವರಿಷ್ಠರು ಚುನಾವಣಾ ಕಣದಲ್ಲಿದ್ದ ನಾಯಕರ ಗೆಲುವಿಗಾಗಿ ವ್ಯಾಪಕ ಪ್ರಚಾರ ನಡೆಸಿದ್ದರು. ಪರಿಣಾಮ, ಮೂರು ರಾಜ್ಯಗಳಲ್ಲಿ ಮುನ್ನಡೆ ಸಾಧಿಸಿದೆ. ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ದಕ್ಷಿಣದ ತೆಲುಗು ರಾಜ್ಯ ತೆಲಂಗಾಣದಲ್ಲಿ ಮಾತ್ರ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.

ಇದನ್ನೂ ಓದಿ: ಚುನಾವಣಾ ಫಲಿತಾಂಶ ಬಿಜೆಪಿಗೆ ಸಂತಸ ತಂದಿದೆ: ಪ್ರತಿಪಕ್ಷ ನಾಯಕ ಆರ್​​​ ಅಶೋಕ್

Last Updated :Dec 3, 2023, 3:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.