ETV Bharat / bharat

ದೆಹಲಿ ಅಬಕಾರಿ ನೀತಿ ಹಗರಣ: ತೆಲಂಗಾಣ ಸಿಎಂ ಕೆಸಿಆರ್​ ಪುತ್ರಿಯ ಮಾಜಿ ಆಡಿಟರ್​ ಬಂಧಿಸಿದ ಸಿಬಿಐ

author img

By

Published : Feb 8, 2023, 9:17 AM IST

Updated : Feb 8, 2023, 9:30 AM IST

Delhi Liquor scam case
ದೆಹಲಿ ಅಬಕಾರಿ ನೀತಿ ಹಗರಣ

ದೆಹಲಿ ಅಬಕಾರಿ ನೀತಿ ಹಗರಣ- ಪ್ರಕರಣದಲ್ಲಿ ತೆಲಂಗಾಣ ಸಿಎಂ ಕೆಸಿಆರ್​ ಪುತ್ರಿ ಭಾಗಿ ಆರೋಪ- ಕೆಸಿಆರ್​ ಪುತ್ರಿ ಮಾಜಿ ಆಡಿಟರ್​ ಬಂಧನ- ಸಿಬಿಐ ಅಧಿಕಾರಿಗಳಿಂದ ಆಡಿಟರ್​ ಅರೆಸ್ಟ್

ಹೈದರಾಬಾದ್​: ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್​ ರಾವ್​ ಅವರ ಪುತ್ರಿ ಕೆ. ಕವಿತಾ ಆರೋಪಿಯಾಗಿದ್ದು, ಕೆಲ ದಿನಗಳ ಹಿಂದಷ್ಟೇ ಅವರನ್ನು ಕೇಂದ್ರೀಯ ತನಿಖಾ ದಳ ತೀವ್ರ ವಿಚಾರಣೆ ನಡೆಸಿತ್ತು. ಇದೀಗ ಅವರ ಮಾಜಿ ಆಡಿಟರ್​(ಲೆಕ್ಕಪತ್ರಗಾರ) ಅವರನ್ನು ಬಂಧಿಸಿದೆ.

ಹೈದರಾಬಾದ್ ಮೂಲದ ಚಾರ್ಟರ್ಡ್ ಅಕೌಂಟೆಂಟ್ ಬುಚ್ಚಿಬಾಬು ಗೋರಂಟ್ಲಾ ಎಂಬುವರನ್ನು ಸಿಬಿಐ ಬಂಧಿಸಿದೆ. ದೆಹಲಿ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿ ಇವರ ಪಾತ್ರವಿದೆ ಎಂದು ಸಿಬಿಐ ಹೇಳಿದೆ. ಇದರಿಂದ ಸಗಟು ಮತ್ತು ಚಿಲ್ಲರೆ ಪರವಾನಗಿದಾರರಿಗೆ ಹೊಸ ನೀತಿಯಿಂದಾಗಿ ಲಾಭ ಉಂಟು ಮಾಡಿಕೊಡಲಾಗಿದೆ. 2021-22ರ ದೆಹಲಿ ಅಬಕಾರಿ ನೀತಿಯ ಅಡಿಯಲ್ಲಿ ಅಕ್ರಮವಾಗಿ ಲೈಸೆನ್ಸ್​ ಮತ್ತು ಮಾರಾಟದಲ್ಲಿ ಹೆಚ್ಚಿನ ಲಾಭವನ್ನು ದೊರಕಿಸಿಕೊಡಲಾಗಿದೆ ಎಂದು ಸಿಬಿಐ ಹೇಳಿದೆ.

ಬಂಧಿತ ಚಾರ್ಟರ್ಡ್ ಅಕೌಂಟೆಂಟ್ ಬುಚ್ಚಿಬಾಬು ಗೋರಂಟ್ಲಾ ಕೆಸಿಆರ್​ ಪುತ್ರಿ ಕೆ ಕವಿತಾ ಅವರಿಗೆ ಆಡಿಟರ್​ ಆಗಿ ಕೆಲಸ ಮಾಡಿದ್ದರು. ಪ್ರಕರಣದಲ್ಲಿ ಇವರ ಪಾತ್ರವನ್ನು ಸಿಬಿಐ ಪತ್ತೆ ಮಾಡಿದೆ. ಇಂದು ಮಾಜಿ ಅಡಿಟರ್​ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತಿಳಿಸಿದೆ.

ಪ್ರಕರಣದ ಹಿನ್ನೆಲೆ: ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ನೇತೃತ್ವದ ಸರ್ಕಾರ ಸರ್ಕಾರ 2021-22ನೇ ಸಾಲಿನ ಅಬಕಾರಿ ನೀತಿಯನ್ನು ರೂಪಿಸಿತ್ತು. ಈ ವೇಳೆ 468 ಖಾಸಗಿ ಬಾರ್‌ಗಳಿಗೆ ಅನುಮತಿ ನೀಡಲಾಗಿತ್ತು. ಆದರೆ ಈ ನೀತಿಯ ಜಾರಿಯ ವೇಳೆ ಹಲವಾರು ಅಕ್ರಮಗಳು ನಡೆದಿವೆ ಎಂದು ಉಪರಾಜ್ಯಪಾಲ ವಿ.ಕೆ.ಸಕ್ಸೇನಾ ಅವರು ಕಳೆದ ತಿಂಗಳು ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದರು. ಅಲ್ಲದೇ 11 ಅಬಕಾರಿ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದರು.

ಸಿಬಿಐ ತನಿಖೆಗೆ ಸಚಿವ ಮನೀಶ್ ಸಿಸೋಡಿಯಾ ಕೂಡ ಆಗ್ರಹಿಸಿದ್ದರು. ಮದ್ಯದ ಲೈಸೆನ್ಸ್‌ ಪಡೆದುಕೊಂಡವರಿಗೆ ಟೆಂಡರ್‌ ನಂತರ ಅನೇಕ ಸವಲತ್ತುಗಳನ್ನು ನೀಡಲಾಗಿದೆ. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದೆ. ಟೆಂಡರ್‌ ಪಡೆದವರಿಗೆ ಕೋವಿಡ್‌ ಕಾರಣ ನೀಡಿ 144.36 ಕೋಟಿ ರೂ. ಶುಲ್ಕ ವಿನಾಯಿತಿ ಕೊಡಲಾಗಿದೆ. ಕಡಿಮೆ ಬಿಡ್‌ ಮಾಡಿದ್ದ ಒಬ್ಬರಿಗೆ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಎನ್‌ಒಸಿ ಸಿಕ್ಕಿಲ್ಲ ಎಂಬ ಕಾರಣದಿಂದ ಅವರು ನೀಡಿದ್ದ 30 ಕೋಟಿ ರೂ.ಗಳನ್ನು ಮರಳಿಸಲಾಗಿದೆ. ಆದರೆ ನಿಯಮಗಳಲ್ಲಿ ಅದಕ್ಕೆ ಅವಕಾಶವಿಲ್ಲ ಎಂಬ ಆರೋಪವಿದೆ.

ಹಗರಣದಲ್ಲಿ ಸಿಎಂ ಕೆಸಿಆರ್​ ಪುತ್ರಿ ಹೆಸರು: ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್​ ಅವರ ಪುತ್ರಿ ಹಾಗೂ ಟಿಆರ್​ಎಸ್ ಎಂಎಲ್​ಸಿ ಕೆ. ಕವಿತಾ ಅವರ ಹೆಸರು ಪ್ರಕರಣದಲ್ಲಿ ಕೇಳಿಬಂದಿದೆ. ಸಿಬಿಐ ಸಲ್ಲಿಸಿದ ಚಾರ್ಜ್​ಶೀಟ್​​ನಲ್ಲೂ ಕವಿತಾ ಅವರ ಹೆಸರಿದೆ. ಹಗರಣದ ವಿಚಾರಣೆಗಾಗಿ ಕೆಲ ದಿನಗಳ ಹಿಂದೆ ಹೈದರಾಬಾದ್​​ನ ಬಂಜಾರ ಹಿಲ್ಸ್‌ನಲ್ಲಿರುವ ಕವಿತಾ ಅವರ ನಿವಾಸಕ್ಕೆ ಸಿಬಿಐ ಅಧಿಕಾರಿಗಳು ಆಗಮಿಸಿದ್ದರು. ಎರಡು ತಂಡಗಳಲ್ಲಿ ಬಂದಿರುವ ಸಿಬಿಐ ಅಧಿಕಾರಿಗಳು ಕವಿತಾ ಅವರನ್ನು ಸಾಕ್ಷಿಯಾಗಿ ಸಿಆರ್‌ಪಿಸಿ 161ರ ಅಡಿಯಲ್ಲಿ ವಿಚಾರಣೆ ನಡೆಸಿದ್ದರು.

ಬಿಜೆಪಿ ವಿರುದ್ಧ ಆಕ್ರೋಶ: ಅಬಕಾರಿ ಹಗರಣದಲ್ಲಿ ತಮ್ಮ ಹೆಸರು ಕೇಳಿಬಂದು ವಿಚಾರಣೆ ನಡೆಸಿದ್ದಕ್ಕೆ ಎಂಎಲ್​ಸಿ ಕವಿತಾ ಅವರು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಬಿಜೆಪಿ ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದ್ದರು. ಬಿಜೆಪಿಯವರು ನನ್ನ ವಿರುದ್ಧ ಮಾಡಿರುವ ಆರೋಪಗಳೆಲ್ಲವೂ ನಿರಾಧಾರ ಎಂಬುದನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ದೆಹಲಿ ಅಬಕಾರಿ ನೀತಿಯ ತನಿಖೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಕವಿತಾ ಹೇಳಿದ್ದರು.

ಓದಿ: ದೆಹಲಿ ಅಬಕಾರಿ ನೀತಿ ಹಗರಣ: 7 ಜನರ ವಿರುದ್ಧ ಚಾರ್ಜ್​ಶೀಟ್ ಸಲ್ಲಿಸಿದ ಸಿಬಿಐ

Last Updated :Feb 8, 2023, 9:30 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.