ETV Bharat / bharat

ಜಿ20 ಶೃಂಗ ಸಭೆಗೆ ಬಂದಿದ್ದ ಕೆನಡಾ ಪ್ರಧಾನಿ ವಿಮಾನದಲ್ಲಿ ತಾಂತ್ರಿಕ ದೋಷ: ಭಾರತದಲ್ಲೇ ಉಳಿದುಕೊಂಡ ನಿಯೋಗ

author img

By ETV Bharat Karnataka Team

Published : Sep 10, 2023, 10:55 PM IST

ಕೆನಡಾ ಪ್ರಧಾನಿ ವಿಮಾನದಲ್ಲಿ ತಾಂತ್ರಿಕ ದೋಷ
ಕೆನಡಾ ಪ್ರಧಾನಿ ವಿಮಾನದಲ್ಲಿ ತಾಂತ್ರಿಕ ದೋಷ

ಜಿ20 ಶೃಂಗಸಭೆಗೆ ಭಾರತಕ್ಕೆ ಆಗಮಿಸಿರುವ ಕೆನಡಾ ಪ್ರಧಾನಿ ಜಸ್ಟಿನ್​ ಟ್ರುಡೊ ಅವರು ವಾಪಸ್​ ತೆರಳುವ ವೇಳೆ ವಿಮಾನ ತಾಂತ್ರಿಕ ಸಮಸ್ಯೆಗೀಡಾಗಿದ್ದು, ಅವರು ಇಲ್ಲಿಯೇ ಉಳಿದುಕೊಳ್ಳುವಂತಾಗಿದೆ.

ನವದೆಹಲಿ: ಭಾರತದ ಅಧ್ಯಕ್ಷತೆಯಲ್ಲಿ 2 ದಿನ ನವದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಗೆ ಭಾಗಿಯಾಗಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಅವರ ನಿಯೋಗ ಭಾನುವಾರ ವಾಪಸ್​ ತೆರಳಬೇಕಿದ್ದ ವಿಮಾನ ತಾಂತ್ರಿಕ ಸಮಸ್ಯೆಗೀಡಾಗಿದೆ. ಹೀಗಾಗಿ ಅವರು ಇಲ್ಲಿಯೇ ಉಳಿದುಕೊಂಡಿದ್ದು, ವಿಮಾನ ಸಮಸ್ಯೆ ಪರಿಹಾರವಾದ ಬಳಿಕ ಅವರು ಸ್ವದೇಶಕ್ಕೆ ಹಾರಲಿದ್ದಾರೆ ಎಂದು ತಿಳಿದುಬಂದಿದೆ.

ಟ್ರುಡೊ ಅವರ ವಿಮಾನ ಭಾನುವಾರ ರಾತ್ರಿ ಸ್ವದೇಶಕ್ಕೆ ಹಾರಬೇಕಿತ್ತು. ಆದರೆ, ವಿಮಾನವು ನಿರ್ಗಮನಕ್ಕೂ ಮುನ್ನವೇ ತೊಂದರೆಗೀಡಾಗಿದೆ. ವಿಮಾನದಲ್ಲಿನ ತಾಂತ್ರಿಕ ಸಮಸ್ಯೆಯನ್ನು ಕೆನಡಾದ ಸಶಸ್ತ್ರ ಪಡೆಗಳು ಪತ್ತೆ ಹಚ್ಚಿವೆ. ಹೀಗಾಗಿ ಪ್ರಯಾಣವನ್ನು ತಾತ್ಕಾಲಿಕವಾಗಿ ಮೊಟಕುಗೊಳಿಸಲಾಗಿದ್ದು, ವಿಮಾನವನ್ನು ಸಿದ್ಧಪಡಿಸಿದ ಬಳಿಕ ಪ್ರಯಾಣ ಬೆಳೆಸಲಾಗುವುದು ಎಂದು ಕೆನಡಾದ ಹೈ ಕಮಿಷನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತದಲ್ಲೇ ನಿಯೋಗ ವಸತಿ: ಕೆನಡಾ ಪ್ರಧಾನಿಯನ್ನು ಹೊತ್ತೊಯ್ಯಬೇಕಿದ್ದ ಸಿಎಫ್​ಸಿ 001 ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದ್ದು, ಅದನ್ನು ಕೆನಡಾದ ಸಶಸ್ತ್ರ ಪಡೆಗಳು ಪತ್ತೆ ಮಾಡಿದೆ. ಪ್ರಧಾನಿ ಮತ್ತು ಅವರ ನಿಯೋಗ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಸಮಸ್ಯೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ತಾಂತ್ರಿಕ ಸಮಸ್ಯೆ ರಾತ್ರೋರಾತ್ರಿ ಸರಿಪಡಿಸಲಾಗುವುದಿಲ್ಲ. ಪರ್ಯಾಯ ವ್ಯವಸ್ಥೆ ಮಾಡುವವರೆಗೆ ನಿಯೋಗವು ಭಾರತದಲ್ಲಿಯೇ ಉಳಿಯಬೇಕಿದೆ ಎಂದು ಕೆನಡಾದ ಪ್ರಧಾನ ಮಂತ್ರಿ ಕಚೇರಿ ಮಾಧ್ಯಮಗಳಿಗೆ ತಿಳಿಸಿದೆ.

ದೆಹಲಿಯಲ್ಲಿರುವ ಕೆನಡಾದ ಹೈಕಮಿಷನ್‌ನ ಅಧಿಕಾರಿಯೊಬ್ಬರು, ಪ್ರಧಾನಿಯವರ ಪ್ರಯಾಣವನ್ನು ಅಂತಿಮಗೊಳಿಸಿದ ನಂತರ ಹಂಚಿಕೊಳ್ಳಲಾಗುವುದು ಎಂದು ಹೇಳಿದರು.

ಪ್ರಧಾನಿಗಳನ್ನು ವೈಡ್ ಬಾಡಿ ಏರ್‌ಬಸ್ ಎ310 ಸೆಪ್ಟೆಂಬರ್ 8 ರಂದು ಸಿಂಗಾಪುರದಿಂದ ದೆಹಲಿಗೆ ತಂದಿತ್ತು. ಭಾನುವಾರ ರೋಮ್ ಮೂಲಕ ಒಟ್ಟಾವಾಗೆ ಹೊರಡಬೇಕಿತ್ತು. ಅದಕ್ಕೂ ಮೊದಲೇ ದೋಷ ಕಂಡುಬಂದಿದೆ. ಹಳೆಯದಾದ ವಿಮಾನ ಈ ಹಿಂದೆಯೂ ತಾಂತ್ರಿಕ ಸಮಸ್ಯೆಗೆ ತುತ್ತಾಗಿತ್ತು. 2018 ರಲ್ಲಿ ಟ್ರುಡೊ ಅವರು ದೆಹಲಿಗೆ ಹೊರಡುವ ಸಂದರ್ಭದಲ್ಲಿ ದೋಷಕ್ಕೀಡಾಗಿತ್ತು. ಹೀಗಾಗಿ ವಿಮಾನ ಪ್ರಯಾಣ ತಡವಾಗಿತ್ತು.

ಭಾರತ ಆಯೋಜಿಸಿದ್ದ ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಟ್ರುಡೊ ಅವರು ಶುಕ್ರವಾರ ಸಂಜೆ ಭಾರತಕ್ಕೆ ಆಗಮಿಸಿದರು. ಭೇಟಿಯ ಸಂದರ್ಭದಲ್ಲಿ, ಅವರು ಎರಡು ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಸಂಬಂಧಗಳನ್ನು ಬಲಪಡಿಸುವ ಪ್ರಮುಖ ವಿಷಯಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು.

ವಿವಿಧ ದೇಶಗಳ ಪ್ರಮುಖರ ಸಂಚಾರಕ್ಕೆ ಇರುವ ವಿಮಾನಗಳು ಹಳೆಯದಾಗಿದ್ದು, ಇಂತಹ ಹಲವು ಘಟನೆಗಳು ವರದಿಯಾಗಿವೆ. ಕಳೆದ ತಿಂಗಳು ಜರ್ಮನಿಯ ವಿದೇಶಾಂಗ ಸಚಿವೆ ಅನ್ನಾಲೆನಾ ಬೇರ್‌ಬಾಕ್ ಅವರು ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಫಿಜಿ ಪ್ರವಾಸವನ್ನು ಕೈಗೊಂಡಿದ್ದರು. ಆದರೆ, ಅಬುಧಾಬಿಯಲ್ಲಿ ಇಂಧನ ತುಂಬಿಸುವ ವೇಳೆ ತಾಂತ್ರಿಕ ಸಮಸ್ಯೆ ಕಂಡು ಬಂದು ಪ್ರವಾಸವನ್ನೇ ರದ್ದು ಮಾಡಿದ್ದರು.

ಇದನ್ನೂ ಓದಿ: Rahul Gandhi: ಹಿಂದುಗಳಿಗಾಗಿ ಬಿಜೆಪಿ ಏನೂ ಮಾಡಿಲ್ಲ, ಅಧಿಕಾರಕ್ಕಾಗಿ ಮಾತ್ರ ಹಿಂದುತ್ವದ ಹೆಸರಲ್ಲಿ ರಾಜಕೀಯ.. ರಾಹುಲ್​ ಗಾಂಧಿ ಟೀಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.