ETV Bharat / bharat

ತೆಲಂಗಾಣದಲ್ಲಿ ಶೇ 70.60 ಮತದಾನ: ಅಧಿಕಾರದ ಗದ್ದುಗೆ ಹಿಡಿಯುವ ತವಕದಲ್ಲಿ ಕಾಂಗ್ರೆಸ್

author img

By PTI

Published : Dec 1, 2023, 11:42 AM IST

voting
ಮತದಾನ

Telangana Assembly Elections-Voter turnout: ನಿನ್ನೆ ನಡೆದ ತೆಲಂಗಾಣ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಶೇಕಡಾ 70.60ರಷ್ಟು ಮತದಾನವಾಗಿದೆ.

ಹೈದರಾಬಾದ್(ತೆಲಂಗಾಣ): 119 ಸದಸ್ಯ ಬಲದ ತೆಲಂಗಾಣ ವಿಧಾನಸಭೆ ಚುನಾವಣೆಗೆ ಗುರುವಾರ ನಡೆದ ಮತದಾನವು ಕೆಲವು ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ ಬಹುತೇಕ ಶಾಂತಿಯುತವಾಗಿ ನೆರವೇರಿದೆ. ಈ ಬಾರಿ ರಾಜ್ಯದಲ್ಲಿ ಶೇ.70.60 ರಷ್ಟು ಮತದಾನ ದಾಖಲಾಗಿದೆ. ಡಿಸೆಂಬರ್ 3ರಂದು ಭಾನುವಾರ ಮತ ಎಣಿಕೆ ನಡೆಯಲಿದ್ದು, ಬಹುತೇಕ ಮತಗಟ್ಟೆ ಸಮೀಕ್ಷೆಗಳು ಈ ಬಾರಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಬಹುದು ಎಂದು ಭವಿಷ್ಯ ನುಡಿದಿವೆ.

ಬಿಗಿ ಭದ್ರತೆಯ ನಡುವೆ ನಿನ್ನೆ ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿತ್ತು. 13 ಎಡಪಂಥೀಯ ಉಗ್ರಗಾಮಿಪೀಡಿತ ಕ್ಷೇತ್ರಗಳಲ್ಲಿ 4 ಗಂಟೆಗೆ ವೋಟಿಂಗ್ ಪ್ರಕ್ರಿಯೆ​ ಮುಕ್ತಾಯಗೊಂಡಿತು. ಉಳಿದ 106 ಕ್ಷೇತ್ರಗಳಲ್ಲಿ ಜನರು 5 ಗಂಟೆಯವರೆಗೆ ಮತ ಚಲಾಯಿಸಿದ್ದಾರೆ.

ರಾಜ್ಯಾದ್ಯಂತ 35,655 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಚುನಾವಣಾ ಕರ್ತವ್ಯಕ್ಕೆ 2.5 ಲಕ್ಷಕ್ಕೂ ಅಧಿಕ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದ್ದ 12,000 ಮತಗಟ್ಟೆಗಳಲ್ಲಿ ಬಿಗಿ ಬಂದೋಬಸ್ತ್‌ ಮಾಡಲಾಗಿತ್ತು. ಚುನಾವಣೆಗೆ ಭದ್ರತಾ ವ್ಯವಸ್ಥೆಗಳ ಭಾಗವಾಗಿ ರಾಜ್ಯಾದ್ಯಂತ 375 ಕಂಪನಿಗಳ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್​) ಜೊತೆಗೆ ರಾಜ್ಯ ಮತ್ತು ನೆರೆಯ ರಾಜ್ಯಗಳಿಂದ ಪೊಲೀಸರು ಮತ್ತು ಗೃಹರಕ್ಷಕರನ್ನು ಒಳಗೊಂಡ ಸುಮಾರು 77,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಇದೇ ಮೊದಲ ಬಾರಿಗೆ ವಿಶೇಷಚೇತನರು ಮತ್ತು 80 ವರ್ಷ ಮೇಲ್ಪಟ್ಟ ಮತದಾರರಿಗೆ ಮನೆಮನೆ ಮತದಾನದ ಸೌಲಭ್ಯ ಕಲ್ಪಿಸಲಾಗಿತ್ತು.

ಬಿಆರ್‌ಎಸ್ ರಾಜ್ಯದಲ್ಲಿ ಸತತ ಮೂರನೇ ಅವಧಿಗೆ ಅಧಿಕಾರ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಇನ್ನೊಂದೆಡೆ, ಪ್ರತಿಪಕ್ಷ ಕಾಂಗ್ರೆಸ್ ಅಧಿಕಾರದಿಂದ ಬಿಆರ್‌ಎಸ್ ಕೆಳಗಿಳಿಸಲು ಸರ್ವಪ್ರಯತ್ನ ನಡೆಸಿದೆ. ಮತ್ತೊಂದೆಡೆ, ರಾಜ್ಯದಲ್ಲಿ ರ‍್ಯಾಲಿಗಳನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಹಲವಾರು ಉನ್ನತ ಮಟ್ಟದ ನಾಯಕರೊಂದಿಗೆ ಬಿಜೆಪಿಯು ಭರ್ಜರಿ ಪ್ರಚಾರ ನಡೆಸಿದೆ.

ಇದನ್ನೂ ಓದಿ: ತೆಲಂಗಾಣ ಚುನಾವಣೋತ್ತರ ಸಮೀಕ್ಷೆ: 'ಕೈ' ಗೆ ಸಿಹಿ​, ಬಿಆರ್​ಎಸ್​ ಹ್ಯಾಟ್ರಿಕ್​ ಕನಸಿಗೆ ಹಿನ್ನಡೆ, ಬಿಜೆಪಿಗೆ ಎಷ್ಟು ಸ್ಥಾನ?

ಮತಗಟ್ಟೆ ಸಮೀಕ್ಷೆ ಫಲಿತಾಂಶ: ಪೋಲ್ ಟ್ರೆಂಡ್ಸ್ ಮತ್ತು ಸ್ಟ್ರಾಟಜಿ ಆರ್ಗನೈಸೇಶನ್ (ಪಿಟಿಎಸ್ ಗ್ರೂಪ್) ಬಿಡುಗಡೆ ಮಾಡಿದ ಎಕ್ಸಿಟ್​ಪೋಲ್​ ಪ್ರಕಾರ, ಆಡಳಿತಾರೂಢ ಬಿಆರ್​ಎಸ್ 35 ರಿಂದ 40 ಸ್ಥಾನಗಳನ್ನು ಗೆಲ್ಲಬಹುದು. ಕಾಂಗ್ರೆಸ್ 65 ರಿಂದ 70 ಸ್ಥಾನಗಳನ್ನು ಪಡೆಯಲಿದೆ ಎಂದು ಅಂದಾಜಿಸಲಾಗಿದೆ. ಬಿಜೆಪಿ 7ರಿಂದ 10 ಸ್ಥಾನಗಳನ್ನು ಗೆಲ್ಲಲಿದೆ ತಿಳಿಸಿದೆ. ಎಂಐಎಂ 6 ರಿಂದ 7 ಸ್ಥಾನ ಹಾಗೂ ಇತರರು 1-2 ಸ್ಥಾನ ಗೆಲ್ಲುವ ಸಾಧ್ಯತೆ ಇದೆ.

ಆರಾ ಮಸ್ತಾನ್ ಸಮೀಕ್ಷೆಯ ಪ್ರಕಾರ, ಬಿಆರ್‌ಎಸ್‌ಗೆ 41-49, ಕಾಂಗ್ರೆಸ್‌ಗೆ 58-67, ಬಿಜೆಪಿಗೆ 5-7 ಮತ್ತು ಇತರರು 7 ರಿಂದ 9 ಸ್ಥಾನ ಪಡೆಯಬಹುದು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ತೆಲಂಗಾಣ ಚುನಾವಣಾ ಫಲಿತಾಂಶದ ಬಗ್ಗೆ ಕೋಟ್ಯಂತರ ರೂಪಾಯಿ ಬೆಟ್ಟಿಂಗ್: ಆ್ಯಪ್, ವೆಬ್‌ಸೈಟ್‌ಗಳೇ ಅಡ್ಡೆಗಳು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.