ETV Bharat / international

Rahul Gandhi: ಹಿಂದುಗಳಿಗಾಗಿ ಬಿಜೆಪಿ ಏನೂ ಮಾಡಿಲ್ಲ, ಅಧಿಕಾರಕ್ಕಾಗಿ ಮಾತ್ರ ಹಿಂದುತ್ವದ ಹೆಸರಲ್ಲಿ ರಾಜಕೀಯ.. ರಾಹುಲ್​ ಗಾಂಧಿ ಟೀಕೆ

author img

By ETV Bharat Karnataka Team

Published : Sep 10, 2023, 9:36 PM IST

ರಾಹುಲ್​ ಗಾಂಧಿ
ರಾಹುಲ್​ ಗಾಂಧಿ

ವಿದೇಶ ಪ್ರವಾಸದಲ್ಲಿರುವ ರಾಹುಲ್​ ಗಾಂಧಿ ಕೇಂದ್ರ ಸರ್ಕಾರ ವಿರುದ್ಧ ಟೀಕಾಪ್ರಹಾರ ಮುಂದುವರಿಸಿದ್ದಾರೆ.

ಲಂಡನ್: ಭಾರತದಲ್ಲಿ ಆಡಳಿತರೂಢ ಬಿಜೆಪಿ ಹಿಂದುಗಳಿಗಾಗಿ ಏನೂ ಮಾಡಿಲ್ಲ. ಅದರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ. ಯಾವುದೇ ಬೆಲೆ ತೆತ್ತಾದರೂ ಸರಿ, ಅಧಿಕಾರ ಹಿಡಿಯಲು ಹೊರಟಿದೆ ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಮತ್ತೊಮ್ಮೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪ್ಯಾರಿಸ್‌ನ ಸೈನ್ಸಸ್ ಪಿಒ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಣ ತಜ್ಞರೊಂದಿಗೆ ಸಂವಾದ ನಡೆಸಿದ ಅವರು, ಭಾರತ್​ ಜೋಡೋ ಯಾತ್ರೆ ಮತ್ತು ಅದರ ಪ್ರಭಾವದ ಬಗ್ಗೆ ಹೇಳಿದರು. ಭಾರತದ ಉಳಿವಿಗಾಗಿ ಪ್ರತಿಪಕ್ಷಗಳು ಹೋರಾಟ ನಡೆಸಲು ಬದ್ಧವಾಗಿವೆ. ಪ್ರಸ್ತುತ ಪರಿಸ್ಥಿತಿಗಳಿಂದ ದೇಶವನ್ನು ಹೊರಬರುವಂತೆ ಮಾಡುವುದು ನಮ್ಮ ಧ್ಯೇಯವಾಗಿದೆ ಎಂದು ರಾಹುಲ್​ ಹೇಳಿದರು.

ನಾನು ಭಗವದ್ಗೀತೆಯನ್ನು ಓದಿದ್ದೇನೆ. ಹಲವಾರು ಉಪನಿಷತ್ತುಗಳನ್ನು ಓದಿದ್ದೇನೆ. ಅನೇಕ ಹಿಂದೂ ಪುಸ್ತಕಗಳನ್ನು ಓದಿದ್ದೇನೆ. ಆದರೆ, ಬಿಜೆಪಿಯ ಹಿಂದುತ್ವ ಮತ್ತು ನಿಜವಾದ ಹಿಂದುತ್ವ ಬೇರೆಯಾಗಿದೆ. ಕೇವಲ ರಾಜಕೀಯಕ್ಕಾಗಿ ಹಿಂದುತ್ವ ಬಳಕೆಯಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ರಾಹುಲ್​ ಪ್ರತಿಕ್ರಿಯಿಸಿದರು. ಸಂವಾದದ ವೇಳೆ ದೇಶದಲ್ಲಿ ಹಿಂದೂ ರಾಷ್ಟ್ರೀಯತೆಯ ಏರಿಕೆ, ಅದರ ವಿಡಿಯೋವನ್ನು ಬಿಡುಗಡೆ ಮಾಡಲಾಯಿತು.

ಮುಂದುವರಿದು ಮಾತನಾಡಿದ ರಾಹುಲ್​, ನಿಮಗಿಂತ ದುರ್ಬಲರನ್ನು ಹಿಂಸಿಸಬೇಕು, ಹಾನಿ ಮಾಡಬೇಕು ಎಂಬುದನ್ನು ನಾನು ಎಲ್ಲಿಯೂ, ಯಾವುದೇ ಹಿಂದೂ ಪುಸ್ತಕ ಅಥವಾ ಯಾವುದೇ ಹಿಂದೂಗಳಿಂದ ನಾನು ಕೇಳಿಲ್ಲ. ಹಿಂದೂ ರಾಷ್ಟ್ರೀಯವಾದಿ ಎಂಬ ಪದವೇ ತಪ್ಪು. ಅವರು ಹಿಂದೂ ರಾಷ್ಟ್ರೀಯವಾದಿಗಳಲ್ಲ, ಅವರಿಗೆ ಹಿಂದೂ ಧರ್ಮದೊಂದಿಗೆ ಯಾವುದೇ ಸಂಬಂಧವಿಲ್ಲ. ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಲು ಹೊರಟಿದ್ದಾರೆ. ಅಧಿಕಾರವೇ ಅವರಿಗೆ ಅಂತಿಮವಾಗಿದೆ. ಹೀಗಾಗಿ ಅವರಲ್ಲಿ ನಿಜವಾದ ಹಿಂದುತ್ವವಿಲ್ಲ ಎಂದು ಟೀಕಿಸಿದರು.

ವಿಪಕ್ಷಗಳಿಗೆ ಹೆಚ್ಚಿನ ಮತ: ಭಾರತದ ಶೇಕಡಾ 60 ರಷ್ಟು ಜನರು ವಿರೋಧ ಪಕ್ಷಗಳಿಗೆ ಮತ ಹಾಕಿದರೆ, ಕೇವಲ ಶೇಕಡಾ 40 ರಷ್ಟು ಆಡಳಿತ ಪಕ್ಷಕ್ಕೆ ಮತ ಹಾಕಿದ್ದಾರೆ. ಆದ್ದರಿಂದ ಬಹುಸಂಖ್ಯಾತ ಸಮುದಾಯವು ಬಿಜೆಪಿಗೆ ಮತ ಹಾಕುತ್ತಿದೆ ಎಂಬ ಕಲ್ಪನೆಯೇ ತಪ್ಪಾಗಿದೆ. ಬಹುಸಂಖ್ಯಾತ ಸಮುದಾಯವು ಅವರಿಗೆ ಮತ ಚಲಾಯಿಸುವುದಕ್ಕಿಂತ ಹೆಚ್ಚಾಗಿ ವಿಪಕ್ಷಗಳಿಗೆ ಮತ ಹಾಕಲಾಗಿದೆ ಎಂದು ಅವರು ಪ್ರತಿಪಾದಿಸಿದರು.

ಇನ್ನು ಭಾರತ ಇಂಡಿಯಾ ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿ, ಸಂವಿಧಾನದಲ್ಲಿ ಭಾರತವನ್ನು ಇಂಡಿಯಾ ಅಂದರೆ, ಭಾರತ. ಅದು ರಾಜ್ಯಗಳ ಒಕ್ಕೂಟ ಎಂದು ವ್ಯಾಖ್ಯಾನಿಸಲಾಗಿದೆ. ಆದ್ದರಿಂದ, ಇಂಡಿಯಾದಲ್ಲಿ ಬರುವ ಎಲ್ಲ ರಾಜ್ಯಗಳು ಭಾರತಕ್ಕೆ ಸೇರಿವೆ. ಅತ್ಯಂತ ಮುಖ್ಯವಾದ ವಿಷಯವೆಂದರೆ, ಈ ರಾಜ್ಯಗಳ ಎಲ್ಲಾ ಜನರ ಧ್ವನಿಯು ಜೋರಾಗಿ ಮತ್ತು ಸ್ಪಷ್ಟವಾಗಿದೆ. ಯಾವುದೇ ಧ್ವನಿಯನ್ನು ಅಡಗಿಸುವ ಶಕ್ತಿ ಯಾರಿಗೂ ಇಲ್ಲ ಎಂದು ರಾಹುಲ್​ ಹೇಳಿದರು.

ಇದನ್ನೂ ಓದಿ: ರಷ್ಯಾ - ಉಕ್ರೇನ್​ ಯುದ್ಧ ವಿಷಯದಲ್ಲಿ ಭಾರತದ ನಿಲುವನ್ನು ಪ್ರತಿಪಕ್ಷಗಳು ಒಪ್ಪುತ್ತವೆ: ರಾಹುಲ್ ಗಾಂಧಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.